(ಕ್ರಿ.ಶ. ೧೬೪೨-೧೭೨೭) (ಗುರುತ್ವಾಕರ್ಷಣ ಶಕ್ತಿ)

ಭೌತಶಾಸ್ತ್ರದ ಪಿತಾಮಹನೆಂದು ಕರೆಯಲ್ಪಡುವ ಸರ‍್ ಐಸಾಕ್ ನ್ಯೂಟನ್ ೧೬೪೨ರಲ್ಲಿ ಲಿಂಕನ್ ಶೈರ‍್ದ ವುಲ್ಸ್ಥಾರ್ಪ ಎಂಬಲ್ಲಿ ಜನಿಸಿದರು. ತನ್ನ ಹನ್ನೆರಡನೆಯ ವಯಸ್ಸಿನಲ್ಲಿ ಆತ ಶಾಲೆಗೆ ಸೇರಿದ. ಹದಿನೆಂಟನೇ ವಯಸ್ಸಿನಲ್ಲಿ ಕೇಂಬ್ರಿಜ್ ವಿಶ್ವವಿದ್ಯಾಲಯದ ಟ್ರಿನಿಟಿ ಕಾಲೇಜಿಗೆ ಹೋದರು. ಅಲ್ಲಿ ಗಣಿತಶಾಸ್ತ್ರದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಿದರು. ೧೬೬೯ರಲ್ಲಿ ಟ್ರಿನಿಟಿ ಕಾಲೇಜಿನಲ್ಲೇ ಗಣಿತ ಪ್ರಾಧ್ಯಾಪಕನಾಗಿ ಕೆಲಸ ಮಾಡತೊಡಗಿದರು. ಆತ ಗುರುತ್ವಾಕರ್ಷಣ ಶಕ್ತಿಯನ್ನು ಕಂಡುಹಿಡಿದ ಸಂಗತಿಯ ಹಿಂದೆ ಒಂದು ಸ್ವಾರಸ್ಯಕರ ಕಥೆಯೇ ಇದೆ. ಒಮ್ಮೆ ತೋಟದಲ್ಲಿ ಸೇಬು ಹಣ್ಣು ನೆಲದ ಮೇಲೆ ಬೀಳುತ್ತಿದ್ದುದನ್ನು ಆತ ಗಮನಿಸಿದ್ದನು. “ಸೇಬು ಹಣ್ಣು ನೆಲದ ಮೇಲೆ ಏಕೆ ಬಿತ್ತು, ಆಕಾಶಕ್ಕೆ ಏಕೆ ಹೋಗಲಿಲ್ಲ?” ಎಂದು ಆತ ಆಲೋಚಿಸಿದನು. ಆಗ ಇದು ವಿಚಿತ್ರವಾದ ಆಲೋಚನೆ ಎನಿಸುವಂತಿತ್ತು. ಆದರೆ ಆತನ ಈ ಆಲೋಚನೆಯೇ ಆತ ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದು “ಗುರುತ್ವಾಕರ್ಷಣ ಸೂತ್ರ” ರೂಪಿಸಲು ಕಾರಣೀಭೂತವಾಯಿತು.

ನ್ಯೂಟನ್ ರ ಅತ್ಯಂತ ಮುಖ್ಯವಾದ ಇತರ ಸಂಶೋಧನೆಗಳು : ಚಲನೆಯ ನಿಯಮಗಳು, ಬೈನೊಮಿಯಲ್ ಥಿಯರೆಮ್ (ಗಣಿತ ಶಾಸ್ತ್ರದಲ್ಲಿ ಬರುವ ದ್ವಿಪದ ಸೂತ್ರ) ಮತ್ತು ಮೆಥಡ್ ಆಫ್ ಫ್ಲಕ್ಷನ್ಸ್ (ಕಲನ ಶಾಸ್ತ್ರವಿಧಾನ). ನ್ಯೂಟನ್ ರ ಚಲನೆಯ ನಿಯಮಗಳಲ್ಲಿ ಒಂದಾದ ಮೂರನೆಯ ನಿಯಮ ಸುಪರಿಚಿತವಾದದ್ದು. “ಕ್ರಿಯೆ ಮತ್ತು ಪ್ರತಿಕ್ರಿಯೆ ಪರಸ್ಪರ ಸಮವಾಗಿರುತ್ತವೆ, ಆದರೆ ವಿರುದ್ಧ ದಿಕ್ಕಿನಲ್ಲಿರುತ್ತವೆ” ಎಂಬುದೇ ಆ ನಿಯಮ. ಜೆಟ್ ಎಂಜಿನ್ನು ಈ ಸೂತ್ರಕ್ಕೆ ಅನುಗುಣವಾಗಿಯೇ ಕಾರ್ಯ ಮಾಡುತ್ತದೆ.

ಏಳು ಬಣ್ಣಗಳು ಕೂಡಿ ಬಿಳಿ ಬಣ್ಣವಾಗುತ್ತದೆ ಎಂಬುದನ್ನು ಕಂಡು ಹಿಡಿದಿದ್ದು ನ್ಯೂಟನ್ನರ ಇನ್ನೊಂದು ಮಹತ್ವದ ಸಾಧನೆಯಾಗಿದೆ. ಬೆಳ್ಳಗೆ ಕಾಣುವ ಸೂರ್ಯ ಪ್ರಕಾಶವನ್ನು ಪ್ರಿಸಮ್ ನಲ್ಲಿ ಹಾಯಿಸಿ ಏಳು ಬಣ್ಣಗಳನ್ನು ಪ್ರತ್ಯೇಕಗೊಳಿಸಿ ತೋರಿಸುವ ಮೂಲಕ ಆತ ತನ್ನ ಈ ಸಂಗತಿಯನ್ನು ಖಚಿತಪಡಿಸಿಕೊಟ್ಟರು.

ಇಂಥ ಒಬ್ಬ ಅಸಾಮಾನ್ಯ ವಿಜ್ಞಾನಿ ಪಾರ್ಲಿಮೆಂಟ್ ಸದಸ್ಯನಾಗಿ ಕೂಡ ಸೇವೆ ಸಲ್ಲಿಸಿದರು.

ತೀವ್ರ ಅಸ್ವಸ್ಥತೆಯ ಕಾರಣ ಅವರು ೧೭೨೭ರಲ್ಲಿ ನಿಧನರಾದರು.