ಈ ದೇಶದಲ್ಲಿ
ಎಲ್ಲವೂ ಆಮೂಲಾಗ್ರವಾಗಿ
ಬದಲಾಗಬೇಕು.
ಆದರೆ-
ನಾ ಕೂತ ಕುರ್ಚಿ, ಅದರ ಕೆಳಗಿನದೊಂದಿಷ್ಟಗಲ ನೆಲ
ಇದ್ದಂತೆಯೇ ಇರಬೇಕು.

ಈ ದೇಶದಲ್ಲಿ
ಜಾತಿ-ಮತ-ಪಂಥ ಎಲ್ಲವೂ
ತೊಲಗಬೇಕು.
ಆದರೆ-
ಮುಂದುಳಿದ ನಮ್ಮ ವರ್ಗಕ್ಕೊಂದಷ್ಟು ಸೀಟು
ಮೀಸಲಿರಬೇಕು.

ಈ ದೇಶದಲ್ಲಿ
ವ್ಯಕ್ತಿ ಪೂಜೆ, ವಂಶ ಪ್ರತಿಷ್ಠೆ ಎಲ್ಲವೂ
ನಿಲ್ಲಬೇಕು.
ಆದರೆ-
ನಮ್ಮ ಮನೆದೇವರ ಗದ್ದುಗೆಗಿರುವ ಇನಾಮತಿ
ರದ್ದಾಗದಿರಬೇಕು.

ಈ ದೇಶದಲ್ಲಿ
ಎಲ್ಲರೂ ಮಾತಾಡುವುದನ್ನು ನಿಲ್ಲಿಸಿ
ತೆಪ್ಪಗಿರಬೇಕು.
ಆದರೆ-
ನಾನಾಡುವ ಮಾತಿಗೆ ಸದಾ
ಕಿವಿದೆರೆದು, ತಲೆದೂಗಬೇಕು.