ಈ ಕವಿತೆ ಯಾವಳೋ ಹೆಣ್ಣ ಕಣ್ಣ ಬೆಳಕಿನ ಕಿರಣ
ತಾಗಿ ಪುಟಿದದ್ದಲ್ಲ,
ಪ್ರಣಯಾಲಾಪಗಳ ಜಳ್ಳು ಬಳ್ಳಿಯನು ತಬ್ಬಿ
ಹಬ್ಬಿದ್ದಲ್ಲ.

ಯೌವನೋನ್ಮತ್ತ ವಿಕೃತ ಭ್ರಮೆಗಳಿಗೆಲ್ಲ
ಕೋಡಂಗಿ ವೇಷವನು ಕಟ್ಟಿ ಕುಣಿಸಿದ್ದಲ್ಲ.
ಬೆಟ್ಟದ ಮೇಲಕಸ್ಮಾತ್ತಾಗಿ ಎಡವಿದ ಮೋಡ
ಸುರಿದ ತಡಸಲು ಅಲ್ಲ.

ಯಾವತ್ತಿನಿಂದಲೋ ಸುರಿದ ಜಡಿಮಳೆ ಇಳಿದು
ಒಳಗಿನ ಕುದಿಗೆ ಹದವಾಗಿ ಮಿದುವಾಗಿ
ಮಲಗಿರುವಾಗ,
ಬಾವಿಯ ತೋಡಿ, ಯಾತವ ಹೊಡೆದು
ತಂದದ್ದು ಈ ರಾಗ!