ಶಿಕ್ಷಣದ ಸ್ಥಳೀಯ ಆಡಳಿತದಲ್ಲಿ ಭಾಗವಹಿಸುವ ಪಾಲುದಾರರಿಗೆ ಸಾಮರ್ಥ್ಯ ರೂಪಿಸುವ ಸಾಂಪ್ರದಾಯಿಕ ಕಾರ್ಯಗಾರಗಳು ಅಥವಾ ಕಮ್ಮಟಗಳು ಕೇವಲ ತರಬೇತಿ ಕಾರ್ಯಕ್ರಮಗಳಾಗಿ ನಡೆಯುತ್ತಿದ್ದವು. ವಿಶೇಷವಾಗಿ, ಶಿಕ್ಷಣದ ನಿರ್ವಹಣೆಯ ಜವಾಬ್ದಾರಿಯನ್ನು ತೆಗೆದುಕೊಂಡಿರುವ ಸ್ಥಳೀಯ ಸಮುದಾಯದ ನಾಯಕರುಗಳಿಗೆ ಇಂತಹ ಕಾರ್ಯಗಾರದಲ್ಲಿ ಭಾಗವಹಿಸುವ ಅವಕಾಶಗಳು ದೊರೆಯುತ್ತಿತ್ತು. ಇದನ್ನು ಕೇವಲ ಸಮುದಾಯ ನಾಯಕರುಗಳಿಗೆ ಸೀಮಿತಗೊಳಿಸಿ ನೋಡುವ ದೃಷ್ಟಿಕೋನದಿಂದ ಇನ್ನೂ ಮುಂದಕ್ಕೆ ತೆಗೆದುಕೊಂಡು ಹೋಗಬೇಕಾದ ಅಗತ್ಯವಿದೆ. ಸಾರ್ವಜನಿಕ ಶಿಕ್ಷಣದ ನಿರ್ವಹಣಾ ವ್ಯವಸ್ಥೆಯ ಸಂಘಟನೆಯಲ್ಲಿ ಭಾಗವಹಿಸುವ ಸ್ಥಳೀಯ ಸಮುದಾಯದ ಅಮೂಲಾಗ್ರವಾದ ಬದಲಾವಣೆ ಉಂಟಾಗುವ ಅಗತ್ಯವಿದೆ. ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಸಮುದಾಯದ ಭಾಗವಹಿಸುವಿಕೆಯು ಕೆಲವು ಪ್ರಮಾಣದ ಅಧಿಕಾರವನ್ನು ಬಯಸುತ್ತದೆ. ಜೊತೆಗೆ ಶಾಲೆಯನ್ನು ನಿಯಂತ್ರಿಸುವ ಸ್ಥಳೀಯ ಪಾಲುದಾರರು, ಶಾಲೆಯ ಆಡಳಿತದ ಮೇಲೆ ಒತ್ತಡವನ್ನು ಹಾಕುವ ಮೂಲಕ ಶಾಲಾ ನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಪ್ರಯತ್ನಿಸುತ್ತಾರೆ. ಇದು ಶಿಕ್ಷಣದ ಅಭಿವೃದ್ಧಿ ಪ್ರಸ್ತುತ ಇರುವ ದೃಷ್ಟಿಕೋನಗಳನ್ನು ಪೋಷಕರ ಜೊತೆ ಹಂಚಿಕೊಳ್ಳುವುದನ್ನು ಪ್ರೇರೇಪಿಸುತ್ತದೆ.

ಶಾಲೆಯ ಆಡಳಿತವು ತಮ್ಮ ಮೇಲಿನ ಪ್ರಾಧಿಕಾರಗಳು ಹೇಳುವ ರೀತಿಯಲ್ಲಿ ಮಾತ್ರ ಕೆಲಸ ಮಾಡದೆ, ಶಾಲೆಯ ಕಾರ್ಯಚಟುವಟಿಕೆಯಲ್ಲಿ ಇರಬಹುದಾದ ಸ್ಥಳೀಯ ತೊಡಕುಗಳನ್ನು ಗುರುತಿಸಿ ಅವುಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಕೆಲವು ಸ್ಥಳೀಯ ಶಿಕ್ಷಕರು ಲೆಕ್ಕಪತ್ರದ ನಿರ್ವಹಣೆಯನ್ನು ತುಂಬಾ ಯಾಂತ್ರಿಕವಾದ ರೀತಿಯಲ್ಲಿ ನಿರ್ವಹಿಸುತ್ತಿದ್ದಾರೆ. ಬಹಳಷ್ಟು ಶಾಲೆಗಳು ಇದನ್ನು ಗಂಭೀರವಾಗಿ ಪರಿಗಣಿಸದೇ ಕಾರ್ಯನಿರ್ವಹಿಸುತ್ತಿವೆ. ಈ ದೃಷ್ಟಿಯಿಂದ ನೋಡುವುದಾದರೆ ಶಾಲಾ ಆಡಳಿತದಲ್ಲಿ ಸ್ಥಳೀಯವಾಗಿ ಮೂರು ಪ್ರಮುಖ ಗುಂಪುಗಳು ಭಾಗವಹಿಸುತ್ತಿವೆ. ಒಂದು ಶಾಲೆಯ ಆಡಳಿತ ನಿರ್ವಹಣೆಯಲ್ಲಿ ಇರುವ ವ್ಯಕ್ತಿಗಳು. ಎರಡು ಸ್ಥಳೀಯ ಅಥವಾ ಸಮುದಾಯ ಮಟ್ಟದ ವ್ಯವಸ್ಥಾಪಕರುಗಳು. ಮೂರು ರಾಜ್ಯದ ಶಿಕ್ಷಣ ಇಲಾಖೆಯ ವಿವಿಧ ಹಂತದ (ಜಿಲ್ಲೆ ಮತ್ತು ತಾಲ್ಲೂಕು) ಅಧಿಕಾರಿಗಳು. ಹೀಗೆ ಶಾಲಾ ಆಡಳಿತದಲ್ಲಿ ಭಾಗವಹಿಸುವ ಪ್ರತಿ ಗುಂಪುಗಳಿಗೆ ನಿರ್ದಿಷ್ಟವಾದ ತರಬೇತಿ ಕಾರ್ಯಗಾರಗಳನ್ನು ಸಂಘಟಿಸಬೇಕಾಗಿದೆ. ಹಾಗೆಯೇ ಸಾಮರ್ಥ್ಯ ರೂಪಿಸುವ ಅಥವಾ ವಿಸ್ತರಿಸುವ ಕಾರ್ಯಚಟುವಟಿಕೆಗಳನ್ನು ಹೇಗೆ ವಿನ್ಯಾಸ ಮಾಡಿಕೊಳ್ಳಬೇಕು ಮತ್ತು ಅಲ್ಲಿ ಎದುರಾಗುವ ಸವಾಲುಗಳು ಯಾವುವು ಎಂಬುದನ್ನು ಈ ಅಧ್ಯಾಯದಲ್ಲಿ ಚರ್ಚಿಸಲಾಗಿದೆ.

. ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲ

ಸ್ಥಳೀಯ ಸಮುದಾಯ ಶೈಕ್ಷಣಿಕ ಚಟುವಟಿಕೆಯ ನಿರ್ವಹಣೆಯನ್ನು ಸ್ಥಳೀಯ ರಾಜಕೀಯ ಮತ್ತು ಅಭಿವೃದ್ಧಿಯ ಸನ್ನಿವೇಶದ ಜೊತೆಗೆ ಹೇಗೆ ನಿಯಂತ್ರಿಸಬೇಕು ಎಂಬುದನ್ನು ತಿಳಿಸುವುದು ಅಗತ್ಯವಾಗಿದೆ. ಶಾಲಾ ಆಡಳಿತ ಮಂಡಳಿ ಅಥವಾ ಗ್ರಾಮ ಶಿಕ್ಷಣ ಸಮಿತಿ ಅಥವಾ ಸ್ಥಳೀಯ ಪಂಚಾಯತ್‌ರಾಜ್ ಸಂಸ್ಥೆಗಳಾಗಿರಬಹುದು ಅಥವಾ ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸ್ಥೆಗಳಾಗಿರಬಹುದು. ಇವು ಶೈಕ್ಷಣಿಕ ನಿರ್ವಹಣೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪ್ರತ್ಯೇಕವಾಗಿಯೇ ಗುರುತಿಸಿ ಪರಿಷ್ಕರಿಸಬೇಕು. ಸಮುದಾಯದ ಸದಸ್ಯರು ಶೈಕ್ಷಣಿಕ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಹಂತದಲ್ಲಿ, ಸಾರ್ವತ್ರಿಕವಾದ ಅಭಿಪ್ರಾಯಗಳನ್ನು ರೂಪಿಸುವ ಅಥವಾ ಇಂತಹ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಶಾಸನಬದ್ಧವಾಗಿ ನಡೆದುಕೊಳ್ಳುವ ಸಂಸ್ಥೆಗಳಾಗಿರಬೇಕು. ಆಗ ಮಾತ್ರ ಪರಸ್ಪರ ನಂಬಿಕೆಯಿಂದ ಶಿಕ್ಷಕರು ಮತ್ತು ಸಮುದಾಯದ ಸದಸ್ಯರು ಉತ್ತಮ ರೀತಿಯಲ್ಲಿ ಶಾಲೆಯನ್ನು ನಿರ್ವಹಿಸಬಹುದು. ಇದರ ಜೊತೆಗೆ ಸ್ಥಳೀಯ ಜನರಿಗೆ ಶಾಲಾ ನಿರ್ವಹಣೆಯ ತಿಳಿವಳಿಕೆ ನೀಡುವುದನ್ನು ಯಾವುದೇ ಕಾರಣದಿಂದ ಮರೆಯಬಾರದು.

ಮುಂದುವರಿದು ಹೇಳುವುದಾದರೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಶಾಲಾ ಶಿಕ್ಷಕರು ಸ್ಥಳೀಯ ಆಡಳಿತದ ಜೊತೆ ಸೇರಿ ಶೈಕ್ಷಣಿಕ ಸ್ವಾತಂತ್ರ್ಯ ಮತ್ತು ಶಾಲೆಯ ಲೆಕ್ಕಪತ್ರಗಳ ನಿರ್ವಹಣೆಗೆ ಸಂಬಂಧಿಸಿದಂತೆ ವ್ಯಾಪಕವಾದ ಸುಧಾರಣೆಗಳನ್ನು ಜಾರಿಗೆ ತರಬೇಕಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಚಿಕ್ಕ ಪ್ರಮಾಣದ ಬಿಡಿ ಬಿಡಿಯಾದ ಸುಧಾರಣೆಗಳಿಂದ ಸಂಸ್ಥೆಯ (ಶಾಲೆಯ) ಆಂತರಿಕ ನಿರ್ವಹಣೆಯು ಗಟ್ಟಿಯಾಗದೆ, ಅಧಿಕಾರವು ಸ್ಥಳೀಯ ನಾಯಕರಿಗೆ ವರ್ಗಾವಣೆಯಾಗುತ್ತದೆ. ಇದರಿಂದಾಗಿ ಕೆಲವು ಸ್ಥಳೀಯ ಶಾಲೆಯ ಚಟುವಟಿಕೆಯಲ್ಲಿ ಅನಗತ್ಯ ತಲೆಹಾಕುವ ಮೂಲಕ ಸ್ಥಳೀಯ ಸಮುದಾಯಗಳ ನಡುವೆ ಇರಬಹುದಾದ ಸಂಕುಚಿತ ಭಾವನೆಗಳಿಂದ ಅನಗತ್ಯ ರಾಜಕೀಯ ಒತ್ತಡಗಳನ್ನು ಶಾಲಾ ನಿರ್ವಹಣೆಯಲ್ಲಿ ಎದುರಿಸಬೇಕಾಗುತ್ತದೆ.

. ಸಂದರ್ಭಕ್ಕೆ ತಕ್ಕ ಪಠ್ಯಕ್ರಮ

ಸಾಮರ್ಥ್ಯ ವಿಸ್ತರಣಾ ತರಬೇತಿಗೆ ಸಂಬಂಧಿಸಿದಂತೆ ಅನೇಕ ಕಾರ್ಯಕ್ರಮಗಳಿದ್ದರೂ ವಿಶಿಷ್ಟವಾದ ಕಾರ್ಯಕ್ರಮಗಳು ಅತ್ಯಂತ ಕಡಿಮೆ. ಇಂತಹ ಪ್ರತಿ ಕಾರ್ಯಕ್ರಮಗಳನ್ನು ಕೂಡ ತನ್ನ ಪರಿಧಿಯಲ್ಲಿ ಸಂದರ್ಭಕ್ಕೆ ತಕ್ಕಂತೆ ವಿನ್ಯಾಸ ಮಾಡಿ ರೂಪಿಸಲಾಗಿರುತ್ತದೆ. ಕೆಲವು ಪ್ರದೇಶಗಳ ಸಾಮಾಜಿಕ ಸನ್ನಿವೇಶಕ್ಕೆ ಹೊಂದಿಕೊಳ್ಳುವ ವಿಷಯಗಳಿಗೆ ಹೆಚ್ಚಿನ ಮಹತ್ವ ನೀಡಬೇಕಾಗುತ್ತದೆ. ಉದಾಹರಣೆಗೆ ಪಠ್ಯಕ್ರಮದಲ್ಲಿ ಇರುವ ಒಂದು ಜನಪದ ಗಾದೆಯು ಇಡಿ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಂದೇ ಇರುವುದಿಲ್ಲ. ಇದು ಪ್ರದೇಶದಿಂದ ಪ್ರದೇಶಕ್ಕೆ ಬೇರೆ ಬೇರೆಯಾಗಿರುತ್ತವೆ. ಹೀಗಾಗಿ ಪಠ್ಯಕ್ರಮದಲ್ಲಿ ಇರುವ ಗಾದೆಯು ಯಾವುದೇ ಒಂದು ಪ್ರದೇಶಕ್ಕೆ ಸೀಮಿತವಾದುದ್ದಾಗಿರಬಹುದು. ಇದನ್ನು ಮಕ್ಕಳಿಗೆ ಹೇಳಿಕೊಡುವಾಗ ಸ್ಥಳೀಯ ಗಾದೆಗಳನ್ನು ಜೊತೆ ಹೇಳಿಕೊಡುವಂತೆ ಶಿಕ್ಷಕರಿಗೆ ಹಾಗೂ ಪಠ್ಯ ರಚನಾಕಾರರಿಗೆ ತರಬೇತಿಯನ್ನು ನೀಡಬೇಕು. ಅಲ್ಲದೆ ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವ ಕೌಶಲ್ಯವನ್ನು, ಹೆಚ್ಚು ವೃತ್ತಿಪರತೆಯನ್ನು ಹಾಗೂ ತಾಂತ್ರಿಕತೆ ಇರುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಇದು ಕೂಡ ನಿರ್ದಿಷ್ಟ ಗುಂಪುಗಳ ಜೊತೆ ವ್ಯವಹರಿಸುವ ಪ್ರಮಾಣದ ಮೇಲೆ ನಿರ್ಧಾರವಾಗಬೇಕಾಗಿದೆ. ಉದಾಹರಣೆಗೆ ಹೆಸರಿಸುವುದಾದರೆ ಶಾಲೆಯ ಆಡಳಿತ ವರ್ಗ, ಶಿಕ್ಷಕ ವರ್ಗ ಅಥವಾ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗಾಗಿ, ಇದರ ಜೊತೆಗೆ ಕೆಲವು ಸಾಮರ್ಥ್ಯ ರೂಪಿಸುವ ತರಬೇತಿ ಕಾರ್ಯಕ್ರಮಗಳಿಗೆ ವಿಶೇಷವಾದ ಒತ್ತು ನೀಡಬೇಕಾದ ಅಗತ್ಯವಿದೆ. ಇಂತಹ ಕೆಲವು ವಿಷಯಗಳನ್ನು ಕುರಿತು ಚರ್ಚಿಸುವ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.

.. ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಮಾಹಿತಿ

ವಿಕೇಂದ್ರೀಕರಣ ಮಾದರಿಯ ನಿರ್ವಹಣೆ ಕುರಿತು ಅಧ್ಯಯನ ನಡೆಸುತ್ತಿರುವವರು ಹೇಳುವಂತೆ, ಬದಲಾದ ನೀತಿ ಮತ್ತು ನಿರ್ಧಾರಗಳು ಪುಸ್ತಕಗಳಲ್ಲಿಯೇ ಉಳಿಯುವ ಜೊತೆಗೆ, ಇವುಗಳಿಂದ ಉಂಟಾಗಿರುವ ಕಾನೂನಾತ್ಮಕ ಬದಲಾವಣೆಯ ವಿವರವಾಗಿ ತಿಳಿದಿರುವುದೂ ಕೇಂದ್ರದಲ್ಲಿ ಇರುವ ಪ್ರಾಧಿಕಾರಗಳಿಗೆ ಹಾಗೂ ಅಧಿಕಾರಶಾಹಿಗಳಿಗೆ ಮಾತ್ರ. ಆಗಿದ್ದಾಂಗೆ ಬದಲಾದ ನೀತಿ ನಿರೂಪಣೆಗಳನ್ನು ಅಳವಡಿಸಿಕೊಂಡು ಅವುಗಳನ್ನು ಕಾರ್ಯರೂಪಕ್ಕೆ ತರುವ ಸ್ಥಳೀಯ ಸಂಸ್ಥೆಗಳು ಮತ್ತು ಸ್ಥಳೀಯ ಜನರನ್ನು ಕಡೆಗಣಿಸಲಾಗಿದೆ. ಜೊತೆಗೆ ಸ್ಥಳೀಯರು ತಮಗಿರುವ ಅಧಿಕಾರವನ್ನು ಬಳಸುವುದಕ್ಕೆ ಬದಲಾಗಿ ಮೇಲಿನ ಪ್ರಾಧಿಕಾರಗಳಿಂದ ಬರುವ ಸೂಚನೆಗಳನ್ನು ಪಾಲಿಸುವರಾಗಿದ್ದಾರೆ. ನೀತಿ ನಿರೂಪಣೆಗಳಲ್ಲಿ ಉಂಟಾಗಿರುವ ಬದಲಾವಣೆಯ ಚೌಕಟ್ಟನ್ನು ವಿಸ್ತರಣೆ ಮಾಡುವಲ್ಲಿ ಮತ್ತು ಅದನ್ನು ಆಚರಣೆಗೆ ತರುವ ಜನರಿಗೆ ವಿವಿಧ ಹಂತಗಳಲ್ಲಿ ತಿಳುವಳಿಕೆಯನ್ನು ನೀಡುವುದೂ ಕೂಡ ಅಗತ್ಯವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಎರಡು ಪ್ರಮುಖ ಅಂಶಗಳನ್ನು ಕುರಿತು ಹೇಳಲೇಬೇಕಾಗುತ್ತದೆ. ಒಂದು, ಇಂತಹ ತಿಳುವಳಿಕೆಯನ್ನು ಮೂಡಿಸುವ ಚಟುವಟಿಕೆಗಳು ಎಲ್ಲರಿಗೂ ಅಗತ್ಯವಾಗಿದೆ. ಇದನ್ನು ಶಿಕ್ಷಣದ ಸ್ಥಳೀಯ ಆಡಳಿತ ಮತ್ತು ನಿರ್ವಹಣೆಯ ಕ್ಷೇತ್ರಕ್ಕೆ ಹೊಸದಾಗಿ ಪ್ರವೇಶ ಪಡೆದವರಿಗೆ ಮಾತ್ರವಾಗದೆ, ಸಮುದಾಯದ ನಾಯಕರುಗಳಿಗೆ, ಪೋಷಕರಿಗೆ ಮುಂತಾದವರಿಗೆ ನೀಡಬೇಕಾಗಿದೆ. ಎರಡು, ಸಾಮರ್ಥ್ಯ ರೂಪಿಸುವಾಗ ಕಾರ್ಯಕ್ರಮಗಳ ಇನ್‌ಪುಟ್ಸ್‌ಗಳು ಪ್ರತಿ ಹಂತದಲ್ಲಿ ಪಾಲುದಾರರ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಒಳಗೊಂಡಂತೆ ರೂಪಿತವಾಗಿರಬೇಕು. ನಿರ್ದಿಷ್ಟವಾಗಿ ಅವುಗಳನ್ನು ಹೆಸರಿಸುವುದಾದರೆ, ಶಾಲೆ, ಸಮುದಾಯ ಮತ್ತು ಶಿಕ್ಷಣ ಇಲಾಖೆ, ಮುಂತಾದ ಗುಂಪುಗಳಿಗೆ ಸಮತೋಲನವಾಗಿ ತಿಳುವಳಿಕೆ ಮೂಡಿಸುವಂತಿರಬೇಕು. ಆಡಳಿತದಲ್ಲಿ ಭಾಗವಹಿಸುವ ಜನರು ತಮ್ಮ ಪಾಲಿನ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಬೇರೆ ಸದಸ್ಯರ ನಡವಳಿಕೆಯನ್ನು ಉಲ್ಲೇಖಿಸದೆ ಅಥವಾ ಅವರ ಪಾತ್ರಗಳನ್ನು ಕುರಿತು ಮಾತನಾಡದೆ, ತಮ್ಮ ತಮ್ಮ ಕರ್ತವ್ಯಗಳನ್ನು ನಿರ್ವಹಿಸಬೇಕು ಎಂಬುದನ್ನು ಪ್ರತಿ ಹಂತದಲ್ಲಿಯೂ ವಿವರಿಸಿ ತಿಳುವಳಿಕೆ ಮೂಡಿಸಬೇಕು.

.. ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆಗೆ ವಿಶೇಷ ಲಕ್ಷ್ಯ

ಶಾಲೆಗಳು ಮೇಲಿನಿಂದ ಬರುವ ಸೂಚನೆ ಅಥವಾ ನಿರ್ದೇಶನಗಳನ್ನು ಪುರಸ್ಕರಿಸುವ ಸಂಸ್ಥೆಯಾಗಿ ಕೆಲಸ ಮಾಡುತ್ತಿದ್ದು ಸಂಪ್ರದಾಯ, ಹೊಸ ಪದ್ಧತಿಗಳು ಮತ್ತು ನೀತಿ ನಿರೂಪಣೆಗಳ ಬರುವಿಕೆಯಿಂದಾಗಿ ಶಾಲಾ ಶಿಕ್ಷಣ ಕ್ಷೇತ್ರದಲ್ಲಿ ಅನೇಕ ಬದಲಾವಣೆಗಳಾಗಿವೆ. ಇಂತಹ ಬದಲಾವಣೆಗಳು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ವ್ಯಾಪಕ ಪ್ರಮಾಣದ ಸುಧಾರಣೆಗಳನ್ನು ಉಂಟುಮಾಡಿವೆ. ಈ ಪ್ರಕ್ರಿಯೆಗಳನ್ನು ಪ್ರತಿಶಾಲೆಗಳು ತಮ್ಮ ತಮ್ಮ ವ್ಯಾಪ್ತಿಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಬೇಕಾಗಿದೆ. ಇದಕ್ಕೆ ಸ್ವಲ್ಪ ಭಿನ್ನವಾಗಿ, ಶಿಕ್ಷಣದಲ್ಲಿ ಸ್ಥಳೀಯ ಆಡಳಿತದಿಂದ ‘ವೈಯಕ್ತಿಕ ಚೌಕಟ್ಟುಗಳು ಎಲ್ಲಾ ಶಾಲೆಗಳಿಗೂ ಹೊಂದಿಕೆಯಾಗಬಹುದಾದ ಪ್ರಮಾಣ ಬದ್ಧ ಚೌಕಟ್ಟಿಗೆ ಬದಲಾಗುತ್ತಿವೆ. ಅದರಲ್ಲಿಯೂ ಸ್ಥಳೀಯ ಮಟ್ಟದಲ್ಲಿಯೇ (ಶಾಲಾ ಮಟ್ಟದಲ್ಲಿ) ಶಾಲಾ ನಿರ್ವಹಣೆ ಮಾಡುವ ಅವಕಾಶವನ್ನು ಮತ್ತು ಅಧಿಕಾರವನ್ನು ಶಾಲೆಗಳಿಗೆ ನೀಡುವ ಮೂಲಕ ಹೆಚ್ಚಿನ ಪ್ರಮಾಣದ ಸುಧಾರಣೆ ತರಲಾಗುತ್ತಿದೆ. ಅನೇಕ ರಾಷ್ಟ್ರಗಳಲ್ಲಿ ಶಾಲಾಭಿವೃದ್ಧಿ ಯೋಜನೆ ಎಂಬುದು ಕೇವಲ ಶಾಲೆಯ ಒಳಗೆ ಮಾತ್ರ ಅಭಿವೃದ್ಧಿ ಮತ್ತು ಬದಲಾವಣೆಗಳನ್ನು ತರುವುದಕ್ಕೆ ಸೀಮಿತಗೊಳ್ಳದೆ, ಸಾರ್ವಜನಿಕರಿಂದ ಉತ್ತಮ ರೆಕಗ್ನಿಶನ್ ಅನ್ನು ಪಡೆದುಕೊಳ್ಳಲು ಮತ್ತು ದೇಣಿಗೆಯ ಬೆಂಬಲವನ್ನು ಪಡೆದುಕೊಳ್ಳಲು, ಶಾಲೆಯ ಎಲ್ಲಾ ವ್ಯವಹಾರಗಳನ್ನು ಜವಾಬ್ದಾರಿಯಿಂದ ಮತ್ತು ಪಾರದರ್ಶಕತೆಯಿಂದ ನಿರ್ವಹಿಸುವ ಮೂಲಕ ಉತ್ತಮ ಶಾಲಾ ನಿರ್ವಹಣೆ ಹುಟ್ಟುಹಾಕಲು ಪ್ರಯತ್ನ ನಡೆಸುತ್ತಿವೆ. ಶಾಲಾ ನಿರ್ವಹಣೆ ಕುರಿತ ಈ ಎಲ್ಲಾ ಲಿಂಕಿಂಗ್ ಚಟುವಟಿಕೆಗಳು ಶಾಲಾಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುವ ಮಾಹಿತಿಗಳನ್ನು ವಿಶೇಷವಾಗಿ ವಿನ್ಯಾಸಮಾಡುವುದರಿಂದ ಎಲ್ಲಾ ಪಾಲುದಾರರ ಅಭಿಪ್ರಾಯಗಳನ್ನು ಮತ್ತು ಅವಶ್ಯಕತೆಗಳನ್ನು ಪರಿಗಣಿಸಿ ರೂಪಿತವಾದ ಅಭಿವೃದ್ಧಿಯನ್ನು ನಾವು ಕಂಡುಕೊಳ್ಳಲು ಪ್ರಯತ್ನಿಸಬಹುದಾಗಿದೆ.

. ಕುಶಲತೆಯ ಅಭಿವೃದ್ಧಿ

ಶಿಕ್ಷಣ ಸಂಸ್ಥೆಗಳು (ಶಾಲೆ) ಕೇಂದ್ರೀಕೃತ ಮಾದರಿ ನಿರ್ವಹಣಾ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಸಾಮಾನ್ಯವಾಗಿ ಮೇಲಿನ ಸೂಚನೆಗಳನ್ನು ಪುರಸ್ಕರಿಸುವಂತೆ ಕೆಲಸ ಮಾಡುತ್ತಿರುವುದನ್ನು ನಾವು ಗುರುತಿಸಬಹುದಾಗಿದೆ. ಅಲ್ಲದೆ ಬಹುದೂರದ ಸ್ಥಳಗಳಿಗೆ ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲುಸ್ತುವಾರಿಯು ಬಹಳ ಸೀಮಿತವಾಗಿರುತ್ತದೆ. ಇಂತಹ ಪರಿಸ್ಥಿತಿಯು ಸ್ಥಳೀಯ ಆಡಳಿತದಿಂದ ಸಂಪೂರ್ಣವಾಗಿ ಬದಲಾವಣೆಗೆ ಒಳಪಡುತ್ತವೆ. ಶಾಲಾ ಆಡಳಿತ ವರ್ಗದ ಜೊತೆಗೆ ಸಮುದಾಯ ಮತ್ತು ಪೋಷಕರ ಮಾನವೀಯ ಸಂಬಂಧಗಳಿಂದ ಹೊಸ ಕುಶಲತೆಯನ್ನು ಪಡೆದುಕೊಳ್ಳಬಹುದಾಗಿದೆ. ಶಿಕ್ಷಕರು ಮತ್ತು ಮುಖ್ಯ ಶಿಕ್ಷಕರು ನಾಲ್ಕು ಗೋಡೆಗಳ ಆಚೆಗಿನ ಸಂಬಂಧವನ್ನು ಹುಟ್ಟುಹಾಕಬೇಕಾಗಿದೆ. ಪೋಷಕರ ಶಾಲಾ ನಿರ್ವಹಣೆಯಲ್ಲಿ ಪಾಲುದಾರಿಕೆಯನ್ನು ಶಾಲೆಯ ಕೆಲಸ ಕಾರ್ಯದಲ್ಲಿ ಚಟುವಟಿಕೆಯಿಂದ ಭಾಗಬಹಿಸುವುದನ್ನು ಅಂತರ್ಗತ ಮಾಡಿಕೊಳ್ಳಬೇಕಾಗಿದೆ. ಇದರ ಜೊತೆಗೆ ಶಾಲೆಯ ಎಲ್ಲಾ ವ್ಯವಹಾರಗಳಲ್ಲಿ ಮೊದಲಿಗಿಂತ ಹೆಚ್ಚಿನ ಪಾರದರ್ಶಕತೆಯನ್ನು ಸಾಮಾಜಿಕ ಲೆಕ್ಕಪತ್ರ ಮಂಡನೆಯ ಮಾದರಿಯಲ್ಲಿ ಹುಟ್ಟುಹಾಕಬೇಕಾಗಿದೆ. ಪೋಷಕರು ಮತ್ತು ಶಾಲೆಯ ಆಡಳಿತ ವರ್ಗ ಒಟ್ಟಾರೆ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಚಿಂತನೆಗಳನ್ನು ಬೆಳೆಸಿಕೊಳ್ಳುವ ಮೂಲಕ ಪರಸ್ಪರ ಸಹ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಇದಕ್ಕೆ ಕೇವಲ ತಾಂತ್ರಿಕವಾದ ಮತ್ತು ಶೈಕ್ಷಣಿಕವಾದ ಸಾಮರ್ಥ್ಯ ವಿಸ್ತರಣಾ ತರಬೇತಿ ಕಮ್ಮಟಗಳು ಮಾತ್ರ ಸಾಕಾಗುವುದಿಲ್ಲ.

.. ಹೊಸ ಕಾರ್ಯ ಚೌಕಟ್ಟು

ಶಿಕ್ಷಣದ ಸ್ಥಳೀಯ ಆಡಳಿತದಲ್ಲಿ ವೈಯಕ್ತಿಕ ನೆಲೆಗಟ್ಟಿಗೆ ಹೊಸ ಆಯಾಮ ನೀಡುವ ಅಗತ್ಯವಿದೆ. ಪ್ರಸ್ತುತ ಆಚರಣೆಯಲ್ಲಿ ಇರುವ ಶಿಕ್ಷಣ ನೇಮಕಾತಿ ವ್ಯವಸ್ಥೆಯು, ಒಂದು ಶಾಲೆಗಾಗಿ ಅಲ್ಲ. ಅಂತಹ ಪ್ರಕ್ರಿಯೆ ಪ್ರಚಲಿತವಾಗಿ ಇರುವ ಎಲ್ಲಾ ರಾಜ್ಯಗಳಲ್ಲಿ ಇದನ್ನು ಮರು ಪರಿಶೀಲಿಸಬೇಕಾದ ಅಗತ್ಯವಿದೆ. ಇದಕ್ಕೆ ಹೊಸ ಚೌಕಟ್ಟನ್ನು ಹಾಗೂ ದೃಷ್ಟಿಕೋನವನ್ನು ಕಂಡುಕೊಳ್ಳುವ ಮೂಲಕ ಶಿಕ್ಷಕ ಸೇವೆಗೆ ಹೊಸ ಆಯಾಮವನ್ನು ನೀಡುವುದು ಅವಶ್ಯಕ. ಹೊಸ ರೂಪುರೇಶೆಯಲ್ಲಿ ಶಿಕ್ಷಕರು ಸ್ಥಳೀಯ ಶಾಲೆಗೆ ಸೇರಿದವರಾಗಿರಬೇಕು ಅಥವಾ ಶಾಲೆಗಳ ನಡುವೆ ಸಣ್ಣ ಪ್ರಮಾಣದ ಹೊಂದಾಣಿಕೆಯು ಕೊಡುಕೊಳ್ಳುವಿಕೆ ಮಾದರಿಯಲ್ಲಿ ಇರಬೇಕು. ಈಗಾಗಲೇ ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಸ್ಥಳೀಯ ನಿರ್ವಹಣಾ ವ್ಯವಸ್ಥೆಯನ್ನು ಮತ್ತು ಶಿಕ್ಷಕರನ್ನು ಅಳೆಯುವ ಪದ್ಧತಿ ಇದೆ. ಅಲ್ಲಿ ಶಿಕ್ಷಕರು ತಮ್ಮ ವೃತ್ತಿಗೆ ದೊರಕಬೇಕಾದ ಅವಕಾಶ ದೊರಕದೆ ಇರುವುದಕ್ಕೆ ದೂರನ್ನು ನೀಡಿರುವುದು ಇದೆ. ಶಿಕ್ಷಕರ ನೇಮಕಾತಿ ಮತ್ತು ಆ ವೃತ್ತಿಯ ಅಭಿವೃದ್ಧಿಗಾಗಿ ವಿಶಿಷ್ಟವಾದ ಸಾಮರ್ಥ್ಯ ವಿಸ್ತರಣಾ ಕಮ್ಮಟಗಳನ್ನು ಸ್ಥಳೀಯ ಶೈಕ್ಷಣಿಕ ಯೋಜನಾಕಾರರು ಮತ್ತು ಆಡಳಿತಗಾರರು ನೀತಿ ನಿರೂಪಣೆ ವಿನ್ಯಾಸ ಮಾಡಿ ರೂಪಿಸಿ ಅದನ್ನು ಸರಿಯಾದ ರೀತಿಯಲ್ಲಿ ಜಾರಿಗೆ ತರಬೇಕಾಗಿದೆ.

.. ಅಸಮಾಧಾನಗಳನ್ನು ಕೊನೆಗೊಳಿಸಲು ಸೂತ್ರಗಳು

ಕೇಂದ್ರೀಕೃತ ಆಡಳಿತ ವ್ಯವಸ್ಥೆಯಲ್ಲಿ ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ಕೆಲವರು ರಾಷ್ಟ್ರದಾದ್ಯಂತ ಆಡಳಿತ ನಡೆಸಲು ನೀತಿ ನಿರೂಪಣೆಗಳನ್ನು ಮಾಡುವವರಾಗಿರುತ್ತಾರೆ. ಸಾಮಾನ್ಯವಾಗಿ ಈ ರೀತಿಯ ಆಡಳಿತದಲ್ಲಿ ಅಸಮಾಧಾನಗಳನ್ನು ಕೊನೆಗಾಣಿಸಲು ಅಥವಾ ಬಗೆಹರಿಸಲು, ಶಿಸ್ತುಕ್ರಮ ಕೈಗೊಳ್ಳುವುದು ಸಾಮಾನ್ಯ. ಆದರೆ ಸ್ಥಳೀಯ ಸರ್ಕಾರಗಳ ಗವರ್ನೆನ್ಸ್ ಪ್ರಾರಂಭವಾದೊಡನೆ, ಇಂತಹ ಪರಿಸ್ಥಿತಿಗಳು ಬದಲಾಗತೊಡಗುತ್ತವೆ. ಸ್ಥಳೀಯ ಶಾಲಾ ನಿರ್ವಹಣೆಯಲ್ಲಿ ಅನುಸರಿಸಬೇಕಾದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಸ್ಥಳೀಯ ಆಡಳಿತದಲ್ಲಿ ಕ್ರಮಬದ್ಧತೆ ಇಲ್ಲದೆ ಇದ್ದರೆ, ಶಾಲೆಗಳು ಅನೇಕ ಒತ್ತಡಗಳನ್ನು ಅಸ್ಥಿರತೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ಶಾಲೆಯ ಆಡಳಿತವರ್ಗ ಸ್ಥಳೀಯ ಸಮುದಾಯಗಳಿಂದ ಪರಿಗಣಿಸಲಾಗದಷ್ಟು ಒತ್ತಡಗಳನ್ನು ಎದುರಿಸಬೇಕಾಗುತ್ತದೆ. ಹೀಗಾಗಿ ಸ್ಥಳೀಯ ಶಾಲಾ ಆಡಳಿತ ಕುರಿತು ಅಗತ್ಯವಾದ ತರಬೇತಿಗಳನ್ನು ನೀಡಬೇಕಾಗುತ್ತದೆ.

.. ಉತ್ತಮ ತರಬೇತಿಗಳನ್ನು ನೀಡುವ ಪ್ಯಾಕೇಜ್ ಅಲ್ಲ

ಶಾಲಾ ನಿರ್ವಹಣೆ ಕುರಿತು ಹೊಸ ಹೊಸ ಸಂಶೋಧನೆಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿವೆ. ಇವು ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ವಿತರಣೆಗೆ ಬೇಕಾಗುವ ಉತ್ತಮ ಗುಣಮಟ್ಟದ ಕ್ರಿಯಾತ್ಮಕ ತರಬೇತಿ ಕಾರ್ಯಗಾರಗಳಿಗಾಗಿ ಹುಡುಕಾಟ ನಡೆಸುತ್ತಿವೆ. ನೀತಿ ನಿರೂಪಣೆಗಳಲ್ಲಿ ಬದಲಾವಣೆ ತರುವ ಮೂಲಕ ಅಧಿಕಾರ ಮತ್ತು ಆಳ್ವಿಕೆಯನ್ನು ಸ್ಥಳೀಯ ಸಂಸ್ಥೆಗಳಿಗೆ ನೀಡಿದರೆ ಸಾಲದು, ಈ ಕುರಿತು ಸ್ಥಳೀಯ ಜನರಿಗೆ ತರಬೇತಿ ಕಾರ‍್ಯಾಗಾರಗಳನ್ನು ನಡೆಸುವುದರ ಮೂಲಕ ಬದಲಾವಣೆಗಳನ್ನು ತರಲು ಪ್ರಯತ್ನಿಸಬೇಕು. ಜೊತೆಗೆ ಸ್ಥಳೀಯ ಮಟ್ಟದ ಆಡಳಿತದಲ್ಲಿ ಪಾಲುಗೊಳ್ಳುವ ಎಲ್ಲಾ ಪಾಲುದಾರರ (ಜನರು) ಮನಸ್ಥಿತಿಯಲ್ಲಿ ಅಗತ್ಯ ಪ್ರಮಾಣದ ಬದಲಾಣೆಗಳಾಗಬೇಕು. ಸ್ಥಳೀಯ ಜನರು ಮೇಲಿನ ಆಡಳಿತ ಪ್ರಾಧಿಕಾರಗಳ ಸೂಚನೆಗಳನ್ನು ಪಾಲಿಸುವ ಅಥವಾ ಪೋಷಿಸುವಂತಹ ಸ್ಥಳಗಳಲ್ಲಿ ಇಂತಹ ಬದಲಾವಣೆಯನ್ನು ತರುವುದು ಸರಳವಾದುದಲ್ಲ. ಹೀಗಾಗಿ ಹೊಸ ಬಗೆಯ ಅಭ್ಯಾಸಗಳನ್ನು ಜನರು ವೈಯಕ್ತಿಕ ನೆಲೆಯಲ್ಲಿ ಖಚಿತವಾಗಿ ರೂಪಿಸಿಕೊಳ್ಳುವುದು ಬಹಳ ನಿಧಾನ ಮತ್ತು ಪ್ರಯಾಸಕರವಾದ ಪ್ರಕ್ರಿಯೆ. ಇದನ್ನು ನೇರವಾಗಿ ನಿಭಾಯಿಸುವ, ತಾಂತ್ರಿಕ ಬೆಂಬಲ ಮತ್ತು ವೃತ್ತಿಪರತೆಯನ್ನು, ಕೆಲವು ಮಾರ್ಗದರ್ಶನಗಳಿಂದ ಹಾಗೂ ಭಾಗವಹಿಸುವ ಮೂಲಕ ಬೆಳೆಸಿಕೊಳ್ಳಬೇಕಾಗಿದೆ. ಹೀಗಾಗಿ ಸಾಮರ್ಥ್ಯ ವಿಸ್ತರಣಾ ತರಬೇತಿ ಕಮ್ಮಟಗಳು ಕೇಂದ್ರೀಕೃತ ನಿರ್ವಹಣಾ ವ್ಯವಸ್ಥೆಯನ್ನು ಸ್ಥಳೀಯ ಆಡಳಿತವಾಗಿ ಸರಳಗೊಳಿಸಿ ಬದಲಾಯಿಸಲು ಪ್ರಯತ್ನ ನಡೆಸುವುದುರಿಂದ ಇದು ಒಂದು ಪ್ರಕ್ರಿಯೆಯಷ್ಟೆ.

.. ಸಾಂಸ್ಥಿಕ ಸೌಲಭ್ಯ

ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯು ಸ್ಥಳೀಯ ಆಡಳಿತಕ್ಕೆ ಸ್ಥಿತ್ಯಂತರಗೊಳ್ಳುವಾಗ ಹೆಚ್ಚಿನ ಅನಿರೀಕ್ಷಿತ ಹಾಗೂ ಆಕಸ್ಮಿಕ ಅನುಭವಗಳನ್ನು ಯಾರಾದರೂ ಪಡೆಯಬಹುದು. ಈ ದೃಷ್ಟಿಯಿಂದ ಸ್ಥಳೀಯ ಆಡಳಿತದ ತಿಳುವಳಿಕೆಯನ್ನು ಮತ್ತು ಕುಶಲತೆಯನ್ನು ಸ್ಥಳೀಯ ಮಟ್ಟದಲ್ಲಿ ಸಮರ್ಥವಾಗಿ ಆಚರಣೆಗೆ ತರುವವರಾರು ಎಂಬ ಪ್ರಶ್ನೆ ನಮಗೆ ಎದುರಾಗುತ್ತದೆ. ಅದರಲ್ಲಿಯೂ ಯಾವ ಸಂಸ್ಥೆ ಈ ಜವಾಬ್ದಾರಿಯನ್ನು ಸಮರ್ಥವಾಗಿ ಮುಂದುವರಿಸಬಲ್ಲದು ಎಂದು ನಿರ್ಧರಿಸುವುದು ಬಹಳ ಕಷ್ಟ. ಕೆಲವು ಮುಂದುವರಿದ ರಾಷ್ಟ್ರಗಳಲ್ಲಿ ಯೋಜನೆಗಳನ್ನು ನಿರ್ವಹಣೆ ಮಾಡಬಲ್ಲ ಕೆಲವು ಸಂಸ್ಥೆಗಳು ಸ್ವಲ್ಪಮಟ್ಟಿಗೆ ಇವೆ. ಈ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವ ದೃಷ್ಟಿಯನ್ನು ಇಂತಹ ಸಂಸ್ಥೆಗಳು ಹೊಂದಿರಬೇಕು. ಮುಂದುವರಿದು ಹೇಳುವುದಾದರೆ, ಇವುಗಳಲ್ಲಿ ಬಹಳಷ್ಟು ಸಂಸ್ಥೆಗಳು ಬಹಳ ದೂರದ ಪ್ರದೇಶಗಳನ್ನು ಹಾಗೂ ಬಹಳ ಹಿಂದುಳಿದ ಪ್ರದೇಶಗಳನ್ನು ತಲುಪುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗದಿದ್ದರೂ ಅವು ಇಂತಹ ಕಾರ್ಯಕ್ರಮಗಳನ್ನು ನಿರ್ವಹಣೆ ಮಾಡುವ ಅನುಭವ ಉಳ್ಳವಾಗಿವೆ. ಹೊಸ ನೀತಿ ನಿರೂಪಣೆಗಳನ್ನು ಸಂದರ್ಭಕ್ಕೆ ತಕ್ಕುದಲ್ಲದ ತರಬೇತಿ ಕಾರ್ಯಗಾರಗಳು ಕೇವಲ ಸೈದ್ಧಾಂತಿಕವಾದ ರೂಪದಲ್ಲಿ ಸಂಘಟಿತವಾದಲ್ಲಿ ಅವು ಅಪೂರ್ಣವಾಗುತ್ತವೆ ಎಂಬುದು ಎಲ್ಲರ ಅನುಭವ. ಅದರಲ್ಲಿಯೂ ಇಂತಹ ಕಾರ್ಯಗಾರಗಳನ್ನು ಆಗಿಂದ್ದಾಂಗ್ಗೆ ನಡೆಸುವ ಅಧಿಕಾರ ಹೊಂದಿದವರು ನಡೆಸಿದರೂ ಇವರಿಗೆ ಆಚರಣೆಗೆ ತರಬೇಕಾದ ಸನ್ನಿವೇಶದಲ್ಲಿ ಆಯಾ ಕ್ಷೇತ್ರಗಳಲ್ಲಿ ಇರುವ ಗತಿಶೀಲತೆಯ ಜ್ಞಾನ ಅಥವಾ ತಿಳುವಳಿಕೆ ಇಲ್ಲವಾಗಿರುತ್ತದೆ. ಹೀಗಾಗಿ ತರಬೇತಿ ಕಾರ‍್ಯಾಗಾರಗಳಲ್ಲಿ ಭಾಗವಹಿಸುವವರ ನೆಲೆಯಲ್ಲಿನ ಅನುಭವಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಅವರ ಅಗತ್ಯದ ನೆಲೆಗಳಿಗೆ ಅನುಗುಣವಾಗಿ ತರಬೇತಿಗಳನ್ನು ನೀಡುವುದು ಅಗತ್ಯವಾಗಿದೆ.

.೧೦. ಉಪಸಂಹಾರ

ಸಾಮರ್ಥ್ಯ ವಿಸ್ತರಣಾ ಕಾರ್ಯಕ್ರಮದ ಅಗತ್ಯತೆ ಕುರಿತು ವಿಶೇಷವಾದ ಸಮರ್ಥನೆಗಳನ್ನು ನೀಡುವ ಅವಶ್ಯಕತೆ ಇಲ್ಲ. ಆದರೆ ನಾವು ಇದನ್ನು ತುಂಬಾ ಕ್ಲಿಷ್ಟವಾದ ಪ್ರಶ್ನೆಯ ಮೂಲಕ ನೋಡಬೇಕಾಗಿದೆ. ಆ ಪ್ರಶ್ನೆಯೆಂದರೆ ಸ್ಥಳೀಯ ಆಡಳಿತ ಸಾಮರ್ಥ್ಯ ವಿಸ್ತರಣೆಯಂತಹ ತರಬೇತಿ ಕಾರ್ಯಕ್ರಮವನ್ನು ನಿರೀಕ್ಷಿಸುತ್ತಿದೆಯೇ? ಈ ವಿಷಯ ಕುರಿತು ಅಭಿವೃದ್ಧಿ ಹೊಂದುತ್ತಿರುವ ಅನೇಕ ರಾಷ್ಟ್ರಗಳು ಎದುರಿಸುತ್ತಿರುವ ಪ್ರಮುಖ ತೊಡಕೆಂದರೆ, ಸ್ಥಳೀಯ ಆಡಳಿತದ ಸೂಕ್ತಕ್ರಮಗಳ ಬಗ್ಗೆ, ಸ್ಥಳೀಯರಲ್ಲಿ ಅತ್ಯಂತ ಕಡಿಮೆ ಮಟ್ಟದ ತಿಳುವಳಿಕೆ ಅಭಿವೃದ್ಧಿಯಾಗಿರುವುದಾಗಿದೆ. ಅಥವಾ ಶಿಕ್ಷಣ ಮತ್ತು ಸಾಕ್ಷರತಾ ಕ್ಷೇತ್ರದಲ್ಲಿ ಕಡಿಮೆ ಮಟ್ಟದ ಅಭಿವೃದ್ಧಿಯನ್ನು ಸಾಧಿಸಿರುವುದಾಗಿದೆ. ಹೀಗಾಗಿ ಸ್ಥಳೀಯ ಅಡಳಿತದ ಮೂಲ ಉದ್ದೇಶಗಳನ್ನು ನಿರ್ಧರಿಸಿಕೊಳ್ಳುವುದು ಕಡಿಮೆ. ಇದಕ್ಕೆ ಮತ್ತೆ ಮೂಲ ಶಿಕ್ಷಣದಲ್ಲಿ ಅತ್ಯಂತ ಕಡಿಮೆ ಮಟ್ಟ ಇರುವುದುನ್ನು ಲಿಂಕ್ ಮಾಡಬಹುದು. ಹೀಗಾಗಿ ಇದು ಒಂದು ರೀತಿಯ ವಿಷವರ್ತುಲವಾಗಿ ಸ್ಥಳೀಯ ಆಡಳಿತ ಪ್ರಕ್ರಿಯೆಯನ್ನು ನಿಷ್ಫಲಗೊಳಿಸುತ್ತಿದೆ.

ಇದು ಸ್ವಲ್ಪ ಮಟ್ಟಿಗೆ ವಾಸ್ತವ ಕೂಡ. ತಳಮಟ್ಟದಲ್ಲಿ ಕೆಲಸ ಮಾಡುವವರು ಕೆಲಸವನ್ನು ಯೋಜಿಸಿಕೊಳ್ಳುವಲ್ಲಿ ಮತ್ತು ಅದನ್ನು ನಿರ್ವಹಿಸಿಕೊಳ್ಳುವಲ್ಲಿ ಗಂಭೀರವಾಗಿ ಹಿಂದುಳಿದಿದ್ದಾರೆ. ತಳಮಟ್ಟದಲ್ಲಿ ಸಾಮರ್ಥ್ಯ ವಿಸ್ತರಣಾ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಕ್ರಮಬದ್ಧತೆ ಇಲ್ಲದಿರುವುದಕ್ಕೆ ನಿರ್ದಿಷ್ಟವಾಗಿ ಸರ್ಕಾರಗಳು ಕಾರ್ಯಕ್ರಮಗಳ ಚೌಕಟ್ಟನ್ನು ಬದಲಾಯಿಸಿಕೊಳ್ಳದೆ ಇರುವುದನ್ನು ಕಣ್ಣಾರೆ ಕಂಡರೂ, ಇದಕ್ಕೆ ನಿರ್ದಿಷ್ಟವಾಗಿ ಇದೇ ಕಾರಣ ಎಂದು ಹೇಳಲು ಬರುವುದಿಲ್ಲ. ಅಲ್ಲದೆ ಸ್ಥಳೀಯರು ಬದಲಾವಣೆಯ ಪ್ರಕ್ರಿಯೆಗಳಲ್ಲಿ ಗಂಭೀರವಾಗಿ ಭಾಗವಹಿಸಿ ಅಭಿವೃದ್ಧಿಪರ ಸಾಮರ್ಥ್ಯಗಳನ್ನು ಪಡೆದುಕೊಳ್ಳಬೇಕು ಎಂದು ಹೇಳುವುದು ಎಷ್ಟರಮಟ್ಟಿಗೆ ಸರಿ. ಹೀಗಾಗಿ ವಿಕೇಂದ್ರೀಕರಣದ ಪ್ರಕ್ರಿಯೆಗಳು ಕೇವಲ ತಾಂತ್ರಿಕವಾಗಿ ನಡೆಯದೆ, ಸ್ಥಳೀಯರ ಜೀವನ ಕ್ರಮಗಳನ್ನು ಗುರುತಿಸಿ ಪ್ರತಿನಿಧಿಸುವಂತಿರಬೇಕು.

ಕೇಂದ್ರೀಕೃತ ಲಕ್ಷಣಗಳಿಂದ ನಿರ್ಧಾರಗೊಂಡು ರೂಪುಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳು, ಎಲ್ಲೋ ಒಂದು ಕಡೆಗೆ ಸ್ಥಳೀಯ ಪಾಲುದಾರರು ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅತ್ಯಂತ ಮಹತ್ವದ ಪಾತ್ರವಹಿಸಬೇಕಾಗಿದೆ. ಅವರು ತಮ್ಮ ತಮ್ಮ ಪಾತ್ರಗಳನ್ನು ನಿರ್ವಹಿಸುವಾಗ ತುಂಬಾ ಸಂಕೀರ್ಣವಾದ ಮತ್ತು ತನ್ನದೇ ಮಿತಿಯನ್ನು ಹೊಂದಿರುವುದರಿಂದ ಇಂತಹ ಪ್ರಕ್ರಿಯೆಗಳು ಬಹಳ ನಿಧಾನವಾಗಿ ನಡೆಯುತ್ತಿವೆ. ಇದು ಸಹಜವಾಗಿ ವಿವಿಧ ಪಾಲುದಾರರು ತಮ್ಮ ಸುತ್ತಲೂ ಹೊಂದಿರುವ ಅಧಿಕಾರ ಸಂಬಂಧಗಳನ್ನು ಬಹಳ ಗಂಭೀರವಾಗಿ ಡಿಸ್‌ಟರ್ಬ್ ಮಾಡುತ್ತದೆ. ಜೊತೆಗೆ ಇಂತಹ ರೂಪಾಂತರಗಳು ತಮ್ಮ ಉದ್ದೇಶಗಳನ್ನು ಸಾಧಿಸಿಕೊಳ್ಳುವಾಗ ಕೂಡ ಹೊರಗಿನ ಮಾಹಿತಿ ಮತ್ತು ಮಾರ್ಗದರ್ಶನದ ಅಗತ್ಯವಿದೆ. ಏಕೆಂದರೆ ಸ್ಥಳೀಯ ಆಡಳಿತದ ಕಾರ್ಯ ಚಟುವಟಿಕೆಗಳ ಬಗ್ಗೆ ನೇರವಾದ ಅನುಭವದ ಹಿನ್ನೆಲೆಯಲ್ಲಿ ಹೊಸ ಪಾಲಿಸಿಯ ಚೌಕಟ್ಟನ್ನು ರೂಪಿಸುವ ಕುಶಲತೆ ಹೊಂದಿಲ್ಲದವರು ಹೆಚ್ಚು. ಇಂತಹ ಪರಿಸ್ಥಿತಿಯಲ್ಲಿ ಅಥವಾ ಪರಿಸರದಲ್ಲಿ ಮೊದಲಿನಿಂದಲೂ ಮೇಲಿನಿಂದ ಕೆಳಕ್ಕೆ (ಟಾಪ್‌ಡೌನ್) ನೀತಿ ನಿರೂಪಣೆಗಳನ್ನು ನಿರ್ಧರಿಸಿ ಆಚರಣೆಗೆ ತರುವ ವ್ಯವಸ್ಥೆ ಬದಲಾವಣೆಯಾಗಬೇಕಾದ ಅವಶ್ಯಕತೆಯನ್ನು ಪದೇ ಪದೇ ಹೇಳಬೇಕಾಗುತ್ತದೆ. ಸಹಭಾಗಿತ್ವ ಮಾದರಿಯಲ್ಲಿ ನೀತಿ ನಿರೂಪಣೆ ಮಾಡುವುದು ಅಗತ್ಯವಾಗಿದೆ. ಹೀಗಾಗಿ ಹೊಸ ದಾರಿಯಲ್ಲಿ ಸಾಗುವ ಕಾರ್ಯ ಚಟುವಟಿಕೆಗಳು ಭಾಗವಹಿಸುವಿಕೆಯ ಮೂಲಕವೇ ಬರಬೇಕೆ ಹೊರತು ಕೇವಲ ತರಬೇತಿಗಳಿಂದಲ್ಲ.

ಹೀಗಾಗಿ ಹೊಸ ಕಾರ್ಯಕ್ರಮಗಳು ಪಡೆದುಕೊಳ್ಳಬೇಕಾದ ಚೌಕಟ್ಟುಗಳನ್ನು ಮತ್ತು ಅವು ಜಾರಿಗೊಳಿಸುವಿಕೆಯ ಕೆಲವು ಟ್ರೈಯಲ್ ಅಂಡ್ ಎರರ್‌ಗಳು ಕಲಿಕೆಯ ಭಾಗವಾಗುತ್ತವೆ. ಅದೇ ಸಮಯದಲ್ಲಿ ಸಾಮರ್ಥ್ಯ ವಿಸ್ತರಣಾ ಕಾರ್ಯಚಟುವಟಿಕೆಗೆ ಒತ್ತು ನೀಡಬೇಕಾಗಿದೆ. ಕೊನೆಯದಾಗಿ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಆಚರಣೆಗೆ ತರಬೇಕಾದರೆ, ತಳಮಟ್ಟದಲ್ಲಿ ಜನರನ್ನು ಸಬಲೀಕರಿಸಬೇಕಾದರೆ, ಮೂಲ ಚೌಕಟ್ಟಿನಲ್ಲಿ ಬದಲಾವಣೆಗಳನ್ನು ತರಬೇಕು. ಇಂತಹ ಬದಲಾವಣೆಗಳನ್ನು ತರಬೇಕಾದರೆ ಅನೇಕ ಸಲ ಗಂಭೀರವಾಗಿ ಚಿಂತಿಸಬೇಕಾಗುತ್ತದೆ. ಹೊಸ ಲೋಕದೃಷ್ಟಿ ಕೋನದ ಅಗತ್ಯತೆ ಮತ್ತು ಅದರ ವಿಕಾಸವು ಅಧಿಕಾರ ಸಂಬಂಧದ ಜೊತೆಗೆ ಪ್ರಜಾಪ್ರಭುತ್ವ ಮಾದರಿಯ ಪ್ರಕ್ರಿಯೆಯಲ್ಲಿ ನೀತಿ ನಿರ್ಧಾರ ತೆಗೆದುಕೊಳ್ಳುವುದರ ಬಗ್ಗೆ ಸ್ಥಿರವಾದ ನಂಬಿಕೆ ಇಡಬೇಕಾಗುತ್ತದೆ. ಒಟ್ಟಾರೆ ಸ್ಥಳೀಯ ಆಡಳಿತ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ತಳಮಟ್ಟದಲ್ಲಿ ಭಾಗವಹಿಸುವ ಎಲ್ಲಾ ಜನರನ್ನು ಎಲ್ಲಾ ರೀತಿಯಿಂದಲೂ ಅಪ್ಪಟವಾಗಿ ಸಬಲೀಕರಣಗೊಳಿಸಬೇಕು. ಜೊತೆಗೆ ಸ್ಥಳೀಯ ಪಾಲುದಾರರಿಗೆ ಸಂಘಟನೆಯ ಚೌಕಟ್ಟಿನಲ್ಲಿ ಉಂಟಾಗುತ್ತಿರುವ ರೂಪಾಂತರಗಳನ್ನು ಮನದಟ್ಟು ಮಾಡಿಕೊಡಬೇಕು. ಆ ಮೂಲಕ ಹೊಸ ಲೋಕದೃಷ್ಟಿಯ ಜರೂರು, ಅಲ್ಲಿನ ಅಧಿಕಾರ ಸಂಬಂಧಗಳು ಮತ್ತು ಅದಕ್ಕೆ ಅವಶ್ಯಕವೆನಿಸಿದ ಶಾಶ್ವತ ನಂಬಿಕೆ, ಇನ್ನು ಮುಂತಾದವನ್ನು ಸ್ಥಳೀಯರಿಗೆ ವ್ಯಾಪಕ ತರಬೇತಿಗಳ ಮೂಲಕ ನೀಡಬೇಕು. ಆಗ ಮಾತ್ರ ಸ್ಥಳೀಯ ಆಡಳಿತದ ನಿರ್ವಹಣೆಯು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ನೀತಿ ನಿರ್ಧಾರಗಳನ್ನು ರೂಪಿಸಿ ಬೆಳೆಸುತ್ತದೆ.

ಆಕರಗ್ರಂಥಗಳು

ಗೋವಿಂದ ಆರ್., (೧೯೯೯), ಡೈನಾಮಿಕ್ಸ್ ಆಫ್ ಡಿಸೆಂಟ್ರಲೈಜ್ಡ್ ಮ್ಯಾನೆಜ್ಮೆಂಟ್ ಆಂಡ್ ಕಮ್ಯುನಿಟಿ ಎಮ್ಪವರ್ಮೆಂಟ್ ಇನ್ ಪ್ರೈಮರಿ ಎಜುಕೇಷನ್ : ಕಂಪ್ಯಾರಿಟೀವ್ ಎನಾಲಿಸಿಸ್ ಆಫ್ ಪಾಲಿಸಿ ಅಂಡ್ ಪ್ರಾಕ್ಟೀಸ್ ಇನ್ ಟು ಸ್ಟೇಟ್ಸ್ ಆಫ್ ಇಂಡಿಯಾ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನಲ್ ಪ್ಲ್ಯಾನಿಂಗ್ ಅಂಡ್ ಅಡ್ಮಿಸ್ಟ್ರೇಶನ್, ನ್ಯೂಡೆಲ್ಲಿ.

ಗೋವಿಂದ ಆರ್., (೨೦೦೨), ಇಂಡಿಯಾ ಎಜುಕೇಶನ್ ರಿಪೋರ್ಟ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ನ್ಯೂಡೆಲ್ಲಿ.

ಗೋವಿಂದ ಆರ್., (೨೦೦೩), ಕಮ್ಯೂನಿಟಿ ಪಾರ್ಟಿಸಿಪೇಶನ್ಸ್ ಆಂಡ್ ಎಂಪವರ್ಮೆಂಟ್ ಆಫ್ ಪ್ರೈಮರಿ ಎಜುಕೇಷನ್, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, ನ್ಯೂಡೆಲ್ಲಿ.