ಪ್ರಸ್ತುತ ಅಧ್ಯಾಯದಲ್ಲಿ ಶಾಲೆಗಳಲ್ಲಿ ಇರುವ ಭೌತಿಕ, ಬೋಧನಾ ಮತ್ತು ಕಲಿಕಾ ಸಾಮಗ್ರಿಗಳ ಪರಿಸ್ಥಿತಿಯನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ಇವುಗಳನ್ನು ಗುರುತಿಸುವಾಗ ವಿವಿಧ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳ ಮತ್ತು ಸರ್ಕಾರಗಳ ಗುರಿಗಳನ್ನು ಮಾನದಂಡವಾಗಿ ಬಳಸಿಕೊಳ್ಳಲಾಗಿದೆ. ಈ ಅಧ್ಯಾಯವನ್ನು ಎರಡು ಭಾಗಗಳಾಗಿ ವಿಂಗಡಿಸಿದೆ. ಭಾಗ-೧ರಲ್ಲಿ ವಿವಿಧ ಶೈಕ್ಷಣಿಕ ಕಾರ್ಯಗ ಗುರಿ ಹಾಗೂ ಭೌತಿಕ ಸೌಲಭ್ಯಗಳ ವಿಶ್ಲೇಷಣೆ ಮಾಡು ಜೊತೆಗೆ ಭೌತಿಕ ಸೌಲಭ್ಯಗಳ ಸ್ಥಿತಿ ಗತಿಗಳನ್ನು ಗುರುತಿಸಲು ಪ್ರಯಯತ್ನಿಸಲಾಗಿದೆ. ಭಾಗ ೨ ರಲ್ಲಿ ಬೋದನಾ ಮತ್ತು ಕಲಿಕಾ ಸಾಮಗ್ರಿಗಳ ವಿಶ್ಲೇಷಣೆಯ ಜೊತೆಗೆ ಅವುಗಳ ಬಳಕೆಯನ್ನು ಗುರುತಿಸಲಾಗಿದೆ. ಇದರ ಜೊತೆಗೆ ಶಿಕ್ಷಕ ಸಂಪನ್ಮೂಲ, ಮಕ್ಕಳು ಶಿಕ್ಷಕರ ಪರಿಮಾಣ, ಪರಿಣಾಮಕಾರಿ ಬೋಧನಾ ಸಮಯ, ಶಿಕ್ಷಕರ ಚಟುವಟಿಕೆಗಳ ಸ್ವರೂಪ, ಸಾಮಾಜಿಕ ಹಾಗೂ ಲಿಂಗಾಧಾರಿತ ಪಕ್ಷಪಾತಗಳು ತರಗತಿಯ ಒಳಗೆ ಹೇಗೆ ನಡೆಯುತ್ತಿದೆ ಎಂಬುದನ್ನು ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ.

ಭಾಗ

ಇತ್ತೀಚಿನ ವರ್ಷಗಳಲ್ಲಿ ಶಾಲಾ ವ್ಯವಸ್ಥೆಯ ಸೌಲಭ್ಯಗಳನ್ನು ತುಂಬುವ ಉದ್ದೇಶದಿಂದ ಮಹತ್ವದ ಹೆಜ್ಜೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿವಿಧ ಕಾಯಕ್ರಮಗಳ ಮೂಲಕ ಕೈಗೊಂಡಿವೆ. ಅವೆಂದರೆ : ಸಂಪೂರ್ಣ ಸಾಕ್ಷರತಾ ಆಂದೋಲನ; ಕಪ್ಪುಹಲಗೆ ಕಾರ್ಯಕ್ರಮ; ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ (ಡಿ.ಪಿ.ಇ.ಪಿ.); ಉಚಿತ ಕಾರ್ಯಕ್ರಮ (ಉಚಿತ ಪುಸ್ತಕ, ಸಮವಸ್ತ್ರ, ಆಹಾರ ಧಾನ್ಯ ಮತ್ತು ಬಿಸಿಯೂಟ)ಗಳು; ಸರ್ವಶಿಕ್ಷಾ ಅಭಿಯಾನ ಇತ್ಯಾದಿ. ಈ ಎಲ್ಲಾ ಶೈಕ್ಷಣಿಕ ಅಭಿವೃದ್ಧಿಯನ್ನು ಕಂಡುಕೊಳ್ಳುವುದು.

ಪ್ರಾಥಮಿಕ ಶಾಲೆಗಳ ಮೂಲ ಸೌಲಭ್ಯಗಳು ಕಳೆದ ಹತ್ತು ವರ್ಷಗಳಲ್ಲಿ ಬಹಳ ಮಟ್ಟಿಗೆ ಪ್ರಗತಿಯನ್ನು ಕಂಡಿದೆ. ಉದಾಹರಣೆಗೆ ೫ನೆಯ ಅಖಿಲ ಭಾರತ ಶೈಕ್ಷಣಿಕ ಸಮೀಕ್ಷೆಯಿಂದ (೧೯೮೬) ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಪ್ರತಿಯೊಂದು ತರಗತಿಗಳು ಉಪಯೋಗಿಸಲು ಯೋಗ್ಯವಾದ ಕನಿಷ್ಟ ಒಂದು ಕಪ್ಪು ಹಲಗೆ ಇರುವುದು ತಿಳಿಯುತ್ತದೆ. ೧೯೮೬ರಲ್ಲಿ ರಾಷ್ಟ್ರದ ಶೇಕಡ ೨೭.೦೦ರಷ್ಟು ಶಾಲೆಗಳು ಏಕ ಶಿಕ್ಷಕ ಶಾಲೆಗಳಾಗಿದ್ದವು. ಆದರೆ ೧೯೯೬ರಲ್ಲಿ ಇವುಗಳ ಪ್ರಮಾಣ ಶೇಕಡ ೧೨.೦೦ಕ್ಕೆ ಇಳಿದಿದೆ. ಇದೊಂದು ಆಶಾದಾಯಕ ಬೆಳವಣಿಗೆ.

ಆದರೂ ಶಾಲಾ ಪರಿಸರದ ಮೂಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಮಹತ್ವದ ಪ್ರಗತಿ ಮಾತ್ರ ಇಲ್ಲವಾಗಿದೆ. ಇಲ್ಲಿನ ಕೊರತೆಯು ಕೊರೆತಯಾಗಿಯೇ ಉಳಿದಿದೆ. ಇದನ್ನು ರಾಜ್ಯ ಸರ್ಕಾರಗಳು ತನ್ನ ಶಿಕ್ಷಣ ಮಾದರಿಯಲ್ಲಿ, ಸಾರ್ವತ್ರಿಕ ಶಿಕ್ಷಣಕ್ಕೆ ಯೋಜಿಸಿದ ಕಾರ್ಯಕ್ರಮಗಳಲ್ಲಿ ವಿಶ್ಲೇಷಿಸಿ ಪರಿಗಣಿಸಬೇಕು. ಹೀಗೆ ಮಾಡುವಾಗ ಶಿಕ್ಷಣ ಇಲಾಖೆಯ ಕಾರ್ಯಕ್ರಮಗಳ ಗುರಿಗಳನ್ನು ಮೊದಲಿಗೆ ಗುರುತಿಸಬೇಕು. ಉದಾಹರಣೆಗೆ ಕಪ್ಪು ಹಲಗೆ ಕಾರ್ಯಕ್ರಮದ ಗುರಿ. ರಾಷ್ಟ್ರದ ಎಲ್ಲಾ ಪ್ರಥಮಿಕ ಶಾಲೆಗಳಲ್ಲಿ ಕನಿಷ್ಟ ಎರಡು ಪಕ್ಕಾ ಕೊಠಡಿಯನ್ನು ಒದಗಿಸಬೇಕು. ಒಂದು ಶಾಲೆ ಕನಿಷ್ಟ ಇಬ್ಬರು ಶಿಕ್ಷಕರನ್ನು ಹೊಂದಿರಬೇಕು. ಬೋಧನೆ ಮತ್ತು ಕಲಿಕೆಗೆ ಬೇಕಾಗುವ ಮಾಹಿತಿ ಮತ್ತು ಮಾದರಿ ಸಲಕರಣೆಗಳನ್ನು ಹೊಂದಿರಬೇಕು. ಅವೆಂದರೆ ಬರೆಯಲು ಯೋಗ್ಯವಾದ ಕಪ್ಪು ಹಲಗೆ, ನಕ್ಷೆ, ಚಿತ್ರಗಳು, ಪುಟ್ಟ ಗ್ರಂಥಾಲಯ, ಎಲ್ಲಾ ಹವಾಗುಣಗಳಿಗೂ ಅನುಕೂಲವಾಗುವ ಎರಡು ವಿಶಾಲವಾದ ಕೊಠಡಿಗಳು, ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯದ ಸೌಲಭ್ಯ, ಇಬ್ಬರು ಶಿಕ್ಷಕರಲ್ಲಿ ಕನಿಷ್ಠ ಒಬ್ಬರು ಮಹಿಳಾ ಶಿಕ್ಷಕರು, ಆಟಿಕೆಗಳು, ಆಟದ ಮೈದಾನ ಇತ್ಯಾದಿ (ಶಿಕ್ಷಣ ಇಲಾಖೆಯ ವಾರ್ಷಿಕ ವರದಿ, ೧೯೯೭-೯೮).

ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮ ಶಾಲೆಯಲ್ಲಿ ಇರುವ ಭೌತಿಕ ಮತ್ತು ಬೌದ್ಧಿಕ ಮೂಲಸೌಲಭ್ಯ ಕೊರತೆಯನ್ನು ತುಂಬುವ ಮೂಲಕ ಶೈಕ್ಷಣಿಕ ಅಭಿವೃದ್ಧಿ ಸಾಧಿಸಲು ರೂಪಿತವಗಿದೆ. ಈ ಕಾರ್ಯಕ್ರಮದ ಮೂಲ ಉದ್ದೇಶ ೨೦೧೦ರೊಳಗೆ ರಾಷ್ಟ್ರದ ೬-೧೬ ವಯೋಮಾನದ ಎಲ್ಲಾ ಮಕ್ಕಳಿಗೂ ಜೀವನಕ್ಕೆ ಉಪಯುಕ್ತವಾಗುವ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದಾಗಿದೆ. ಅಲ್ಲದೆ ಶಿಕ್ಷಣ-ಸಾಕ್ಷರತಾ ಕ್ಷೇತ್ರದಲ್ಲಿ ಇರುವ ಸಾಮಾಜಿಕ, ಲಿಂಗಾಧಾರಿತ ಮತ್ತು ಪ್ರಾದೇಶಿಕ ತಾರತಮ್ಯಗಳನ್ನು ಹೋಗಲಾಡಿಸುವುದು.ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮವು ಸಥಳೀಯ ಸಮುದಾಯವನ್ನು ಶೈಕ್ಷಣಿಕ ಅಭಿವೃದ್ಧಿಗೆ ಸಕ್ರಿಯವಾಗಿ ತೊಡಗಿಸಬೇಕು ಎಂಬ ಉದ್ದೇಶವನ್ನು ಕೂಡ ಹೊಂದಿದೆ. ಈ ಕಾರ್ಯಕ್ರಮವು ಮಕ್ಕಳು ಮತ್ತು ಶಿಕ್ಷಕರಿಗೆ ಬೇಕಾಗುವ ಬೌದ್ಧಿಕ ಸೌಲಭ್ಯಗಳನ್ನು ನೀಡುವ ಜೊತೆಗೆ ಶಾಲೆಗೆ ಬೇಕಾಗುವ ಭೌತಿಕ ಸೌಲಭ್ಯಗಳಾದ ಶಾಲಾ ಕಟ್ಟಡ ಅಥವಾ ಹೆಚ್ಚುವರಿ ಕೊಠಡಿಗಳು, ಶೌಚಾಲಯ ಮತ್ತು ಕುಡಿಯುವ ನೀರಿನ ಸೌಲಭ್ಯ, ಶಾಲಾ ಕಾಂಪೌಂಡ್, ವಿದ್ಯುಚ್ಛಕ್ತಿ ಮತ್ತು ಕುಡಿಯುವ ನೀರಿನ ಸೌಲಭ್ಯಗಳನ್ನು ಪೂರೈಸುವ ಆಶಯವನ್ನು ಹೊಂದಿದೆ (ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮ, ೨೦೦೧)

ಶಾಲೆಗಳಲ್ಲಿ ಮೂಲ ಸೌಲಭ್ಯಗಳ ಕೊರತೆ ಯಾವಾಗ ಹೆಚ್ಚು ಪ್ರಕಾರವಾಗಿ ಕಾಣುತ್ತದೆ ಎಂದರೆ, ಪ್ರಸ್ತುತ ಇರುವ ಸೌಲಭ್ಯಗಳ ಜೊತೆಗೆ ಅವಶ್ಯಕವಾಗಿ ಇರಬೇಕಾದ ಸೌಲಭ್ಯಗಳನ್ನು ಹೋಲಿಸಿ ನೋಡಿದಾಗ. ಇದರ ಜೊತೆಗೆ ರಾಷ್ಟ್ರ ಹಾಗೂಜ್‌ಯಮಟ್ಟದ ಅಂಕಿ-ಅಂಶಗಳನ್ನ ಇಡಿಯಾಗಿ ನೋಡದೆ ಬಿಡಿ ಬಿಡಿಯಾಗಿ ನೋಡಿದಾಗ ಸ್ಥಳೀಯ ಅಥವಾ ಗ್ರಾಮ ಮಟ್ಟದಲ್ಲಿ ಇರಬಹುದಾದ ಮೂಲಸೌಲಭ್ಯದ ಕೊರತೆಯನ್ನು ಗುರುತಿಸಬಹುದು. ಶಾಲೆಗಳ ಮಟ್ಟಿಗೆ ಇದನ್ನು ಗುರುತಿಸುವುದು ಸ್ವಲ್ಪಮಟ್ಟಿಗೆ ಸರಳ. ಶಾಲಾ ಕೊಠಡಿ,ಮಕ್ಕಳು ಕುಳಿತುಕೊಳ್ಳುವ ಸ್ಥಳ, ಬೋಧನೆ ಮತ್ತುಕಲಿಕಾ ಸಾಮಗ್ರಿಗಳ ಬಳಕೆ ಮತ್ತು ಸಂಘಟನೆ, ಕುಡಿಯುವ ನೀರು, ಹೆಣ್ಣು ಹಾಗೂ ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ವಿದ್ಯುತ್ ಸೌಲಭ್ಯ, ಆಟದ ಮೈದಾನ, ಇನ್ನೂ ಮುಂತಾದ ಸೌಲಭ್ಯಗಳನ್ನು ಗುರುತಿಸಿ ವಿಶ್ಲೇಷಿಸಿದಾಗ ಅನೇಕ ಕಾರ್ಯಕ್ರಮಗಳ ಗುರಿ ಎಷ್ಟರ ಮಟ್ಟಿಗೆ ಸಾಧಿತವಾಗಿದೆ ಎಂಬುದನ್ನು ನಾವು ಕಂಡುಕೊಳ್ಳಬಹುದು. ಉದಾಹರಣೆಗೆ ಕಪ್ಪುಹಲಗೆ ಕಾರ್ಯಕ್ರಮದ ಪ್ರಮುಖ ಗುರಿ ದೊಡ್ಡದಾದ ಮತ್ತು ಎಲ್ಲಾ ರೀತಿಯ ಹವಾಗುಣಗಳಿಗೂ ಪ್ರತಿರೋಧ ಹೊಂದಿದ್ದ ಎರಡು ಕೊಠಡಿಗಳನ್ನು ಪ್ರತಿ ಶಾಲೆಗೆ ನೀಡಬೇಕು ಎಂಬ ಮಹತ್ವಾಕಾಂಕ್ಷೆಯು ಅನೇಕ ಶಾಲೆಗಳಲ್ಲಿ ಇನ್ನೂ ದೊರಕಬೇಕಾಗಿರುವ ಅಂಶವಾಗಿಯೇ ಉಳಿದಿದೆ. ಕರ್ನಾಟಕ ರಾಜ್ಯದಲ್ಲಿ ಇರುವ ಒಟ್ಟು ೪೩ ಸಾವಿರ ಸರ್ಕಾರಿ ಪ್ರಾಥಮಿಕ ಶಾಲೆಗಳ ಪೈಕಿ, ಎರಡು ಸಾವಿರ ಶಾಲೆಗಳಿಗೆ ಸ್ವಂತ ಕಟ್ಟಡಗಳಿಲ್ಲ. ಮೂರು ಸಾವಿರ ಶಾಲೆಗಳಲ್ಲಿ ಕೊಠಡಿಗಳ ಕೊರತೆ ಇದೆ. ಶೇಕಡ ೮೦.೦೦ ರಷ್ಟು ಶಾಲೆಗಳಲ್ಲಿ ಶೌಚಾಲಯಗಳಿಲ್ಲ. ಶೇಕಡ ೬೭.೦೦ರಷ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ಸೌಲಭ್ಯವಿಲ್ಲ. ಜೊತೆಗೆ ಎಷ್ಟೋ ಶಾಲೆಗಳಲ್ಲಿ ಮಕ್ಕಳಿಗೆ ಆಟವಾಡಲು ಆಟದ ಮೈದಾನವಿಲ್ಲ. ಈ ಹಿನ್ನೆಲೆಯಲ್ಲಿ ನಾವು ಅಧ್ಯಯನ ನಡೆಸಿದ ಶಾಲೆಗಳಲ್ಲಿ ಇರುವ ಬೌದ್ಧಿಕ ಮತ್ತು ಭೌತಿಕ ಮೂಲ ಸೌಲಭ್ಯಗಳ ಕುರಿತ ವಿಶ್ಲೇಷಣೆ ಈ ಅಧ್ಯಾಯನದಲ್ಲಿದೆ.

೫.೧ ಕೊಠಡಿಗಳ ಸ್ಥಿತಿಗತಿ

ಶಾಲೆಗಳಿಗೆ ಪ್ರತಿ ತರಗತಿಯ ಪ್ರತ್ಯೇಕ ಬೋಧನೆಗೆ ಪ್ರತ್ಯೇಕ ಕೊಠಡಿ ಅತ್ಯಂತ ಅವಶ್ಯಕ. ಶಾಲೆಯಲ್ಲಿನ ತರಗತಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳು ಇರಬೇಕು. ಇದು ಸರ್ಕಾರಗಳ ನಿಯಮ ಕೂಡ. ನಾವು ಅಧ್ಯಯನ ನಡೆಸಿದ ಹದಿನೆಂಟು ಗ್ರಾಮಗಳ ಇಪ್ಪತ್ತು ಶಾಲೆಗಳಲ್ಲಿ ಅಗತ್ಯವಾಗಿ ಇರಬೇಕಾದ ಕೊಠಡಿಗಳ ಸಂಖ್ಯೆ ೧೫೪. ಆದರೆ ಆ ಶಾಲೆಗಳಲ್ಲಿ ಪ್ರಸ್ತುತ ಇರುವ ಕೊಠಡಿಗಳ ಸಂಖ್ಯೆ ೯೨. ಈ ಶಾಲೆಗಳಿಗೆ ಅವಶ್ಯಕವಾಗಿ ಬೇಕಾಗಿರುವ ಕೊಠಡಿಗಳ ಸಂಖ್ಯೆ ೬೨. ಇದನ್ನು ಗ್ರಾಮಪಂಚಾಯತಿವಾರು ಗುರುತಿಸಬಹುದು. ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯತಿಯಲ್ಲಿ ಇರುವ ೯ ಶಾಲೆಗಳಲ್ಲಿ ಪ್ರಸ್ತುತ ೨೮ ಕೊಠಡಿಗಳಿವೆ. ಈ ಪಂಚಾಯತಿ ಶಾಲೆಗಳಿಗೆ ಅವಶ್ಯಕವಾಗಿ ಇರಬೇಕಾದ ಕೊಠಡಿಗಳ ಸಂಖ್ಯೆ ೫೪. ಇನ್ನೂ ಅಗತ್ಯವಾಗಿ ೨೬ ಕೊಠಡಿಗಳು ಬೇಕಾಗಿದೆ. ಯರೇಹಂಚಿನಾಳ ಗ್ರಾಮಪಂಚಾಯತಿಯಲ್ಲಿ ಇರುವ ಮೂರು ಶಾಲೆಗಳಿಗೆ ಪ್ರತಿ ತರಗತಿಗಳನ್ನು ಪ್ರತ್ಯೇಕವಾಗಿ ನಡೆಸಲು ಅವಶ್ಯಕವಾಗಿ ೩೬ ಕೊಠಡಿಗಳು ಬೇಕಾಗಿದೆ. ಅಂದರೆ ಈ ಪಂಚಾಯತಿಯಲ್ಲಿ ಇರುವ ಶಾಲೆಗಳಿಗೆ ಇನ್ನೂ ಅಗತ್ಯವಾಗಿ ಬೇಕಾಗಿರುವ ಕೊಠಡಿಗಳ ಸಂಖ್ಯೆ ೧೨. ಕಬ್ಬರಗಿ ಗ್ರಾಮಸಂಚಾಯತಿ ವ್ಯಾಪ್ತಿಯ ನಾಲ್ಕು ಶಾಲೆಗಳಲ್ಲಿ ಅಗತ್ಯವಾಗಿ ಇರಬೇಕಾದ ಕೊಠಡಿಗಳ ಸಂಖ್ಯೆ ೩೪. ಆದರೆ ಪ್ರಸ್ತುತ ಸಂದರ್ಭದಲ್ಲಿ ಒಟ್ಟು ೨೪ ಕೊಠಡಿಗಳಿವೆ. ಇನ್ನು ೧೦ ಕೊಠಡಿಗಳ ಅಗತ್ಯವಿದೆ. ಕೃಷ್ಣನಗರ ಪಂಚಾಯತಿಯ ಎರಡು ಕನ್ನಡ ಶಾಲೆ ಮತ್ತು ಎರಡು ಉರ್ದು ಶಾಲೆಗಳಿವೆ. ಈ ಶಾಲೆಗಳಲ್ಲಿ ಪ್ರಸ್ತುತ ಸಂದರ್ಭದಲ್ಲಿ ಒಟ್ಟು ೧೬ ಕೊಠಡಿಗಳಿವೆ. ಇನ್ನು ೧೪ ಕೊಠಡಿಗಳ ಅವಶ್ಯಕತೆ ಇದೆ. ಕೃಷ್ಣನಗರ ಗ್ರಾಮಪಂಚಾಯತಿ ಶಾಲೆಗಳಿಗೆ ಪ್ರತಿ ತರಗತಿಗಳನ್ನು ಪ್ರತ್ಯೇಕವಾಗಿ ನಡೆಸಲು ಅವಶ್ಯಕವಾಗಿ ಒಟ್ಟು ೩೦ ಕೊಠಡಿಗಳು ಬೇಕು. ಒಟ್ಟು ನಾಲ್ಕು ಪಂಚಾಯತಿಗಳ ಇಪ್ಪತ್ತು ಶಾಲೆಗಳಲ್ಲಿ ಇರಬೇಕಾದ ಕೊಠಡಿಗಳ ಸಂಖ್ಯೆ ೧೫೪. ಆದರೆ ಪ್ರಸ್ತುತ ೯೨ ಕೊಠಡಿಗಳಿವೆ. ಇನ್ನು ೬೨ ಕೊಠಡಿಗಳು ಅವಶ್ಯಕವಾಗಿ ಬೇಕಾಗಿದೆ.

ಕೋಷ್ಟಕ ೫.೧ – ಗ್ರಾಮಪಂಚಾಯತಿವಾರು ಶಾಲೆಗಳ ಕೊಠಡಿ ಸೌಲಭ್ಯಗಳ ವಿವರ

ಕ್ರ.
ಸಂ

ಗ್ರಾಮ ಪಂಚಾಯತಿ ಹೆಸರು

ಇರಬೇಕಾದುದು ಸಂಖ್ಯೆಯಲ್ಲಿ

ಇರುವುದು ಸಂಖ್ಯೆಯಲ್ಲಿ

ಬೇಕಾಗಿರುವುದು ಸಂಖ್ಯೆಯಲ್ಲಿ

ಒಟ್ಟು ಶಾಲೆಗಳ ಸಂಖ್ಯೆ

೧. ಬೂದಿಹಾಳ ಎಸ್.ಕೆ

೫೪

೨೮

೨೬

೦೯

೨. ಯರೇಹಂಚಿನಾಳ

೩೬

೨೪

೧೨

೦೩

೩. ಕಬ್ಬರಗಿ

೩೪

೨೪

೧೦

೦೪

೪. ಕೃಷ್ಣಾನಗರ

೩೦

೧೬

೧೪

೦೪

೫. ಒಟ್ಟು

೧೫೪

೯೨

೬೨

೨೦

ಮೂಲ: ಕ್ಷೇತ್ರಕಾರ್ಯದ ಮಾಹಿತಿ

ಇರುವ ಕೊಠಡಿಗಳ ಸ್ಥಿತಿ-ಗತಿ

ಅಧ್ಯಯನ ನಡೆಸಿದ ಶಾಲೆಗಳಲ್ಲಿ ಈಗಾಗಲೇ ಇರುವ ೯೨ ಕೊಠಡಿಗಳಲ್ಲಿ ೪೭ ಕೊಠಡಿಗಳ ಮೇಲ್‌ಚಾವಣಿ ಆರ್.ಸಿ.ಸಿ. ಯಾಗಿದ್ದರೆ, ೩೫ ಕೊಠಡಿಗಳ ಮೇಲ್‌ಚಾವಣಿ ಹೆಂಚು, ಉಳಿದ ೧೦ ಕೊಠಡಿಗಳ ಮೇಲ್‌ಚಾವಣಿ ಶೀಟ್ ಆಗಿರುತ್ತದೆ. ಬಹುತೇಕ ಎಲ್ಲಾ ಶಾಲಾ ಕೊಠಡಿಗಳ ನೆಲಕ್ಕೆ ಪಾರ್ಚಿಕಲ್ಲನ್ನು ಜೋಡಿಸಲಾಗಿದೆ. ಕೆಲವು ಶಾಲೆಗಳ ಕೊಠಡಿಗಳ ನೆಲ ಸಿಮೆಂಟು ಮರಳು, ಜಲ್ಲಿಯಿಂದ ನಿರ್ಮಿಸಲಾಗಿದೆ. ಹೆಂಚಿನ ಕೊಠಡಿಗಳು ಹಾಗೂ ತುಂಬಾ ಹಿಂದೆ ನಿರ್ಮಿಸಲಾಗಿರುವ ಶಾಲಾ ಕೊಠಡಿಗಳ ಗೋಡೆಗಳನ್ನು ಗಾರೆಯಿಂದ ನಿರ್ಮಿಸಲಾಗಿದೆ. ಆದರೆ ಇತ್ತೀಚೆಗೆ ಅಂದರೆ ಸುಮಾರು ೧೦-೧೫ ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಕೊಠಡಿಗಳ ಕಟ್ಟಡಕ್ಕೆ ಸಿಮೆಂಟ್ ಬಳಸಲಾಗಿದೆ. ವಿಶೇಷವೆಂದರೆ ಶಾಲೆಗಳಲ್ಲಿ ಇರುವ ಎಲ್ಲಾ ಕೊಠಡಿಗಳ ಆಕಾರ ಒಂದೇ ರೀತಿಯಲ್ಲಿವೆ ಕೊಠಡಿಗಳ ಉದ್ದ-ಅಗಲ ಇಲ್ಲದಿರುವುದು ಮತ್ತು ಎತ್ರ ಸಹ ಒಂದು ಕೊಠಡಿಯಿಂದ ಮತ್ತೊಂದು ಕೊಠಡಿಗೆ ಬದಲಾವಣೆಯಾಗಿದೆ. ಆರ್.ಸಿ.ಸಿ. ಮತ್ತು ಶೀಟ್‌ನ ಮೇಲೆಚಾವಣಿ ಹೊಂದಿರುವ ಕೊಠಡಿಗಳ ಎತ್ತರ ಅಗಲ ಕಡಿಮೆ ಇದ್ದರೆ, ಹೆಂಚಿನ ಮೇಲ್‌ಚಾವಣಿ ಇರುವ ಕೊಠಡಿಗಳು ಎತ್ತರ-ಅಗಲದಲ್ಲಿ ಸ್ವಲ್ಪ ವಿಸ್ತೀರ್ಣವಾಗಿವೆ. ಕೊಠಡಿಗಳ ಆಕಾರ-ಸ್ವರೂಪದಲ್ಲಿ ವ್ಯತ್ಯಾಸವಿರುವುದಕ್ಕೆ ಪ್ರಮುಖ ಕಾರಣ ಶಾಲೆಗೆ ಕೊಠಡಿ ನಿರ್ಮಾಣ ಮಾಡಲು ಹಣ ಮುಂಜೂರಾಗಿರುವುದು ವಿವಿಧ ಶೈಕ್ಷಣಿಕ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ. ಉದಾಹರಣೆಗೆ ಕಪ್ಪಹಲಗೆ ಮತ್ತು ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ನಿರ್ಮಿಸಲಾಗಿದ ಕೊಠಡಿಗಳ ಆಕಾರ ಮತ್ತೊದು ರೀತಿಯಲ್ಲಿದೆ. ಅಲ್ಲದೆ ವಿವಿಧ ಕಾರ್ಯಕ್ರಮಗಳನ್ನು ಆಚರಣೆಗೆ ತರುವಾಗ ವಿವಿಧ ಇಲಾಖೆಗಳು ಕಟ್ಟಿ ನಿರ್ಮಾಣ ಮಾಡಿರುವುದು ಕಂಡುಬರುತ್ತದೆ.

ಕಲಿಕಾ ಪರಿಸರವಿಲ್ಲದ ಶಾಲಾ ಕಟ್ಟಡ

ಕಲಿಕಾ ಪರಿಸರವಿಲ್ಲದ ಶಾಲಾ ಕಟ್ಟಡ 

ಹೊಸದಾಗಿ ನಿರ್ಮಿಸಲಾಗಿರುವ ಕೆಲವು ಶಾಲಾ ಕೊಠಡಿಗಳನ್ನು ಹೊರತು ಪಡಿಸಿದರೆ ಉಳಿದ ಕೊಠಡಿಗಳ ರಿಪೇರಿ ಮಾಡುವ ಅವಶ್ಯಕತೆ ಇದೆ. ಹೆಂಚಿನ ಮೇಲ್‌ಚಾವಣಿ ಇರುವ ಕೊಠಡಿಗಳಲ್ಲಿ ಕೆಲವು ಜಂತೆಗಳನ್ನು ಮತ್ತು ಅಂಚುಗಳನ್ನು ಬದಲಾಯಿಸಬೇಕು. ಶೀಟ್ ಮೇಲ್ ಹೊದಿಕೆ ಇರುವ ಕೆಲವು ಕೊಠಡಿಗಳಲ್ಲಿ ಕೆಲವು ಭಾಗದಲ್ಲಿ ಶೀಟ್‌ಗಳು ಹಾಳಾಗಿವೆ. ಭಿನ್ನಾಳ, ಸಿದ್ನೇಕೊಪ್ಪ, ತೂರಮರಿ, ತಾರಿವಾಳ, ದೌಲತ್‌ಪುರ, ಸೇಬಿನಕಟ್ಟೆ ಮತ್ತು ಬೀಳಗಿ ಶಾಲೆಗಳ ಕೆಲವು ಕೊಠಡಿಗಳ ನೆಲ ಸಂಪೂರ್ಣವಾಗಿ ಕಿತ್ತುಹೋಗಿದೆ. ಆ ಕೊಠಡಿಗಳಲ್ಲಿ ಮಕ್ಕಳು ಅಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಹೀಗೆ ಹಾಳಾಗಿರುವ ಕೊಠಡಿಗಳು ರಿಪೇರಿ ಬಯಸಿವೆ. ಕೊಠಡಿಗಳ ಆಕಾರ ಮತ್ತು ವಿಸ್ತೀರ್ಣದಲ್ಲಿ ವಿಶಾಲವಾಗಿ ಇಲ್ಲದೆ ಇರುವ ಕಾರಣ ಕೊಠಡಿಗಳು ಎಲ್ಲಾ ಹವಾಗುಣಕ್ಕೆ ಹೊಂದಿಕೊಳ್ಳುವ ಲಕ್ಷಣ ಹೊಂದಿಲ್ಲ. ಹೆಂಚಿನ ಮೇಲ್‌ಚಾವಣಿ ಇರುವ ಕೊಠಡಿಗಳನ್ನು ಹೊರತುಪಡಿಸಿ ಬಹುತೇಕ ಕೊಠಡಿಗಳು ಎತ್ತರ ಕಡಿಮೆ ಇರುವ ಕಾರಣ ಬಿರುಬೇಸಿಗೆಯಲ್ಲಿ ಮಕ್ಕಳು ಕೊಠಡಿಯ ಒಳಗೆ ಕುಳಿತುಕೊಳ್ಳುವುದೇ ದುಸ್ತರ. ಅದರಲ್ಲಿ ಯೂ ಶೀಟ್ ಮೇಲ್‌ಚಾವಣಿ ಹೊಂದಿರುವ ಕೊಠಡಿಗಳಲ್ಲಿ ಬೇಸಿಗೆಯಲ್ಲಿ ಕುಳಿತುಕೊಳ್ಳದೇ ಒಂದು ಸಾಹಸ. ಇನ್ನೂ ಈ ಕೊಠಡಿಗಳಲ್ಲಿ ಬೋಧನೆ ಕಲಿಕೆ ಕಷ್ಟ ಸಾಧ್ಯವಾದ ಮಾತು. ನಾವು ಭೇಟಿ ನೀಡಿದ ಎಲ್ಲಾ ಶಾಲೆಗಳಲ್ಲಿ ಭಿನ್ನಾಳ ಶಾಲೆಯ ಮತ್ತು ಸಿದ್ನೇಕೊಪ್ಪ ಶಾಲೆಯಲ್ಲಿ ಮುಖ್ಯ ಶಿಕ್ಷಕರ ಕಛೇರಿಯನ್ನು ಹೊರತುಪಡಿಸಿ, ಇತರ ಶಾಲೆಗಳ ಶಾಲಾ ಕೊಠಡಿಗಳಲ್ಲಿ ಯಾವುದೇ ರೀತಿಯ ಗಾಳಿಯಂತ್ರಗಳು ಕಾಣಲು ಸಿಗಲಿಲ್ಲ. ಕೆಲವು ಕೊಠಡಿಗಳ ಬಾಗಿಲು ಮತ್ತು ಕಿಟಕಿಗಳು ಹಾಳಾಗಿವೆ. ಕೆಲವು ಕೊಠಡಿಗಳ ಕಿಟಕಿಗಳು ಆಕಾರದಲ್ಲಿ ಅತಿ ಚಿಕ್ಕದಾಗಿವೆ. ಹೀಗಾಗಿ ಅಂತಹ ಶಾಲಾ ಕೊಠಡಿಗಳಲ್ಲಿ ಗಾಳಿ ಮತ್ತು ಬೆಳಕಿನ ಕೊರತೆ ಸ್ವಲ್ಪ ಹೆಚ್ಚಾಗಿದೆ.

ಶಾಲಾ ಕಟ್ಟಡಗಳ ಆಕಾರ ವಿಸ್ತೀರ್ಣದಲ್ಲಿ ಚಿಕ್ಕದಾಗಿರುವುದನ್ನು ಅಸಮಾನ್ಯ ಎಂದು ಪರಿಗಣಿಸಬಹುದು. ಅದಿಕೃತವಾಗಿ ಮಂಜೂರಾತಿ ದೊರೆತ ಕಟ್ಟಡದ ಮೂಲ ಪ್ಲಾನ್ ನಿರ್ಮಿಸುವಾಗ ಬದಲಾವಣೆಯಾಗಿರುವುದು, ನಿರುತ್ಸಾಹದಾಯಕವಾದ ಕಟ್ಟಡ ನಿರ್ಮಾಣ, ಕಟ್ಟಡ ನಿರ್ಮಾಣಕ್ಕೆ ಕಡಿಮೆ ಗುಣಮಟ್ಟದ ಸಾಮಗ್ರಿಗಳ ಬಳಕೆ ಅಸಾಮಾನ್ಯ ಎಂದು ಪರಿಗಣಿಸಲು ಸಾಧ್ಯವಿಲ್ಲ. ಹೊಸದಾಗಿ ನಿರ್ಮಾಣವಾದ ಶಾಲಾ ಕೊಠಡಿಗಳು ಮಂಜೂರಾತಿ ದೊರೆತ ಪ್ಲಾನ್‌ಗಿಂತ ಆಕಾರದಲ್ಲಿ ವಿಸ್ತೀರ್ಣವಾದ ಶಾಲಾ ಕೊಠಡಿಗಳು ಮಂಜೂರಾತಿ ದೊರೆತ ಪ್ಲಾನ್‌ಗಿಂತ ಆಕಾರದಲ್ಲಿ ವಿಸ್ತೀರ್ಣದಲ್ಲಿ ಚಿಕ್ಕದಾಗಿವೆ. ಅಂದರೆ ಕೊಠಡಿಗಳ ನಿರ್ಮಾಣದ ಕೊಠಡಿ ಕಟ್ಟಡಗಳು ಹಾಗೂ ಹೊಸದಾಗಿ ರಿಪೇರಿಯಾದ ಕೊಠಡಿಗಳ ಮೇಲ್‌ಚಾವಣಿ ನಿರ್ಮಾಣದಲ್ಲಿ ಕೊರತೆ ಇರುವುದು ಸಾಮಾನ್ಯ ಜನರಿಗೂ ಎದ್ದುಕಾಣುತ್ತದೆ. ಕೊಠಡಿಗಳ ನೆಲ ಗೋಡೆ ಬಿರುಕು ಬಿಟ್ಟಿರುವ ಪ್ರಮಾಣ ಹೆಚ್ಚಾಗಿದೆ. ಗಮನಿಸಬೇಕಾದ ಅಂಶವೆಂದರೆ ಶಾಲಾ ಕೊಠಡಿಗಳು ಹೊಸದಾಗಿದ್ದರೂ ಆಕಾರದಲ್ಲಿ ವಿಸ್ತೀರ್ಣದಲ್ಲಿ ಚಿಕ್ಕದಾಗಿದ್ದು ಗಾಳಿ ಬೆಳಕಿನ ತೊಂದರೆ ಎದುರಿಸುತ್ತಿವೆ. ಕೃಷ್ಣನಗರದ ಉರ್ದುಶಾಲೆಯ ಕಟ್ಟಡ ಸಂಪೂರ್ಣ ಹೊಸದಾಗಿದ್ದರೂ ಗಾಳಿ ಮತ್ತು ಬೆಳಕಿನ ತೊಂದರೆ ಆ ಶಾಲೆಯ ಕೊಠಡಿಗಳಲ್ಲಿವೆ. ಇದಕ್ಕೆ ಆ ಶಾಲೆಯ ಕಟ್ಟಡಕ್ಕೆ ಸೇರಿದಂತೆ ಎತ್ತರವಾದ ಕೋಟೆ ಗೋಡೆ ಇದೆ. ಶಾಲೆಯ ಕಟ್ಟಡ ನಿರ್ಮಾಣದಲ್ಲಿ ಇದನ್ನು ಗಮನಿಸದೆ ಕೇವಲ ಶಾಲೆಗೆ ಕೊಠಡಿಗಳು ಬೇಕು ಎಂಬ ಒಂದೇ ಉದ್ದೇಶದಿಂದ ನಿರ್ಮಾಣ ಮಾಡಲಾಗಿದೆ. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಶಾಲಾ ಕೊಠಡಿಗಳ ನಿರ್ಮಾಣ ಹಂತದಲ್ಲಿ ಔದಾಸೀನ್ಯದಿಂದ ಶಾಲೆ ನಡೆಸಲು ಅಗತ್ಯವಾಗಿ ಗಾಳಿ ಬೆಳಕು ಕೊಠಡಿಗೆ ಪ್ರವೇಶಿಸದಂತೆ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇದನ್ನು ಸಂಬಂಧಪಟ್ಟ ಎಲ್ಲರೂ ಗಂಭೀರವಾಗಿ ಪರಿಗಣಿಸಬೇಕಾಗಿದೆ.

ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಉಂಟಾಗಿರುವ ಕೊರತೆ ಅಥವಾ ತೊಂದರೆಗಳು ಅನಿರೀಕ್ಷಿತವಾದುದ್ದಲ್ಲ. ಕಟ್ಟಡ ನಿರ್ಮಾಣದ ಸಂದರ್ಭದಲ್ಲಿ ಮೇಲ್‌ಉಸ್ತುವಾರಿ ನೋಡುತ್ತಿದ್ದ ಅಧಿಕಾರಿಗಳು ಗುತ್ತಿಗೆದಾರರಿಂದ ಹಣ ತೆಗೆದುಕೊಂಡು ನಿರ್ದಿಷ್ಟ ಪ್ರಮಾಣದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಬಳಸದೆ ಕನಿಷ್ಠ ಮಟ್ಟದ ನಿರ್ಮಾಣ ಮಾಡಿದ್ದಾರೆ ಎಂದು ಗ್ರಾಮಸ್ಥರು ಮತ್ತು ಶಿಕ್ಷಕರು ತಿಳಿಸುತ್ತಾರೆ. ಅಲ್ಲದೆ ಶಾಲಾ ಕೊಠಡಿಗಳ ನಿರ್ಮಾಣದಲ್ಲಿ ಶಿಕ್ಷಣ ಇಲಾಖೆಯ ಪಾತ್ರ ಇರುವದಿಲ್ಲ. ಜಿಲ್ಲಾ ಪಂಚಾಯತಿ ಅಥವಾ ಕರ್ನಾಟಕ ಭೂಸೇನಾ ನಿಗಮ, ಅಥವಾ ಪಿ.ಡಬ್ಲೂ.ಡಿ. ಇಲಾಖೆಯವರು ಸಾಮಾನ್ಯವಾಗಿ ಶಾಲಾ ಕಟ್ಟಡದ ಯೋಜನೆಯನ್ನು ತಯಾರು ಮಾಡುತ್ತಾರೆ. ಹೀಗಾಗಿ ಶಾಲಾ ಕೊಠಡಿಗಳನ್ನು ತರಗತಿಗೆ ಉಪಯೋಗವಾಗುವ ರೀತಿ ನಿರ್ಮಾಣ ಮಾಡಲು ಸಾಧ್ಯವಿಲ್ಲ. ವಾಸ್ತವಿಕವಾಗಿ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮತ್ತು ಸ್ಥಳೀಯ ಶಿಕ್ಷಕರನ್ನು ತೊಡಗಿಸಿಕೊಳ್ಳುವುದರಿಂದ ಕೊಠಡಿಗಳನ್ನು ಉತ್ತಮವಾಗಿ ನಿರ್ಮಾಣ ಮಾಡಿಕೊಳ್ಳಬಹುದು. ಮತ್ತೊಂದು ಅಂಶ ತುಂಬಾ ಹಳೆಯದಾಗಿರುವ ಕಟ್ಟಡಗಳನ್ನು ಸರಿಯಾಗಿ ಕಾಲ ಕಾಲಕ್ಕೆ ರಿಪೇರಿಯ ನಿರ್ವಹಣೆಯಾಗದಿರುವುದು. ಇದಕ್ಕೆ ಹಣ ತಾಲ್ಲೂಕು ಪಂಚಾಯತಿಯಿಂದ ಬರುತ್ತದೆ. ಹೀಗೆ ಬಂದ ಹಣವನ್ನು ಗ್ರಾಮಪಂಚಾಯತಿಯ ಮೂಲಕ ಖರ್ಚುಮಾಡಬೇಕು. ಹೀಗಾಗಿ ಗ್ರಾಮಪಂಚಾಯತಿ ಕಾರ್ಯದರ್ಶಿ ಮತ್ತು ಅಧ್ಯಕ್ಷರು ಸುಣ್ಣ, ಬಣ್ಣ, ಇತರ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಹಣವನ್ನು ಪಡೆದುಕೊಳ್ಳುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಯಾವುದೇ ಕೆಲಸವನ್ನು ಮಾಡದೆ ಹಣ ತೆಗೆದುಕೊಂಡಿರುವ ನಿದರ್ಶನಗಳು ಇವೆ. ಇಂತಹ ಕೆಲಸ ಮಾಡುವವರು ಸ್ಥಳೀಯರಾಗಿರುವುದರಿಂದ ನಾವು ಯಾವುದೇ ಕ್ರಮ ಕೈಗೊಳ್ಳಲು ಅಸಹಾಯಕರಾಗಿದ್ದೀವಿ ಎಂದು ಬಹುತೇಕ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರು ಹೇಳುತ್ತಾರೆ. ಹೀಗೆ ಇನ್ನೂ ಅನೇಕ ಒತ್ತಡಗಳು ಮತ್ತು ಕಾರಣಗಳಿಂದಾಗಿ ಉತ್ತಮ ಗುಣಮಟ್ಟದ ಕೊಠಡಿಗಳನ್ನು ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣ ಮಾಡಲು ಸಾಧ್ಯವಾಗದ ಪರಿಸ್ಥಿತಿಯೇ ಹೆಚ್ಚಾಗಿ ಕಂಡುಬರುತ್ತವೆ.

೫.೨ ಕುಡಿಯುವ ನೀರು

ಪ್ರಾಥಮಿಕ ಶಾಲೆ ಕಾರ್ಯನಿರ್ವಹಿಸಲು ಕುಡಿಯುವ ನೀರಿನ ಅವಶ್ಯಕತೆ ಇದೆ. ಮಕ್ಕಳಿಗೆ ಕುಡಿಯುವ ನೀರನ್ನು ಶಾಲೆಯ ಆವರಣದಲ್ಲಿ ಪೂರೈಸಲು ಸಾಧ್ಯವಾಗದೆ ಇದ್ದಾಗ, ಇದಕ್ಕೆ ಮಕ್ಕಳು ಶಾಲೆಯಿಂದ ಹೊರಗೆ ಹೋಗಿ ನೀರು ಕುಡಿದು ಶಾಲೆಗೆ ಮರಳುವುದು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಬಹಳ ಕಷ್ಟ. ಭಾರತದಲ್ಲಿ ಶೇಕಡ ೫೯ಕ್ಕಿಂತಲೂ ಹೆಚ್ಚಿನ ಪ್ರಾಥಮಿಕ ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರಸ್ತುತ ಅಧ್ಯಯನವು ಅಧ್ಯನಕ್ಕೆ ಒಳಪಡಿಸಿದ ಒಟ್ಟು ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಶಾಲೆಯ ಆವರಣದಲ್ಲಿ ಇರುವುದು ಕೇವಲ ೫ ಶಾಲೆಗಳಲ್ಲಿ, ಅಂದರೆ ಶೇಕಡ ೨೫ರಷ್ಟು ಶಾಲೆಗಳು ಮಾತ್ರ. ಇನ್ನೂ ಉಳಿದ ಶೇಕಡ ೭೫ರಷ್ಟು (೧೫ ಶಾಲೆಗಳಲ್ಲಿ) ಶಾಲಾ ಆವರಣದಲ್ಲಿ ಯಾವುದೇ ಬಗ್ಗೆ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ (ಕುಡಿಯುವ ನೀರಿನ ವ್ಯವಸ್ಥೆಯ ಕುರಿತು ಹೆಚ್ಚಿನ ವಿವರಣೆಗೆ ಅಧ್ಯಾಯ-೬ ನೋಡಿ).

ಕೋಷ್ಟಕ ೫.೨ – ಗ್ರಾಮಪಂಚಾಯತಿವಾರು ಶಾಲೆಗಳಲ್ಲಿ ಕುಡಿಯುವ ನೀರು, ಕಾಂಪೌಂಡು, ಶೌಚಾಲಯ, ಸೌಲಭ್ಯ ವಿವರ

ಕ್ರ.ಸಂ.

ಗ್ರಾಮಪಂಚಾಯಿತಿ

ಕುಡಿಯುವ ನೀರು ಕಾಂಪೌಂಡ್ ಶೌಚಾಲಯ

ಇದೆ

ಇಲ್ಲ

ಒಟ್ಟು

ಇದೆ

ಇಲ್ಲ

ಒಟ್ಟು

ಇದೆ

ಇಲ್ಲ

ಒಟ್ಟು

೧. ಬೂದಿಹಾಳ ಎಸ್.ಕೆ ೦೨ ೦೭ ೦೯ ೦೩ ೦೬ ೦೯ ೦೫ ೦೪ ೦೯
೨. ಯರೇಹಂಚಿನಾಳ ೦೩ ೦೩ ೦೧ ೦೨ ೦೩ ೦೨ ೦೧ ೦೩
೩. ಕಬ್ಬರಗಿ ೦೨ ೦೨ ೦೪ ೦೨ ೦೨ ೦೪ ೦೩ ೦೧ ೦೪
೪. ಕೃಷ್ಣನಗರ ೦೧ ೦೩ ೦೪ ೦೪ ೦೪ ೦೧ ೦೩ ೦೪
ಒಟ್ಟು ೦೫ ೧೫ ೨೦ ೦೬ ೧೪ ೨೦ ೧೧ ೦೯ ೨೦

ಮೂಲ: ಕ್ಷೇತ್ರಕಾರ್ಯದ ಮಾಹಿತಿ

೫.೩ ಶೌಚಾಲಯ

ಗ್ರಾಮ ಪರಿಸರದಲ್ಲಿ ಶೌಚಾಲಯ ವ್ಯವಸ್ಥೆಯ ಅವಶ್ಯಕ. ಗ್ರಾಮಗಳಲ್ಲಿ ಇತ್ತೀಚೆಗೆ ಕಡಿಮೆಯಾಗುತ್ತಿರುವ ವಿಶಾಲ ಪ್ರದೇಶ, ಅನುಕೂಲವಾದ ಸ್ಥಳದಲ್ಲಿ ಶೌಚಾಲಯಗಳು ಅಗತ್ಯ ಪ್ರಮಾಣದಲ್ಲಿ ಇಲ್ಲದಿರುವುದು ಶಾಲೆಯ ಹತ್ತಿರ ಅಥಾ ಸುತ್ತಮುತ್ತಲಿನ ಪರಿಸರ ಅಮೇಧ್ಯ ಮತ್ತು ಹೊಲಸು ಅಸ್ಥಿತ್ವಕ್ಕೆ ಬರಲು ಪೂರಕವಾಗಿದೆ. ಇದು ವಿಶೇಷವಾಗಿ ಹೆಣ್ಣುಮಕ್ಕಳಿಗೆ ಮತ್ತು ಮಹಿಳಾ ಶಿಕ್ಷಕಿಯರಿಗೆ ಬಹಳ ಮುಜುಗರ ಮತ್ತು ಅನಾನುಕೂಲತೆಯನ್ನು ಸೃಷ್ಟಿಸುತ್ತದೆ. ಭಾರತದಲ್ಲಿ ಶೇಕಡ ೮೯ರಷ್ಟು ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ವ್ಯವಸ್ಥೆ ಇದೆಯಾದರೂ, ಶೇಕಡ ೮೫ಕ್ಕಿಂತ ಹೆಚ್ಚಿನ ಶಾಲೆಗಳಲ್ಲಿ ಶೌಚಾಲಯಗಳು ಉಪಯೋಗಿಸುವ ಸ್ಥಿತಿಯಲ್ಲಿ ಇಲ್ಲ. ಕೆಲವು ಶಾಲೆಗಳಲ್ಲಿ ಇರುವ ಶೌಚಾಲಯವನ್ನು ಶಿಕ್ಷಕರು ಉಪಯೋಗಿಸುತ್ತಿದ್ದಾರೆ (ಪ್ರೋಬ್, ೧೯೯೯).

ನಾವು ಅಧ್ಯಯನ ನಡೆಸಿದ ಶೇಕಡ ೫೫ರಷ್ಟು ಶಾಲೆಗಳಲ್ಲಿ ಶೌಚಾಲಯವನ್ನು ಇತ್ತೀಚೆಗೆ ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ನಿರ್ಮಿಸಾಲಗಿದೆ. ಇನ್ನೂ ಶೇಕಡ ೪೫ರಷ್ಟು ಶಾಲೆಗಳಿಗೆ ಶೌಚಾಲಯವನ್ನು ಕಲ್ಪಿಸಬೇಕಾಗಿದೆ. ಈಗಾಗಲೇ ಶೌಚಾಲಯ ವ್ಯವಸ್ಥೆ ಇರುವ ಶೇಕಡ ೫೫ರಷ್ಟು ಶಾಲೆಗಳಲ್ಲಿ ಶೌಚಾಲಯಗಳನ್ನು ಮಕ್ಕಳು ಉಪಯೋಗಿಸದ ಸ್ಥಿತಿ ಇದೆ. ದೌಲತ್‌ಪುರ ಶಾಲೆಯಲ್ಲಿ ಇರುವ ಶೌಚಾಲಯವನ್ನು ಶಿಕ್ಷಕರು ಮಾತ್ರ ಉಪಯೋಗಿಸಿ, ನಂತರ ಬೀಗ ಹಾಕುತ್ತಾರೆ. ಇದಕ್ಕೆ ಶಿಕ್ಷಕರೇ ನೀಡುವ ಕಾರಣ ಮಕ್ಕಳಿಗೆ ಶೌಚಾಲಯವನ್ನು ಸರಿಯಾಗಿ ಉಪಯೋಗಿಸಲು ಬರುವುದಿಲ್ಲ. ಹೀಗಾಗಿ ಅದು ಗಲೀಜು ಆಗುತ್ತದೆ. ಅದಕ್ಕೆ ನಾವುಗಳು ಮಾತ್ರ ಇದನ್ನು ಉಪಯೋಗಿಸಿ ಬೀಗಹಾಕುತ್ತೇವೆ ಎಂದು ಹೇಳುತ್ತಾರೆ. ಕೃಷ್ಣನಗರ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಇರುವ ಶೌಚಾಲಯದಲ್ಲಿ ಕಸಕಡ್ಡಿಗಳು ತುಂಬಿಕೊಂಡಿವೆ. ಕಬ್ಬರಗಿ ಶಾಲೆಯಲ್ಲಿ ಇತ್ತೀಚೆಗೆ ಶೌಚಾಲಯವನ್ನು ಸರ್ವಶಿಕ್ಷಾ ಅಭಿಯಾನ ಕಾರ್ಯಕ್ರಮದಲ್ಲಿ ನಿರ್ಮಿಸಲಾಗಿದೆ. ಆದರೆ ಈ ಶೌಚಾಲಯ ಕೂಡ ಕೃಷ್ಣನಗರ ಶಾಲೆಯ ಶೌಚಾಲಯದ ಸ್ಥಿತಿಯಲ್ಲಿಯೇ ಇದೆ. ಸ್ವಲ್ಪ ಹೆಚ್ಚು ಕಡಿಮೆ ಶೌಚಾಲಯಗಳು ಇರುವ ೧೧ ಶಾಲೆಗಳಲ್ಲಿ ಶೌಚಾಲಯಗಳ ಸ್ಥಿತಿ ಉಪೋಯಗದ ಸ್ಥಿತಿಯಲ್ಲಿದ್ದರೆ, ಅವುಗಳನ್ನು ಶಿಕ್ಷಕರು ಮಾತ್ರ ಉಪಯೋಗಿಸುತ್ತಿದ್ದಾರೆ. ಇಲ್ಲವಾದರೆ ಅವುಗಳು ಉಪಯೋಗಿಸಲಾರದ ಸ್ಥತಿಯಲ್ಲಿವೆ. ಶೌಚಾಲಯಗಳು ಇಲ್ಲದೇ ಇರುವ ಶೇಕಡ ೪೫ರಷ್ಟು (೯ಶಾಲೆಗಳು) ಶಾಲೆಗಳಲ್ಲಿ ಶೇಕಡ ೩೦ರಷ್ಟು (೬ಶಾಲೆ) ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಮಾಡಲು ಶಾಲೆಯ ಆವರಣದಲ್ಲಿ ಸ್ಥಳ ಅವಕಾಶವಿಲ್ಲ. ಉದಾಹರಣೆಗೆ ಬೂದಿಹಾಳ ಎಸ್.ಕೆ. ಮನ್ಮಥನಾಳ, ಹೇಮವಾಡಗಿ, ತೂರಮರಿ, ಬೀಳಗಿ ಮತ್ತು ಪಾಲಥಿ ಗ್ರಾಮಗಳ ಶಾಲೆಯ ಆವರಣಕ್ಕೂ ಸ್ಥಳ ಅವಕಾಶವಿಲ್ಲ. ಬೂದಿಹಾಳ ಎಸ್.ಕೆ. ತೂರಿಮರಿ ಮತ್ತು ಮನ್ಮಥನಾಳ ಗ್ರಾಮದಲ್ಲಿ ಬೇರೆ ಬೇರೆ ಸ್ಥಳ ಹಾಗೂ ಕಟ್ಟಡಗಳಲ್ಲಿ ತರಗತಿಗಳು ನಡೆಯುತ್ತಿವೆ. ಬೂದಿಹಾಳ ಎಸ್.ಕೆ. ಗ್ರಾಮದಲ್ಲಿ ಶಾಲೆಯ ಕಟ್ಟಡ ಮಾತ್ರ ಶಾಲೆಯ ಹೆಸರಹಿನ ಖಾತೆನಲ್ಲಿದೆ. ಬೂದಿಹಾಳ ಎಸ್.ಕೆ. ಗ್ರಾಮದಲ್ಲಿ ಶಾಲೆಯ ಕಟ್ಟಡ ಮಾತ್ರ ಶಾಲೆಯ ಹೆಸರಿನ ಖಾತೆಯಲ್ಲಿದೆ. ಆ ಶಾಲೆಯ ಸುತ್ತಮುತ್ತಲಿನ ಜಾಗ ಬೇರೆಯವರ ಹೆಸರಿನಲ್ಲಿದೆ. ಉಳಿದ ಮೂರು ಶಾಲೆಗಳಲ್ಲಿ ಶೌಚಾಲಯದ ನಿರ್ಮಾಣಕ್ಕೆ ಪ್ರಯತ್ನಿಸಬೇಕಾಗಿದೆ.

20_23_EKPSMS-KUH

ಉಪಯೋಗಿಸದ ಸ್ಥಿತಿಯಲ್ಲಿರುವ ಶಾಲೆ ಶೌಚಾಲಯ 

ಶಾಲೆಗಳಲ್ಲಿ ಇರುವ ಶೌಚಾಲಯಗಳು ಉಪಯೋಗಿಸದ ಸ್ಥಿತಿ ತಲುಪಲು ಪ್ರಮುಖ ಮೂರು ಕಾರಣಗಳನ್ನು ಗುರುತಿಸಬಹುದು. ಒಂದು, ಈಗಾಗಲೇ ಶೌಚಾಲಯ ವ್ಯವಸ್ಥೆ ಇರುವ ಶಾಲೆಗಳಲ್ಲಿ ಶೌಚಾಲಯವನ್ನು ವ್ಯವಸ್ಥಿತವಾಗಿ ಉಪಯೋಗಿಸಲು ಬೇಕಾಗುವ ಪ್ರಮಾಣದ ನೀರಿನ ಸೌಲಭ್ಯದ ಕೊರತೆ ಇರುವುದು. ಎರಡು, ಶೌಚಾಲಯವನ್ನು ಏಕೆ ಉಪಯೋಗಿಸಬೇಕು? ಅದನ್ನು ಉಪಯೋಗಿಸುವುದರಿಂದ ಇರುವ ಅನುಕೂಲಗಳು ಯಾವುವು? ಇನ್ನು ಮುಂತಾದ ವಿಷಯಗಳು ಮಕ್ಕಳಿಗೆ ಮತ್ತು ಸ್ಥಳೀಯರಿಗೆ ಸಂಪೂರ್ಣವಾಗಿ ತಿಳಿಯದಿರುವುದು. ಮೂರು, ಶೌಚಾಲಯಗಳನ್ನು ಉಪಯೋಗಿಸುವುದರ ಬಗ್ಗೆ ಸ್ಥಳೀಯರಲ್ಲಿ ಮತ್ತು ಮಕ್ಕಳಲ್ಲಿ ಕೆಲವು ಪೂರ್ವಾಗ್ರಹಗಳು ಇರುವುದು. ಈ ಮೂರು ಪ್ರಮುಖ ಅಂಶಗಳು ವ್ಯವಸ್ಥಿತವಾಗಿ ಬಗೆಹರಿಸಿದರೆ ಮಾತ್ರ ನಿರ್ಮಿಸಿದ ಶೌಚಾಲಯಗಳ ಉಪಯೋಗ ಸಾಧ್ಯ. ಇದನ್ನು ಮಾಡುವುದು ನೀರಿನ ವಿಷಯದಲ್ಲಿ ಸ್ವಲ್ಪ ಕಷ್ಟವೆನಿಸುತ್ತದೆ. ಏಕೆಂದರೆ ನಾವು ಅಧ್ಯಯನ ನಡೆಸಿದ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯೇ ದೊಡ್ಡ ಸಮಸ್ಯೆಯಾಗಿದೆ. ಹೀಗಿರುವಾಗ ಶಾಲೆಗಳಲ್ಲಿ ಶೌಚಾಲಯಗಳ ಉಪಯೋಗಕ್ಕೆ ನೀರನ್ನು ಪೂರೈಸುವುದು ಕಷ್ಟ ಸಾಧ್ಯ. ಸ್ಥಳೀಯರಿಗೆ ಮತ್ತು ಮಕ್ಕಳಿಗೆ ಶೌಚಾಲಯವನ್ನು ಉಪಯೋಗಿಸುವುದರಿಂದ ಇರುವ ಅನುಕೂಲಗಳ ಬಗ್ಗೆ ಅರಿವನ್ನು ವಿಮಿಧ ರೀತಿಯಲ್ಲಿ ಮೂಡಿಸಬೇಕು. ಹೀಗೆ ಮಾಡುವುದರಿದ ಇರುವ ಮತ್ತೆರಡು ಕಾರಣಗಳನ್ನು ಸರಳವಾಗಿ ಬಗೆಹರಿಸಬಹುದು. ಇದು ಕೇವಲ ಸಮಸ್ಯೆಗೆ ಪರಿಹಾರವಾಗದೆ, ಭವಿಷ್ಯ ದಿನಗಳಲ್ಲಿ ಮಕ್ಕಳ ಸ್ಥಳೀಯ ಜನರ ಆರೋಗ್ಯದ ದೃಷ್ಟಿಯಿಂದ ಅನುಕೂಲವಾಗುತ್ತದೆ.

೫.೪ ಕಾಂಪೌಂಡ್

ಶಾಲೆಯು ಗಡಿಬೇಲಿ ಅಥವಾ ಕಾಂಪೌಂಡನ್ನು ಅವಶ್ಯಕವಾಗಿ ಹೊಂದಿರಬೇಕು. ಕಾಂಪೌಂಡ್ ಇದ್ದರೆ ಶಾಲೆಗೆ ಅನೇಕ ಅನುಕೂಲಗಳು ಇರುತ್ತವೆ. ಶಾಲೆಗೆ ಸೇರಿದಆಸ್ತಿ ಮತ್ತು ಆವರಣವನ್ನು ಒತ್ತುವರಿ ಮಾಡದತೆ ತಡೆಯಬಹುದು. ಸಾರ್ವಜನಿಕರಿಂದ ಮತ್ತು ಹೊರಗಿನಿಂದ ಶಾಲೆಯಲ್ಲಿ ತರಗತಿ ನಡೆಸಲು ಗಬಹುದಾದ ಶಬ್ದ ಗಲಾಟೆಯನ್ನು ಕಡಿಮೆಯಾಗುವಂತೆ ತಡೆಯಬಹುದು. ಗ್ರಾಮದಲ್ಲಿನ ಕೆಲವು ಪ್ರಾಮಿಗಳು ಶಾಲೆಯ ಜಗುಲಿಗೆ ಬಾರದಂತೆ ತಡೆಯಬಹುದು. ಇನ್ನೂ ಮುಂತಾದ ತೊಂದರೆಗಳಿಂದ ಶಾಲೆಯನ್ನು ರಕ್ಷಿಸಲು ಕಾಂಪೌಂಡ್ ಅವಶ್ಯಕ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಪ್ರಾಥಮಿಕ ಶಾಲೆಗಳು ಬಹಳ ಮಟ್ಟಿಗೆ ಕಾಂಪೌಂಡ್ ಹೊಂದಿಲ್ಲ.

ನಾವು ಅಧ್ಯಯನ ನಡೆಸಿದ ಶೇಕಡ ೭೦ರಷ್ಟು ಶಾಲೆಗಳಲ್ಲಿ ಶಾಲೆಯ ಗಡಿಬೇಲಿ ಅಥವಾ ಕಾಂಪೌಂಡ್ ಇರುವುದಿಲ್ಲ. ಇನ್ನೂ ಶೇಕಡ ೩೦ ರಷ್ಟು ಶಾಲೆಗಳಲ್ಲಿ ಕಾಂಪೌಂಡ್ ಇದೆ. ಕಾಂಪೌಂಡ್ ಇರುವ ಶಾಲೆಗಳಲ್ಲಿ ಶೇಕಡ ೨೦ರಷ್ಟು ಶಾಲೆಗಳ ಕಾಂಪೌಂಡ್ ನಾಲ್ಕು ದಿಕ್ಕುಗಳಲ್ಲಿ ಇರದೇ ಕೇವಲ ಎರಡು ದಿಕ್ಕ ಅಥವಾ ಮೂರು ದಿಕ್ಕು ಅಥವಾ ಒಂದು ದಿಕ್ಕಿನಲ್ಲಿ ಮಾತ್ರ ಇದೆ. ಸಂಪೂರ್ಣ ಕಾಂಪೌಂಡ್ ಇರುವುದು ಶೇಕಡ ೧೦ ರಷ್ಟು ಶಾಲೆಗಳಲ್ಲಿ ಮಾತ್ರ.

ಬೂದಿಹಾಳ ಎಸ್. ಕೆ. ಗ್ರಾಮಪಂಚಾಯತಿಯಲ್ಲಿ ಬರುವ ೯ ಶಾಲೆಗಳ ಪೈಕಿ ಕಾಂಪೌಂಡ್ ಸಂಪೂರ್ಣವಾಗಿ ನಾಲ್ಕು ದಿಕ್ಕುಗಳಲ್ಲಿ ಇರುವುದು ನಿಡಸನೂರು ಶಾಲೆಯಲ್ಲಿ ಮಾತ್ರ. ತಾರಿವಾಳ ಮತ್ತು ಬೆನಕನದೋಣಿ ಶಾಲೆಗಳಲ್ಲಿ ಕೇವಲ ಎರಡು ದಿಕ್ಕುಗಳಿಗೆ ಮಾತ್ರ ಶಾಲಾ ಗಡಿಬೇಲಿ ಇದೆ. ಇನ್ನೂ ಬೂದಿಹಾಳ ಎಸ್.ಕೆ. ತೂರಮರಿ, ಬೆನಕನದೋಣಿ ಮತ್ತು ಹೇಮವಾಡಗಿ ಗ್ರಾಮಗಳಲ್ಲಿ ಶಾಲಾ ತರಗತಿಗಳು ಬೇರೆ ಬೇರೆ ಸ್ಥಳ ಹಾಗು ಕಟ್ಟಡಗಳಲ್ಲಿ ನಡೆಯುತ್ತಿರುವುದರಿಂದ ಕಾಂಪೌಂಡ್ ಕಲ್ಪಿಸಬಹಾದಾದ ಸ್ಥಿತಿಯಲ್ಲಿ ಆ ಶಾಲೆಗಳು ಇಲ್ಲ. ಇಂತಹ ಶಾಲೆಗಳಿಗೆ ಗಡಿಬೇಲಿ ನಿರ್ಮಿಸಬೇಕಾದರೆ ಶಾಲೆಯ ಆವರಣವನ್ನು ಸ್ಥಳಾಂತರಿಸಬೇಕು. ಕಬ್ಬರಗಿ ಗ್ರಾಮಪಂಚಾಯತಿಯಲ್ಲಿನ ನಾಲ್ಕು ಶಾಲೆಗಳ ಪೈಕಿ ಕಬ್ಬರಗಿ ಶಾಲೆಗೆ ಮಾತ್ರ ಕಾಂಪೌಂಡ್ ಇದೆ. ಬೀಳಗಿ ಶಾಲೆಯ ಎರಡು ಪಕ್ಕದಲ್ಲಿ ಸಾರ್ವಜನಿಕ ರಸ್ತೆ ಇದ್ದರೆ ಮತ್ತು ಎರಡು ಪಕ್ಕದಲ್ಲಿ ಖಾಸಗಿಯವರ ಹೊಲ ಇದೆ. ಸೇಬಿನಕಟ್ಟೆ ಶಾಲೆಯಲ್ಲಿ ಕೂಡ ಎರಡು ದಿಕ್ಕುಗಳಲ್ಲಿ ಸಾರ್ವಜನಿಕರ ರಸ್ತೆ ಇದೆ. ಮತ್ತೆರಡು ಬದಿಗಳನ್ನು ಖಾಸಗಿಯವರು ಸುಮಾರು ೮ ಅಡಿಗಳಷ್ಟು ಶಾಲಾ ಆವರಣವನ್ನು ಅತಿಕ್ರಮ ಮಾಡಿ ಮನೆಯನ್ನು ಕಟ್ಟಿರುತ್ತಾರೆ.

ಪ್ರಾಣಿಗಳ ವಾಸಸ್ಥಾನವಾದ ಶಾಲಾ ಆವರಣ

ಪ್ರಾಣಿಗಳ ವಾಸಸ್ಥಾನವಾದ ಶಾಲಾ ಆವರಣ 

ಕೃಷ್ಣನಗರ ಪಂಚಾಯತಿಯಲ್ಲಿ ಬರುವ ನಾಲ್ಕು ಶಾಲೆಗಳಲ್ಲಿ ಯಾವುದೇ ರೀತಿಯ ಶಾಲಾ ಗಡಿ ಬೇಲಿ ಇರುವುದಿಲ್ಲ. ಕೃಷ್ಣನಗರ ಗ್ರಾಮಪಂಚಾಯತಿಯಲ್ಲಿ ಇರುವ ಎಲ್ಲಾ ನಾಲ್ಕು ಶಾಲೆಗಳಿಗೆ ಕಾಂಪೌಂಡ್ ಇಲ್ಲ. ಕೃಷ್ಣನಗರ ಉರ್ದು ಪ್ರಾಥಮಿಕ ಶಾಲೆಯನ್ನು ಕೋಟೆಯ ಗೋಡೆಯ ಪಕ್ಕದಲ್ಲಿಯೇ ನಿರ್ಮಿಸಲಾಗಿದೆ. ಈ ಶಾಲೆಯಿಂದ ಮಕ್ಕಳು ನೇರವಾಗಿ ರಸ್ತೆಗೆ ಬರುತ್ತಾರೆ. ಈ ಶಾಲೆಯು ಇರುವ ಭಾಗದ ಜನರಿಗೆ ಶಾಲೆಯ ಜಗುಲಿ ಒಂದು ರೀತಿಯಲ್ಲಿ ಸೋಮಾರಿಗಳ ಕಟ್ಟೆಯಾಗಿದೆ. ಈ ಶಾಲೆಯ ಜಗಲಿಯಲ್ಲಿ ನಾವು ಶಾಲೆಗೆ ಭೇಟಿ ನೀಡಿದ ಎಲ್ಲಾ ಸಮಯ ಸಂದರ್ಭಗಳಲ್ಲಿ ಜನರು ಇರುತ್ತಿದ್ದರು. ಇದಕ್ಕೆ ಶಾಲೆಯು ರಸ್ತೆಗೆ ಸೇರಿದಂತೆ ಇರುವುದು ಒಂದು ಕಾರಣವಾಗಿದೆ. ಮತ್ತೊಂದು ಕಾರಣ ಶಾಲೆಗೆ ಕಾಂಪೌಂಡ್ ಇಲ್ಲದಿರುವುದು. ಇನ್ನೂ ದೌಲತ್‌ಪುರ ಗ್ರಾಮದಲ್ಲಿ ಇರುವ ಎರಡು ಶಾಲೆಗಳು ಒಂದೇ ಆವರಣದಲ್ಲಿದೆ. ಈ ಶಾಲೆಯ ಆವರಣದಲ್ಲಿ ಒಂದು ಚರಂಡಿ ಇದೆ. ಅದಕ್ಕೆ ಮಕ್ಕಳು ಬೀಳುವುದು ಏಳುವುದು ಸಾಮಾನ್ಯ. ಈ ಶಾಲೆಯ ಆವರಣ ಅತ್ಯಂತ ಚಿಕ್ಕದಾಗಿದೆ. ಮಳೆ ಹೆಚ್ಚಾಗಿ ಬಂದ ಸಮಯದಲ್ಲಿ ಚರಂಡಿಯ ನೀರು ಶಾಲೆ ಆವರಣದಲ್ಲಿಯೇ ನಿಂತುಬಿಡುತ್ತದೆ. ಈ ಗ್ರಾಮದ ಕೆಲವರು ಮಳೆಗಾಲದ ಸಂದರ್ಭದಲ್ಲೂ ಈ ಶಾಲೆಯ ಜಗುಲಿಯನ್ನು ರಾತ್ರಿ ಜಾನುವಾರಗಳನ್ನು ಕಟ್ಟಲು ಬಳಸುತ್ತಾರೆ. ಶಾಲೆಗೆ ಕಾಂಪೌಂಡ್ ಇಲ್ಲದೇ ಇರುವ ಕಾರಣ ಇದನ್ನು ಕೇಳಲು ಸಾಧ್ಯವಿಲ್ಲ, ಒಂದು ಪಕ್ಷ ಕೇಳಿದರೆ ಸ್ಥಳೀಯರಿಗೂ ನಮಗೂ ಜನಗಳವಾಗುತ್ತದೆ ಎಂದು ಶಿಕ್ಷಕರು ವಿವರಿಸುತ್ತಾರೆ. ಹೀಗಾಗಿ ದೌಲತ್‌ಪುರ ಗ್ರಾಮದಲ್ಲಿ ಒಂದೇ ಆವರಣದಲ್ಲಿ ಇರುವ ಎರಡು ಶಾಲೆಗಳಲ್ಲಿ ಒಂದು ಶಾಲೆಯನ್ನು ಅಲ್ಲಿಯೇ ಉಳಿಸಿ ಮತ್ತೊಂದು ಶಾಲೆಯನ್ನು ಬೇರೆ ಜಾಗಕ್ಕೆ ವರ್ಗಾಯಿಸಿ ಕಾಂಪೌಂಡ್ ನಿರ್ಮಿಸಬೇಕಾಗಿದೆ.

ಯರೇಹಂಚಿನಾಳ ಗ್ರಾಮದ ಶಾಲೆಯು ಯಾವದೇ ರೀತಿ ಕಾಂಪೌಂಡನ್ನು ಹೊಂದಿರುವುದಿಲ್ಲ. ಈ ಶಾಲೆಯ ಆವರಣದ ಒಳಗೆ ೩೦ ರಿಂದ ೪೦ ಹಗೇವುಗಳು ಇವೆ. ಇದರಲ್ಲಿ ರೈತರು ಜೋಳ, ಗೋಧಿ ಹಾಕುತ್ತಾರೆ. ಸುಗ್ಗಿಯ ಕಾಲದಲ್ಲಿ ಹಗೇವುಗಳಿಗೆ ಜೋಳ ತುಂಬುವ ಕೆಲಸವಿದ್ದರೆ ಇತರಕಾಲದಲ್ಲಿ ಹಗೇವುಗಳಿಂದ ಧ್ಯಾನಗಳನ್ನು ತೆಗೆಯುವ ಕೆಲಸವನ್ನು ರೈತರು ನಡೆಸುತ್ತಾರೆ. ಹಗೇವುಗಳಿಗೆ ಮಕ್ಕಳು ಬಿದ್ದಿರುವ ನಿದರ್ಶನಗಳು ಇವೆ ಎಂದು ಶಿಕ್ಷಕರು ಹೇಳುತ್ತಾರೆ. ಅಲ್ಲದೆ ನಮ್ಮ ಶಾಲೆಗೆ ಬೇಲಿಗೋಡೆ ಇಲ್ಲದಿರುವುದರಿಂದ ಸ್ವಲ್ಪ ಹೆಚ್ಚು ಕಡಿಮೆ ಶಾಲೆಯ ಹೊರಭಾಗದ ಆವರಣವನ್ನು ಸಾರ್ವಜನಿಕರು ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕೆಲವು ಜನರು ಶಾಲೆಗೆ ಬಹಳ ಸಮೀಪದಲ್ಲಿ ಸುಗ್ಗಿಯ ಕಾಲಗಳಲ್ಲಿ ಜೋಳ, ಸೂರ್ಯಕಾಂತಿ ಇತ್ಯಾದಿ ಬೆಳೆಗಳ ವಕ್ಕಣೆಯನ್ನು ಮಾಡುತ್ತಿರುತ್ತಾರೆ. ವಕ್ಕಣೆ ಮಾಡುವ ಸಂದರ್ಭದಲ್ಲಿ ಯಂತ್ರಗಳ ಶಬ್ದ ಮತ್ತು ಜನರ ಗಲಾಟೆಯಿಂದ ಶಾಲೆ ನಡೆಸುವುದು ಕಷ್ಟವಾಗುತ್ತದೆ ಎಂದು ಶಾಲೆಯ ಮುಖ್ಯ ಗುರುಗಳು ಹೇಳುತ್ತಾರೆ. ಯರೇಹಂಚಿನಾಳ ಪ್ರಾಥಮಿಕ ಶಾಲೆಯ ಪೂರ್ವಕ್ಕೆ ಕಚ್ಚಾದಾರಿ ಮತ್ತು ಚಿಕ್ಕಕೆರೆ (ಕಟ್ಟೆ) ಇದೆ. ಪಶ್ಚಿಮಕ್ಕೆ ‘ಶಾಲಾ ಕಟ್ಟಡ’ದ ಪಕ್ಕಕ್ಕೆ ಸಾಗುವಳಿ ಭೂಮಿ, ಉತ್ತರ‍್ಕೆ ಕಚ್ಚಾ ದಾರ ಮತ್ತು ಸಾಗುವಳಿ ಭೂಮಿ ಇದೆ. ದಕ್ಷಿಣಕ್ಕೆ ಹಿತ್ತಿಲು ಬಣವೆಗಳಿವೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗೆ ಅನೇಕ ಸಲ ದೂರು ನೀಡಿದರೂ ಏನೂ ಪ್ರಯೋಜನವಾಗಲಿಲ್ಲ ಎಂದು ಶಿಕ್ಷಕರು ಹೇಳುತ್ತಾರೆ. ಈ ವಿಷಯ ಕುರಿತು ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಯನ್ನು ವಿವರಣೆ ಕೇಳಿದಾಗ ಇದಕ್ಕೆ ಜಗಳ ಮತ್ತು ಗಲಾಟೆಗಳಾಗಿವೆ. ಹೀಗಾಗಿ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ. ಇದನ್ನು ಪ್ರತಿಯೊಬ್ಬರೂ ಗಮನಿಸಬೇಕು, ಕೇವಲ ಗ್ರಾಮಪಂಚಾಯತಿ ಅಧ್ಯಕ್ಷರು, ಸದಸ್ಯರುಗಳು ಮತ್ತು ಕಾರ್ಯದರ್ಶಿ ಕೆಲಸವಾಗದೆ, ಗ್ರಾಮಸ್ಥರು ಸ್ವಯಂ ಪ್ರೇರಣೆಯಿಂದ ಮಾತ್ರ ಶಾಲೆಯ ಸುತ್ತಮುತ್ತಲಿನ ಪರಿಸರವನ್ನು ಉತ್ತಮವಾಗಿಡಲು ಸಾಧ್ಯ.  ಇದಕ್ಕೆ ಶಿಕ್ಷಣ ಇಲಾಖೆ ಮತ್ತು ಸರ್ಕಾರ ಕೆಲವು ಸೂಕ್ತ ಕ್ರಮವಹಿಸುವ ಅಗತ್ಯವಿದೆ.

ಸರಿಯಾದ ಗಡಿಬೇಲಿಯಿಲ್ಲದ ಶಾಲಾ ಆವರಣ

ಸರಿಯಾದ ಗಡಿಬೇಲಿಯಿಲ್ಲದ ಶಾಲಾ ಆವರಣ 

ಸ್ವಲ್ಪ ಹೆಚ್ಚು ಕಡಿಮೆ ಯರೇಹಂಚಿನಾಳ ಪ್ರಾಥಮಿಕ ಶಾಲೆಯ ಪರಿಸರದಲ್ಲಿನ ಪರಿಸ್ಥಿತಿಯನ್ನು ಬಿನ್ನಾಳ ಗ್ರಾಮದ ಪ್ರಾಥಮಿಕ ಶಾಲೆಯ ಪರಿಸರದಲ್ಲಿಯೂ ನಾವು ಗುರುತಿಸಬಹುದು. ಈ ಗ್ರಾಮದ ವಿಶೇಷವೆಂದರೆ ಗ್ರಾಮಸ್ಥರ ಸಹಾಯಿಂದ ಶಾಲೆಯ ಎರಡು ಭಾಗಗಳಿಗೆ ಎಸ್.ಡಿ.ಎಂ.ಸಿ. ಸಮಿತಿಯ ಮುಂದಾಳತ್ವದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗಿದೆ. ಈ ಕಾಂಪೌಂಡ್ ನಿರ್ಮಾಣಕ್ಕೆ ಗ್ರಾಮದಲ್ಲಿ ಟ್ರಾಕ್ಟರ್ ಹೊಂದಿರುವವರು ಮರಳು,ಕಲ್ಲು, ಮಣ್ಣು ಇತ್ಯಾದಿ ಕಚ್ಚಾ ಸಾಮಗ್ರಿಗಳನ್ನು ಸ್ವಯಂ ಪ್ರೇರಣೆಯಿಂದ ಕೆಲವರು ಒಂದು, ಕೆಲವರು ಎರಡು ಹೀಗೆ ತಮಗೆ ಸಾಧ್ಯವದಷ್ಟು ಕಚ್ಚಾ ಸಾಮಗ್ರಿಗಳನ್ನು ಒದಗಿಸಿದ್ದಾರೆ. ಕೆಲವರು ಸಿಮೆಂಟು ನೀಡಿದ್ದಾರೆ. ಕೆಲವರು ಹಣವನ್ನು ನೀಡಿದ್ದಾರೆ. ಕೆಲವರು ಕೆಲಸ ಮಾಡುವ ಮೂಲಕ ಶಾಲೆಯಲ್ಲಿ ಎರಡು ಭಾಗಗಳಿವೆ (ಪೂರ್ವ ಮತ್ತು ಉತ್ತರ) ಕಾಂಪೌಂಡ್ ನಿರ್ಮಾಣ ಮಾಡಿದ್ದಾರೆ. ಇದು ಶಾಲೆಯ ಆವರಣವನ್ನು ಸ್ವಲ್ಪಮಟ್ಟಿಗೆ ಉತ್ತಮವಾಗಿ ಇಟ್ಟುಕೊಳ್ಳಲು ಸಹಕಾರಿಯಾಗಿದೆ. ಆದರೆ ಶಾಲೆಯ ಮುಂಭಾಗದಲ್ಲಿ ಹಗೇವುಗಳು ಇವೆ. ಭಿನ್ನಾಳ ಶಾಲೆಯ ಕಾಂಪೌಂಡಿಗೆ ಸೇರಿದಂತೆ ಒಂದು ಸಂಘದ ಕಟ್ಟವಡಿದೆ. ಇದರಿಂದ ಶಾಲೆಯ ಮುಂಭಾಗವು ಸ್ವಲ್ಪಮಟ್ಟಿಗೆ ಎಲ್ಲಾ ಸಮಯದಲ್ಲಿಯೂ ಜನನಿಬಿಡವಾಗಿರತ್ತದೆ.ಈ ಶಾಲೆಯ ಪೂರ್ವಕ್ಕೆ ರೈತರ ಹಗೇವುಗಳು ಇದ್ದರೆ, ಪಶ್ಚಿಮಕ್ಕೆ ಹಿತ್ತಲುಗಳಿವೆ. ಉತ್ತರ ಭಾಗದಲ್ಲಿ ಮನೆಗಳಿವೆ. ದಕ್ಷಿಣ ಭಾಗದಲ್ಲಿ ಸ್ಮಶಾನ ಮತ್ತು ತಿಪ್ಪೆಗಳಿವೆ. ಇದು ಶಾಲೆಯ ಸುತ್ತಲಿನ ಪರಿಸರದಲ್ಲಿ ಹೊಲಸು ಅಸ್ತಿತ್ವಕ್ಕೆ ಬರಲು ಪೂರಕವಾಗಿದೆ. ಇದರಿಂದ ಮಕ್ಕಳಿಗೆ ಆಗಾಗ ಆರ‍್ಗೋಯದ ತೊಂದರೆಯಿಂದ ಗೈರು ಹಾಜರಾಗುವ ಸಾಧ್ಯತೆ ಹೆಚ್ಚು. ಒಟ್ಟು ಶಾಲೆಯ ಸುತ್ತಮುತ್ತಲಿನ ಪರಸಿರದ ಸ್ವಚ್ಚತೆ ಅಗತ್ಯವಾಗಿ ಆಗಬೇಕಾಗಿದೆ (ಹೆಚ್ಚಿನ ವಿವರಗಳಿಗೆ ನೋಡಿ ಶಾಲೆಯ ಸುತ್ತಮುತ್ತಲಿನ ಪರಿಸರ ಪಟ್ಟಿ).

ಸಿದ್ನೇಕೊಪ್ಪ ಶಾಲೆಯ ಪರಿಸರವು ಯರೇಹಂಚಿನಾಳ ಮತ್ತು ಭಿನ್ನಾಳ ಶಾಲಗಳ ಪರಿಸರಕ್ಕಿಂತ ಸ್ವಲ್ಪ ಭಿನ್ನ. ಶಾಲೆಯ ಮುಂಭಾಗಕ್ಕೆ ತಾಲ್ಲೂಕು ಪಂಚಾಯತಿಯಿಂದ ಕಾಂಪೌಂಡು ನಿರ್ಮಾಣ ಮಾಡಲಾಗಿದೆ. ಶಾಲೆಯ ಒಳ ಭಾಗವನ್ನು ಶಿಕ್ಷಕರು ಆಸಕ್ತಿಯಿಂದ ಮಕ್ಕಳ ಸಹಾಯ ಪಡೆದು ಉತ್ತಮವಾಗಿ ಇಟ್ಟುಕೊಂಡಿದ್ದಾರೆ. ಕೆಲವು ಮರ ಮತ್ತು ಗಿಡಗಳು ಇವೆ. ಶಾಲೆಯ ಉತ್ತರ ದಿಕ್ಕಿಗೆ ಯರೇಹಂಚಿನಾಳ ರಸ್ತೆ ಇದೆ. ರಸ್ತೆಯ ಎರಡು ಬದಿಗಳಲ್ಲಿ ಒಂದೊಂದು ಕೈ ಪಂಪುಗಳಿವೆ. ಒಂದು ಕೈಪಂಪು ಶಾಲೆಯ ಆವರಣಕ್ಕೆ ಕಾಂಪೌಂಡ್‌ಗೆ ಸೇರಿದಂತೆ ಇದೆ. ಈ ಎರಡು ಕೈಪಂಪುಗಳ ಸುತ್ತಮುತ್ತ ಜನರು ಬಟ್ಟೆ ಹೊಗೆಯಲು, ದನಗಳನ್ನು ತೊಳೆಯಲು, ಪಾತ್ರೆ ತೊಳೆಯಲು, ಇನ್ನು ಮುಂತಾದ ದಿನನಿತ್ಯದ ಕೆಲಸಗಳಿಗೆ ನೀರನ್ನು ಬಳಸುತ್ತಾರೆ. ಯರೇಮಣ್ಣಿನಿಂದ ಕೂಡಿದ್ದರಿಂದ ಬಳಸಿದ ನೀರು ಹಿಂದುಗಡೆ ಗಲೀಜು ಮತ್ತು ಕೊಚ್ಚೆ ನಿರ್ಮಾಣವಾಗಿದೆ. ಹಾಗಾಗಿ ಸೊಳ್ಳೆಗಳ ಬೆಳವಣಿಗೆಗೆ ಪೂರಕವಾಗಿ ಮಕ್ಕಳಿಗೆ ಜ್ವರ, ನೆಗಡಿ ಇತ್ಯಾದಿ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ದಕ್ಷಿಣ ಅಂದರೆ ಶಾಲೆಯ ಹಿಂಭಾಗದಲ್ಲಿ ಒಂದು ಸಣ್ಣ ರಸ್ತೆ ಇದೆ. ಇಲ್ಲಿ ಸ್ವಲ್ಪಮಟ್ಟಿಗೆ ಬಳ್ಳಾರಿ ಜಾಲಿ ಇರುವುದರಿಂದ ಕೆಲವರು ಇಲ್ಲಿ ಮಲಮೂತ್ರಗಳನ್ನು ಮಾಡುತ್ತಾರೆ. ಪೂರ್ವಕ್ಕೆ ಕೆಲವು ಮನೆಗಳು ಇರುವುದರಿಂದ ಈ ಭಾಗದಲ್ಲಿ ಯಾವುದೇ ಹೊಲಸು ಕಾಣುವುದಿಲ್ಲ. ಪಶ್ಚಿಮಕ್ಕೆ ಚಿಕ್ಕ ಹಳ್ಳವಿದೆ. ಇದಕ್ಕೆ ಹೊಂದಿಕೊಂಡಂತೆ ಹಿತ್ತಲುಗಳು ಸಾಗುವಳಿ ಭೂಮಿ ಮತ್ತು ಬಣವೆಗಳಿವೆ. ಒಟ್ಟಾರೆ ಶಿದ್ನೇಕೊಪ್ಪ ಶಾಲಾ ಪರಿಸರವು ತುಂಬಾ ಉತ್ತಮವಾಗಿರದೆ ಮಕ್ಕಳ ಆರೋಗ್ಯ ಹಾಳಾಗುವ ಸಾಧ್ಯತೆಯಿಂದ ಕೂಡಿದೆ (ಹೆಚ್ಚಿನ ವಿವರಗಳಿಗೆ ನೋಡಿ ಶಾಲೆಯ ಸುತ್ತಮುತ್ತಲಿನ ಪರಿಸರ ಪಟ್ಟಿ).