ಶಾಲಾ ಬಿಸಿಯೂಟ ಕಾರ್ಯಕ್ರಮದ ಉದ್ದೇಶಗಳು ಎಷ್ಟ್ರರ ಮಟ್ಟಿಗೆ ಸಾಧಿತವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಈ ಅಧ್ಯಾಯದಲ್ಲಿ ಮಾಡಲಾಗಿದೆ. ಕ್ಷೇತ್ರಕಾರ್ಯದ ಮಾಹಿತಿಯನ್ನು ಆಧರಿಸಿ ಬಿಯೂಟ ಕಾರ್ಯಕ್ರಮ ಹೆಚ್ಚು ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ತಕ್ಷಣವೇ ಜಾರಿಗೆ ತರಬೇಕಾಗಿರುವ ಕೆಲವು ಅಂಶಗಳನ್ನು ಕುರಿತು ಪ್ರಸ್ತುತ ಅಧ್ಯಾಯ ಚರ್ಚಿಸುತ್ತದೆ. ಅಧ್ಯಯನದ ಅನುಕೂಲಕ್ಕಾಗಿ ಈ ಅಧ್ಯಾಯವನ್ನು ನಾಲ್ಕು ಭಾಗವಾಗಿ ವಿಂಗಡಿಸಲಾಗಿದೆ. ಭಾಗ-I ರಲ್ಲಿ ಬಿಸಿಯೂಟಕ್ಕೆ ಮೊದಲು ಜಾರಿಯಲ್ಲಿ ಇದ್ದ ಆಹಾರ ಧಾನ್ಯ ವಿತರಣೆಯ ಸಾಧಕ ಬಾಧಕಗಳ ವಿಶ್ಲೇಷಣೆ ಮತ್ತು ಬಿಸಿಯೂಟ ಯೋಜನೆಯ ಕಿರು ಪರಿಚಯ ಇದೆ.ಭಾಗ-IIರಲ್ಲಿ ಬಿಸಿಯೂಟದ ಪರಿಣಾಮವನ್ನು ಶಾಲಾ ದಾಖಲಾತಿ, ಹಾಜರಾತಿ, ಮಕ್ಕಳ ಪೌಷ್ಟಿಕತೆ ಮತ್ತು ಸಾಮಾಜೀಕರಣದ ದೃಷ್ಟಿಯಲ್ಲಿ ವಿಶ್ಲೇಷಣೆ ಮಾಡಲಾಗಿದೆ. ಜೊತೆಗೆ ಲಿಂಗ ಸಮಾನತೆಯ ನೆಲೆಯಲ್ಲಿ ಬಿಸಿಯೂಟದ ಪಾತ್ರ ಮತ್ತು ಬಿಸಿಯೂಟದ ಬಗ್ಗೆ ಸ್ಥಳೀಯ ಜನರ ಅಭಿಪ್ರಾಯವನ್ನು ಚರ್ಚಿಸಲಾಗಿದೆ. ಭಾಗ-IIIರಲ್ಲಿ ಬಿಸಿಯೂಟ ಕಾರ್ಯಕ್ರಮಕ್ಕೆ ಸಂಬಂಧಿಸಿದ ಮೂಲ ಸೌಲಭ್ಯಗಳ ಕೊರತೆ ಸಮಸ್ಯೆಗಳಿಗೆ ಸಂಬಂಧಿಸಿದ ವಿಶ್ಲೇಷಣೆ ಇದೆ. ಉಪಸಂಹಾರದಲ್ಲಿ ಶಾಲಾ ಬಿಸಿಯೂಟ ಕಾರ್ಯಕ್ರಮದಿಂದ ಉಂಟಾಗಿರುವ ಪ್ರಮುಖ ಪರಿಣಾಮಗಳನ್ನು ಸ್ಪಷ್ಟವಾಗಿ ಗುರುತಿಸಲಾಗಿದೆ. ಶಾಲಾ ಬಿಸಿಯೂಟ ಕಾರ್ಯಕ್ರಮದ ಉದ್ದೇಶಗಳು ಸಂಪೂರ್ಣ ಪ್ರಮಾಣದಲ್ಲಿ ಸಾಧಿಸಬೇಕಾದರೆ ನಮ್ಮ ಅಧ್ಯಯನವು ಕಂಡುಕೊಂಡ ಕೆಲವು ಸಲಹೆಗಳನ್ನು ನೀಡಲಾಗಿದೆ.

ಭಾಗI

೬.೧ ಬಿಸಿಯೂಟ ಕಾರ್ಯಕ್ರಮದ ಹಿನ್ನೆಲೆ

ಈ ಕಾರ್ಯಕ್ರಮವನ್ನು ೧೯೯೫ರ ಮಧ್ಯಭಾಗದಲ್ಲಿ ಘೋಷಿಸಿದಾಗ ಬಿಸಿಯಾದ ಮಧ್ಯಾಹ್ನದ ಊಟವನ್ನು ಎಲ್ಲಾ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಲ್ಲಿ ಎರಡು ವರ್ಷಗಳ ಒಳಗೆ ಆಚರಣೆಗೆ ತರಬೇಕು ಎಂಬುದಾಗಿತ್ತು. ಈ ನಡುವೆ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೇಯಿಸಿದ ಆಹಾರಕ್ಕೆ ಬದಲಿಯಾಗಿ ಪ್ರತಿ ತಿಂಗಳು ಆಹಾರಧಾನ್ಯ (ಡ್ರೈ ರೇಶನ್) ವಿತರಣೆ ಮಾಡುವುದನ್ನು ಮಾನ್ಯ ಮಾಡುವಂತೆ ರಾಜ್ಯ ಸರಕಾರಗಳಿಗೆ ಕೇಂದ್ರ ಸರ್ಕಾರವು ಸೂಚಿಸಿತು. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರದ ಜೊತೆಗೂಡಿ, ರಾಷ್ಟ್ರೀಯ ಶಾಲಾ ಊಟದ ಕಾರ್ಯಕ್ರಮವನ್ನು ವಿಧಿವತ್ತಾಗಿ ಪ್ರಕಟಿಸಿತು. ಇದು ಪ್ರಾಥಮಿಕ ಶಾಲಾ ಮಕ್ಕಳಿಗೆ ಪೌಷ್ಟಿಕ ನೆರವು ನೀಡುವ ರಾಷ್ಟ್ರೀಯ ಕಾರ್ಯಕ್ರಮ ಇದು. ಈ ಯೋಜನೆಯಡಿ ೧ ರಿಂದ ೫ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಶೇಕಡ ೮೦ರಷ್ಟು ಹಾಜರಾತಿ ಹೊಂದಿದ ಎಲ್ಲಾ ಮಕ್ಕಳಿಗೆ ಪ್ರತಿ ತಿಂಗಳು ೩ ಕೆ.ಜಿ. ಅಕ್ಕಿ ಅಥವಾ ಗೋಧಿಯನ್ನು (ಡ್ರೈ ರೇಷನ್) ಪ್ರತಿ ಮಗುವಿಗೆ ವಿತರಿಸುವ ಕಾರ್ಯಕ್ರಮವಾಗಿದೆ. ಈ ಯೋಜನೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ನಿರ್ಧರಿಸಿ ಆರು ವರ್ಷಗಳಾದರೂ ಅನೇಕ ರಾಜ್ಯ ಸರ್ಕಾರಗಳು ಇನ್ನೂ ಕೂಡ ಆಹಾರ ಧಾನ್ಯ ವಿತರಣೆಯಿಂದ ಮಧ್ಯಾಹ್ನದ ಶಾಲಾ ಬಿಸಿಯೂಟಕ್ಕೆ ಬದಲಾಗಬೇಕಿವೆ. ಇನ್ನೂ ಕೆಲವು ರಾಜ್ಯ ಸರ್ಕಾರಗಳು (ಬಿಹಾರ, ಉತ್ತರ ಪ್ರದೇಶ ಮತ್ತು ಜಾರ್‌ಖಂಡ್) ಸುಪ್ರಿಂಕೋರ್ಟಿನ ಆದೇಶದ ಅಂತಿಮ ಕಾಲಾವಕಾಶವನ್ನು ಮಾನ್ಯ ಮಾಡಬೇಕಾದಿದೆ. ಮೇಲೆ ಸೂಚಿಸಿದ ಮೂರು ರಾಜ್ಯಗಳನ್ನು ಹೊರತುಪಡಿಸಿ ಇತದರೆ ರಾಜ್ಯಗಳಲ್ಲಿ ಕಳೆದ ಎರಡು ವರ್ಷಗಳಿಂದ ಶಾಲಾ ಬಿಸಿಯೂಟವು ಶಾಲೆಗಳ ದಿನಚರಿಯ ಭಾಗವಾಗಿ ದೇಶದಾದ್ಯಂತ ವಿಸ್ತಾರವಾಗಿ ಬೆಳವಣಿಗೆಯಾಗುತ್ತಿದೆ.

೬.೨ ಆಹಾರ ಧಾನ್ಯ ವಿತರಣೆಯ ಸಾಧಕ ಬಾಧಕಗಳು

ಪ್ರಾಥಮಿಕ ಶಿಕ್ಷಣವನ್ನು ಸಾರ್ವತ್ರಿಕವಾಗಿ ವಿಸ್ತರಣೆ ಮಾಡುವ ಆಶಯದಿಂದ ರಾಜ್ಯ ಸರ್ಕಾರಗಳು ಕೇಂದ್ರ ಸರಕಾರದ ಮಾರ್ಗ ಸೂಚಿಯನ್ವಯ ಅನೇಕ ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ರೂಪಿಸಿ ಆಚರಣೆಗೆ ತಂದಿವೆ. ಅವುಗಳಲ್ಲಿ ಶಾಲಾ ಬಿಸಿಯೂಟ ಪ್ರಮುಖವಾದುದು. ಶಾಲಾ ಬಿಸಿಯೂಟ ಕಾರ್ಯಕ್ರಮವು ಪ್ರಾಥಮಿಕ ಶಿಕ್ಷಣದ ಗುಣಮಟ್ಟ ಮತ್ತು ಮಕ್ಕಳ ಆರೋಗ್ಯದ ಮೇಲೆ ನೇರವಾದ ಪರಿಣಾಮ ಬೀರಿದೆ. ಬಿಸಿಯೂಟ ಜಾರಿಗೆ ಬರುವ ಮಧ್ಯಂತರ ಅವಧಿಯಲ್ಲಿ ಜಾರಿಯಲ್ಲಿದ್ದ ಬೇಯಿಸದೆ ಇರುವ ೩ ಕೆ.ಜಿ. ಆಹಾರ ಧಾನ್ಯವನ್ನು (ಅಕ್ಕಿ ಅಥವಾ ಗೋಧಿ) ಶೇಕಡ ೮೦ ಹಾಜರಾತಿ ಹೊಂದಿದ ಎಲ್ಲಾ ಮಕ್ಕಳಿಗೆ ಪ್ರತಿ ತಿಂಗಳು ನೀಡುವುದು ಜಾರಿಯಲ್ಲಿತ್ತು. ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಪ್ರತಿ ತಿಂಗಳಿಗೆ ಬದಲಾಗಿ ಮೂರು ತಿಂಗಳಿಗೆ ಒಂದು ಬಾರಿ, ಕೆಲವು ಸಂದರ್ಭದಲ್ಲಿ ೪ ತಿಂಗಳಿಗೆ ಒಂದು ಬಾರಿ ಆಹಾರ ಧಾನ್ಯದ ವಿತರಣೆಯಾಗುತ್ತಿದ್ದ ನಿದರ್ಶನಗಳಿವೆ (ಪ್ರೋಬ್ ೧೯೯೯). ಹೀಗಾಗಿ ಈ ಕಾರ್ಯಕ್ರಮವು ಶಾಲಾ ಹಾಜರಾತಿಯಲ್ಲಿ ಯಾವುದೇ ಪರಿಣಾಮವನ್ನ ಉಂಟುಮಾಡಿಲ್ಲ ಎಂಬುದನ್ನು ಕೆಲವು ಅಧಿಕಾರಿಗಳು, ಶಿಕ್ಷಕರು ಮತ್ತು ಪೋಷಕರು ಒಪ್ಪಿಕೊಳ್ಳುತ್ತಾರೆ. ಅಲ್ಲದೆ ಶಾಲಾ ಪ್ರೋತ್ಸಾಹಕ ಕಾರ್ಯಕ್ರಮದ ಮೂಲಕ ವಿತರಣೆಯಾಗುತ್ತಿದ್ದ ಆಹಾರಧಾನ್ಯ (ಅಕ್ಕಿ ಅಥವಾ ಗೋಧಿ) ಕೂಡ ಅತ್ಯಂತ ಕಡಿಮೆ ಗುಣಮಟ್ಟದ್ದಾಗಿತ್ತು. ರಾಜಾಸ್ಥಾನದ ಕೆಲವು ಪ್ರದೇಶಗಳಲ್ಲಿ ಆಹಾರ ಧಾನ್ಯವು ಫಲಾನುಭವಿಗಳಿಗೆ (ಶಾಲಾ ಮಕ್ಕಳಿಗೆ) ದೊರಕದೆ ಕಳ್ಳಸಂತೆಯಲ್ಲಿ ಮಾರಾಟವಾಗಿರುವುದು ಇದೆ (ಪ್ರೋಬ್, ೧೯೯೯, ಕುಮಾರ ರಾಣಾ, ೨೦೦೩, ಆರ್. ಗೋವಿಂದ, ೨೦೦೩). ಇದಕ್ಕೆ ಪೂರಕವಾಗಿ ಅಮರ್ತ್ಯಸೇನ್ ಅವರ ಮಾರ್ಗದರ್ಶನದ ಪ್ರತೀತಿ ಎಜುಕೇಷನ್ ರಿಪೋರ್ಟ್ ಎಂಬ ವರದಿಯಲ್ಲಿ ಅಧ್ಯಯನಕ್ಕೆ ಒಳಪಡಿಸಿದ ಶೇಕಡ ೭೮ ಪೋಷಕರು ಆಹಾರ ಧಾನ್ಯದ ವಿತರಣೆಗೆ ಬದಲಿಯಾಗಿ, ಶಾಲಾ ಮಧ್ಯಾಹ್ನದ ಊಟ ಕಾರ್ಯಕ್ರಮವನ್ನು ಸಮಂಜಸವಾಗಿ ಆಚರಣೆಗೆ ತರಬೇಕು ಎಂಬ ದೃಷ್ಟಿ ಹೊಂದಿರುವುದನ್ನು ಗುರುತಿಸಿದೆ. ಸ್ವಲ್ಪ ಹೆಚ್ಚು ಕಡಿಮೆ ಇದೇ ಅಭಿಪ್ರಾಯವನ್ನು ಪ್ರೋಬ್ (೧೯೯೯) ಅಧ್ಯಯನ ತಂಡವು ಗುರುತಿಸಿದೆ.

ಇದಲ್ಲದೆ, ಪ್ರತಿ ತಿಂಗಳೂ ಶೇಕಡ ೮೦ ರಷ್ಟು ಶಾಲಾ ಹಾಜರಾತಿಯನ್ನು ಹೊಂದಿದ ಮಕ್ಕಳಿಗೆ ಆಹಾರಧಾನ್ಯ ನೀಡುವ ಕಾರ್ಯಕ್ರಮವು ಸಂಪೂರ್ಣವಾಗಿ ಜಾರಿಗೊಳ್ಳುವಲ್ಲಿ ವಿಫಲವಾಗಿದೆ. ೧೯೯೬-೯೭ರ ಶೈಕ್ಷಣಿಕ ವರ್ಷದಲ್ಲಿ ಬಿಹಾರ ರಾಜ್ಯದ ಬಹುತೇಕ ಪ್ರದೇಶದಲ್ಲಿ ಆಹಾರ ಧಾನ್ಯವು ವಾಸ್ತವಿಕವಾಗಿ ಬಿಡುಗಡೆಯಾಗಿರಲಿಲ್ಲ. ೧೯೯೯ ಪ್ರೋಬ್ ತಂಡವು (ಪುಟ ಸಂಖ್ಯೆ ೯೬) ಅಧ್ಯಯನ ನಡೆಸಿದ ಬಹುತೇಕ ರಾಜ್ಯಗಳ ಪ್ರಾಥಮಿಕ ಶಾಲೆಗಳಿಗೆ ಬಹಳ ಮಟ್ಟಿಗೆ ಆಙರ ಧಾನ್ಯ ಬಹಳ ವಿಳಂಬವಾಗಿ ಪೂರೈಕೆಯಾಗಿರುವದು, ಪೂರೈಕೆಯಾದ ಅನೇಕ ಶಾಲೆ ಸ್ಥಳಗಳಲ್ಲಿ ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ಪ್ರತಿ ತಿಂಗಳು ನೀಡಬೇಕಾದ ಶಾಲಾ ಆಹಾರಧಾನ್ಯ ಕಾರ್ಯಕ್ರಮವು ಮೂರು ತಿಂಗಳಿಗೆ ಒಂದು ಸಲ ವಿತರಿಸುವ ನಿದರ್ಶನಗಳಿವೆ. ಇಂತಹ ಅನೇಕ ಸಮಸ್ಯೆಗಳಿಂದ ಈ ಕಾರ್ಯಕ್ರಮವು ಪ್ರತಿನಿತ್ಯದ ಶಾಲಾ ಹಾಜರಾತಿಯನ್ನು ಪರಿಣಾಮಕಾರಿಯಾಗಿ, ಉತ್ತೇಜಿಸಲಿಲ್ಲ. ಅದೂ ಅಲ್ಲದೆ, ವಾಸ್ತವಿಕವಾಗಿ ಆಹಾರ ಧಾನ್ಯವು ಹಂಚಿಕೆಯಾಗಿರುವಲ್ಲಿ ಈ ಕಾರ್ಯಕ್ರಮವು ಕೊನೆಗೊಳ್ಳುವುದು ಬಹಳ ವಿಸ್ತೃತವಾದ ಸರಪಣಿ ಮಾದರಿ ವಿಳಂಬ ನೀತಿ ಹಾಗೂ ಲಂಚಗುಳಿತನದಿಂದ. ಅದೇನೇ ಇದ್ದರೂ, ಈ ಕಾರ್ಯಕ್ರಮಕ್ಕೆ ಸಾಮಾನ್ಯವಾದ ಅಂಕಿತ ನಾಮವಿದೆ. ಅದೇನೆಂದರೆ ‘ಪ್ರತಿ ಮಗುವು ಪ್ರತಿ ತಿಂಗಳು ಮೂರು ಕೆ.ಜಿ. ಆಹಾರ ಧಾನ್ಯಕ್ಕೆ ಮೂರು ಕಿಲೋಮೀಟರ್ ಹೋಗಬೇಕು.’ ಕೆಲವು ಸಂದರ್ಭಗಳಲ್ಲಿ ಮೂರು ನಾಲ್ಕು ದಿನಗಳು ವ್ಯರ್ಥವಾಗಿ ಹೋಗಿ ಬರಬೇಕು ಎಂದು ಅನೇಕ ಪೋಷಕರು ದೂರುವುದಲ್ಲದೆ, ಹೋಗಿ ಬರುವ ಶ್ರಮಕ್ಕಿಂತ ಕಡಿಮೆ ಪ್ರಮಾಣದ ಆಹಾರ ಧಾನ್ಯವನ್ನು ನಮ್ಮ ಮಕ್ಕಳು ಪಡೆಯುತ್ತಾರೆ ಎಂದು ಆರೋಪ ಮಾಡುತ್ತಾರೆ. ಇಂತಹ ಆರೋಪಗಳು ಅತ್ಯಂತ ಹಿಂದುಳಿದ ಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ (ಪ್ರೋಬ್, ೧೯೯೯, ಆರ್. ಗೋವಿಂದ, ೨೦೦೩, ಜೀನ್ ಡ್ರೀಜ್, ೨೦೦೩).

ಬಿಸಿಯೂಟ ಜಾರಿಗೆ ಬರುವುದಕ್ಕೆ ಮೊದಲು ಪ್ರತಿ ತಿಂಗಳು ಶೇಕಡ ೮೦ ರಷ್ಟು ಹಾಜರಾತಿಯನ್ನು ಹೊಂದಿದ ಮಕ್ಕಳು ಮಾತ್ರ ಆಹಾರ ಧಾನ್ಯ ಪಡೆಯಲು ಅರ್ಹರಾಗಿದ್ದರು. ಆದರೆ ಈ ಕಾರ್ಯಕ್ರಮದ ವಾಸ್ತವಿಕ ಆಚರಣೆಯಲ್ಲಿ ಶಿಕ್ಷಕರು ಶಾಲೆಗೆ ದಾಖಲಾದ ಎಲ್ಲಾ ಮಕ್ಕಳಿಗೆ ಆಹಾರ ಧಾನ್ಯಗಳನ್ನು ವಿತರಿಸುತ್ತಿದ್ದರು. ಏಕೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭ. ಶೈಕ್ಷಣಿಕ ಇಲಾಖೆಯ ಔಪಚಾರಿಕ ಆಯ್ಕೆಯ ಕ್ರಮ ಅಥವಾ ಒರೆಗಲ್ಲು, ಅನೇಕ ಸ್ಥಳಗಳಲ್ಲಿ ಸಾಮಾಜಿಕವಾಗಿ ಒಪ್ಪಿತವಾಗಿಲ್ಲ. ಶಾಲೆಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಜರಾಗದ ಮಕ್ಕಳನ್ನು ಈ ಸೌಲಭ್ಯದಿಂದ ತೆಗೆಯಲು ಶಿಕ್ಷಕರು ಪ್ರಯತ್ನ ನಡೆಸಿರುವ ಸ್ಥಳಗಳಲ್ಲಿ ಅಥವಾ ಶಾಲೆಗಳಲ್ಲಿ ಪೋಷಕರು ಕನಿಷ್ಠಮಟ್ಟದ ಸೌಜನ್ಯವನ್ನು ಶಿಕ್ಷಕರ ಬಗ್ಗೆ ತೋರಿಸದೆ ಜಗಳವಾಡಿರುವುದು ಇದೆ.

ಆಹಾರ ಧಾನ್ಯ ವಿತರಣಾ ಕಾರ್ಯಕ್ರಮವು ನಿರೀಕ್ಷಿತ ಮಟ್ಟದಲ್ಲಿ ಶಾಲಾ ಹಾಜರಾತಿಯನ್ನು ಹೆಚ್ಚಿಸಲಿಲ್ಲ. ಇತರ ಶಾಲಾ ಪ್ರೋತ್ಸಾಹದಾಯಕ ಕಾರ್ಯಕ್ರಮಗಳಂತೆ ಈ ಕಾರ್ಯಕ್ರಮವು ಕೂಡ ಕೆಲವು ದೋಷಗಳಿಂದ ಕೂಡಿದೆ. ಆಹಾರ ಧಾನ್ಯ ವಿತರಣೆಯ ಫಲವಾಗಿ ಶಾಲೆಗಳಿಗೆ ಮಕ್ಕಳ ದಾಖಲಾತಿ ಹೆಚ್ಚಾಯಿತೇ ಹೊರತು, ಶಾಲಾ ಹಾಜರಾತಿಯಲ್ಲಿ ಪ್ರಗತಿ ಕಾಣಲಿಲ್ಲ. ಹೀಗಾಗಿ, ಆಹಾರ ಧಾನ್ಯ ವಿತರಣಾ ಕಾರ್ಯಕ್ರಮದ ಪರಿಣಾಮವು ದಾಖಲಾತಿಯ ಮೇಲೆ ಹೆಚ್ಚಿನ ಪ್ರಬಾವ ಬೀರಿತು, ಶಾಲಾ ಹಾಜರಾತಿಯಲ್ಲಿ ಬಹಳ ಕಡಿಮೆ ಪ್ರಭಾವ ಬೀರಿತು. ಪೌಷ್ಟಿಕತೆ ಮತ್ತು ಸಾಮಾಜೀಕರಣವಾದಗಳ ಹಿನ್ನೆಲೆಯಲ್ಲಿ ಬೇಯಿಸದಿರುವ ಆಹಾರ ಧಾನ್ಯ ವಿತರಣಾ ಕಾರ್ಯಕ್ರಮವು ನಿಷ್ಪ್ರಯೋಜಕವಾಯಿತು.

ಆಹಾರ ಧಾನ್ಯ ವಿತರಣಾ ಕಾರ್ಯಕ್ರಮವನ್ನು ಕ್ರಮಬದ್ಧವಾಗಿ ಆಚರಣೆಗೆ ತರುವಾಗ ಮತ್ತು ನಿರ್ವಹಣೆ ಮಾಡುವಾಗ ಅನೇಕ ಲೋಪದೋಷಗಳು ಕಂಡುಬಂದಿವೆ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಕಡುಬಡತನದ ಕುಟುಂಬಗಳಿಂದ ಬಂದ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವುದಾಗಿದೆ. ಈ ಕಾರ್ಯಕ್ರಮದ ಜಾರಿಯಲ್ಲಿ ರಾಜ್ಯ ಸರ್ಕಾರಗಳು ಸಂಪನ್ಮೂಲಗಳನ್ನು ಸಾಕಾಗುವಷ್ಟು ನೀಡದೆ ಇರುವುದು, ಅವಶ್ಯಕ ಸೌಲಭ್ಯಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸದಿರುವುದು, ಆಹಾರ ಧಾನ್ಯ ವಿತರಣೆಯಲ್ಲಿ ತೊಂದರೆ ಮತ್ತುತೊಡಕುಗಳು ಉಂಟಾಗಿರುವುದು ಕಂಡುಬಂದವು (ಸುಪ್ರೀಂಕೋರ್ಟ್ ತೀರ್ಪು, ೨೦೦೧). ಹಾಗಾಗಿಯೆ ಶಾಲಾ ಬಿಸಿಯೂಟ ಕಾರ್ಯಕ್ರಮವು ತಳಸಮುದಾಯಗಳಿಂದ ಹಾಗೂ ಕಡು ಬಡತನದ ಕುಟುಂಬಗಳಿಂದ ಬಂದ ಮಕ್ಕಳ ಶಾಲಾ ಹಾಜರಾತಿ ಹೆಚ್ಚಿಸುವಲ್ಲಿ ಮತ್ತು ಪ್ರಾಥಮಿಕ ಶಿಕ್ಷಣದ ಬೆಳವಣಿಗೆಯಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ತರಬಲ್ಲ ಅಂಶವಾಗಿದೆ ಎಂದು ಸುಪ್ರಿಂಕೋರ್ಟ್ ೨೮.೧೧.೨೦೦೧ರಂದು ತನ್ನ ಮಧ್ಯಂತರ ಆದೇಶ ನೀಡಿದೆ. ಈ ಆದೇಶದಲ್ಲಿ ೩೦೦ ಕ್ಯಾಲರಿಯಷ್ಟು ತಯಾರಿಸಿದ ಆಹಾರವನ್ನು ಸರ್ಕಾರಗಳು ನಡೆಸುವ ಶಾಲೆಗಳು ಮತ್ತು ಸರ್ಕಾರಗಳ ಸಹಯೋಗದಿಂದ ನಡೆಸುವ ಪ್ರಾಥಮಿಕ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ನೀಡಬೇಕು ಎಂದು ನಿರ್ದೇಶನ ನೀಡಿತು. ಜೊತೆಗೆ ಶಾಲಾ ಬಿಸಿಯೂಟ ಜಾರಿಗೆ ಬಾರದೆ ಇರುವ ಎಲ್ಲಾ ರಾಜ್ಯ ಸರ್ಕಾರಗಳು ಆರು ತಿಂಗಳ ಒಳಗೆ ಇದನ್ನು ಆಚರಣೆಗೆ ತರಬೇಕೆಂದು ನಿರ್ದೇಶಿಸಿತು.

[1]

ಇದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಶೀಲಿಸಿದ ಶಿಕ್ಷಣ ಇಲಾಖೆಯು ೧೧೫.೮.೧೯೯೫ರಲ್ಲಿ ಜಾರಿಗೆ ಬಂದ ಆಹಾರ ಧಾನ್ಯ (೩ ಕೆ.ಜಿ. ಅಕ್ಕಿ ಅಥವಾ ಗೋಧಿ) ವಿತರಣೆಯ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಚರ್ಚಿಸಿ, ಕೇಂದ್ರ ಸರ್ಕಾರದ ಆದೇಶಗಳನ್ನು ಪರಿಗಣಿಸಿತು. ಇದಕ್ಕೆ ಪೂರಕವಾಗಿ ಕರ್ನಾಟಕ ರಾಜ್ಯ ಸರ್ಕಾರವು ನೇಮಿಸಿದ ಶಿಕ್ಷಣ ಕಾರ್ಯಪಡೆಯು ಸಲ್ಲಿಸಿದ ವರದಿಯಲ್ಲಿ ಈಗಿನ ಪದ್ಧತಿಯಂತೆ ಆಹಾರ ಧಾನ್ಯಗಳ ವಿತರಣೆಯ ತೊಡಕುಗಳನ್ನು ಪರಿಶೀಲಿಸಿ ವಾಸ್ತವಿಕವಾಗಿ ಫಲಾನುಭವಿಗಳಾದ ಮಕ್ಕಳಿಗೆ ಆಹಾರ ಧಾನ್ಯ ವಿತರಣೆಯಿಂದ ಹೆಚ್ಚಿನ ಅನುಕೂಲಗಳು ಸಿಗುತ್ತಿಲ್ಲ. ಇದರ ಬದಲಿಗೆ ಸಿದ್ಧಪಡಿಸಿದ ಮಧ್ಯಾಹ್ನ ಉಪಹಾರವನ್ನು ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳ ಮೂಲಕ ಶಾಲಾ ಮಕ್ಕಳಿಗೆ ಪ್ರತಿ ದಿನ ಆ ಶಾಲೆ ನಡೆಯುವ ಸಮಯಗಳಲ್ಲಿ ಒದಗಿಸುವಂತೆ ಶಿಫಾರಸ್ಸು ಮಾಡಿತು (ರಾಜರಾಮಣ್ಣ ಕಾರ್ಯಪಡೆ ವರದಿ, ೨೦೦೨).

ಈ ಎಲ್ಲಾ ಅಂಶಗಳ ಹಿನೆಲೆಯಲ್ಲಿ ಕರ್ನಾಟಕ ಸರ್ಕಾರವು ಕೂಡ ರಾಜ್ಯದ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣಕ್ಕೆ ಪ್ರೋತ್ಸಾಹಕ ಕಾರ್ಯಕ್ರಮವಾಗಿ ಶಾಲಾ ಬಿಸಿಯೂಟವನ್ನು ಅಳವಡಿಸಿಕೊಳ್ಳಲು ನಿರ್ಧರಿಸಿತು. ಮಧ್ಯಾಹ್ನದ ಶಾಲಾ ಬಿಸಿಯೂಟ ಕಾರ್ಯಕ್ರಮವನ್ನು ಕೇಂದ್ರದ ಮಾರ್ಗಸೂಚಿಯನ್ವಯ ಹಾಗೂ ಶಿಕ್ಷಣ ಕಾರ್ಯಪಡೆಯ ಶಿಫಾರಸ್ಸುಗಳ ಹಿನ್ನೆಲೆಯಲ್ಲಿ ದಿನಾಂಕ ೯.೧೧.೨೦೦೧ರಂದು ರಾಜ್ಯದ ಅಂದಿನ ಮುಖ್ಯಮಂತ್ರಿಗಳು ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅರಕೇರಿ ಗ್ರಾಮದಲ್ಲಿ ವಿದ್ಯುಕ್ತವಾಗಿ ಉದ್ಘಾಟಿಸಿದರು. ಈ ಕಾರ್ಯಕ್ರಮವನ್ನು ೨೦೧೧-೦೨ರ ಶೈಕ್ಷಣಿಕ ಸಾಲಿನಲ್ಲಿ ಪ್ರಯತ್ನ ಪೂರ್ವಕವಾಗಿ ರಾಜ್ಯದ ಈಶಾನ್ಯ ಭಾಗದ ಜಿಲ್ಲೆಗಳ ಕೆಲವು ಆಯ್ದ ಗ್ರಾಮಗಳಲ್ಲಿ ಈ ಯೋಜನೆಗೆ ಹೆಚ್ಚಿನ ಒತ್ತು ನೀಡಿ, ಕೆಲವು ಪೂರ್ವ ಸಿದ್ಧತೆಗಳೊಂದಿಗೆ ೧.೬.೨೦೦೨ರಿಂದ ಪ್ರಾರಂಭಿಸಲಾಯಿತು. ಈ ಶಾಲಾ ಪ್ರೋತ್ಸಾಹಕ (ಬಿಸಿಯೂಟ) ಕಾರ್ಯಕ್ರಮಕ್ಕೆ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ೧ ರಿಂದ ೫ನೇ ತರಗತಿಯಲ್ಲಿ ಇರುವ ಎಲ್ಲಾ ಮಕ್ಕಳು ಒಳಪಡುತ್ತಾರೆ.[2] ಮಧ್ಯಾಹ್ನದ ಶಾಲಾ ಬಿಸಿಯೂಟ ಕಾರ್ಯಕ್ರಮ ಈಗಾಗಲೇ ಜಾರಿಯಲ್ಲಿರುವ ಈಶಾನ್ಯ ಕರ್ನಾಟಕದ ೭ ಜಿಲ್ಲೆಗಳಲ್ಲಿ ಶಾಲಾ ದಾಖಲಾತಿ ಮತ್ತು ಹಾಜರಾತಿಯು ನಿರೀಕ್ಷಿತ ಮಟ್ಟವನ್ನು ಇನ್ನೂ ತಲುಪಿಲ್ಲ. ಆದರೆ ಬಿಸಿಯೂಟ ಕಾರ್ಯಕ್ರಮ ಜಾರಿಯಾದ ನಂತರ ಶಾಲಾ ಹಾಜರಾತಿಯಲ್ಲಿ ಶೇಕಡ ೫ ರಿಂದ ಶೇಕಡ ೧೦ರವರೆಗೆ ಸುಧಾರಣೆಯಾಗಿದೆ ಎಂಬ ವಾದವನ್ನು ಮುಂದಿಟ್ಟು, ಇದು ಪ್ರಾಥಮಿಕ ಶಿಕ್ಷಣದ ಸಾರ್ವತ್ರೀಕರಣಕ್ಕೆ ಪೂರಕವಾಗಿದೆ ಎಂದು ಪರಿಗಣಿಸಿದ ರಾಜ್ಯ ಸರ್ಕಾರವು ೨೦೦೩-೦೪ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಜಾರಿಗೆ ತಂದಿದೆ.

೬.೩ ಬಿಸಿಯೂಟ ಕಾರ್ಯಕ್ರಮದ ಮೂಲ ಉದ್ದೇಶ

ಶಾಲಾ ಬಿಸಿಯೂಟ ಕಾರ್ಯಕ್ರಮವು ಮೂರು ಪ್ರಮುಖ ನಿರ್ಣಾಯಕ ಉದ್ದೇಶಗಳನ್ನು ಹೊಂದಿದೆ. ಪ್ರಾಥಮಿಕ ಶಿಕ್ಷಣದ ಬೆಳವಣಿಗೆ; ಮಕ್ಕಳಲ್ಲಿ ಪೌಷ್ಟಿಕತೆ ಹೆಚ್ಚಳ ಮತ್ತು ಸಾಮಾಜಿಕ ಸಮಾನತೆ (ಕರ್ನಾಟಕ ಸರ್ಕಾರ, ೨೦೦೧). ಈ ಉದ್ದೇಶಗಳು ಪ್ರಾಥಮಿಕ ಶಿಕ್ಷಣದ ಒಟ್ಟಾರೆ ಅಭಿವೃದ್ಧಿಗೆ ಬೇರೆ ಬೇರೆ ಅಂಶಗಳನ್ನು ರೂಪಿಸುವ ಮಹತ್ವಾಕಾಂಕ್ಷೆಗಳನ್ನು ಒಳಗು ಮಾಡಿಕೊಂಡಿದೆ. ಶಾಲಾ ಊಟದ ವ್ಯವಸ್ಥೆಯನ್ನು ಜಾರಿಗೊಳಿಸುವಾಗಿನ ಮೂಲ ಉದ್ದೇಶವೆಂದರೆ, ಇದು ಶಾಲಾ ದಾಖಲಾತಿಯನ್ನು ಮತ್ತು ಹಾಜರಾತಿಯನ್ನು ಉತ್ತಮಗೊಳಿಸಲು ಸಹಕಾರಿಯಾಗಿದೆ ಎಂದು. ಇದಕ್ಕಿಂತ ಹೆಚ್ಚಾಗಿ ಶಾಲಾ ಬಿಸಿಯೂಟ ವ್ಯವಸ್ಥೆಯು ನಿರ್ದಿಷ್ಟವಾಗಿ ಪ್ರತಿ ದಿನದ ಆಧಾರದಲ್ಲಿ ಶಾಲಾ ಹಾಜರಾತಿಯನ್ನು ಪರಿಣಾಮಕಾರಿಯಾಗಿ ಅಭಿವೃದ್ಧಿಪಡಿಸುವ ಮತ್ತೊಂದು ಗುಣಲಕ್ಷಣವನ್ನು ಹೊಂದಿದೆ (ಕೇವಲ ವಾರ್ಷಿಕ ದಾಖಲಾತಿಯಲ್ಲಿ ಮಾತ್ರವಲ್ಲ). ಶಾಲಾ ಬಿಸಿಯೂಟವು ‘ಮಕ್ಕಳ ಹಸಿವನ್ನು’ ಕಡಿಮೆಗೊಳಿಸುವ ಮೂಲಕ ಮಕ್ಕಳಲ್ಲಿ ಕಲಿಕೆಯ ಬಗ್ಗೆ ಏಕಾಗ್ರತೆ ಹೆಚ್ಚಿಸುವ ಜೊತೆ ಜೊತೆಗೆ ಮಕ್ಕಳಲ್ಲಿ ಕಲಿಕೆಯ ಕುಶಲತೆಯನ್ನು ಹೆಚ್ಚಿಸುವ ಸಾಧ್ಯತೆ ಇದೆ. ಉತ್ತಮವಾಗಿ ಸಂಘಟಿತವಾದ ಶಾಲಾ ಬಿಸಿಯೂಟ ಕಾರ್ಯಕ್ರಮವು ಪ್ರತಿದಿನದ ಮಾಮೂಲಿ ಕಲಿಕಾ ಪ್ರಕ್ರಿಯೆಗಿಂತ ಸ್ವಲ್ಪ ಭಿನ್ನವಾದ ಸಹಜ ಶೈಕ್ಷಣಿಕ ಮೌಲ್ಯಗಳನ್ನು ಮಕ್ಕಳಿಗೆ ಕಲಿಸುವ ಶಕ್ತಿಯನ್ನು ಕೂಡ ಹೊಂದಿದೆ. ಉದಾಹರಣೆಗೆ ಶಾಲಾಬಿಸೂಟವು ಮಕ್ಕಳಲ್ಲಿ ಅನೇಕ ಉತ್ತಮ ಅಭ್ಯಾಸಗಳು ಮೂಡುವಂತೆ ಮಾಡಬಹುದು (ಊಟಕ್ಕೆ ಮೊದಲು ನಂತರ ಕೈ ತೊಳೆಯುವುದು, ಸ್ವಚ್ಛತೆ ಕಾಪಾಡುವುದು ಇತ್ಯಾದಿ). ಶುದ್ಧಿ ನೀರು ಕುಡಿಯುವ ಬಗ್ಗೆ, ಸಮತೋಲನ ಆಹಾರವನ್ನು ತೆಗೆದುಕೊಳ್ಳುವ ಬಗ್ಗೆ, ಇನ್ನೂ ಮುಂತಾದ ವಿಷಯಗಳ ಪ್ರಾಮುಖ್ಯತೆಯನ್ನು ತಿಳಿಸಬಹುದು. ಕಾರ್ಯಕ್ರಮವು ಮಕ್ಕಳ ಪೋಷಕರಿಗೆ ಮಾತ್ರ ಶಾಲಾ ಶುಲ್ಕ ಇತ್ಯಾದಿ ಪ್ರೋತ್ಸಾಹಕ ರಿಯಾಯಿತಿಯನ್ನು ನೀಡುವುದಲ್ಲದೆ, ಮಕ್ಕಳಿಗೂ ಸಹ ಶಾಲೆಯಲ್ಲಿ ಉಚಿತ ಊಟ ಮಾಡುವುದರಿಂದ ನೇರವಾಗಿ ಶಾಲಾ ಪ್ರೋತ್ಸಾಹಕ ಫಲವು ತಲುಪಬೇಕು ಎಂಬುದು ಅತ್ಯಂತ ಪ್ರಮುಖವಾದದ್ದು. ಏಕೆಂದರೆ, ಬಹಳ ಹಿಂದಿನಿಂದಲೂ ಪ್ರತಿನಿತ್ಯದ ಶಲಾ ಹಾಜರಾತಿಯು ಪೋಷಕರು ಮಕ್ಕಳು ಶಾಲೆಗೆ ಹೋಗುವಂತೆ ಪ್ರೇರೇಪಿಸುವುದನ್ನು ಅವಲಂಬಿಸಿದೆ. ಪೋಷಕರಿಂದ ಪ್ರೇರಣೆ ಇಲ್ಲದೆ ಇದ್ದ ಪಕ್ಷದಲ್ಲಿ ಮಕ್ಕಳನ್ನು ಪೋಷಕರು ಶಾಲೆಗೆ ಹೋಗುವಂತೆ ಪುಸಲಾಯಿಸಬೇಕಾಗುತ್ತದೆ. ಅನೇಕ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬಗ್ಗೆ ನಿಶ್ಚಿತಾಭಿಪ್ರಾಯವನ್ನು ಹೊಂದಿಲ್ಲದಿರುವುದು ಅಥವಾ ಮಕ್ಕಳನ್ನು ಶಾಲೆಗೆ ಹೋಗುವಂತೆ ಪುಸಲಾಯಿಸಲು ಸಮಯವಿಲ್ಲದಿರುವುದು ಸಹ ತಿಳಿದುಬರುತ್ತದೆ. ಶಾಲಾ ಊಟದ ವ್ಯವಸ್ಥೆಯು ಮಕ್ಕಳು ಶಾಲೆಗೆ ಸ್ವಯಂ ಪ್ರೇರಣೆಯಿಂದ ಬರುವಂತೆ ಪ್ರೇರೇಪಿಸುವುದೇ ಅಲ್ಲದೆ ಇಂತಹ ಸಮಸ್ಯೆಯನ್ನು ಪರಿಹರಿಸಲು ಸಹಾಯಕವಾಗಿದೆ.

ಶಾಲಾ ಬಿಸಿಯೂಟ ಯೋಜನೆಯ ನ್ಯೂಟ್ರೀಶನ್ ಉದ್ದೇಶವು ಸ್ವಲ್ಪಮಟ್ಟಿಗೆ ಮಕ್ಕಳ ಹಸಿವನ್ನು ತಡೆಗಟ್ಟುವುದರ ಮೂಲಕ ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಸಹಕಾರಿಯಾಗಿದೆ. ವಿಶೇಷವಾಗಿ ಮಕ್ಕಳ ಪೌಷ್ಟಿಕ ಬಲವರ್ಧನೆಯ ಕನಸನ್ನೂ ಇದು ಹೊಂದಿದೆ. ಪ್ರತಿ ದಿನ ಮಕ್ಕಳು ಸ್ವ ಇಚ್ಛೆಯಿಂದ ಶಾಲೆಗೆ ಬರುತ್ತಾರೆ. ಮತ್ತು ಶಾಲೆಯಲ್ಲಿ ನೀಡುವ ಎಲ್ಲಾ ಆಹಾರವನ್ನು ಅವರು ತಿನ್ನುತ್ತಾರೆ. ಮಕ್ಕಳು ಆಹಾರವನ್ನು ಹೆಚ್ಚಾಗಿ ತೆಗೆದುಕೊಳ್ಳುವುದರ ಮೂಲಕ ಕ್ಯಾಲೋರಿಸ್ ಮತ್ತು ಪ್ರೋಟಿನ್ಸ್ ಹೆಚ್ಚಳದ ಜೊತೆಗೆ ಪೌಷ್ಟಿಕತೆಗೆ ಪೂರಕವಾಗುವ ಕಬ್ಬಿಣಾಂಶಗಳು ಮತ್ತು ಲವಣಾಂಶಗಳನ್ನು ಸಮಪ್ರಮಾಣದಲ್ಲಿ ಸೇವಿಸುವುದರಿಂದ ದೀರ್ಘಾವಧಿಯಲ್ಲಿ ಮಕ್ಕಳ ಬೆಳವಣಿಗೆಗೆ ಬಹಳ ಪ್ರಯೋಜನಕಾರಿ ಯಾಗಿದೆ. ಅಲ್ಲದೆ ಮಕ್ಕಳ ಪೌಷ್ಟಿಕತೆಯನ್ನು ಹೆಚ್ಚಳ ಮಾಡುವ ಉದ್ದೇಶಕ್ಕಾಗಿಯೆ ರೂಪಿಸಬೇಕಾದ ಕಾರ್ಯಕ್ರಮಗಳನ್ನು ಕಡಿಮೆಗೊಳಿಸುತ್ತದೆ.

ಈ ಪ್ರೋತ್ಸಾಹಕ ಕಾರ್ಯಕ್ರಮವನ್ನು ಜಾರಿಗೊಳಿಸುವಾಗ ಇದ್ದ ಮತ್ತೊಂದು ವಾದ: ಶಾಲಾ ಊಟವು (ನ್ಯೂಟ್ರಿಶಸ್) ಪುಷ್ಟಿಕರ ಮತ್ತು ಸಾಮಾಜೀಕರಣ ಈ ಎರಡು ಅಂಶವನ್ನು ಒಳಗು ಮಾಡಿಕೊಂಡಿದೆ. ಪುಷ್ಟಿದಾಯಕ ಆಹಾರದ ಚರ್ಚೆಯ ಶಕ್ತಿಯು ವಾಸ್ತವಿಕವಾಗಿ ಶಾಲಾ ಮಧ್ಯಾಹ್ನದ ಊಟ ಎಷ್ಟರ ಮಟ್ಟಿಗೆ ಪುಷ್ಟಿಕರವಾಗಿದೆ ಎಂಬುದನ್ನು ಅವಲಂಬಿಸಿದೆ. ಆದರೆ ಇದನ್ನು ಆಹಾರದ ಬೆಲೆ ಮತ್ತು ತಾರ್ಕಿಕ ಚರ್ಚೆಯಿಂದ ಹೇಳುವುದಾದರೆ ಹೆಚ್ಚಿನ ಪುಷ್ಟಿದಾಯಕ ಆಹಾರವನ್ನು ಪೂರೈಸುವುದು ಬಹಳ ವೆಚ್ಚದಾಯಕ. ಹೀಗಿದ್ದರೂ ಸಾಮಾನ್ಯ ಸರಳ ಊಟದ ವ್ಯವ್ಥೆಯು ಮಕ್ಕಳ ಪೌಷ್ಟಿಕತೆಯ ಮೇಲೆ ಸ್ವಲ್ಪ ಮಟ್ಟಿಗಾದರೂ ಪರಿಣಾಮ ಬೀರುವಲ್ಲಿ ಸಂಬಂಧ ಹೊಂದಿದೆ. ವಿಶೇಷವಾಗಿ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಕ್ಯಾಲೋರಿಸ್‌ಗಳ ವ್ಯತ್ಯಾಸದಿಂದ ಆಗಾಗ್ಗೆ ಬರಬಹುದಾದ ಸಾಂಕ್ರಾಮಿಕ ರೋಗಗಳನ್ನು ಸ್ವಲ್ಪಮಟ್ಟಿಗೆ ತಡೆಯಲು ಈ ಕಾರ್ಯಕ್ರಮವು ಒಂದು ಮಾರ್ಗವಾಗಿದೆ. ಈ ವಾದವನ್ನು ಮುಂದುರಿಸುವುದಾದರೆ ಪುಷ್ಟದಾಯಕ ಆಹಾರದ ವಾದವು ಕೇವಲ ಶಾಲಾ ಊಟವಾಗಿರದೆ ಕೆಲವು ಸಂದರ್ಭದಲ್ಲಿ ಮಕ್ಕಳ ಆರೋಗ್ಯವನ್ನು ಉತ್ತಮ ಪಡಿಸಬಹುದು. ಹಸಿವಿನಿಂದ ಕಲಿಕೆಯ ಬಗ್ಗೆ ಆಸಕ್ತಿ ಇಲ್ಲದ ಮಕ್ಕಳು ಕೂಡ ಈ ಕಾರ್ಯಕ್ರಮದಿಂದ ಉತ್ತಮವಾಗಿ ಕಲಿಯಬಹುದು.

ಶಾಲಾ ಬಿಸಿಯೂಟದ ಸಾಮಾಜೀಕರಣ ಉದ್ದೇಶ ಬಹಳ ಸರಳ ಮಟ್ಟದ್ದು. ಅಂದರೆ ವರ್ಗ, ವಿಶೇಷವಾಗಿ ಜಾತಿ ಮತ್ತು ಧರ್ಮ ಇತ್ಯಾದಿಗಳ ನಡುವೆ ಸಾಂಪ್ರದಾಯಿಕವಾಗಿ ನಿಷಿದ್ಧ ರೂಪದಲ್ಲಿ ಇರುವ ತಾರತಮ್ಯವನ್ನು ತೊಡೆದು ಎಲ್ಲಾ ಮಕ್ಕಳು ಒಟ್ಟಿಗೆ ಆಹಾರವನ್ನು ಸೇವಿಸುತ್ತಾರೆ. ಸಾಮಾಜಿಕ ಸಮಾನತೆಯನ್ನು ಸಾಧಿಸುವಲ್ಲಿಯೂ ಮಧ್ಯಾಹ್ನದ ಶಾಲಾ ಬಿಸಿಯೂಟ ಬಹಳ ಮಹತ್ವದ್ದಾಗಿದೆ. ಉದಾಹರಣೆಗೆ ಜಾತಿ ಆಧಾರಿತ ಪೂರ್ವಕಲ್ಪಿತ ಆಚರಣೆಗಳನ್ನು ಶಾಲಾ ಬಿಸಿಯೂಟವು ಮಕ್ಕಳು ಒಂದೇ ಸ್ತಳದಲ್ಲಿ ಒಟ್ಟಿಗೆ ಕುಳಿತು, ಒಂದೇ ಬಗೆಯ ಆಹಾರವನ್ನು ಹಂಚಿಕೊಳ್ಳುವ ಮೂಲಕ ಕಡಿಮೆಗೊಳಿಸುತ್ತದೆ. ಒಂದೇ ತಂದೆ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ನಡುವೆ ಲಿಂಗ ಸಮಾನತೆಯನ್ನು ಸಾಧಿಸುವ ಮೂಲಕ, ಶಾಲೆಯಲ್ಲ ಇರಬಹುದಾದ ಲಿಂಗ ಅಸಮಾನತೆಯನ್ನು ಕಡಿಮೆಗೊಳಿಸುತ್ತದೆ. ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಶಾಲಾ ಅಡುಗೆಗೆ ನೇಮಕ ಮಾಡಿಕೊಳ್ಳುವುದರಿಂದ ಉದ್ಯೋಗದ ಅವಕಾಶವನ್ನು ಹೆಚ್ಚಿಸುವ ಸಾಮರ್ಥ್ಯದ ಜೊತೆಗೆ ಕೂಲಿ ಕಾರ್ಮಿಕರಾಗಿ ದುಡಿಯುವ ಮಹಿಳೆಯರಿಗೆ ಮನೆಯಲ್ಲಿ ಮಧ್ಯಾಹ್ನದ ಸಮಯದಲ್ಲಿ ಮಕ್ಕಳಿಗೆ ಆಹಾರ ನೀಡಿ ಪೋಷಿಸುವ ಒತ್ತಡದಿಂದ ಬಿಡುಗಡೆಗೊಳಿಸಿದೆ. ಸ್ವಲ್ಪಮಟ್ಟಿಗೆ ಮಧ್ಯಾಹ್ನದ ಶಾಲಾ ಬಿಸಿಯೂಟವು ವರ್ಗ ಅಸಮಾನತೆಯನ್ನು ಕಡಿಮೆಗೊಳಿಸಲು ಸಹಕಾರಿಯಾಗಿದೆ. ಹಾಗೆಯೇ ಪ್ರಸ್ತುತ ಸಂದರ್ಭದಲ್ಲಿ ಭಾರತದ ಸರಕಾರಿ ಶಾಲೆಗಳಿಗೆ ದಾಖಲಾಗುತ್ತಿರುವ ಮಕ್ಕಲು ಪ್ರಮುಖವಾಗಿ ಅವಕಾಶವಂಚಿತ ಕುಟುಂಬಗಳಿಂದ ಬಂದವರು. ಇಂತಹ ಕುಟುಂಬಗಳಿಂದ ಮತ್ತು ಬಡತನದಿಂದ ಬಂದವರಿಗೆ ಶಾಲಾ ಬಿಸಿಯೂಟ ಒಂದು ರೀತಿಯಲ್ಲಿ ಆರ್ಥಿಕ ಬೆಂಬಲದಂತೆ ಕಂಡುಬರುತ್ತದೆ. ಇದಕ್ಕಿಂತಲೂ ಪ್ರಮುಖವಾಗಿ ಶಾಲಾ ಬಿಸಿಯೂಟವು ಅವಕಾಶ ವಂಚಿತ ಮಕ್ಕಳು ಶಾಲಾ ವ್ಯವಸ್ಥೆಯಲ್ಲಿ ಭಾಗವಹಿಸುವುದನ್ನು ಸ್ವಲ್ಪಮಟ್ಟಿಗೆ ಸರಾಗಗೊಳಿಸುವ ಸಾಮರ್ಥ್ಯ ಹೊಂದಿದೆ. ಪ್ರಾಯಶಃ ಇದೇ ಭವಿಷ್ಯದಲ್ಲಿ ವರ್ಗ ಅಸಮಾನತೆಯನ್ನು ಕಡಿಮೆಗೊಳಿಸಬಹುದು. ಶಿಕ್ಷಣದ ಮಟ್ಟ ಬಹಳ ಕಡಿಮೆ ಇರುವುದು ಪ್ರಮುಖವಾಗಿ ಆರ್ಥಿಕ ಮೂಲಗಳಲ್ಲಿ ಅವಕಶಾವನ್ನು ಕಡಿಮೆಗಳಿಸುವ ಮೂಲಕ ಸಾಮಾಜಿಕ ಅಂಚಿಗೆ ತಳ್ಳುತ್ತದೆ. ಒಟ್ಟಾರೆ ಶಾಲಾ ಬಿಸಿಯೂಟ ಸರಳವಾಗಿದ್ದರೂ ಕೂಡ ಜಾತಿ, ವರ್ಗ ಮತ್ತು ಲಿಂಗ ಸಮಾನತೆಯನ್ನು ಸಾಧಿಸುವಲ್ಲಿ ಹೆಚ್ಚು ಮಹತ್ವದ್ದಾಗಿದೆ. ಈ ಎಲ್ಲಾ ಉದ್ದೇಶ ಮತ್ತು ವಾದಗಳ ಹಿನ್ನೆಲೆಯನ್ನು ಶಾಲಾ ಬಿಸಿಯೂಟ ಕಾರ್ಯಕ್ರಮವು ಹೊಂದಿದೆ.

ಭಾಗII

ದಾಖಲಾತಿ – ಹಾಜರಾತಿ  – ಸಾಮಾಜೀಕರಣ – ಲಿಂಗ ಸಮಾನತೆ

ಬಿಸಿಯೂಟಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಒಂದು ಅಧ್ಯಯನವು ಶಾಲಾ ಬಿಸಿಯೂಟ ಕಾರ್ಯಕ್ರಮದಿಂದ ಸ್ಥಳೀಯ ಮಟ್ಟದಲ್ಲಿ ಹೆಣ್ಣು ಮಕ್ಕಳು ಪ್ರಾಥಮಿಕ ಶಾಲೆಯಿಂದ ಹೊರಗಿರುವುದನ್ನು ಶೇಕಡ ೯೦ರಷ್ಟು ಕಡಿಮೆಗೊಳಿಸಿದೆ ಎಂದು ಅಂದಾಜಿಸಿದೆ (ಡ್ರೀಜ್ ಅಂಡ್ ಕಿಂಗ್, ೨೦೦೧). ಶಾಲಾ ಬಿಸಿಯೂಟ ಕುರಿತು ನಡೆದಿರುವ ಮೌಲ್ಯಮಾಪನ ಅಧ್ಯಯನಗಳಲ್ಲಿಯೂ ಕೂಡ ಇದೇ ಅಂಶ ಹೆಚ್ಚಾಗಿ ಕಂಡುಬಂದಿದೆ. ಈ ಅಂಶಕ್ಕೆ ಹೆಚ್ಚಿನ ಮಹತ್ವವನ್ನು ನೀಡಿ ಸುಪ್ರಿಂಕೋರ್ಟ್ ಆದೇಶ ನೀಡಿದೆ. ಉದಾಹರಣೆಗೆ ಬಾರ್ಮರ್ ಜಿಲ್ಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಿದ ೬೩ ಶಾಲೆಗಳಲ್ಲಿ ೨೦೦೧ರ ಸೆಪ್ಟೆಂಬರ್‌ನ ಶಾಲಾ ದಾಖಲಾತಿಗಿಂತ ೨೦೦೨ರ ಸೆಪ್ಟಂಬರ್‌ನ ಶಾಲಾ ದಾಖಲಾತಿಯಲ್ಲಿ ಶೇಕಡ ೩೬ರಷ್ಟು ಹೆಚ್ಚಳವಾಗಿದೆ ಎಂದು ಗುರುತಿಸಲಾಗಿದೆ. ಇದೇ ರೀತಿಯಲ್ಲಿ ರಾಜಸ್ಥಾನದ ಜಿಲ್ಲೆಯಲ್ಲಿನ ೨೬ ಗ್ರಾಮಗಳ ಪ್ರಾಥಮಿಕ ಶಾಲೆಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ಶಾಲೆಗಳಲ್ಲಿ ಬಿಸಿಯೂಟವು ಜಾರಿಗೆ ಬಂದ ನಂತರ ಶಾಲಾ ದಾಖಲಾತಿಯು ಸರಾಸರಿ ಶೇಕಡ ೨೫ ರಷ್ಟು ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಕೆಲವು ಜನವಸತಿ ನೆಲೆಗಳಲ್ಲಿ ಇರುವ ಪರ್ಯಾಯ ಶಾಲೆಗಳಲ್ಲಿ ಶಾಲಾ ದಾಖಲಾತಿಯು ಬಿಸಯೂಟ ಜಾರಿಗೆ ಬಂದ ನಂತರ ಸ್ವಲ್ಪ ಹೆಚ್ಚು ಕಡಿಮೆ ದ್ವಿಗುಣವಾಗಿದೆ (ಡ್ರೀಜ್ ಅಂಡ್ ವಿವೇಕ್ ೨೦೦೨, ಭಾನುಪ್ರಿಯಾ ರಾವ್, ೨೦೦೩, ಸರಸ್ವತಿ ರಾವ್, ೨೦೦೩, ರವಿ, ೨೦೦೩, ಬಾರಧ್ವಾಜ್. ಆರ್.ಕೆ. ೨೦೦೩). ಈ ಎಲ್ಲಾ ಅಧ್ಯಯನಗಳು ಅನೌಪಚಾರಿಕ ಸಮೀಕ್ಷಾ ವಿಧಾನವನ್ನು ಒಳಗೊಂಡಿವೆ ಎಂದು ಹೇಳುವ ಮೂಲಕ, ಅವುಗಳಲ್ಲಿ ಕಂಡು ಬರುವ ಎಲ್ಲಾ ಅಂಶಗಳು ತಾತ್ಕಾಲಿಕ ಮತ್ತು ಪೂರ್ವಭಾವಿ ಎಂದು ಹೇಳಬಹುದು. ಆದರೆ, ಶಾಲೆಗಳಿಗೆ ಮಕ್ಕಳು ಹಾಜರಾಗುತ್ತಿರುವ ಭೌತಿಕ ದಾಖಲೆಯು ಬಿಸಿಯೂಟದಿಂದ ಶಾಲಾ ದಾಖಲಾತಿ ಮತ್ತು ಹಾಜರಾತಿ, ಅದರಲ್ಲಿಯೂ ವಿಶೇಷವಾಗಿ ಹೆಣ್ಣುಮಕ್ಕಳ ಶಾಲಾ ದಾಖಲಾತಿಯು ಪರಿಣಾಮಕಾರಿಯಾಗಿ ಹೆಚ್ಚಳಗೊಂಡಿದೆ ಎಂಬುದನ್ನು ತಿಳಿಸುತ್ತವೆ (ಸೀತಿ, ೨೦೦೩)

ಜೀನ್ ಡ್ರೀಜ್ (೨೦೦೩), ಅವರ ನೇತೃತ್ವದಲ್ಲಿ ಸೆಂಟರ್ ಫಾರ್ ಈಕ್ವಿಟ್ ಸ್ಟಡೀಸ್ (ಸಿ.ಇ.ಎಸ್.) ಅವರು ನಡೆಸಿರುವ ಸಮೀಕ್ಷೆಯಲ್ಲಿಯೂ ಬಿಸಿಯೂಟ ಜಾರಿಗೆ ಬಂದ ನಂತರ ಶಾಲಾ ದಾಖಲಾತಿಯು ಹೆಚ್ಚಳವಾಗಿರುವುದನ್ನು ಗುರುತಿಸಲಾಗಿದೆ. ಇದನ್ನು ಜುಲೈ ೨೦೦೨ರ ಶಾಲಾ ದಾಖಲಾತಿಯನ್ನು ಜುಲೈ ೨೦೦೨ರ ದಾಖಲಾತಿಯ ಜೊತೆಗೆ ಹೋಲಿಕೆ ಮಾಡುವ ಮೂಲಕ ಕಂಡುಕೊಳ್ಳಲಾಗಿದೆ. ಅಲ್ಲದೆ ಶಾಲಾ ಬಿಸಿಯೂಟ ಜಾರಿಗೆ ಬರುವುದಕ್ಕೆ ಮೊದಲಿನ ಶಾಲಾ ದಾಖಲಾತಿ ಮತ್ತು ಹಾಜರಾತಿಯನ್ನು ಪರಿಗಣಿಸಲಾಗಿದೆ. ಒಟ್ಟಾರೆ ಈ ಅಧ್ಯಯನವು ಸಮೀಕ್ಷೆ ನಡೆಸಿರುವ ಒಟ್ಟು ೮೧ ಶಾಲೆಗಳ ಒಂದನೆಯ ತರಗತಿಯ ದಾಖಲಾತಿಯು ಜುಲೈ ೨೦೦೧ ರಿಂದ ಜುಲೈ ೨೦೦೨ರ ನಡುವಿನ ೧ ವರ್ಷದಲ್ಲಿ ಶೇಕಡ ೧೪.೫ಕ್ಕೆ ಹೆಚ್ಚಳವಾಗಿದೆ. ಪ್ರಮುಖ ಅಂಶವೆಂದರೆ ಹೆಣ್ಣುಮಕ್ಕಳ ದಾಖಲಾತಿಯು ಶೇಕಡ ೧೯ರ ಪ್ರಮಾಣದಲ್ಲಿ ಬೆಳವಣಿಗೆಯಾಗಿರುವುದನ್ನ ಗುರುತಿಸಿದೆ.

ಸಿ.ಇ.ಎಸ್. ಸಮೀಕ್ಷೆಯು ರಾಜಸ್ಥಾನದ ೨೭, ಛತ್ತೀಸಗಢದ ೨೭ ಮತ್ತು ಕರ್ನಾಟಕದ ೨೭ ಪ್ರಾಥಮಿಕ ಶಾಲೆಗಳನ್ನು ಒಳಗೊಂಡಿದೆ. ಈ ಸಮೀಕ್ಷೆಯ ಪ್ರಕಾರ ೧ನೆಯ ತರಗತಿಗೆ ಹೆಣ್ಣುಮಕ್ಕಳ ದಾಖಲಾತಿಯ ಪ್ರಮಾಣವು ಛತ್ತೀಸಗಢದಲ್ಲಿ ಶೇಕಡ ೧೭ ಮತ್ತು ರಾಜಸ್ಥಾನದಲ್ಲಿ ಶೇಕಡ ೨೯ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಗಂಡು ಮಕ್ಕಳ ದಾಖಲಾತಿಯ ಪ್ರಮಾಣವು ಕ್ರಮವಾಗಿ ಶೇಕಡ ೫ ಮತ್ತು ಶೇಕಡ ೭ರಷ್ಟು ಬೆಳವಣಿಗೆ ಕಂಡಿದೆ. ಇದು ಹೆಣ್ಣುಮಕ್ಕಳ ದಾಖಲಾತಿಗೆ ಹೋಲಿಸಿದರೆ ಬಹಳ ಕಡಿಮೆ ಎನ್ನಿಸಿದರೂ ಆಶಾದಾಯಕವಾಗಿದೆ. ಹೀಗೆ ಲಿಂಗಾಧಾರಿತ ವಿಭಿನ್ನ ಬೆಳವಣಿಗೆಯ ಪ್ರಮಾಣ ಕುರಿತು ಈಗಾಗಲೇ ನಡೆದಿರುವ ಅಧ್ಯಯನಗಳಿಂದ ಸ್ಪಷ್ಟವಾಗುವ ಅಂಶವೆಂದರೆ ಶಾಲಾ ಪ್ರೋತ್ಸಾಹದಾಯಕ ಕಾರ್ಯಕ್ರಮಗಳು ನಿರ್ದಿಷ್ಟವಾಗಿ ಹೆಣ್ಣುಮಕ್ಕಳ ಶಿಕ್ಷಣದ ಪ್ರಗತಿಗೆ ಹೆಚ್ಚು ಪ್ರತಿಕ್ರಿಯಿಸಿದೆ (ಪ್ರೋಬ್, ೧೯೯೯, ಡ್ರೀಜ್ ಅಂಡ್ ಕಿಂಗ್, ೨೦೦೧, ಸೀತಿ, ೨೦೦೩). ಆದರೆ ಇದಕ್ಕೆ ವ್ಯತಿರಿಕ್ತಿವಾದ ಬೆಳವಣಿಗೆಯನ್ನು ಸಹ ಸಿ.ಇ.ಎಸ್. ಅಧ್ಯಯನ ಗುರುತಿಸಿದೆ. ಕರ್ನಾಟಕದಲ್ಲಿ ೨೦೦೧-೦೨ ಮತ್ತು ೨೦೦೨-೦೩ ರ ಅವಧಿಯಲ್ಲಿ ಹೆಣ್ಣುಮಕ್ಕಳ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣವು ಶೇಕಡ ೧ರ ದರದಲ್ಲಿ ಬೆಳವಣಿಗೆಯಾಗಿದ್ದರೆ, ಗಂಡು ಮಕ್ಕಳ ಶಾಲಾ ದಾಖಲಾತಿಯ ಬೆಳವಣಿಗೆ ಪ್ರಮಾಣವು ಶೇಕಡ ೨೮ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಒಟ್ಟಾರೆ ಈ ಅವಧಿಯಲ್ಲಿ ಕರ್ನಾಟಕದಲ್ಲಿ ಮಸೀಕ್ಷೆ ನಡೆಸಿದ ೨೭ ಶಾಲೆಗಳ ದಾಖಲಾತಿ ಪ್ರಮಾಣವು ಸರಾಸರಿ ಶೇಕಡ ೧೪ರಷ್ಟಾಗಿದೆ (ಡ್ರೀಜ್ ಮತ್ತು ಗೋಯಲ್, ೨೦೦೩). ಇದುವರೆಗೆ ನಡೆದಿರುವ ಸಂಶೋಧನೆಗಳು ಶಾಲಾ ಬಿಸಿಯೂಟದಿಂದ ಗ್ರಾಮೀಣ ಪ್ರೇದಶದಲ್ಲಿ ಮಕ್ಕಳ ಶಾಲಾ ಭಾಗವಹಿಸುವಿಕೆಯು ಹೆಚ್ಚಳಗೊಂಡಿರುವುದನ್ನು ಗುರುತಿಸಿವೆ. ವಿಶೇಷವಾಗಿ ಬಡತನದ ರೇಖೆಗಿಂತ ಕೆಳಗಿರುವ ಕುಟುಂಬಗಳ ಮಕ್ಕಳು, ಅದರಲ್ಲಿಯೂ ಹೆಣ್ಣುಮಕ್ಕಳ ಶಾಲಾ ದಾಖಲಾತಿಯು ಹೆಚ್ಚಳವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿವೆ.

೬.೪. ಬಿಸಿಯೂಟ ದಾಖಲಾತಿ

ನಾವು ಅಧ್ಯಯನ ನಡೆಸಿದ ನಾಲ್ಕು ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ಬರುವ ೧೮ ಗ್ರಾಮಗಳಲ್ಲಿನ ೨೦ ಶಾಲೆಗಳ ದಾಖಲಾತಿ ಬೆಳವಣಿಗೆಯ ಪ್ರಮಾಣವನ್ನು, ಗ್ರಾಮ ಪಂಚಾಯತಿವಾರು ಮತ್ತು ಶಾಲಾವಾರು ವಿಶ್ಲೇಷಣೆ ಮಾಡಬಹುದು. ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯತಿಯಲ್ಲಿ ೧೯೯೫-೯೬ರಿಂದ ೨೦೦೩-೦೪ರ ವರೆಗೆ ಒಟ್ಟು ಸರಾಸರಿ ಶಾಲಾ ದಾಖಲಾತಿಯ ಬೆಳವಣಿಗೆ ಪ್ರಮಾಣವು ಶೇಕಡ ೨೬.೭೯ರಷ್ಟಿದೆ. ಇದರಲ್ಲಿ ಬಾಲಕ ದಾಖಲಾತಿಯ ಪ್ರಮಾಣ ಶೇಕಡ ೭.೮೮ ಇದ್ದರೆ, ಬಾಲಕಿಯರ ದಾಖಲಾತಿಯು ಶೇಕಡ ೫೩.೬೬ ಪ್ರಮಾಣದಲ್ಲಿ ಬೆಳವಣಿಗೆ ಕಂಡಿದೆ. ಇದೆ ಅವಧಿಯಲ್ಲಿ ಯರೇಹಂಚಿನಾಳ ಗ್ರಾಮ ಪಂಚಾಯತಿಯ ಒಟ್ಟು ಸರಾಸರಿ ಶಾಲಾ ದಾಖಲಾತಿಯು ಶೇಕಡ ೧೧.೭೦ರಷ್ಟಿದೆ. ಇದರಲ್ಲಿ ಬಾಲಕ ದಾಖಲಾತಿಯು ಶೇಕಡ ೭.೮೮ ಪ್ರಮಾಣದಲ್ಲಿ, ಬಾಲಕಿಯರ ದಾಖಲಾತಿಯು ಶೇಕಡ ೧೬.೫೩ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಕಬ್ಬರಗಿ ಗ್ರಾಮ ಪಂಚಾಯತಿಯಲ್ಲಿ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೪೯.೫೨ ಆಗಿದ್ದು, ಇದರಲ್ಲಿ ಬಾಲಕರ ದಾಖಲಾತಿಯು ಶೇಕಡ ೨೮.೪೬ ಮತ್ತು ಬಾಲಕಿಯರ ದಾಖಲಾತಿಯು ಶೇಕಡ ೮೭.೮೭ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಇದು ಅಧ್ಯಯನಕ್ಕೆ ಒಳಪಡಿಸಿದ ಗ್ರಾಮ ಪಂಚಾಯತಿಗಳಲ್ಲಿಯೇ ಅತ್ಯಂತ ಅಧಿಕ ಪ್ರಮಾಣದ ಬೆಳವಣಿಗೆ ಯಾಗಿದೆ. ಇನ್ನೂ ಕೃಷ್ಣಾನಗರ ಗ್ರಾಮ ಪಂಚಾಯತಿಯ ಒಟ್ಟು ಸರಾಸರಿ ಶಾಲಾ ದಾಖಲಾತಿಯು ಶೇಕಡ ೧೪.೬೮ರಷ್ಟಿದ್ದರೆ, ಬಾಲಕರ ದಾಖಲಾತಿಯ ಪ್ರಮಾಣವು ಶೇಕಡ ೩೩.೩೩ರಲ್ಲಿ ಬೆಳವಣಿಗೆಯಾಗಿದೆ. ಆದರೆ ಬಾಲಕಿಯರ ಶಾಲಾ ದಾಖಲಾತಿಯು ಶೇಕಡ -೧.೬೭ರಷ್ಟು ನಕಾರಾತ್ಮಕವಾಗಿದೆ.

ನಮ್ಮ ಅಧ್ಯಯನದ ಪ್ರಮುಖ ಉದ್ದೇಶ ಬಿಸಿಯೂಟ ಕಾರ್ಯಕ್ರಮದಿಂದ ಶಾಲಾ ದಾಖಲಾತಿಯು ಯಾವ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾ ದಾಖಲಾತಿಯ ಬೆಳವಣಿಗೆಯ ಪ್ರಮಾಣವನ್ನು ೧೯೯೫-೯೬ ಶೈಕ್ಷಣಿಕ ವರ್ಷದಿಂದ ೨೦೦೦-೨೦೦೧ನೆಯ ಶೈಕ್ಷಣಿಕ ವರ್ಷದವರೆಗಿನ ಸರಾಸರಿ ಶಾಲಾ ದಾಖಲಾತಿಯ ಶೇಕಡವಾರು ಬೆಳವಣಿಗೆಯ ಪ್ರಮಾಣವನ್ನು ಮೊದಲಿಗೆ ಕಂಡುಕೊಳ್ಳಲಾಗಿದೆ. ನಂತರ ೨೦೦೦-೨೦೦೧ನೆಯ ಶೈಕ್ಷಣಿಕ ವರ್ಷದಿಂದ ೨೦೦೩-೨೦೦೪ನೆಯ ಶೈಕ್ಷಣಿಕ ವರ್ಷಗಳ ನಡುವೆ ಶಾಲಾ ದಾಖಲಾತಿಯು ಯಾವ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ ಎಂಬುದನ್ನು ಕಂಡುಕೊಳ್ಳಲಾಗಿದೆ. ಈ ವಿಧಾನದಿಂದ ಬಿಸಿಯೂಟ ಕಾರ್ಯಕ್ರಮ ಆಚರಣೆಗೆ ಬಂದನಂತರ ಮತ್ತು ಅದಕ್ಕಿಂತ ಮೊದಲು ಯಾವ ಪ್ರಮಾಣದಲ್ಲಿ ಶಾಲಾ ದಾಖಲಾತಿಯು ಬೆಳವಣಿಗೆಯಾಗಿದೆ ಎಂಬುದನ್ನು ಕಂಡುಕೊಳ್ಳಬಹುದು. ಹೀಗಾಗಿ ಶಾಲಾ ದಾಖಲಾತಿಯನ್ನು ಗ್ರಾಮ ಪಂಚಾಯತಿವಾರು ಈ ಕೆಳಗಿನಂತೆ ವಿವರಿಸಲಾಗಿದೆ.

ಬೂದಿಹಾಳ ಎಸ್.ಕೆ. ಗ್ರಾಮ ಪಂಚಾಯತಿಯಲ್ಲಿ ಬಿಸಿಯೂಟ ಕಾರ್ಯಕ್ರಮ ಆಚರಣೆಗೆ ಬರುವುದಕ್ಕೆ ಮೊದಲು, ಅಂದರೆ ೧೯೯೫-೯೬ರ ಶೈಕ್ಷಣಿಕ ವರ್ಷದಿಂದ ೨೦೦೦-೦೧ನೆಯ ಶೈಕ್ಷಣಿಕ ವರ್ಷಗಳ ನಡುವೆ ಒಟ್ಟು ಶಾಲಾ ದಾಖಲಾತಿಯು ಸರಾಸರಿ ಶೇಕಡ ೯.೮೮ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಇದರಲ್ಲಿ ಬಾಲಕರ ದಾಖಲಾತಿಯು ಶೇಕಡ -೮.೧೫ರಷ್ಟು ನಕಾರಾತ್ಮಕವಾಗಿದ್ದರೆ, ಬಾಲಕಿಯರ ದಾಖಲಾತಿಯು ಶೇಕಡ ೩೫.೫೨ರ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಇದೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೦೦-೦೧ನೆಯ ಶೈಕ್ಷಣಿಕ ವರ್ಷದಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷಗಳ ನಡುವಿನ ಸರಾಸರಿ ಒಟ್ಟು ಶಾಲಾ ದಾಖಲಾತಿಯು ಶೇಕಡ ೧೫.೩೮ ಬೆಳವಣಿಗೆಯಾಗಿದೆ. ಇದು ೧೯೯೫-೯೬ರ ಶೈಕ್ಷಣಿಕ ವರ್ಷದಿಂದ ೨೦೦೦-೦೧ನೇಯ ಶೈಕ್ಷಣಿಕ ವರ್ಷಗಳ ನಡುವಿನ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣಕ್ಕಿಂತ ಶೇಕಡ ೫ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಬಾಲಕರ ಶಾಲಾ ದಾಖಲಾತಿ ಬೆಳವಣಿಗೆಯ ಪ್ರಮಾಣವು ಮೊದಲಿಗಿಂತ ಶೇಕಡ ೯ರಷ್ಟು ಹೆಚ್ಚಾಗಿದ್ದರೆ, ಬಾಲಕಿಯರ ಶಾಲಾ ದಾಖಲಾತಿ ಬೆಳವಣಿಗೆಯ ಪ್ರಮಾಣವು ಮೊದಲಿನದಕ್ಕಿಂತ ಶೇಕಡ ೩೦ರಷ್ಟು ಕಡಿಮೆಯಾಗಿದೆ.

ಯರೇಹಂಚಿನಾಳ ಗ್ರಾಮ ಪಂಚಾಯತಿಯಲ್ಲಿ ೧೯೯೫-೯೬ರ ಶೈಕ್ಷಣಿಕ ವರ್ಷದಿಂದ ೨೦೦೦-೦೧ನೆಯ ಶೈಕ್ಷಣಿಕ ವರ್ಷಗಳ ನಡುವೆ ಶಾಲಾ ದಾಖಲಾತಿಯ ಒಟ್ಟು ಸರಾಸರಿ ಬೆಳವಣಿಗೆಯು ಶೇಕಡ ೨.೭೭ರ ಪ್ರಮಾಣದಲ್ಲಿದೆ. ಇದರಲ್ಲಿ ಬಾಲಕರ ಶಾಲಾ ದಾಖಲಾತಿಯ ಪ್ರಮಾಣ ಶೇಕಡ ೬.೭೮ರಷ್ಟಿದ್ದರೆ, ಬಾಲಕಿಯರ ಶಾಲಾ ದಾಖಲಾತಿಯ ಪ್ರಮಾಣವು ಶೇಕಡ – ೨.೩೩ರಷ್ಟು ನಕಾರಾತ್ಮಕವಾಗಿದೆ. ೨೦೦೦-೦೧ನೆಯ ಶೈಕ್ಷಣಿಕ ವರ್ಷದಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷಗಳ ನಡುವೆ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆಯ ಪ್ರಮಾಣವು ಶೇಕಡ ೮.೯೬ರಷ್ಟಿದ್ದು ಇದು ೧೯೯೫-೯೬ರಿಂದ ೨೦೦೦-೦೧ರ ನಡುವಿನ ಶೈಕ್ಷಣಿಕ ವರ್ಷಗಳಲ್ಲಿ ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೬ ರಷ್ಟು ಹೆಚ್ಚಾಗಿದೆ. ಈ ಅವಧಿಯಲ್ಲಿಯೇ ಬಾಲಕರ ಶಾಲಾ ದಾಖಲಾತಿ ಬೆಳವಣಿಗೆಯ ಪ್ರಮಾಣವು ಶೇಕಡ ೫ರಷ್ಟು ಕಡಿಮೆಯಾದರೆ, ಬಾಲಕಿಯರ ಶಾಲಾ ದಾಖಲಾತಿಯು ಶೇಕಡ ೨೦ರ ಪ್ರಮಾಣದಲ್ಲಿ ಹೆಚ್ಚಾಗಿದೆ.

ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಲೆಗಳಲ್ಲಿ ೧೯೯೫-೯೬ರ ಶೈಕ್ಷಣಿಕ ವರ್ಷದಿಂದ ೨೦೦೦-೦೧ನೆಯ ಶೈಕ್ಷಣಿಕ ವರ್ಷಗಳ ನಡುವಿನ ಒಟ್ಟು ಸರಾಸರಿ ಶಾಲಾ ದಾಖಲಾತಿಯ ಬೆಳವಣಿಗೆಯು ಶೇಕಡ ೧೬.೮೩ರ ಪ್ರಮಾಣದಲ್ಲಿ ಇದೆ. ಇದರಲ್ಲಿ ಬಾಲಕರ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೧೫.೧೫ರಷ್ಟಿದ್ದರೆ, ಬಾಲಕಿಯರ ದಾಖಲಾತಿ ಬೆಳವಣಿಗೆ ಪ್ರಮಾಣವು ಶೇಕಡ ೧೯.೫೮ರಷ್ಟು ಇದೆ. ಕಬ್ಬರಗಿ ಗ್ರಾಮ ಪಂಚಾಯತಿಯಲ್ಲಿಯೇ ೨೦೦೦-೦೧ನೆಯ ಶೈಕ್ಷಣಿಕ ವರ್ಷದಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷದ ನಡುವೆ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆಯು ಶೇಕಡ ೧೦.೧೦ ರಷ್ಟಾಗಿದೆ. ಇದು ಮೊದಲಿಗಿಂತ ಶೇಕಡ ೫ರಷ್ಟು ಕಡಿಮೆಯಾಗಿದೆ. ಇದೇ ಅವಧಿಯಲ್ಲಿ ಬಾಲಕರ ದಾಖಲಾತಿಯು ಶೇಕಡ ೧೧.೫೫ರಷ್ಟು ಇದ್ದು ಮೊದಲಿನದಕ್ಕಿಂತ ಶೇಕಡ ೩ರಷ್ಟು ಕಡಿಮೆಯಾಗಿದೆ. ಇನ್ನೂ ಬಾಲಕಿಯರ ಶಾಲಾ ದಾಖಲಾತಿಯು ಶೇಕಡ ೮.೭೭ರಷ್ಟಿದ್ದು ಇದು ಕೂಡ ೧೯೯೫-೯೬ರಿಂದ ೨೦೦೦-೦೧ನೆಯ ಶೈಕ್ಷಣಿಕ ವರ್ಷಗಳ ನಡುವಿನ ದಾಖಲಾತಿಗಿಂತ ಶೇಕಡ ೧೦ರಷ್ಟು ಕಡಿಮೆಯಾಗಿರುತ್ತದೆ. ಕಬ್ಬರಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೦೦-೦೧ರಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷಗಳ ನಡುವೆ ಶಾಲಾ ದಾಖಲಾತಿಯಲ್ಲಿ ಮೊದಲನೆಯದಕ್ಕಿಂತಹೆಚ್ಚಿನ ಬೆಳವಣಿಗೆಯಾಗದಿರುವುದು ಇಲ್ಲಿ ಕಂಡುಬರುತ್ತದೆ. ಹೀಗೆ ಶಾಲಾ ದಾಖಲಾತಿ ಬೆಳವಣಿಗೆಯು ನಕಾರಾತ್ಮಕವಾಗಿರುವುದಕ್ಕೆ ಅನೇಕ ಕಾರಣಗಳಿವೆ. ಪ್ರಸ್ತುತ ಸಂದರ್ಭದಲ್ಲಿ ನಾವು ಕಂಡುಕೊಂಡಿರುವ ಪ್ರಮುಖ ಕಾರಣ (೨೦೦೧, ೨೦೦೨, ೨೦೦೩) ಕಳೆದ ಮೂರು ವರ್ಷಗಳಿಂದ ನಿರಂತರವಾದ ಬರದಿಂದ ಈ ಭಾಗದ ಜನರು ದುಡಿಮೆಯನ್ನು ಅರಸಿ ಬೇರೆ ಭಾಗಗಳಿಗೆ ಗುಳೆ ಹೋಗುತ್ತಿರುವುದು. ಈ ಕುರಿತು ಇನ್ನು ಹೆಚ್ಚು ಅಧ್ಯಯನಗಳು ನಡೆಯಬೇಕಾದ ಅಗತ್ಯವಿದೆ.

ಕೃಷ್ಣನಗರ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ೧೯೯೫-೯೬ನೆಯ ಶೈಕ್ಷಣಿಕ ವರ್ಷದಿಂದ ೨೦೦೦-೦೧ನೆಯ ಶೈಕ್ಷಣಿಕ ವರ್ಷದ ನಡುವಿನ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ ೧೫.೧೭ರಷ್ಟಿದೆ. ಇದರಲ್ಲಿ ಬಾಲಕರ, ದಾಖಲಾತಿಯ ಬೆಳವಣಿಗೆ ಪ್ರಮಾಣ ಶೇಕಡ೩೩.೩೩ರಷ್ಟಿದ್ದರೆ, ಬಾಲಕಿಯರ ದಾಖಲಾತಿ ಬೆಳವಣಿಗೆಯ ಪ್ರಮಾಣ ಶೇಕಡ -೧೪.೧೫ರಷ್ಟು ನಕಾರಾತ್ಮಕವಾಗಿದೆ. ಇದೇ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ೨೦೦೦-೨೦೦೧ನೆಯ ಶೈಕ್ಷಣಿಕ ವರ್ಷದಿಂದ ೨೦೦೩-೦೪ನೆಯ ಶೈಕ್ಷಣಿಕ ವರ್ಷದ ನಡುವಿನ ಒಟ್ಟು ಸರಾಸರಿ ಶಾಲಾ ದಾಖಲಾತಿ ಬೆಳವಣಿಗೆ ಪ್ರಮಾಣ ಶೇಕಡ -೦.೪೩ರಷ್ಟು ನಕಾರಾತ್ಮಕವಾಗಿದೆ. ಇದರಲ್ಲಿ ಬಾಲಕರ ಶಾಲಾ ದಾಖಲಾತಿಯಲ್ಲಿ ಯಾವುದೇ ಬೆಳವಣಿಗೆಯಾಗದೆ ಇದ್ದರೆ, ಬಾಲಕಿಯರ ಶಾಲಾ ದಾಖಲಾತಿಯಲ್ಲಿ ಶೇಕಡ ೧೫ ಪ್ರಮಾಣದಲ್ಲಿ ಬೆಳವಣಿಗೆಯಾಗಿದೆ. ಇದು ಮೊದಲಿಗಿಂತ ಶೇಕಡ ೩೦ರಷ್ಟು ಹೆಚ್ಚಾಗಿರುವುದು ವಿಶೇಷ.

 


[1] ಸುಪ್ರೀಕೋರ್ಟ್‌ನ ಈ ಆರ‍್ಡರ್ ಬರಲು ಕಾರಣ ಪಬ್ಲಿಕ್ ಇಂಟರೆಸ್ಟ್ ಲಿಟಿಗೇಶನ್ ಆನ್ ದ ರೈಟ್ ಪುಡ್. ಇನಿಷಿಯೇಟೆಡ್ ಬೈ ರಿಟ್ ಪ್ರಿಟಿಶಿಯನ್ ಸಬ್‌ಮಿಟೆಡ್ ಟು ದಿ ಸುಪ್ರೀಂಕೋರ್ಟ್ ಬೈದ ಪೀಷಲ್ಸ್ ಯುನಿಯನ್ ಫಾರ್ ಸಿವಿಲ್ ಲಿಬರ್ಟೀಸ್, ರಾಜಸ್ಥಾನ ದ ಟೆಕ್ಸ್ಟ್ ಆಫ್‌ದ ಆರ‍್ಡರ್ ಹೀಗಿದೆ : ವೀ ಡೈರಕ್ಟ್‌ದ ಸ್ಟೇಟ್ ಗೌರ‍್ನಮೆಂಟ್ಸ್ /ಯುನಿಯನ್ ಟೆರಿಟೋರೀಸ್ ಟು ಇಂಪ್ಲಿಮೆಂಟ್ ದ ಮಿಡ್ ಡೇ ಮೀಲ್ ಸ್ಕೀಮ್ ಬೈ ಪ್ರೋವೈಡಿಂಗ್ ಎವರಿ ಚೈಲ್ಡ್, ಬೈ ಎವರಿ ಗೌರ‍್ನಮೆಂಟ್ ಅಂಡ್ ಗೌರ‍್ನಮೆಂಟ್ ಅಸಿಸ್ಟೆಡ್ ಪ್ರೈಮರಿ ಸ್ಕೂಲ್ ವಿಥ್ ಎ ಪ್ರೀಪೇರ‍್ಡ್ ಮಿಡ್ ಡೇ ಮೀಲ್ ವಿಥ್ ಎ ಮಿನಿಮಮ್ ಕಾಂಟ್ಯಾಕ್ಟ್ ಆಫ್ ೩೦೦ ಕ್ಯಾಲೋರೀಸ್ ಅಂಡ್ ೮-೧೨ ಗ್ರಾಂಸ್ ಆಫ್ ಪ್ರೋಟೀನ್ ಯಿಚ್ ಡೇ ಆಫ್ ಸ್ಕೂಲ್, ಫಾರ್ ಎ ಮಿನಿಮಮ್ ಆಫ್ ೨೦೦ ಡೇಸ್. ದೋಸ್ ಗೌರ‍್ನಮೆಂಟ್ಸ್ ಪ್ರೋವೈಡಿಂಗ್ ಡ್ರೈರೇಶನ್ಸ್ ಇನ್ಸ್‌ಟೆಡ್ ಆಫ್ ಕುಕ್‌ಡೆ ಮೀಲ್ಸ್ ವಿಥಿನ್ ಥ್ರೀ ಮಂತ್ಸ್. ಸ್ಟಾರ್ಟ್ ಪ್ರೋವೈಂಡಿಂಗ್ ಕುಕ್‌ಡ್ ಮೀಲ್ಸ್ ಇನ್ ಆಲ್ ಗೌರ‍್ನಮೆಂಟ್ಸ್ ಅಂಡ್ ಗೌರ‍್ನಮೆಂಟ್ಸ್ ಅಸಿಸ್ಟೆಡ್ ಸ್ಕೂಲ್ ಇನ್ ಅಲ್ ದ ಡಿಸ್ಟ್ರಿಕ್ಟ್ಸ್ ಆಫ್ ದ ಸ್ಟೇಟ್ (ಇನ್ ಆರ‍್ಡರ್ ಆಫ್ ಪಾರ್ಟಿ) ಅಂಡ್ ವಿಥಿನ್ ಎ ಫರ್‌ದರ್ ಫೀರಿಯಡ್ ಆಫ್ ತ್ರೀ ಮಂತ್ಸ್ ಎಕ್ಸಟೆಂಡ್ ದ ಪ್ರಾವಿಜನ್ ಆಫ್ ಕುಕ್‌ಡ್ ಮೀಲ್ಸ್ ಟು ದ ರೀಮೈನಿಂಗ್ ಷಾರ್ಟ್ಸ್ ಆಫ್ ದ ಸ್ಟೇಟ್.

[2] ಇತ್ತೀಚೆಗೆ ಕೇಂದ್ರ ಮತ್ತು ಕರ್ನಾಟಕ ರಾಜ್ಯ ಸರ್ಕಾರವು ಬಿಸಿಯೂಟ ಕಾರ್ಯಕ್ರಮವನ್ನು ಪ್ರೌಢಶಾಲೆ (೧೦ನೇ ತರಗತಿವರೆಗೆ ನವಂಬರ್‌ನಿಂದ)ಯ ಹಂತದವರೆಗೂ ಜಾರಿಗೊಳಿಸಲು ನಿರ್ಧರಿಸಿದೆ.