ಎಂಟು ವರ್ಷದ ಹುಡುಗ.  ಪ್ರಾಥಮಿಕ ಶಾಲೆಯ ಶಿಕ್ಷಣ ಮುಗಿದಿತ್ತು.  ಮುಂದಿನ ವಿದ್ಯಾಭ್ಯಾಸ ಕಲ್ಕತ್ತೆಯಲ್ಲಿ ನಡೆಯಲಿ ಎಂದು ತಂದೆ ತೀರ್ಮಾನಿಸಿದರು. ತಂದೆ-ಮಗ ಕಲ್ಕತ್ತೆಗೆ ನಡೆದುಕೊಂಡು ಹೊರಟರು.

ಹುಡುಗನಿಗೆ ಬಂಗಾಳಿ ಭಾಷೆಯ ಅಂಕಿಗಳು ಬರುತ್ತಿದ್ದವು. ಇಂಗ್ಲಿಷ್ ಅಂಕಿಗಳು ಬರುತ್ತಿರಲಿಲ್ಲ. ದಾರಿಯಲ್ಲಿ ಮೈಲಿಕಲ್ಲುಗಳಿದ್ದವು. ’ಇವು ಏನು?’ ಎಂದು ತಂದೆಯನ್ನು ಕೇಳಿದ. ’ಅವು ದೂರವನ್ನು ತಿಳಿಸುವ ಕಲ್ಲುಗಳು”ಎಂದು ತಂದೆ, ವಿವರಿಸಿದರು.

ಹುಡುಗ ಅಂಕಿಗಳನ್ನು ನೋಡುತ್ತ ನಡೆದ. ಹತ್ತು ಕಲ್ಲುಗಳನ್ನು ದಾಟುವ ಹೊತ್ತಿಗೆ ಒಂದರಿಂದ ಹತ್ತರವರೆಗಿನ ಇಂಗ್ಲಿಷ್ ಅಂಕಿಗಳನ್ನು ತಾನೇ ಊಹಿಸಿ ಕಲಿತ. ತಂದೆ ಆಶ್ಚರ್ಯಪಟ್ಟರು, ಸಂತೋಷಪಟ್ಟರು.

ಈ ಹುಡುಗನೇ ಈಶ್ವರಚಂದ್ರ ವಿದ್ಯಾಸಾಗರ.

ಬಾಲ್ಯ – ವಿದ್ಯಾಭ್ಯಾಸ

ಬಂಗಾಳದ ಮಿಡ್ನಾಪುರ ಜಿಲ್ಲೆಯಲ್ಲಿ ಬೀರಸಿಂಗ ಎಂಬ ಸಣ್ಣ ಹಳ್ಳಿ. ಅಲ್ಲಿ ಠಾಕೂರದಾಸ್ ಬಂದೋಪಾಧ್ಯಾಯ ಮತ್ತು ಭಗವತೀದೇವಿ ಎಂಬ ಬಡ ದಂಪತಿಗಳಿದ್ದರು. ೧೮೨೦ರ ಸೆಪ್ಟಂಬರ್ ತಿಂಗಳ ಇಪ್ಪತ್ತಾರನೆಯ ದಿನಾಂಕ ಅವರ ಮೊದಲನೆಯ ಮಗನಾಗಿ ಈಶ್ವರಚಂದ್ರರು ಜನಿಸಿದರು. ಬಾಲ್ಯದಲ್ಲಿ ಬಹಳ ಬಡತನದಲ್ಲಿ ಬೆಳೆದರೂ ಈಶ್ವರಚಂದ್ರರು ಬುದ್ಧಿಶಕ್ತಿಯಲ್ಲಿ ಅತ್ಯಂತ ಶ್ರೀಮಂತರಾಗಿದ್ದರು. ಅವರ ಹೆಸರಿಗೆ ತಕ್ಕಂತೆ ಅವರದು ಕುಶಾಗ್ರ ಬುದ್ಧಿ, ಚಿನ್ನದಂಥ ಗುಣ, ನಡೆ-ನುಡಿ.

ಅವರ ತಾಯಿ ಭಗವತೀದೇವಿ ಸಕಲ ಸದ್ಗುಣ ಸಂಪನ್ನಳು. ಪರಮ ಕರುಣಾಮಯಿ. ಸಂಪ್ರದಾಯಸ್ಥ ಮನೆತನದಲ್ಲಿ ಹುಟ್ಟಿದ ಹೆಣ್ಣು. ಆದರೂ ಆಗಿನ ಸಮಾಜದಲ್ಲಿ ಬಲವಾಗಿ ಬೇರೂರಿದ್ದ  ಕುರುಡು ನಂಬಿಕೆಗಳನ್ನೂ ಮೂಢ ಸಂಪ್ರದಾಯಗಳನ್ನೂ ಸುಧಾರಿಸಬೇಕೆಂಬ ತೀವ್ರ ಆಕಾಂಕ್ಷೆಯಿತ್ತು ಆಕೆಗೆ. ಆಕೆಯಿಂದ ತುಂಬಾ ಪ್ರಭಾವಿತನಾದ ಆ ಹುಡುಗ ಮುಂದೆ ತಾನೊಬ್ಬ ದೊಡ್ಡ ಸಮಾಜ ಸುಧಾರಕನಾಗಬೇಕೆಂದು ಕನಸು ಕಾಣುತ್ತಿದ್ದ.

ಈಶ್ವರಚಂದ್ರರ ಬಾಲ್ಯ ವಿದ್ಯಾಭ್ಯಾಸ ಅವರ ಹಳ್ಳಿಯಲ್ಲೇ ನಡೆಯಿತು. ತಮ್ಮ ಮಗ ಕಲ್ಕತ್ತೆಯ ಹಿಂದೂ ಕಾಲೇಜಿನಲ್ಲಿ ಇಂಗ್ಲಿಷ್ ವಿದ್ಯಾಭ್ಯಾಸ ಮಾಡಿ ಪದವಿ ಪಡೆಯಬೇಕೆಂಬ ಮಹದಾಸೆ ಅವರ ತಂದೆಗೆ. ಆದರೆ ಅರವತ್ತು ಮೈಲಿ ದೂರವಿದ್ದ ಕಲ್ಕತ್ತೆಯಲ್ಲಿ ಮಗನನ್ನಿಟ್ಟು ಓದಿಸುವಷ್ಟು ಅನುಕೂಲವಿರಲಿಲ್ಲ. ಕಲ್ಕತ್ತೆಯಲ್ಲಿದ್ದ ಅವರ ಆಪ್ತ ಸ್ನೇಹಿತ ಭಗವತೀಚರಣರೆಂಬವರ ಆಶ್ರಯದಲ್ಲಿ ಈಶ್ವರಚಂದ್ರರು ಪ್ರೌಢವಿದ್ಯಾಭ್ಯಾಸವನ್ನು ಮುಂದುವರಿಸಿದರು. ಅವರಿಗೆ ಇಂಗ್ಲಿಷ್ ಕಲಿಯಬೇಕೆಂದು ಬಹಳ ಆಸೆಯಿತ್ತಾದರೂ ಹಿಂದೂ ಕಾಲೇಜಿನಲ್ಲಿ ಅವರಿಗೆ ಪ್ರವೇಶ ದೊರೆಯಲಿಲ್ಲ. ಅವರ ತಂದೆ ಮಗನನ್ನು ಸಂಸ್ಕೃತ ಕಾಲೇಜಿಗೆ ಸೇರಿಸಿದರು.

ಸಂಸ್ಕೃತ ಕಾಲೇಜಿನಲ್ಲಿ ಈಶ್ವರಚಂದ್ರರು ತಮ್ಮ ಪ್ರಾಧ್ಯಾಪಕರೆಲ್ಲರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ತಮ್ಮ ಕುಶಾಗ್ರ ಬುದ್ಧಿಯಿಂದಲೂ ಒಳ್ಳೆಯ ನಡೆ – ನುಡಿಗಳಿಂದಲೂ ಸಹಪಾಠಿಗಳ ಪ್ರೀತಿ, ಗೌರವಗಳನ್ನು ಸಂಪಾದಿಸಿಕೊಂಡಿದ್ದರು.

ಹನ್ನೆರಡು ವರ್ಷಗಳಷ್ಟು ದೀರ್ಘಕಾಲ ಅವರು ಸಂಸ್ಕೃತ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಪ್ರತಿ ವರ್ಷವೂ ಅವರು ಪ್ರಥಮ ದರ್ಜೆಯಲ್ಲಿ ಪ್ರಪ್ರಥಮರಾಗಿ ತೇರ್ಗಡೆಯಾಗುತ್ತಿದ್ದರು. ಅವರಿಗೆ ವಿದ್ಯಾರ್ಥಿವೇತನದ ಜೊತೆಗೆ ಅನೇಕ ಬಹುಮಾನಗಳೂ ದೊರೆಯುತ್ತಿದ್ದವು.

ವಿದ್ಯಾರ್ಥಿ ದೆಸೆಯಲ್ಲಿಯೇ ಅವರು ಕಾವ್ಯರಚನೆ ಮಾಡುವ ಪ್ರತಿಭೆಯನ್ನು ಪಡೆದಿದ್ದರು. ಸಂಸ್ಕೃತ ಗದ್ಯ ಮತ್ತು ಪದ್ಯ ಇವೆರಡರಲ್ಲೂ ಕೃತಿರಚನೆ ಮಾಡುವ ಸಾಮರ್ಥ್ಯ ಹೊಂದಿದ್ದ ಅವರಿಗೆ ಅನೇಕ ಪಾರಿತೋಷಕಗಳೂ ಲಭಿಸಿದ್ದವು.

ವಿದ್ಯಾಸಾಗರ

ವ್ಯಾಕರಣ, ಸಾಹಿತ್ಯ, ಅಲಂಕಾರ, ನ್ಯಾಯ, ವೇದಾಂತ, ಸ್ಮೃತಿ, ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳನ್ನು ಆಳವಾಗಿ ವ್ಯಾಸಂಗ ಮಾಡಿ ಈ ಎಲ್ಲ ಶಾಸ್ತ್ರಗಳಲ್ಲೂ ಅವರು ಪಾರಂಗತರಾಗಿದ್ದರು. ಇದೇ ಸಮಯದಲ್ಲಿ ಹಿಂದೂ ಕಾನೂನು ಸಮಿತಿಯವರು ನಡೆಸುತ್ತಿದ್ದ ಪರೀಕ್ಷೆಯಲ್ಲೂ ಉತ್ತೀರ್ಣರಾಗಿ, ’ಕಾನೂನು ಅಧಿಕಾರಿ’ಯ ಹುದ್ದೆಗೆ ಅಗತ್ಯವಾಗಿದ್ದ ಅರ್ಹತೆಯನ್ನೂ ಪಡೆದಿದ್ದರು. ಆಗ ನ್ಯಾಯಾಧೀಶರಾಗಿ ಕೆಲಸ ಮಾಡುತ್ತಿದ್ದ ಇಂಗ್ಲಿಷ್ ಅಧಿಕಾರಿಗಳಿಗೆ, ಹಿಂದೂ ಕಾನೂನಿನ ವಿಷಯದಲ್ಲಿ ಸಲಹೆ ನೀಡುವುದು ಈ ಹಿಂದೂ ಕಾನೂನು ಅಧಿಕಾರಿಯ ಕರ್ತವ್ಯವಾಗಿತ್ತು.

ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಅವರಿಗೆ ಸರ್ಕಾರದಿಂದ ಒಂದು ಅರ್ಹತಾಪತ್ರವೂ ಲಭಿಸಿತ್ತು. ಈ ಅರ್ಹತಾ ಪತ್ರದಲ್ಲಿ ಅವರ ಹೆಸರನ್ನು ’ಈಶ್ವರಚಂದ್ರ ವಿದ್ಯಾಸಾಗರ’ ಎಂದು ಬರೆದಿತ್ತು. ಅಂದಿನಿಂದ ಅವರ ಹೆಸರಿನ ಜೊತೆಗೆ ವಿದ್ಯಾಸಾಗರ ಎಂಬ ಬಿರುದೂ ಸೇರಿಕೊಂಡು ಅವರನ್ನು ಆ ಹೆಸರಿನಿಂದ ಕರೆಯುವುದು ರೂಢಿಯಲ್ಲಿ ಬಂತು.

ಅವರನ್ನು ತ್ರಿಪುರಾ ಜಿಲ್ಲೆಯಲ್ಲಿ ಹಿಂದೂ ಕಾನೂನು ಅಧಿಕಾರಿಯನ್ನಾಗಿ ನೇಮಕ ಮಾಡಿದ್ದ ಸರ್ಕಾರಿ ಆಜ್ಞೆಯೂ ಅವರ ಕೈಸೇರಿತ್ತು. ಅವರ ವಿದ್ಯಾಭ್ಯಾಸ ಇನ್ನೂ ಮುಗಿದಿರಲಿಲ್ಲವಾದ್ದರಿಂದ ಅವರು ಉದ್ಯೋಗವನ್ನು ನಿರಾಕರಿಸಿಬಿಟ್ಟರು.

ಸಂಸಾರದ ಹೊಣೆ

ಈಶ್ವರಚಂದ್ರರು ಇನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವರ ತಂದೆ ತಾಯಿಗಳು ದಿನಮಯಿದೇವಿ ಎಂಬ ಎಂಟು ವರ್ಷದ ಕನ್ಯೆಯೊಡನೆ ಅವರ ಮದುವೆಯನ್ನು ಮಾಡಿಬಿಟ್ಟರು. ಅವರ ವಿದ್ಯಾರ್ಜನೆಗೆ ವಿವಾಹ ಅಡ್ಡಿಯಾಗಲಿಲ್ಲ. ತಮ್ಮ ವಿದ್ಯಾಭ್ಯಾಸ ಮುಗಿಯುತ್ತಿದ್ದಂತೆಯೇ ಈಶ್ವರಚಂದ್ರರು ಸಂಸಾರದ ಜವಾಬ್ಧಾರಿಯನ್ನೂ ಹೊತ್ತರು. ಫೋರ್ಟ್ ವಿಲಿಯಂ ಕಾಲೇಜಿನಲ್ಲಿ ಮುಖ್ಯ ಪಂಡಿತರಾಗಿ ಐವತ್ತು ರೂಪಾಯಿ ಸಂಬಳದ ಮೇಲೆ ಕೆಲಸಕ್ಕೆ ಸೇರಿಕೊಂಡರು. ಇಷ್ಟು ಸ್ವಲ್ಪ ಹಣದಲ್ಲೇ ಅವರು ಗೃಹಕೃತ್ಯದ ಖರ್ಚನ್ನೂ ಸರಿದೂಗಿಸಬೇಕಾಗಿತ್ತು. ಅವರ ಮನೆಯಲ್ಲಿ ಅನೇಕ ಮಂದಿ ಬಡ ವಿದ್ಯಾರ್ಥಿಗಳೂ ಅನಾಥರೂ ಆಶ್ರಯ ಪಡೆದಿದ್ದರು. ಅವರ ಕೆಲಸವೇನೋ ಸಾಮಾನ್ಯ ಶಿಕ್ಷಕರದ್ದು. ಸಂಬಳವೂ ಕಡಮೆ, ಆದರೆ ಅವರ ವಿದ್ವತ್ತಿನ ಮತ್ತು ಸೌಜನ್ಯದ ಕೀರ್ತಿ ಎಲ್ಲೆಲ್ಲೂ ಹರಡಿತ್ತು.

ಮುಂದೆ ಅವರು ಸಂಸ್ಕೃತ ಕಾಲೇಜಿನಲ್ಲಿ ಕಾರ್ಯದರ್ಶಿಗಳಾದರು. ಅವರು ಅಸಾಧಾರಣ ಬುದ್ಧಿಶಕ್ತಿ ಮತ್ತು ಅಪಾರ ಪಾಂಡಿತ್ಯಗಳನ್ನು ಚೆನ್ನಾಗಿ ತಿಳಿದಿದ್ದ ಮುಖ್ಯಾಧಿಕಾರಿಗಳು ಅವರನ್ನು ಸಂಸ್ಕೃತ ಪ್ರಾಧ್ಯಾಪಕರನ್ನಾಗಿ ನೇಮಿಸಿದರು. ಈ ಉದ್ಯೋಗದಲ್ಲಿದ್ದಾಗ ಅವರು ಕಾಲೇಜಿನ ಆಡಳಿತ ವ್ಯವಸ್ಥೆಯನ್ನು ಸುಧಾರಿಸಲು ಒಂದು ವರದಿಯನ್ನು ತಯಾರಿಸಿ ಅಧಿಕಾರಿಗಳಿಗೆ ಒಪ್ಪಿಸಿದರು. ಅಧಿಕಾರಿಗಳು ಅದನ್ನು ಬಹಳ ಮೆಚ್ಚಿಕೊಂಡು ಈಶ್ವರಚಂದ್ರ ವಿದ್ಯಾಸಾಗರರನ್ನು ಪ್ರಿನ್ಸಿಪಾಲರನ್ನಾಗಿ ನೇಮಕ ಮಾಡಿದರು.

ಶಿಕ್ಷಣ ಕ್ಷೇತ್ರದಲ್ಲಿ

ಈಶ್ವರಚಂದ್ರರು ಬಾಲ್ಯದಿಂದಲೂ  ಶಿಸ್ತಿನಿಂದ ನಡೆದುಕೊಳ್ಳುವವರು. ತಮ್ಮ ಖಾಸಗೀ ಜೀವನದಲ್ಲೂ ಸಾರ್ವಜನಿಕ ಕ್ಷೇತ್ರದಲ್ಲೂ ಅವರು ಶಿಸ್ತಿಗೆ ಬಹಳ ಬೆಲೆ ಕೊಡುತ್ತಿದ್ದರು. ಕಾಲೇಜು ಶಿಕ್ಷಕರಲ್ಲಿ ಕೆಲವರು ಪ್ರತಿದಿನವೂ ಬಹಳ ತಡವಾಗಿ ಬರುತ್ತಿದ್ದರು. ಅವರನ್ನು ದಾರಿಗೆ ತರುವುದಕ್ಕೆ ಈಶ್ವರಚಂದ್ರರು ಒಂದು ಉಪಾಯ ಮಾಡಿದರು. ಪ್ರತಿದಿನವೂ ತಾವೇ ಕಾಲೇಜಿನ ಮಹಾದ್ವಾರದಲ್ಲಿ ನಿಂತು ಹೊತ್ತಾಗಿ ಬರುತ್ತಿದ್ದವರನ್ನು ನಗುನಗುತ್ತಾ ಸ್ವಾಗತಿಸುತ್ತಿದ್ದರು. ಇದರಿಂದ ಮುಖಭಂಗವಾಗುತ್ತಿದ್ದ ಶಿಕ್ಷಕರು ತಮ್ಮ ನಡತೆಯನ್ನು ತಿದ್ದಿಕೊಂಡು ಮಾರನೆಯ ದಿನದಿಂದ ಹೊತ್ತಿಗೆ ಸರಿಯಾಗಿ ಬರುತ್ತಿದ್ದರು.

ಅವರು ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾಗ ಶಿಕ್ಷಣ ಕ್ಷೇತ್ರದಲ್ಲಿ ಕೆಲವು ಮುಖ್ಯ ಸುಧಾರಣೆಗಳನ್ನು ಜಾರಿಗೆ ತಂದರು. ಪ್ರಾದೇಶಿಕ ಭಾಷೆಯೇ ಜನಸಾಮಾನ್ಯರ ಶಿಕ್ಷಣ ಮಾಧ್ಯಮವಾಗಿರಬೇಕೆಂಬ ತತ್ವವನ್ನು ಬಂಗಾಳದಲ್ಲಿ ಮೊಟ್ಟ ಮೊದಲು ಆಚರಣೆಗೆ ತಂದವರು ಇವರೇ. ಈ ಉದ್ದೇಶದಿಂದ ಅವರು ಸರ್ಕಾರದ ಸಹಾಯ ಪಡೆದು ಬಂಗಾಳದಲ್ಲಿ ನೂರೊಂದು ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸಿದರು. ಈ ಶಾಲೆಗಳಲ್ಲಿ ಬಂಗಾಳಿಯೇ ಶಿಕ್ಷಣ ಮಾಧ್ಯಮವಾಗಿತ್ತು. ಇದರಿಂದ ಜನಸಾಮಾನ್ಯರಿಗೂ ವಿದ್ಯಾವಂತರಾಗುವ ಅವಕಾಶ ದೊರೆಯಿತು.

ಈ ಪ್ರಾಥಮಿಕ ಶಾಲೆಗಳು ದೊಡ್ಡ ನಗರಗಳಲ್ಲಿ ಮಾತ್ರ ಇದ್ದವು. ಹಳ್ಳಿಗಾಡಿನ ಜನರೂ ವಿದ್ಯಾವಂತರಾಗಬೇಕು, ಇವರಿಗೂ ವಿದ್ಯೆಯ ಪ್ರಯೋಜನ ದೊರೆಯಬೇಕು ಎಂಬುದು ಈಶ್ವರಚಂದ್ರ ವಿದ್ಯಾಸಾಗರರ ಅಪೇಕ್ಷೆಯಾಗಿತ್ತು. ಈ ಉದ್ದೇಶ ಸಾಧನೆಗಾಗಿ ಅವರು ಹಳ್ಳಿಹಳ್ಳಿಯಲ್ಲೂ ಸುತ್ತಾಡಿ ಅಲ್ಲಿನ ಜನರ ಸಹಕಾರ ಮತ್ತು ಬೆಂಬಲಗಳನ್ನು ಪಡೆದುಕೊಂಡರು. ಅನೇಕ ಕಷ್ಟನಷ್ಟಗಳನ್ನು ಅನುಭವಿಸಿದರು. ತಾವು ಹೋದ ಪ್ರತಿಯೊಂದು ಹಳ್ಳಿಯಲ್ಲೂ ಮಾದರಿ ಶಾಲೆಯನ್ನು ಸ್ಥಾಪಿಸಿದರು.

ಇಷ್ಟಾದರೂ ಪಠ್ಯ ಪುಸ್ತಕಗಳ ಸಮಸ್ಯೆ ಅವರನ್ನೆದುರಿಸಿತು. ಆಗ ಬಂಗಾಳದಲ್ಲಿ ಶಾಲಾ ಕಾಲೇಜುಗಳಿಗೆ ಉಪಯೋಗವಾಗುವಂತಹ ಪಠ್ಯಪುಸ್ತಕಗಳಿರಲಿಲ್ಲ. ಈ ಕೊರತೆಯನ್ನು ನಿವಾರಿಸುವ ಉದ್ದೇಶದಿಂದ ಅವರು ಕೆಲವು ಸ್ನೇಹಿತರ ನೆರವಿನೊಡನೆ ’ಸಂಸ್ಕೃತ ಪ್ರೆಸ್’ ಎಂಬ ಮುದ್ರಣಾಲಯವನ್ನು ಸ್ಥಾಪಿಸಿದರು. ತಾವೇ  ಅನೇಕ ಪಠ್ಯ ಪುಸ್ತಕಗಳನ್ನು ರಚಿಸಿ ತಮ್ಮ ಅಚ್ಚುಕೂಟದಲ್ಲಿ ಪ್ರಕಟಿಸಿದರು. ಬೇತಾಳ ಪಂಚದಿಂಶತಿ, ಬಂಗಾಳದ ಇತಿಹಾಸ, ಕಥಾಮೂಲ, ಬೋಧೋದಯ, ಅಖ್ಯಾನ ಮಂಜರಿ, ಸೀತಾಪರಿತ್ಯಾಗ, ಭಾರತೀವಿಲಾಸ ಎಂಬ ಗ್ರಂಥಗಳು ಅವರು ಬರೆದ ಪಠ್ಯಪುಸ್ತಕಗಳಲ್ಲಿ ಪ್ರಸಿದ್ಧವಾದವು. ಹೊಸದಾಗಿ ಅಕ್ಷರಾಭ್ಯಾಸ ಮಾಡುವ ಸಣ್ಣ ಮಕ್ಕಳಿಗೋಸ್ಕರ ’ವರ್ಣ ಪರಿಚಯ’ ಎಂಬ ಹೆಸರಿನಲ್ಲಿ ಎರಡು ಪುಟ್ಟ ಪುಸ್ತಕಗಳನ್ನು ಪ್ರಕಟಿಸಿ ಬಂಗಾಳದ ಲಕ್ಷಾಂತರ ಮಕ್ಕಳಿಗೆ ಮಹದುಪಕಾರ ಮಾಡಿದರು. ಬಂಗಾಳದ ಪ್ರಾಥಮಿಕ ಶಾಲೆಗಳಲ್ಲಿ ಈ ಎರಡು ಪುಸ್ತಕಗಳು ಸುಮಾರು ಒಂದು ನೂರು ವರ್ಷ ಬಳಕೆಯಲ್ಲಿದ್ದವು.

ಅವು ದೂರವನ್ನು ತಿಳಿಸುವ ಕಲ್ಲುಗಳು ಎಂದು ತಂದೆ ವಿವರಿಸಿದರು.

ಹೆಂಗಸರಿಗೆ ವಿದ್ಯಾಭ್ಯಾಸ

ಅವರು ಸ್ತ್ರೀ ವಿದ್ಯಾಭ್ಯಾಸದ ಕಡೆಗೂ ಗಮನ ಹರಿಸಿದರು. ಹೆಣ್ಣುಮಕ್ಕಳಲ್ಲಿದ್ದ ಅಜ್ಞಾನ, ಅವಿದ್ಯೆಗಳನ್ನು ನಿರ್ಮೂಲಗೊಳಿಸಲು ಅವರು ದೃಢಸಂಕಲ್ಪ ಕೈಗೊಂಡಿದ್ದರು. ಗಂಡಸರಂತೆಯೇ ಹೆಂಗಸರೂ ಹಕ್ಕು ಬಾಧ್ಯತೆಗಳನ್ನೂ ಸ್ವಾತಂತ್ರ‍್ಯವನ್ನೂ ಅವರಿಗೂ ದೊರಕಿಸಿ ಕೊಡಬೇಕೆಂಬ ದೃಢ ಸಂಕಲ್ಪವನ್ನು ಕೈಗೊಂಡು ಅದನ್ನು ಕಾರ್ಯರೂಪಕ್ಕೆ ತರುವುದಕ್ಕೋಸ್ಕರ ಹಗಲಿರುಳೂ ಶ್ರಮಿಸತೊಡಗಿದರು. ಹಿಂದೂ ವಿಧವೆಯರ ಪುನರ್ವಿವಾಹ ಪದ್ಧತಿಯನ್ನು  ಜಾರಿಗೆ ತರುವುದಕ್ಕೂ ಅದಕ್ಕೆ ಸಾರ್ವಜನಿಕರ ಮತ್ತು ಸರ್ಕಾರದ ಬೆಂಬಲವನ್ನು ಪಡೆಯುವುದಕ್ಕೂ ಅವರು ದೊಡ್ಡ ಆಂದೋಲನವನ್ನೇ ಪ್ರಾರಂಭಿಸಿದರು.

ವಾದ – ವಿವಾದ

ಅವರ ಈ ಪ್ರಗತಿಪರ ಸುಧಾರಣೆಗೂ ಬ್ರಹ್ಮಸಮಾಜದ ಅನುಯಾಯಿಗಳು ಬೆಂಬಲವನ್ನು ಕೊಟ್ಟರೂ ಸಂಪ್ರದಾಯ ಶರಣರಾದ ಅನೇಕರು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಆದರೆ ಈಶ್ವರಚಂದ್ರರು ಅದಕ್ಕೆ ಸ್ವಲ್ಪವೂ ಹೆದರದೆ ತಮ್ಮ ಚಳವಳಿಯನ್ನು ಮುಂದುವರಿಸಿದರು. ಮಹರ್ಷಿ ದೇವೇಂದ್ರನಾಥ ಠಾಕೂರರು ಸ್ಥಾಪಿಸಿದ್ದ ’ತತ್ವಬೋಧಿನಿ’ ಪತ್ರಿಕೆಯಲ್ಲಿ ಅನೇಕ ಲೇಖನಗಳನ್ನು ಬರೆದು ತಮ್ಮ ಸುಧಾರಣೆಯ ಬಗ್ಗೆ ಜನರಲ್ಲಿ ಪ್ರಚಾರ ಮಾಡಿದರು. ’ಹಿಂದೂ ವಿಧವೆಯರ ಪುನರ್ವಿವಾಹ’ ಎಂಬ ಪುಸ್ತಕವನ್ನು ಬಂಗಾಳಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದು ಪ್ರಕಟಿಸಿದರು.

ಈ ಪುಸ್ತಕ ಎಂತಹ ಕ್ರಾಂತಿಯನ್ನು ಉಂಟು ಮಾಡಿತು ಎಂದು ಈಗ ಊಹಿಸಿಕೊಳ್ಳುವುದು ಕಷ್ಟ. ಒಂದು ವಾರದಲ್ಲಿ ಏಳು ಸಾವಿರ ಪ್ರತಿಗಳ ಮಾರಾಟವಾದವು. ಆನಂತರ ಮೂರು ಸಾವಿರ, ಮತ್ತೆ ಹತ್ತು ಸಾವಿರ ಪ್ರತಿಗಳನ್ನು ಅಚ್ಚುಮಾಡಬೇಕಾಯಿತು.

ಈ ಪುಸ್ತಕ ಪ್ರಕಟಣೆಯಾದ ಕೂಡಲೇ ಸಂಪ್ರದಾಯವಾದಿಗಳಿಂದ ತೀವ್ರ ಪ್ರತಿಭಟನೆ ತಲೆದೋರಿತು. ಈಶ್ವರಚಂದ್ರರು ಹಿಂದೂ ಸಮಾಜದ ಶತ್ರುಗಳೆಂದೂ ನಾಸ್ತಿಕರೆಂದೂ ಅಪಪ್ರಚಾರ ಮಾಡತೊಡಗಿದರು. ಅವರ ಪ್ರತಿಭಟನೆ ಮತ್ತು ಅಪಪ್ರಚಾರಕ್ಕೆ ಸ್ವಲ್ಪವೂ ಹೆದರದೆ ಈಶ್ವರಚಂದ್ರರು ತಮ್ಮ ವಿರೋಧಿಗಳು ಎತ್ತಿದ್ದ ಆಕ್ಷೇಪಣೆಗಳಿಗೆಲ್ಲಾ ಸಮಂಜಸವಾದ ಉತ್ತರಗಳನ್ನು ಕೊಟ್ಟು ಅವರ ವಾದವನ್ನು ಖಂಡಿಸಿ, ವಿದ್ವತ್ಪೂರ್ಣವಾದ ಮತ್ತೊಂದು ಪುಸ್ತಕವನ್ನು ಪ್ರಕಟಿಸಿದರು.

ಕಾನೂನಾಯಿತು

ತಾವು ಪ್ರತಿಪಾದಿಸುತ್ತಿರುವ ’ವಿಧವಾ ಪುನರ್ವಿವಾಹ ಸುಧಾರಣೆ’ ಯನ್ನು ಶಾಸನಬದ್ಧವಾಗಿ ಮಾಡಬೇಕೆಂಬ ಮನವಿಯನ್ನು ಸಿದ್ಧಪಡಿಸಿ ಅದಕ್ಕೆ ಒಂದು ಸಾವಿರ ಜನರ ಸಹಿಯನ್ನು ಸಂಗ್ರಹಿಸಿ, ಸರ್ಕಾರಕ್ಕೆ ಸಲ್ಲಿಸಿದರು. ಹಿಂದೂ ವಿಧವೆಯರ ವಿವಾಹಕ್ಕೆ ಯಾವ ಅಡಚಣೆಯೂ ಇಲ್ಲದಂತೆ ಮತ್ತು ವಿವಾಹಿತರ ಸಂತಾನದ ಹಕ್ಕುಬಾಧ್ಯತೆಗಳಿಗೆ ರಕ್ಷಣೆ ಒದಗಿಸುವಂತೆ ಸೂಕ್ತ ಕಾನೂನು ಮಾಡಬೇಕೆಂಬ ಕಳಕಳಿಯ ಪ್ರಾರ್ಥನೆಯನ್ನು ಆ ಮನವಿಯಲ್ಲಿ ಮಾಡಲಾಗಿತ್ತು. ಅವರು ಸರ್ಕಾರಕ್ಕೆ ಸಲ್ಲಿಸಿದ್ದ ಈ  ಮನವಿ ಪತ್ರ ದೇಶದ ನಾನಾ ಭಾಗಗಳಲ್ಲಿದ್ದ ಸಮಾಜಸುಧಾರಕರ ಗಮನ ಸೆಳೆಯಿತು. ಕೆಲವರು ಈ ಸುಧಾರಣೆಯನ್ನು ಸ್ವಾಗತಿಸಿ ಈಶ್ವರಚಂದ್ರರಿಗೆ ತಮ್ಮ ಬೆಂಬಲ ಸೂಚಿಸಿದರು. ಮತ್ತೆ ಕೆಲವು ಸಂಪ್ರದಾಯವಾದಿಗಳು ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. ಮುಂಬಯಿ, ಪುಣೆ, ಸಾತಾರಾ, ಧಾರವಾಡ, ಸಿಕಂದರಾಬಾದ್, ಸೂರತ್, ಅಹಮದಾಬಾದ್, ಮತ್ತು ಬಂಗಾಳದ ಅನೇಕ ನಗರಗಳಿಂದ ಸುಧಾರಣೆಯ ಪರವಾಗಿಯೂ ವಿರುದ್ಧವಾಗಿಯೂ ಸರ್ಕಾರಕ್ಕೆ ಸಾವಿರಾರು ಪತ್ರಗಳು ಬಂದವು. ೧೮೫೫ರ ನವೆಂಬರ್ ೧೭ರಂದು ಕಲ್ಕತ್ತೆಯ ಶಾಸನ ಸಭೆಯಲ್ಲಿ ಈ ಸುಧಾರಣೆಯನ್ನು ಕುರಿತ ಒಂದು ವಿಧೇಯಕವನ್ನು ಸರ್ಕಾರ ಮಂಡಿಸಿತು. ೧೮೫೬ರ ಜುಲೈ ೨೬ರಂದು ಗವರ್ನರ್ ಜನರಲ್ ರ ಅಂಗೀಕಾರ ಪಡೆದು ಅದು ಶಾಸನವಾಯಿತು. ಇಷ್ಟಪಟ್ಟ ವಿಧವೆಯರು ಪುನಃ ಮದುವೆ ಮಾಡಿಕೊಳ್ಳಬಹುದು ಎಂಬ ಶಾಸನವನ್ನು ಸರ್ಕಾರ ಜಾರಿಗೆ ತಂದಿತು.

ತಮ್ಮ ಮಹತ್ವಾಕಾಂಕ್ಷೆಯ ಸುಧಾರಣೆಗೆ ಶಾಸನದ ಅಂಗೀಕಾರ ಮುದ್ರೆ ಬಿದ್ದುದನ್ನು ನೋಡಿ ಈಶ್ವರಚಂದ್ರರಿಗಾದ ಸಂತೋಷಕ್ಕೆ ಪಾರವೇ ಇರಲಿಲ್ಲ.

ವಿಧವಾ ವಿವಾಹಗಳು

ಈ ಶಾಸನದ ಪ್ರಕಾರ ಮೊಟ್ಟ ಮೊದಲನೆಯ ಪುನರ್ವಿವಾಹ ಕಲ್ಕತ್ತೆಯಲ್ಲಿ ಅದೇ ವರ್ಷ (೧೮೫೬) ಡಿಸೆಂಬರ‍್ ೭ ರಂದು ನಡೆಯಿತು. ಈಶ್ವರಚಂದ್ರರೇ ನಾಯಕತ್ವ ವಹಿಸಿ ಈ ವಿವಾಹವನ್ನು ಬಹಳ ವಿಜೃಂಭಣೆಯಿಂದ  ನೆರವೇರಿಸಿದರು. ವಿರೋಧಿಗಳು ಬಲಪ್ರಯೋಗ ಮಾಡಬಹುದೆಂದು ಈಶ್ವರಚಂದ್ರರರೇ ವಧು ಕುಳಿತ ಪಲ್ಲಕ್ಕಿಯ ಪಕ್ಕದಲ್ಲಿ ನಡೆದರು. ಅಂದಿನ ಜನಸಂದಣಿ ಅಸಾಧಾರಣ.

ಅವರ ನೇತೃತ್ವದಲ್ಲಿ ಹಲವು ಪುನರ್ವಿವಾಹಗಳು ನಡೆದವು. ಹೊಸದಾಗಿ ಮದುವೆಯಾದ ದಂಪತಿಗಳಿಗೆ ತಮ್ಮ ಮನೆಯಲ್ಲಿ ಆಶ್ರಯ ನೀಡುತ್ತಿದ್ದರು. ಈ ವಿವಾಹಗಳಿಗೆ ಅವರು ಸ್ವಂತ ಹಣವನ್ನು ಧಾರಾಳವಾಗಿ ಖರ್ಚು ಮಾಡುತ್ತಿದ್ದರು. ತಮ್ಮ ಹತ್ತಿರ ಹಣವಿಲ್ಲದಿದ್ದರೆ ಸ್ನೇಹಿತರಿಂದ ಸಾಲ ಪಡೆದಾದರೂ ವಿವಾಹಗಳನ್ನು ನೆರವೇರಿಸುತ್ತಿದ್ದರು. ಇದರಿಂದ ಅವರ ಬಹಳ ತೊಂದರೆ ಅನುಭವಿಸಬೇಕಾಯಿತು. ಅವರಿಗೆ ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದ ಅನೇಕ ಸ್ನೇಹಿತರು ದಿನ ಕ್ರಮೇಣ ಅವರಿಂದ ದೂರವಾಗುತ್ತಾ ಬಂದರು. ಅವರಿಗೆ ಬೆಂಬಲಿಗರಾಗಿದ್ದ ಹಿತೈಷಿಗಳು ತಮ್ಮ ಹಣಕ್ಕೆ ತಗಾದೆ ಮಾಡಲಾರಂಭಿಸಿದರು. ಸಾಲಗಾರರ ಕಿರುಕುಳ ಜಾಸ್ತಿಯಾಗುತ್ತಾ ಬಂತು. ಸ್ನೇಹಿತರ ಸಾಲ ತೀರಿಸುವುದಕ್ಕೋಸ್ಕರ ಕಡೆಗೆ ತಮ್ಮ ಸ್ವಂತ ಮುದ್ರಣಾಲಯವನ್ನೇ ಮಾರಬೇಕಾದ ದುರ್ಭರ ಪ್ರಸಂಗ ಅವರಿಗೆ ಪ್ರಾಪ್ತವಾಯಿತು. ’ವಿಧವಾ ಪುನರ್ವಿವಾಹ” ಮಸೂದೆ ಸರ್ಕಾರದ ಅಂಗೀಕಾರ ಮುದ್ರೆ ಪಡೆದು ಶಾಸನವಾದರೂ ಸುಧಾರಣಾ ವಿರೋಧಿಗಳಾಗಿದ್ದ ಅನೇಕ ಶ್ರೀಮಂತ ಗೃಹಸ್ಥರೂ ಪ್ರತಿಷ್ಠಿತ ವ್ಯಕ್ತಿಗಳೂ ಈಶ್ವರಚಂದ್ರರಿಗೆ ಮತ್ತು ಅವರ ಬೆಂಬಲಿಗರಿಗೆ ಅನೇಕ ರೀತಿಯಲ್ಲಿ ತೊಂದರೆ ಕೊಡುತ್ತಿದ್ದರು. ಅವರೂ ಲೇಖನ ಮತ್ತು ಪುಸ್ತಕಗಳನ್ನು ಪ್ರಕಟಿಸಿ ಈಶ್ವರಚಂದ್ರರ ವಿರುದ್ಧ ಅಪಪ್ರಚಾರ ಮಾಡಿದರು. ಈ ಸಮಯದಲ್ಲಿ ಈಶ್ವರಚಂದ್ರರು ಕಲ್ಕತ್ತೆಯ ಬೀದಿಗಳಲ್ಲಿ ಒಬ್ಬಂಟಿಗರಾಗಿ ಸುರಕ್ಷಿತವಾಗಿ ಓಡಾಡುವುದೂ ಕಷ್ಟವಾಗಿತ್ತು. ಅವರ ವಿರೋಧಿಗಳು ಅವರ ಮೇಲೆ ಹಿಂಸಾಕೃತ್ಯ ನಡೆಸುವುದಕ್ಕೆ ಪ್ರಯತ್ನಪಟ್ಟು ವಿಫಲರಾದರು.

ಹಳ್ಳಿಯ ಮಕ್ಕಳಿಗೆ ಅವರ ಭಾಷೆಯಲ್ಲೇ ವಿದ್ಯಾಭ್ಯಾಸ, ವಿಧವೆಯರ ಪುನರ್ವಿವಾಹ, ಈ ಎರಡು ಗುರಿಗಳಿಗಾಗಿ ಈಶ್ವರಚಂದ್ರರು ತಮ್ಮನ್ನೇ ತೇಯ್ದುಕೊಂಡರು.

ಈಶ್ವರಚಂದ್ರರ ಸುಧಾರಣೆ ಸ್ವತಃ ಅವರ ಮಗನ ಮೇಲೆ ತನ್ನ ಪ್ರಭಾವವನ್ನು ಬೀರಿತು. ಅವರ ಒಬ್ಬನೇ ಮಗ ನಾರಾಯಣಚಂದ್ರ ಒಬ್ಬ ವಿಧವೆಯನ್ನು ವಿವಾಹವಾದನು. ಈಶ್ವರಚಂದ್ರರ ತಮ್ಮ ಶಂಭುಚಂದ್ರರು ಅಣ್ಣನಿಗೆ ಕಾಗದ ಬರೆದು, ಅವರ ಮಗನು ವಿಧವೆಯನ್ನು ಮದುವೆಯಾದರೆ ಸ್ನೇಹಿತರೂ ನೆಂಟರೂ ಅವರಿಗೆ ಬಹಿಷ್ಕಾರ ಹಾಕುವರೆಂದು ತಿಳಿಸಿದರು. ಈಶ್ವರ ಚಂದ್ರರು ಉತ್ತರ ಬರೆದು, ಮಗನ ಮದುವೆಯಾದ ಸಂಗತಿಯನ್ನು ತಿಳಿಸಿದರು. ’ನಾನೇ ವಿಧವಾ ವಿವಾಹಕ್ಕೆ ಇಷ್ಟು ಚಳವಳಿ ನಡೆಸುತ್ತಿರುವಾಗ, ಮಗನು ವಿಧವೆಯನ್ನು ಮದುವೆಯಾಗಲು ನಾನು ಅಡ್ಡ ಬರುವುದು ಹೇಗೆ?’… ’ಯಾರು ನಮ್ಮನ್ನು ದೂರ ಇಡಬೇಕೆಂದಿದ್ದಾರೋ ನಮ್ಮ ಜೊತೆಗೆ ಊಟ ಮಾಡಲು ಅಥವಾ ನಮ್ಮ ಜೊತೆಗೆ ಇರಲು ಇಷ್ಟವಿಲ್ಲವೋ ಅವರು ಹಾಗೆ ಮಾಡಲು ಸ್ವತಂತ್ರರು.. ಪ್ರತಿಯೊಬ್ಬರೂ ತನಗೆ ಸರಿ ಎಂದು ತೋರಿದಂತೆ ನಡೆಯಬೇಕು. ಇತರರು ತಮ್ಮ ಇಚ್ಛೆಯನ್ನು ಹೇರಲು ಒಪ್ಪಬಾರದು’ ಎಂದು ಬರೆದರು. ದೇಶದ ನಾನಾ ಭಾಗಗಳಲ್ಲಿದ್ದ ಸಮಾಜ ಸುಧಾರಕರಿಗೆ ಇವರು ಸ್ಫೂರ್ತಿಕೇಂದ್ರವಾಗಿದ್ದರು. ಮಹಾರಾಷ್ಟ್ರದ ಪ್ರಸಿದ್ಧ ಸಮಾಜ ಸುಧಾರಕರಾಗಿದ್ದ ವಿಷ್ಣುಶಾಸ್ತ್ರಿ ಪಂಡಿತ್, ಮಲಬಾರಿ, ರಾನಡೆ, ಕರ್ವೆ, ಮುಂತಾದವರು ಈಶ್ವರ ಚಂದ್ರರ ಸುಧಾರಣೆಗಳಿಂದ ಬಹಳ ಪ್ರಭಾವಿತರಾದರು.

ನಾಚಿಕೆಗೇಡು ಪದ್ಧತಿ

ವಿಧವಾ ಪುನರ್ವಿವಾಹ ಶಾಸನ ಜಾರಿಗೆ ಬಂದ ಅನಂತರ, ಈಶ್ವರಚಂದ್ರರು ಆಗಿನ ಹಿಂದೂ ಸಮಾಜದಲ್ಲಿ ಬಲವಾಗಿ ಬೇರೂರಿದ್ದ ’ಬಹುಪತ್ನಿತ್ವ’ ಮತ್ತು ’ಬಾಲ್ಯವಿವಾಹ’ ಪದ್ಧತಿಗಳ ವಿರುದ್ಧವೂ ತೀವ್ರವಾಗಿ ಹೋರಾಟ ಪ್ರಾರಂಭಿಸಿದರು. ಬಂಗಾಳದಲ್ಲಿ ಕುಲೀನರೆನ್ನಿಸಿಕೊಂಡಿದ್ದ ಮುದಿವಯಸ್ಸಿನ ಶ್ರೀಮಂತ ಗೃಹಸ್ಥರು ತಮ್ಮ ಭೋಗ ವಿಲಾಸಕ್ಕಾಗಿ ಅನೇಕ ಬಾಲ ವಿಧವೆಯನ್ನು ಮದುವೆಯಾಗುವ ದುಷ್ಟ ಪದ್ಧತಿ ಜಾರಿಯಲ್ಲಿತ್ತು. ಹೂಗ್ಲಿ ಜಿಲ್ಲೆಯಲ್ಲಿದ್ದ ಭೋಲಾನಾರ್ಥ ಬಂದೋಪಾಧ್ಯಾಯ ಎಂಬ ಐವತ್ತೈದು ವರ್ಷದ ಶ್ರೀಮಂತನಿಗೆ ಎಂಬತ್ತು ಜನ ಪತ್ನಿಯರಿದ್ದರು. ಅರವತ್ನಾಲ್ಕು ವರ್ಷದ ಮುದುಕ ಭಗವಾನ್ ಚಟ್ಟೋಪಾಧ್ಯಾಯನಿಗೆ ಎಪ್ಪತ್ತೆರಡು ಮಂದಿ ಹೆಂಡತಿಯರು. ದುರ್ಗಾಬಂದೋಪಾಧ್ಯಾಯ ಎಂಬ ಕೇವಲ ಇಪ್ಪತ್ತು ವರ್ಷದ ಶ್ರೀಮಂತ ಯುವಕನಿಗೆ ಹದಿನಾರು ಮಂದಿ ಹೆಂಡತಿಯರಿದ್ದರು. ಇವು ಕೆಲವು ಉದಾಹರಣೆಗಳು ಮಾತ್ರ. ಇಂತಹ ನಿದರ್ಶನಗಳು ಸಾವಿರಾರಿದ್ದವು. ಮೇಲಿನ  ಕುಲದವರು ತಮ್ಮ ಕುಲದವರಲ್ಲಿಯೆ ವರನನ್ನು ಹುಡುಕುತ್ತಿದ್ದುದು, ಹೆಣ್ಣು ಹುಡುಗಿಯರಿಗೆ ತುಂಬಾ ಚಿಕ್ಕ ವಯಸ್ಸಿನಲ್ಲೆ ಮದುವೆ ಮಾಡಬೇಕು ಎಂಬ ಸಮಾಜದ ನಿರ್ಬಂಧ ಎರಡೂ ಈ ನಾಚಿಕೆಗೇಡಿನ ಸ್ಥಿತಿಗೆ ಕಾರಣ. ಕುಲೀನರೆನ್ನಿಸಿಕೊಂಡಿದ್ದ ಶ್ರೀಮಂತ ಗೃಹಸ್ಥರು ಎಷ್ಟು ಹೆಂಗಸರನ್ನು ಬೇಕಾದರೂ ಮದುವೆಯಾಗಬಹುದಿತ್ತು. ಬಹುಪತ್ನಿತ್ವ ಪದ್ಧತಿ ಬಂಗಾಳದಲ್ಲಿ ಒಂದು ಲಾಭದಾಯಕ ವ್ಯಾಪಾರವಾಗಿಬಿಟ್ಟಿತ್ತು. ಈ ವ್ಯವಹಾರದಲ್ಲಿ ನಿರತರಾಗಿದ್ದ ಅನೇಕ ದಳ್ಳಾಳಿಗಳಿಗೆ ಕೈತುಂಬ ಹಣ ಸಿಕ್ಕುತ್ತಿತ್ತು. ಈ ಕುಲೀನ ಶ್ರೀಮಂತರು ಸತ್ತರೆ ಏಕಕಾಲದಲ್ಲಿ ಅನೇಕ ಹೆಂಗಸರು ವಿಧವೆಯರಾಗುತ್ತಿದ್ದರು. ಇವರ ಪೈಕಿ ಅನೇಕ ಬಾಲವಿಧವೆಯರೂ ಇರುತ್ತಿದ್ದರು.

ಸರ್ಕಾರ ಸುಮ್ಮನಾದರೂ

ಈ ದುಷ್ಟ ಪದ್ಧತಿಯನ್ನು ತೊಡೆದುಹಾಕಲು ಸೂಕ್ತ ಶಾಸನವನ್ನು ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಪಡಿಸುವುದಕ್ಕೆ ಈಶ್ವರಚಂದ್ರರು ೧೮೫೫ರ ಡಿಸೆಂಬರಿನಲ್ಲಿ ಇಪ್ಪತ್ತೈದು ಸಾವಿರ ಜನರ ಸಹಿಗಳಿದ್ದ ಒಂದು ಮನವಿ ಪತ್ರವನ್ನು ಸಿದ್ಧಗೊಳಿಸಿ ಸರ್ಕಾರಕ್ಕೆ ಸಲ್ಲಿಸಿದರು. ಈ ಮನವಿಯ ಬಗ್ಗೆ ಸರ್ಕಾರಕ್ಕೆ ಸಹಾನುಭೂತಿಯಿತ್ತು. ಆದರೆ ೧೮೫೭ರಲ್ಲಿ ದೇಶಾದ್ಯಂತ ನಡೆದ ಪ್ರಥಮ ಸ್ವಾತಂತ್ರ‍್ಯ ಸಂಗ್ರಾಮದ ಜ್ವಾಲೆಗೆ ಸಿಕ್ಕಿದ್ದ ಸರ್ಕಾರ ಈ ಸುಧಾರಣೆಯಲ್ಲಿ ಹೆಚ್ಚು ಆಸಕ್ತಿ ವಹಿಸಲಿಲ್ಲ. ಪುನಃ ಸರ್ಕಾರಕ್ಕೆ ಸಲ್ಲಿಸಿದರು. ಅದೇ ವರ್ಷ ಅವರು ಇನ್ನೂ ಕೆಲವು ಪ್ರಮುಖ ವ್ಯಕ್ತಿಗಳೊಂದಿಗೆ ಸರ್ಕಾರಕ್ಕೆ ನಿಯೋಗ ಹೋದರು. ಆಗ ಸರ್ಕಾರ ಇದರ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿ, ಜನಾಭಿಪ್ರಾಯ ಸಂಗ್ರಹಣೆ ಮಾಡಬೇಕೆಂದು ಒಂದು ಸಮಿತಿಯನ್ನು ನೇಮಕ ಮಾಡಿತು. ಆಗ ಬಂಗಾಳದಲ್ಲಿ ಬಹುಪತ್ನಿತ್ವ ಪದ್ಧತಿಯನ್ನು ಶಾಸನದ ಮೂಲಕ ನಿಷೇಧಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯವಿತ್ತು. ಆದ್ದರಿಂದ ಈ ವಿಚಾರದಲ್ಲಿ ಕಾಯಿದೆ ಮಾಡುವುದು ಸರಿಯಲ್ಲವೆಂದು ಬ್ರಿಟಿಷ್ ಸರ್ಕಾರದ ಪ್ರತಿನಿಧಿಯ ಅಭಿಪ್ರಾಯ. ಜನರಲ್ಲಿ ವಿದ್ಯಾಪ್ರಾಸರ ಹೆಚ್ಚಾದಂತೆಲ್ಲ ಈ ದುಷ್ಟ ಪದ್ಧತಿ ತಾನಾಗಿಯೇ ನಿರ್ಮೂಲವಾಗುವುದೆಂಬ ಅಭಿಪ್ರಾಯ ಸರ್ಕಾರಕ್ಕಿತ್ತು. ಆದ್ದರಿಂದ ಈ ವಿಷಯದಲ್ಲಿ ಸರ್ಕಾರ ಯಾವ ಕಾಯಿದೆಯನ್ನೂ ರಚಿಸಲಿಲ್ಲ.

ಸರ್ಕಾರದ ಪ್ರೋತ್ಸಾಹ ಸಿಕ್ಕದಿದ್ದರೂ ಈಶ್ವರಚಂದ್ರರು ತಮ್ಮ ಸುಧಾರಣೆಯ ಪ್ರಯತ್ನಗಳನ್ನು ತಮ್ಮ ಜೀವನ ಪರ್ಯಂತವೂ ಮುಂದುವರಿಸಿಕೊಂಡು ಹೋದರು. ತಮ್ಮ ಬರಹ, ಭಾಷಣಗಳ ಮೂಲಕ ಈ  ದುಷ್ಟ ಪದ್ಧತಿಯ ನಿರ್ಮೂಲನಕ್ಕೆ ನಿರಂತರ ಹೋರಾಟ ನಡೆಸುತ್ತಲೇ ಇದ್ದರು.

ಸಾಹಿತಿ ಈಶ್ವರಚಂದ್ರ

ಪ್ರಸಿದ್ಧ ಸಮಾಜ ಸುಧಾರಕರಾಗಿದ್ದ ಈಶ್ವರಚಂದ್ರ ವಿದ್ಯಾಸಾಗರರು ಖ್ಯಾತ ಸಾಹಿತಿಗಳು ಆಗಿದ್ದರು. ಆಧುನಿಕ ಬಂಗಾಳದ ಸಾಹಿತ್ಯ ಚರಿತ್ರೆಯಲ್ಲಿ ಅವರ ಹೆಸರು ಅಮರವಾಗಿದೆ. ಬಂಗಾಳದ ಪ್ರಸಿದ್ಧ ಗದ್ಯ ಲೇಖಕರ ಪಂಕ್ತಿಯಲ್ಲಿ ಅವರಿಗೆ ಅಗ್ರಪೂಜೆ ಸಲ್ಲುತ್ತದೆ. ಕಾಳಿದಾಸನ ’ಅಭಿಜ್ಞಾನ ಶಕುಂತಲ’ ನಾಟಕವನ್ನೂ ಆಧರಿಸಿ ’ಶಾಕುಂತಲ’ ಗ್ರಂಥವನ್ನೂ ಭವಭೂತಿಯ ’ಉತ್ತರರಾಮಚರಿತ’ ವನ್ನು ಆಧರಿಸಿ ’ಸೀತಾಪರಿತ್ಯಾಗ’ ಗ್ರಂಥವನ್ನೂ ರಚಿಸಿದ್ದಾರೆ. ’ಸೀತಾಪರಿತ್ಯಾಗ’ ಅವರ ಗ್ರಂಥಗಳಲ್ಲೆಲ್ಲ ಅತ್ಯಂತ ಶ್ರೇಷ್ಠವಾದುದೆಂದು ಪಂಡಿತರು ಅಭಿಪ್ರಾಯಪಟ್ಟಿದ್ದಾರೆ. ಇದಲ್ಲದೆ ಅವರು ಅನೇಕ ಪ್ರಸಿದ್ಧ ಸಂಸ್ಕೃತ ಕಾವ್ಯಗಳನ್ನೂ ಶಾಸ್ತ್ರಗ್ರಂಥಗಳನ್ನೂ ಸಂಪಾದಿಸಿ ಪ್ರಕಟಿಸಿದ್ದಾರೆ. ಏಷ್ಯಾಟಿಕ್ ಸೊಸೈಟಿ ಸಂಸ್ಥೆಗೆ ಮಧ್ವಾಚಾರ್ಯ ವಿರಚಿತ ಸರ್ವದರ್ಶನ ಸಂಗ್ರಹ ಗ್ರಂಥವನ್ನು ಸಂಪಾದಿಸಿಕೊಟ್ಟಿದ್ದಾರೆ. ಸಂಸ್ಕೃತಾಭ್ಯಾಸಿಗಳಿಗೆ ಬಹಳ ಸರಳವಾಗಿ ಸಂಸ್ಕೃತ ಕಲಿಸುವ ಉದ್ದೇಶದಿಂದ ’ಸಂಸ್ಕೃತ ವ್ಯಾಕರಣ’ ಮತ್ತು ’ವ್ಯಾಕರಣ ಕೌಮುದಿ’ ಎಂಬೆರಡು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಷೇಕ್ಸ್ ಪಿಯರ್ ನ ’ಕಾಮಡಿ ಆಫ್ ಎರರ್ಸ’ ನಾಟಕವನ್ನು ಆಧರಿಸಿ ’ಭ್ರಾಂತಿ ವಿಲಾಸ’ ವೆಂಬ ನಾಟಕವನ್ನು ರಚಿಸಿದ್ದಾರೆ. ವಿಧವಾ ಪುನರ್ವಿವಾಹ ಮತ್ತು ಬಹುಪತ್ನಿತ್ವವನ್ನು ಕುರಿತು ಅವರು ರಚಿಸಿದ ನಾಲ್ಕು ಗ್ರಂಥಗಳೂ, ಸಂಸ್ಕೃತ ಭಾಷೆ ಮತ್ತು ಸಾಹಿತ್ಯವನ್ನು ಕುರಿತ ಗ್ರಂಥವೂ ಅವರಿಗೆ ಅಪಾರ ಕೀರ್ತಿಯನ್ನು ತಂದುಕೊಟ್ಟಿದೆ. ಇದಲ್ಲದೆ ಬೇರೆ ಬೇರೆ ಕಾವ್ಯನಾಮಗಳನ್ನಿಟ್ಟುಕೊಂಡು ಹಲವಾರು ಗ್ರಂಥಗಳನ್ನೂ ರಚಿಸಿದ್ದಾರೆ.

ಸರಳ ಸುಂದರ ಶೈಲಿ

ಅದುವರೆಗೂ ಬಂಗಾಳಿ ಸಾಹಿತಿಗಳು ತಮ್ಮ ಗ್ರಂಥಗಳಲ್ಲಿ ಬಹಳ ಕಠಿಣವಾದ, ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗದ ಸಂಸ್ಕೃತ ಪದಗಳನ್ನು ಧಾರಾಳವಾಗಿ ಉಪಯೋಗಿಸುತ್ತಿದ್ದರು. ಬಂಗಾಳಿ ಭಾಷೆಯನ್ನು ಸಂಸ್ಕೃತದ ಬಿಗಿಮುಷ್ಟಿಯಿಂದ ಪಾರು ಮಾಡಿ ಅದನ್ನು ಜನಸಾಮಾನ್ಯರ ಸಮೀಪಕ್ಕೆ ಕರೆದೊಯ್ದ ಕೀರ್ತಿ ಈಶ್ವರಚಂದ್ರರಿಗೆ ಸಲ್ಲುತ್ತದೆ. ಅವರ ಭಾಷೆ ತುಂಬಾ ಸರಳ ಮತ್ತು ಸುಂದರ. ಶೈಲಿ ಮನೋಮೋಹಕ. ಎಂತಹ ಗಹನ ವಿಚಾರವನ್ನಾಗಲೀ ಜನಸಾಮಾನ್ಯರಿಗೂ ಅರ್ಥವಾಗುವಂತೆ ಬಹಳ ಸರಳ ರೀತಿಯಲ್ಲಿ ನಿರೂಪಿಸಬಲ್ಲ ಜಾಣ್ಮೆ ಅವರ ಶೈಲಿಗಿದೆ. ಆದ್ದರಿಂದಲೇ ಅವರ ಗ್ರಂಥಗಳು ಇಂದಿಗೂ ಅಪಾರ ಜನಪ್ರಿಯತೆಯನ್ನು  ಪಡೆದಿವೆ. ಇವರ ಗ್ರಂಥಗಳು ಹಾಗೂ ಮನಮೋಹಕ ಶೈಲಿ ಬಂಕಿಮ್ ಚಂದ್ರ, ಮೈಕೇಲ್ ಮಧುಸೂದನದತ್ತ ಮುಂತಾದ ಪ್ರಸಿದ್ಧ ಸಮಕಾಲೀನ ಸಾಹಿತಿಗಳ ಮೇಲೆ ಪ್ರಭಾವವನ್ನು ಬೀರಿದ್ದವು.

ಸರಳ ವ್ಯಕ್ತಿ

ಈಶ್ವರಚಂದ್ರ ವಿದ್ಯಾಸಾಗರದಲ್ಲಿ ಮಾನವೀಯ ಅಂತಃಕರಣ, ಕರ್ತವ್ಯನಿಷ್ಠೆ, ಕಾರ್ಯದಕ್ಷತೆ, ಶಿಸ್ತುಪಾಲನೆ, ಅಸಾಧಾರಣ ಧೈರ್ಯ ಮುಂತಾದ ಶ್ರೇಷ್ಠ ನಾಯಕನಿಗಿರಬೇಕಾದ ಎಲ್ಲ ಸದ್ಗುಣಗಳೂ ಇದ್ದವು. ಅವರು ತುಂಬಾ ಸರಳ ಜೀವನ ನಡೆಸಿದರು. ಬಡವಬಲ್ಲಿದ ಎಂಬ ಭೇದಭಾವವಿಲ್ಲದೆ ಎಲ್ಲರೊಡನೆಯೂ ಬಹಳ ಸೌಜನ್ಯದಿಂದ ವರ್ತಿಸುತ್ತಿದ್ದರು. ತಮ್ಮ ಹತ್ತಿರ ವಿಚಾರ ವಿನಿಮಯ ಮಾಡುವುದಕ್ಕೆ ಮತ್ತು ಸಲಹೆ, ಸಹಕಾರಗಳನ್ನು ಪಡೆಯುವುದಕ್ಕೆ ಬರುತ್ತಿದ್ದವರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು. ಅವರ ಉಡುಗೆತೊಡುಗೆಗಳೂ ಬಹಳ ಸರಳ. ಅವರು ಸಾಮಾನ್ಯವಾಗಿ ಒಂದು ಧೋತಿ ಮತ್ತು ಚದ್ದರ್ ಧರಿಸುತ್ತಿದ್ದರು. ಆಗಿನ ಕಾಲದಲ್ಲಿ ರೂಢಿಯಲ್ಲಿದ್ದ ಚತ್ತಿ ಎಂಬ ಚಪ್ಪಲಿ ಧರಿಸುತ್ತಿದ್ದರು. ಈ  ಉಡುಪಿನಲ್ಲೇ ಗವರ್ನರ್ ಮುಂತಾದ ಸರ್ಕಾರದ ಯಾವುದೇ ಉನ್ನತ ಅಧಿಕಾರಿಯನ್ನಾಗಲೀ ಭೇಟಿ ಮಾಡುತ್ತಿದ್ದರು.

ಇದೇ ಶಿಷ್ಟಚಾರ ಎಂದುಕೊಂಡೆ !

ಯಾವ ಸಂದರ್ಭದಲ್ಲೇ ಆಗಲಿ ತಮ್ಮ ಆತ್ಮಗೌರವಕ್ಕೆ ಧಕ್ಕೆ ಬರುವುದನ್ನು ಮಾತ್ರ ಅವರೆಂದಿಗೂ ಸಹಿಸುತ್ತಿರಲಿಲ್ಲ. ತಮ್ಮನ್ನು ಯಾರಾದರೂ ಅವಮಾನಗೊಳಿಸಿದರೆ, ಹಾವಿನಂತೆ ಛಲ ತೀರಿಸಿಕೊಳ್ಳದೇ ಬಿಡುತ್ತಿರಲಿಲ್ಲ. ಮುಯ್ಯಿಗೆ ಮುಯ್ಯಿ ಮುಟ್ಟಿಸಿಯೇ ಬಿಡುತ್ತಿದ್ದರು.

ಅವರು ಸಂಸ್ಕೃತ ಕಾಲೇಜಿನ ಪ್ರಿನ್ಸಿಪಾಲರಾಗಿದ್ದಾಗ ಒಂದು ಘಟನೆ ನಡೆಯಿತು. ಯಾವುದೋ ಕೆಲಸದ ಮೇಲೆ ಒಮ್ಮೆ ಅವರು ಪ್ರೆಸಿಡೆನ್ಸಿ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ಕೆರ್ ಎಂಬ ಬ್ರಿಟಿಷ್ ಅಧಿಕಾರಿಯನ್ನು ಭೇಟಿಯಾಗಿದ್ದರು. ದುಹರಂಕಾರಿಯಾಗಿದ್ದ ಆತ ಈಶ್ವರಚಂದ್ರರಿಗೆ ’ಕುಳಿತುಕೊಳ್ಳಿ’ ಎಂದು ಹೇಳಲಿಲ್ಲ. ಅವರು ಬಂದಾಗ ತನ್ನ ಕಾಲುಗಳನ್ನ ಮೇಜಿನ ಮೇಲೆ ಚಾಚಿಕೊಂಡಿದ್ದ. ಇದರಿಂದ ಈಶ್ವರಚಂದ್ರರಿಗೆ ತುಂಬ ಅವಮಾನವಾಯಿತು. ಆತನ ಉದ್ಧಟತನವನ್ನು ನೋಡಿ ಅವರ ರಕ್ತ ಕುದಿಯಿತು. ತಮ್ಮ ಆತ್ಮಗೌರವಕ್ಕೆ ಧಕ್ಕೆ ಬಂದಿದ್ದರೂ ಬಹಳ ಸಂಯಮದಿಂದ ವರ್ತಿಸಿ, ತಮ್ಮ ಅಸಮಾಧಾನವನ್ನು ನುಂಗಿಕೊಂಡು ಹೊರ ಬಂದರು. ಕೆಲವು ದಿನಗಳ ನಂತರ ಅದೇ ಅಧಿಕಾರಿ ಈಶ್ವರ ಚಂದ್ರರನ್ನು ಭೇಟಿಯಾಗಲು ಅವರ ಹತ್ತಿರ ಹೋದ. ಆಗ ಅವರು ಅಧಿಕಾರಿಗೆ ’ಕುಳಿತುಕೊಳ್ಳಿ’ ಎಂದು ಹೇಳಲಿಲ್ಲ. ತಮ್ಮ ಮುಂದಿನ ಮೇಜಿನ ಮೇಲೆ ಕಾಲು ಚಾಚಿಕೊಂಡೇ ಅವನೊಂದಿಗೆ ಮಾತನಾಡಿ ಕಳುಹಿಸಿದರು. ಇದರಿಂದ  ಕೆರಳಿದ ಆ ಅಧಿಕಾರಿ ಕಾಲೇಜಿನ ಕಾರ್ಯದರ್ಶಿಗೆ ದೂರು ಹೇಳಿದ. ಈಶ್ವರ ಚಂದ್ರರು ಉತ್ತರ ಕೊಟ್ಟರು : ’ನಾನು ಕೆರ್ ಅವರನ್ನು ನೋಡಲು ಹೋದಾಗ ಅವರು ’ಕುಳಿತುಕೊಳ್ಳಿ’ ಎಂದು ಹೇಳಲಿಲ್ಲ. ಮೇಜಿನ ಮೇಲೆ ಕಾಲಿಟ್ಟು ಕುಳಿತಿದ್ದರು. ನನಗೆ ಮೊದಲು ಆಶ್ಚರ್ಯವಾಯಿತು. ಬೇಸರವಾಯಿತು. ಆನಂತರ, ಇದೇ ನಾಗರಿಕ ಯೂರೋಪಿನ ಶಿಷ್ಟಾಚಾರ ಎಂದುಕೊಂಡೆ. ಅವರು ಬಂದಾಗ ಹಾಗೆಯೇ ನಡೆದುಕೊಂಡೆ’.

ಯೋಗ್ಯತೆಗೆ ನೆರವು

ಈಶ್ವರಚಂದ್ರ ವಿದ್ಯಾಸಾಗರರು ಗುಣೈಕ ಪಕ್ಷಪಾತಿಗಳಾಗಿದ್ದರು. ಯೋಗ್ಯತೆಗೆ ಪುರಸ್ಕಾರ ಕೊಡುವುದರಲ್ಲಿ ಅವರಿಗೆ ಉತ್ಸಾಹ. ಒಂದು ಸಲ ಸಂಸ್ಕೃತ ಕಾಲೇಜಿನಲ್ಲಿ ಒಬ್ಬ ದಕ್ಷ ಪಂಡಿತರನ್ನು ನೇಮಕ ಮಾಡಿಕೊಳ್ಳಬೇಕಾಗಿತ್ತು. ಅವರ ಆಪ್ತ ಸ್ನೇಹಿತರಾಗಿದ್ದ ತಾರಾನಾಥ ತರ್ಕವಾಚಸ್ಪತಿಯವರು ಪ್ರಸಿದ್ಧ ವಿದ್ವಾಂಸರಾಗಿದ್ದರು. ತಾರಾನಾಥರು ನಿರುದ್ಯೋಗಿಯಾಗಿ ತುಂಬಾ ಕಷ್ಟದಲ್ಲಿದ್ದರು. ಈಶ್ವರಚಂದ್ರ ವಿದ್ಯಾಸಾಗರರು ಕಾಲ್ನಡಿಗೆಯಲ್ಲೇ ನೂರು ಮೈಲಿ ದೂರ ಪ್ರಯಾಣ ಮಾಡಿ ತಮ್ಮ ಸ್ನೇಹಿತರಿದ್ದ ಊರನ್ನು ತಲುಪಿದರು. ಅವರಿಂದ ಕೆಲಸಕ್ಕೆ ಅರ್ಜಿಯನ್ನು ಬರೆಸಿಕೊಂಡು ಕಲ್ಕತ್ತೆಗೆ ಬಂದರು. ಅಲ್ಲಿ ಕಾಲೇಜಿನ  ಪ್ರಿನ್ಸಿಪಾಲರಿಗೆ ಶಿಫಾರಸು ಮಾಡಿ ಆ ಕೆಲಸವನ್ನು ತಾರಾನಾಥರಿಗೆ ಕೊಡಿಸಿದರು. ಇಂತಹ ಅನೇಕ ಘಟನೆಗಳು ಅವರ ಜೀವನದಲ್ಲಿ ನಡೆದಿದ್ದವು.

ಸ್ನೇಹಿತರಿಗಾಗಿ

ಈಶ್ವರಚಂದ್ರ ವಿದ್ಯಾಸಾಗರರು ಆದರ್ಶ ಸ್ನೇಹಿತರಾಗಿದ್ದರು. ತಮ್ಮ ಸ್ನೇಹಿತರಿಗೆ ಆಪತ್ಕಾಲದಲ್ಲಿ ಸಹಾಯ ಮಾಡುವುದಕ್ಕೆ ಎಷ್ಟು ದೊಡ್ಡ ತ್ಯಾಗಕ್ಕಾದರೂ ಅವರು ಸಿದ್ಧರಾಗಿರುತ್ತಿದ್ದರು. ಅವರ ಆಪ್ತಮಿತ್ರರ ಪೈಕಿ ಮೈಕೇಲ್ ಮಧುಸೂದನದತ್ತರೂ ಒಬ್ಬರು. ಮಧುಸೂದನದತ್ತರು ಬಂಗಾಳದ ಪ್ರಸಿದ್ಧ ಕವಿಗಳೂ ವಿದ್ವಾಂಸರೂ ಆಗಿದ್ದರು. ಅವರು ಫ್ರಾನ್ಸ್ ದೇಶಕ್ಕೆ ಪ್ರವಾಸ ಹೋಗಿದ್ದಾಗ ಅಲ್ಲಿ ಅವರಿಗೆ ಸರಿಯಾದ ಉದ್ಯೋಗ ಸಿಕ್ಕದೆ ಬಹಳ ಕಷ್ಟದಲ್ಲಿ ಸಿಲುಕಿದ್ದರು. ವಿದೇಶದಲ್ಲಿದ್ದ ಅವರು ಮೈತುಂಬಾ ಸಾಲವನ್ನು ಮಾಡಿಕೊಂಡಿದ್ದರು. ಅವರು ಹಣ ಸಹಾಯ ಕೋರಿ ತಮ್ಮ ಮಿತ್ರರಾಗಿದ್ದ ಈಶ್ವರಚಂದ್ರರಿಗೆ ಪತ್ರ ಬರೆದಿದ್ದರು. ಆಗ ಈಶ್ವರಚಂದ್ರರೂ ತುಂಬಾ ಕಷ್ಟದಲ್ಲೇ ಇದ್ದರು. ದತ್ತರಿಗೆ ಹಣ ಸಹಾಯ ಮಾಡುವ ಸ್ಥಿತಿಯಲ್ಲಿ ಅವರಿರಲಿಲ್ಲ. ಆದರೂ ಬಹಳ ಕಷ್ಟಪಟ್ಟು ಸಾಲ ಮಾಡಿ ಸಾವಿರದೈನೂರು ರೂಪಾಯಿ ಸಂಗ್ರಹಿಸಿ ದತ್ತರಿಗೆ ಕಳುಹಿಸಿಕೊಟ್ಟರು. ಇದು ಇಷ್ಟಕ್ಕೇ ಮುಗಿಯಲಿಲ್ಲ. ವಿದೇಶದಲ್ಲಿ ತುಂಬಾ ದುಂದು ಜೀವನ ನಡೆಸುತ್ತಿದ್ದ ದತ್ತರು, ಮೇಲಿಂದ ಮೇಲೆ ಈಶ್ವರಚಂದ್ರರಿಗೆ ಪತ್ರ ಬರೆದು ಹಣ ಸಹಾಯ ಕೇಳುತ್ತಲೇ ಇದ್ದರು. ಪುನಃ ಅವರು ನಾಲ್ಕು ಸಾವಿರ ರೂಪಾಯಿ ಸಾಲ ಮಾಡಿ ದತ್ತರಿಗೆ ಕಳುಹಿಸಿಕೊಟ್ಟರು. ಹೀಗೆ ದತ್ತರಿಗೆ ಹಣ ಸಹಾಯ ಮಾಡಿದ್ದಕ್ಕಾಗಿ ಈಶ್ವರ ಚಂದ್ರರು ಹತ್ತು ಸಾವಿರ ರೂಪಾಯಿಗಳ ಸಾಲದ ಹೊರೆಯನ್ನು ತಮ್ಮ ತಲೆಯ ಮೇಲೆ ಹೊತ್ತುಕೊಳ್ಳಬೇಕಾಯಿತು. ಈ ಸಾಲವನ್ನು ತೀರಿಸುವ ಮುಂಚೆಯೇ ದತ್ತರು ವಿದೇಶದಲ್ಲೇ ತೀರಿಕೊಂಡರು. ಸಾಲಗಾರರ ತಗಾದೆ ಹೆಚ್ಚಾದಾಗ ಈಶ್ವರಚಂದ್ರರು ತಮ್ಮ ಅಚ್ಚುಕೂಟದ ಬಹುಭಾಗವನ್ನು ಮಾರಿ ಸಾಲವನ್ನು ತೀರಿಸಿದರು. ಇಷ್ಟಾದರೂ ಅವರಿಗೆ ದತ್ತರ ಮೇಲೆ ಎಳ್ಳಷ್ಟಾದರೂ ಅಸಮಾಧಾನವಿರಲಿಲ್ಲ. ಅವರಲ್ಲಿದ್ದ ಗೌರವ ಕಿಂಚಿತ್ತಾದರೂ ಕಡಿಮೆಯಾಗಲಿಲ್ಲ. ಇಂತಹ ಆದರ್ಶ ಸ್ನೇಹ ಅವರದು. ಹೀಗೆ ಈಶ್ವರಚಂದ್ರ ವಿದ್ಯಾಸಾಗರರಿಂದ ಉಪಕಾರ ಹೊಂದಿದವರು ನೂರಾರು ಜನರಿದ್ದರು.

ಬಿಡುಗೈ ದಾನಿ

ಒಂದು ಸಲ ಒಬ್ಬ ಬಡವನ ಮಗಳ ಮದುವೆಗೆ ಸಹಾಯ ಮಾಡುವುದಕ್ಕೆ ಅವರು ಎರಡು ಸಾವಿರದ ನಾಲ್ಕುನೂರು ರೂಪಾಯಿ ಸಾಲ ಮಾಡಿದ್ದರು. ಆ ಸಾಲ ತೀರಿಸಲು ಸಾಧ್ಯವಾಗದೆ ಅವರು ಜೈಲಿಗೆ ಹೋಗಬೇಕಾದ ಪ್ರಸಂಗ ಬಂತು. ಆಗ ಈಶ್ವರಚಂದ್ರರು ಬಹಳ ಕಷ್ಟಪಟ್ಟು ನ್ಯಾಯಾಲಯಕ್ಕೆ ಕೊಡಬೇಕಾಗಿದ್ದ ಹಣವನ್ನು ಸಕಾಲದಲ್ಲಿ ಕೊಟ್ಟು ಜೈಲು ಶಿಕ್ಷೆಯಿಂದ ಪಾರಾದರು. ತಮ್ಮ ಹೆಸರನ್ನು ಬಹಿರಂಗಪಡಿಸಬಾರದೆಂಬ ಷರತ್ತಿನ ಮೇಲೆ ಅವರು ಅನೇಕ ಸಲ ಗುಪ್ತದಾನಗಳನ್ನು ಕೊಡುವ ಪದ್ದತಿಯನ್ನು ಇಟ್ಟುಕೊಂಡಿದ್ದರು.

ನನಗೇನೂ ಹಣ ಕೊಡಬೇಡಿ

ಒಮ್ಮೆ ಈಶ್ವರಚಂದ್ರರಿಗೆ ಅನಾರೋಗ್ಯವಾಗಿತ್ತು. ಅವರ ಸ್ನೇಹಿತರ ಚಂಡೀಚರಣ ಬ್ಯಾನರ್ಜಿಯವರು ಅವರಿಗೆ ಬೇರೆ ಸ್ಥಳಕ್ಕೆ ಹೋಗಿ ವಿಶ್ರಾಂತಿ ಪಡೆಯುವಂತೆ ಸಲಹೆ ಮಾಡಿದರು. ’ಊರು ಬಿಡಲು ಸಾಧ್ಯವಿಲ್ಲ’ ಎಂದರು ಈಶ್ವರ ಚಂದ್ರರು. ’ಏಕೆ?’ ಎಂದು ಕೇಳಿದರೆ, ತಾವು ಕೆಲವರಿಗೆ ಪ್ರತಿ ತಿಂಗಳೂ ’ಸಹಾಯಧನವನ್ನು ’ಮನಿ ಆರ್ಡರ್’  ಮೂಲಕ ಕಳುಹಿಸುತ್ತಿರುವುದಾಗಿಯೂ ತಾವು ಊರುಬಿಟ್ಟು ವಿಶ್ರಾಂತಿಗೆ ಹೋದರೆ ಆ ಕೆಲಸ ನಿಂತುಹೋಗುವುದಾಗಿಯೂ ಹೇಳಿದರು. ’ಅದಕ್ಕೇನು? ಆ ಕೆಲಸವನ್ನು ಯಾರಾದರೂ ಸ್ನೇಹಿತರಿಗೆ ವಹಿಸಿದರಾಯಿತು’ ಎಂದರು ಬ್ಯಾನರ್ಜಿ. ’ಹಿಂದೊಮ್ಮೆ ಊರು ಬಿಟ್ಟು ಹೋದಾಗ ಅದನ್ನೂ ಮಾಡಿದೆ. ಕೆಲಸ ವಹಿಸಿಕೊಂಡವರು ತಾವೇ ಹಣ ತಿಂದುಬಿಟ್ಟರು’ ಎಂದರು ಈಶ್ವರಚಂದ್ರರು.

ಹೀಗೆ ಅವರು ಕಳುಹಿಸುತ್ತಿದ್ದ ಹಣ ತಿಂಗಳಿಗೆ ಎಂಟುನೂರು ರೂಪಾಯಿಗಳು !

ಅವರು ಸಾಯುವ ಮೊದಲು ಬರೆದಿಟ್ಟ ಪತ್ರದಂತೆ ಪ್ರತಿ ತಿಂಗಳು ಕಳುಹಿಸಬೇಕಾಗಿದ್ದ ಕೆಲವು ದಾನಗಳು : ೪೫ ವ್ಯಕ್ತಿಗಳಿಗೆ ೫೬೧ ರೂಪಾಯಿ, ಅವರ ಹಳ್ಳಿಯ ಪ್ರಾಥಮಿಕ ಶಾಲೆಗೆ ನೂರು ರೂಪಾಯಿ, ಆಸ್ಪತ್ರೆಗೆ ಐವತ್ತು ರೂಪಾಯಿ. ೧೮೬೭ರಲ್ಲಿ ಒರಿಸ್ಸಾದಲ್ಲಿ ಭೀಕರ ಕ್ಷಾಮ ಬಂದಾಗ ವಿದ್ಯಾಸಾಗರರು ನಾಲ್ಕು ತಿಂಗಳ ಕಾಲ ಅನ್ನಛತ್ರವನ್ನು ತಮ್ಮ ಖರ್ಚಿನಲ್ಲಿ ನಡೆಸಿದರು. ಇಲ್ಲಿ ಜಾತಿವ್ಯತ್ಯಾಸಗಳಿರಲಿಲ್ಲ.

೧೮೬೯ರಲ್ಲಿ ಬರದ್ವಾನ್ ಜಿಲ್ಲೆಯಲ್ಲಿ ಹಠಾತ್ತನೆ ಮಾರಿಕಾ ಬೇನೆ ತಲೆದೋರಿತು. ಅಲ್ಲಿಯ ವೈದ್ಯರ ಅಲಕ್ಷ್ಯದಿಂದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಕ್ಕದೆ ಸಾವಿರಾರು ಜನ ಬಡಬಗ್ಗರು ಈ ರೋಗಕ್ಕೆ ಬಲಿಯಾದರು. ಆಗ ಈಶ್ವರಚಂದ್ರ ವಿದ್ಯಾಸಾಗರರು ಸ್ವತಃ ಗವರ್ನರನ್ನು ಭೇಟಿಯಾಗಿ ಬೇರೊಬ್ಬ ವೈದ್ಯರನ್ನು ಕರೆ ತಂದು ರೋಗಿಗಳಿಗೆ ಚಿಕಿತ್ಸೆ ಮಾಡಿಸಿ ಸಾವಿರಾರು ಜನರನ್ನು ಉಳಿಸಿದರು. ತಾವೇ ಮುಂದೆ ನಿಂತು ರೋಗಿಗಳಿಗೆ ಶುಶ್ರೂಷೆ ಮಾಡುತ್ತಿದ್ದರು. ಅವರ ಊಟೋಪಚಾರ ಮತ್ತು ಔಷಧಿಗಳಿಗೆ ತಮ್ಮಸ್ವಂತ ಹಣವನ್ನೇ ನೀರು ಚೆಲ್ಲಿದಂತೆ ಖರ್ಚು ಮಾಡಿದರು.

ಮಾನವೀಯ ಅಂತಃಕರಣದಿಂದ ಅವರು ಪ್ರೇರಿತರಾಗಿ ಬಡಬಗ್ಗರಿಗೆ ಅನಾಥರಿಗೆ ತಮ್ಮ ಕೈಲಾದ ನೆರವು ನೀಡುತ್ತಿದ್ದರೇ ಹೊರತು, ಕೀರ್ತಿಯ ಲೋಭದಿಂದಲ್ಲ.

ಗೌರವ

ಈಶ್ವರಚಂದ್ರ ವಿದ್ಯಾಸಾಗರರು ಮಾಡಿದ ಸಾಮಾಜಿಕ ಮತ್ತು ಸಾಹಿತ್ಯ ಸೇವೆಯನ್ನು ಗುರುತಿಸಿ, ದೇಶವಿದೇಶಗಳಲ್ಲಿದ್ದ ಅನೇಕ ಸಂಘ ಸಂಸ್ಥೆಗಳು ಅವರನ್ನು ಗೌರವಿಸಿದವು. ಅವರು ೧೮೬೪ರಲ್ಲಿ ಲಂಡನ್ನಿನ ರಾಯಲ್ ಏಷ್ಯಾಟಿಕ್ ಸೊಸೈಟಿಯ ಗೌರವ ಸದಸ್ಯರಾದರು. ೧೮೮೦ರಲ್ಲಿ ಬ್ರಿಟಿಷ್ ಸರ್ಕಾರ್ ಅವರಿಗೆ ’ಸಿ.ಐ.ಇ.’ ಎಂಬ ಬಿರುದನ್ನು ನೀಡಿ ಗೌರವಿಸಿತು. ಆದರೆ ಈಶ್ವರಚಂದ್ರ ವಿದ್ಯಾಸಾಗರರಿಗೆ ಇಂತಹ ಬಿರುದು ಬಾವಲಿಗಳ ಮೇಲೆ ಸ್ವಲ್ಪವೂ ಮೋಹವಿರಲಿಲ್ಲವಾದ್ದರಿಂದ ಅವರು ಅದನ್ನು ನಿರಾಕರಿಸಿಬಿಟ್ಟರು. ೧೮೮೩ರಲ್ಲಿ ಅವರು ಪಂಜಾಬ್ ವಿಶ್ವವಿದ್ಯಾಲಯದ ಫೆಲೋ ಆಗಿ ಚುನಾಯಿತರಾದರು. ಇಷ್ಟೇ ಅಲ್ಲದೆ ಅನೇಕ ಖಾಸಗಿ ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದು ತಮ್ಮ ಅನುಭವಪೂರ್ಣವಾದ ಮಾರ್ಗದರ್ಶನ ಮತ್ತು ಸಹಕಾರಗಳನ್ನು ಜನರಿಗೆ ನೀಡುತ್ತಿದ್ದರು.

ಸಾರ್ಥಕ ಬಾಳು

ಈಶ್ವರಚಂದ್ರ ವಿದ್ಯಾಸಾಗರ ಜೀವನ ಕಾಲ ೧೮೨೦ರಿಂದ ೧೮೯೧ರವರೆಗೆ. ಅವರು ಸಾರ್ಥಕ ಬದುಕನ್ನು ಬಾಳಿದರು. ಅವರ ಇಡೀ ಆಯುಷ್ಯವೆಲ್ಲ ಸಮಾಜ ಸೇವೆಯಲ್ಲೇ ಸದ್ವಿನಿಯೋಗವಾಯಿತು.

ಈಶ್ವರಚಂದ್ರ ವಿದ್ಯಾಸಾಗರರ ಕೀರ್ತಿ ಎಲ್ಲೆಲ್ಲೂ ಹರಡಿದ್ದುದರಿಂದ, ಸ್ವಾಮಿ ರಾಮಕೃಷ್ಣ ಪರಮಹಂಸರು ಅವರನ್ನು ನೋಡಬೇಕೆಂಬ ಮಹಾದಾಸೆಯಿಂದ ತಾವೇ ಕಲ್ಕತ್ತೆಯಲ್ಲಿದ್ದ ಅವರ ಮನೆಗೆ ಹೋಗಿ ಅವರನ್ನು ಭೇಟಿ ಮಾಡಿದರು. ಅವರ ಮಾಡುತ್ತಿದ್ದ ಸಮಾಜ ಸೇವೆಯನ್ನು ಮುಕ್ತಕಂಠರಾಗಿ ಪ್ರಶಂಸಿಸಿದರು.

ಕಷ್ಟದ ದಿನಗಳು

೧೮೭೧ರಲ್ಲಿ ಈಶ್ವರಚಂದ್ರ ವಿದ್ಯಾಸಾಗರರ ತಾಯಿ ಹಠಾತ್ತನೆ ಕಾಶಿಯಲ್ಲಿ ಸ್ವರ್ಗಸ್ಥರಾದರು. ತಾಯಿ ತೀರಿಕೊಂಡ ಐದು ವರ್ಷಗಳ ನಂತರ ಅವರ ತಂದೆಯೂ ಸ್ವರ್ಗಸ್ಥರಾದರು. ೧೮೮೮ರಲ್ಲಿ ಅವರ ಧರ್ಮಪತ್ನಿ ದಿನಮಯಿ ದೇವಿ ಕಾಯಿಲೆಯಿಂದ ನರಳಿ ಕಣ್ಮುಚ್ಚಿದರು. ಮೇಲಿಂದ ಮೇಲೆ ಅವರ ಮನಸ್ಸಿನ ಮೇಲೆ ಬಲವಾದ ಆಘಾತಗಳಾಗುತ್ತಿದ್ದುದರಿಂದಲೂ, ಸಮಾಜ ಸೇವೆಯ ಅವಿಶ್ರಾಂತವಾದ ದುಡಿಮೆಯಿಂದಲೂ ಅವರ ಆರೋಗ್ಯವು ದಿನಕ್ರಮೇಣ ಕೆಡುತ್ತ ಬಂದಿತು. ಮುಪ್ಪಿನ ಜೊತೆಗೆ ರೋಗರುಜಿನಗಳೂ ಅವರನ್ನು ಬಾಧಿಸತೊಡಗಿದವು. ಅವರ ಹಿರಿಯ ಮಗಳು ಸಣ್ಣ ವಯಸ್ಸಿನಲ್ಲೇ ವಿಧವೆಯಾಗಿ ತನ್ನಿಬ್ಬರು ಮಕ್ಕಳೊಂದಿಗೆ ತವರುಮನೆ ಸೇರಿಕೊಂಡಿದ್ದೂ ಮುಪ್ಪಿನ ಕಾಲದಲ್ಲಿ ಅವರಿಗೊಂದು ದೊಡ್ಡ ಆಘಾತವಾಗಿತ್ತು. ಅವರಿಗೆ ನಾಲ್ಕು ಹೆಣ್ಣು ಮಕ್ಕಳು ಮತ್ತು ಒಬ್ಬ ಮಗ ಇದ್ದರೂ ಮುಪ್ಪಿನ ಕಾಲದಲ್ಲಿ ಅವರನ್ನು ಸರಿಯಾಗಿ ಆದರಿಸುವವರಿಲ್ಲದೇ ಹೋದರು. ಅವರು ಒಂಟಿಯಾಗಿ ನರಳಬೇಕಾಯಿತು.

ತಮ್ಮ ಜೀವನದಲ್ಲಿ ಇಷ್ಟೆಲ್ಲ ಆಘಾತಗಳು ಸಂಭವಿಸಿದ್ದರೂ, ಅನೇಕ ನೋವು, ಸಂಕಟಗಳನ್ನು ಅನುಭವಿಸಿದ್ದರೂ ಸ್ವಲ್ಪವೂ ಹತಾಶರಾಗದೆ ಅವರು ತಮ್ಮ ಕೊನೆಯ ಉಸಿರು ಇರುವವರೆಗೂ ಸಮಾಜಸೇವೆಯಲ್ಲಿ ನಿರತರಾಗಿದ್ದರು.

ಘನತೆ

ಈಶ್ವರಚಂದ್ರ ವಿದ್ಯಾಸಾಗರರು ಬಡತನದಲ್ಲಿ ಹುಟ್ಟಿ ಬೆಳೆದಿದ್ದರೂ ತಮ್ಮ ಸ್ವಂತ ಬುದ್ಧಿಶಕ್ತಿಯಿಂದಲೂ ಮಾನವೀಯ ಅಂತಃಕರಣದಿಂದಲೂ ನಿಚ್ಚಳವಾದ ನಡೆನುಡಿಗಳಿಂದಲೂ ಕರ್ತವ್ಯನಿಷ್ಠೆಯಿಂದಲೂ ಎಲ್ಲಕ್ಕಿಂತ ಮಿಗಿಲಾಗಿ ತಮ್ಮ ಸಮಾಜ ಸೇವಾಕಾಂಕ್ಷೆಯಿಂದಲೂ ಎಲ್ಲರ ಪ್ರೀತಿ, ವಿಶ್ವಾಸಗಳನ್ನು ಸಂಪಾದಿಸಿಕೊಂಡಿದ್ದರು.

ತಾವು ಮಾಡಿದ ಅಮೋಘವಾದ ಸಮಾಜ ಸೇವೆಯಿಂದ ನಮ್ಮ ರಾಷ್ಟ್ರದ ಅಗ್ರಗಣ್ಯ ನಾಯಕ ಪಂಕ್ತಿಯಲ್ಲಿ ಶಾಶ್ವತವಾದ ಕೀರ್ತಿಯನ್ನು ಪಡೆದು ಈಶ್ವರಚಂದ್ರರು ಅಮರರಾಗಿದ್ದಾರೆ.

ಈಶ್ವರಚಂದ್ರರ ಘನತೆಯನ್ನು ತೋರಿಸುವ ಪ್ರಸಂಗಗಳು ಎಷ್ಟೋ. ಅವುಗಳಲ್ಲಿ ಎರಡನ್ನು ಇಲ್ಲಿ ಸ್ಮರಿಸಬಹುದು.

ಒಮ್ಮೆ ಒಬ್ಬ ಯುವಕ ಕರ್ಮಟಾರ್ ರೈಲ್ವೆ ನಿಲ್ದಾಣದಲ್ಲಿ ಇಳಿದ. ಲಕ್ಷಣವಾಗಿ ಉಡುಪು ಧರಿಸಿದ್ದ. ಕೈಯಲ್ಲಿ ಒಂದು  ಸಣ್ಣ ಚೀಲ. ರೈಲಿನಿಂದ ಇಳಿದವನೇ ’ಕೂಲಿ, ಕೂಲಿ!’ ಎಂದು  ಕೂಗಲು ಪ್ರಾರಂಭಿಸಿದ. ಒಂದೆರಡು ನಿಮಿಷಗಳಲ್ಲಿ ಬಹು ಸಾಮಾನ್ಯ ಉಡುಪಿನ ಮನುಷ್ಯನೊಬ್ಬ ಅವನ ಮುಂದೆ ಬಂದು ನಿಂತ. ಅವನ ಕೈಯಿಂದ ಚೀಲವನ್ನು ತೆಗೆದುಕೊಂಡ. ಯುವಕ ಮುಂದಕ್ಕೆ ಹೊರಟ. ಚೀಲ ಹಿಡಿದವನು ಹಿಂದೆ, ರೈಲ್ವೆ ನಿಲ್ದಾಣದಿಂದ ಹೊರಕ್ಕೆ ಬಂದು ಪಲ್ಲಕ್ಕಿಯನ್ನು ಏರುವ ಮೊದಲು ಯುವಕ ಚೀಲವನ್ನು ತೆಗೆದುಕೊಂಡು ಅದನ್ನು ತಂದವನಿಗೆ ಕೂಲಿ ಕೊಡಲು ಹೋದ.

ಆ ವ್ಯಕ್ತಿ ಹೇಳಿದ :’ನನಗೇನೂ ಹಣ ಕೊಡಬೇಡಿ, ಒಂದು ಸಣ್ಣ ಚೀಲ ಹಿಡಿದುಕೊಂಡು ಹೋಗಲು ನಿಮಗೆ ಆತಂಕವಾದುದ್ದನ್ನು ನೋಡಿ ನಾನು ಅದನ್ನು ತಂದೆ. ನನ್ನ ಹೆಸರು ಈಶ್ವರಚಂದ್ರ ವಿದ್ಯಾಸಾಗರ’.

ಮತ್ತೊಮ್ಮೆ –

ಈಶ್ವರಚಂದ್ರರು ಹಣವಂತನಾದ ಒಬ್ಬ ಸ್ನೇಹಿತನ ಮನೆಗೆ ಹೋದರು. ರತ್ನಗಂಬಳಿಯ ಮೇಲೆ ಕುಳಿತು ಮಾತನಾಡುತ್ತಿದ್ದರು. ಆಗ ಇನ್ನೂ ವಿದ್ಯುಚ್ಛಕ್ತಿಯ ಬೀಸಣಿಗೆಗಳು ಬಂದಿರಲಿಲ್ಲ. ಪಂಖಾದಿಂದ ಗಾಳಿ ಬೀಸುತ್ತಿತ್ತು.

ಆ ಹೊತ್ತಿಗೆ ನೌಕರನೊಬ್ಬ ಈಶ್ವರಚಂದ್ರರಿಗೆ ಒಂದು ಲಕೋಟೆಯನ್ನು ತಂದುಕೊಟ್ಟ. ವಿಪರೀತ ಬಿಸಿಲಿನಲ್ಲಿ ಬಂದಿದ್ದ. ನಿಂತುಕೊಂಡು ಮುಖದ ಬೆವರನ್ನು ಒರೆಸಿಕೊಳ್ಳುತ್ತಿದ್ದ.

ಈಶ್ವರಚಂದ್ರರು ಅವನನ್ನು ನೋಡಿದರು. ಅವನನ್ನು ಕರೆದು ತಾವು ಸರಿದು, ತಾವು ಕುಳಿತಿದ್ದ ಕಡೆ ಅವನು ಕುಳಿತು ದಣಿವನ್ನು ಆರಿಸಿಕೊಳ್ಳಲು ಅವಕಾಶ ಮಾಡಿಕೊಟ್ಟರು.

ಅವರ ಶ್ರೀಮಂತ ಸ್ನೇಹಿತರಿಗೆ ನೌಕರನೊಬ್ಬ ರತ್ನಗಂಬಳಿಯ ಮೇಲೆ ತಮ್ಮ ಬಳಿ ಕುಳಿತದ್ದು ಅಸಮಾಧಾನವಾಯಿತು. ನೌಕರ ಹೋದ ನಂತರ ಈಶ್ವರಚಂದ್ರರು ಸ್ನೇಹಿತನಿಗೆ ಹೇಳಿದರು : ’ಅವನ ಹಾಗೆಯೇ ನನ್ನ ತಂದೆಯೂ ಬಡವರು. ಅವನ ಬಾಡಿದ ಮುಖವನ್ನು ನೋಡಿ ನನ್ನ ತಂದೆಯ ನೆನಪು ಬಂದಿತು. ಅವನು ನನಗಿಂತ ಯಾವ ರೀತಿಯಲ್ಲಿಯೂ ಕೀಳಲ್ಲ ಎಂದೇ ನನ್ನ ಭಾವನೆ’.