ಜನನ: ೧-೧-೧೯೨೮, ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ,

ಮನೆತನ: ತಂದೆ ಘಟಿಗೆಪ್ಪ-ರಂಗಭೂಮಿ ಕಲಾಸಕ್ತರು. ತಾಯಿ ಕಾಶವ್ವ-ಸಂಪ್ರದಾಯ ಶೈಲಿಯಲ್ಲಿ ಹಾಡುಗಳನ್ನು ಹಾಡುತ್ತಿದ್ದರು. ನೇಕಾರ ವೃತ್ತಿಯೇ ಜೀವನಾಧಾರ.

ಗುರುಪರಂಪರೆ: ತಾಯಿ ಹಾಡುತ್ತಿದ್ದ ಗಾಯನವೇ ಇವರಿಗೆ ಸ್ಪೂರ್ತಿ. ಮುಂದೆ ಕೊಲ್ಹಾಪುರ ವಿ.ಕೆ. ದೇಶಪಾಂಡೆ, ಮಾರುತಿ ಬಡಿಗೇರ, ಮೃತ್ಯುಂಜಯ ಬುವಾ ಪುರಾಣಿಕ್, ಆರ್.ಎನ್. ಜೋಶಿ ಬುವಾ ಇವರುಗಳಲ್ಲಿ ಸಂಗೀತ ಶಿಕ್ಷಣ ಪಡೆದು ಗಂಧರ್ವ ಮಹಾ ವಿದ್ಯಾಲಯದಿಂದ ಸಂಗೀತ ಅಲಂಕಾರ, ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ವಿದ್ವತ್ ಪರೀಕ್ಷೆ ತೇರ್ಗಡೆ. ಹಾರ್ಮೋನಿಯಂ ವಾದನದಲ್ಲೂ ಪರಿಶ್ರಮವಿದೆ.

ಸಾಧನೆ: ಜಮಖಂಡಿಯ ಗಜಾನನೋತ್ಸವದಲ್ಲಿ ಪ್ರಥಮ ಕಾರ್ಯಕ್ರಮ. ಶ್ರೋತೃಗಳಿಂದ ಮುಕ್ತ ಪ್ರಶಂಸೆ. ಅಲ್ಲಿಂದ ಮುಂದೆ ಹಂತ ಹಂತವಾಗಿ ಯಶಸ್ಸಿನ ಸೋಪಾನವನ್ನೇರುತ್ತಲೇ ಹೋದರು ಎಂದೂ ಹಿಂದಿರುಗಿ ನೋಡಲೇ ಇಲ್ಲ. ಪಣಜಿ ಕರ್ನಾಟಕ ಸಂಘ, ಮುಂಬೈನ ಕರ್ನಾಟಕ ಸಂಗೀತ ಸಾಹಿತ್ಯ ಕಲಾಕ್ಷೇತ್ರ, ಮಿರಜ್, ಮೈಸೂರು, ಗೋಕಾಕ, ಸಂಕೇಶ್ವರ ಮುಂತಾದ ಕಡೆ ಸುಗಮ ಸಂಗೀತ ಕಾರ್ಯಕ್ರಮಗಳಲ್ಲಿ ಕನ್ನಡ ಗೀತೆ, ಭಕ್ತಿ ಗೀತೆ, ತತ್ವಪದಗಳನ್ನು ಹಾಡಿ ಹೆಸರು ಮಾಡಿದ್ದಾರೆ. ಕಳೆದ ಐದು ದಶಕಗಳಿಂದ ಧಾರವಾಡ ಆಕಾಶವಾಣಿ ಕೇಂದ್ರದಿಂದ ಇವರ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ರಾಜ್ಯ ಸರ್ಕಾರದ ವಿದ್ಯಾ ಇಲಾಖೆಯಲ್ಲಿ ಸಂಗೀತ ಶಿಕ್ಷಕರಾಗಿ ಸೇವೆಯಲ್ಲಿದ್ದರು.

ಪ್ರಶಸ್ತಿ-ಸನ್ಮಾನ: ೨೦೦೩ರಲ್ಲಿ ಇವರ ೭೫ ವಸಂತಗಳನ್ನು ಕಳೆದ ಸಂದರ್ಭದಲ್ಲಿ ಪೌರ ಸನ್ಮಾನ ನಡೆಯಿತು. ಸಂಗೀತ ನೃತ್ಯ ಅಕಾಡೆಮಿ ವತಿಯಿಂದ ೧೯೮೬-೮೭ರ ಸಾಲಿನ ಕರ್ನಾಟಕ ಕಲಾ ತಿಲಕ ಪ್ರಶಸ್ತಿ, ಹುಕ್ಕೇರಿ ಬಾಳಪ್ಪ ಸಂಸ್ಕರಣ ಪ್ರಶಸ್ತಿಗಳೇ ಅಲ್ಲದೆ ೨೦೦೫ರಲ್ಲಿ ಸಂತ ಶಿಶುನಾಳ ಶರೀಫ ಪ್ರಶಸ್ತಿಯೂ ಇವರಿಗೆ ಸಂದಿದೆ.