ಹರಿದಾಸರು ಮೂಲತಃ ಸಾಹಿತಿಗಳಲ್ಲ, ಅನುಭಾವಿಗಳು- ವಚನಕಾರರ ಹಾಗೆ.  ಲೋಕದಲ್ಲಿ ಉಳಿದೆಲ್ಲರಂತೆ ಆಸೆಯ ದಾಸರಾಗಿ ಬದುಕುತ್ತಿದ್ದವರು, ಎಂದೋ ಒಮ್ಮೆಯಾವ ಕಾರಣದಿಂದಲೋ- ಅದು ಗುರುಕೃಪೆಯೋ, ಲೋಕದಲ್ಲಿ ಒದಗಿದ ಯಾವುದೋ ಆಘಾತವೋ, ಆಕಸ್ಮಿಕವೋ, ಅಥವಾ ನಮ್ಮ ಕಾರ್ಯ ಕಾರಣ ಸಂಬಂಧದಾಚೆಯ ಅಲೌಕಿಕ ಘಟನೆಯೋ- ಮೇಲೆದ್ದು, ಎಚ್ಚರಗೊಂಡು ಈ ಆಸೆಗಳ ಹಾಸುಬಲೆಯಿಂದ ಬಿಡಿಸಿಕೊಂಡು ತಮ್ಮ ಗುರಿಯ ಕನಸನ್ನು ಕಣ್ಣಮುಂದೆ ತುಂಬಿಕೊಂಡು ‘ದಾರಿ ಯಾವುದಯ್ಯಾ….’ ಎಂದು ಪ್ರಶ್ನಿಸುತ್ತಾ ಹೊರಟವರು. ಈ ಒಂದು ಎಚ್ಚರ ಮತ್ತು ಆ ಎಚ್ಚರದ ಮೂಲದೊಂದಿಗೆ ಬೆರೆಯುವ ಹಂಬಲ ಇದೇ ಅನುಭಾವ. ಈ ಅನುಭಾವ ಸಾಧನೆಯ ಅನುಭವವನ್ನು ಕುರಿತು ಈ ವಿಶಿಷ್ಟ ವ್ಯಕ್ತಿತ್ವಗಳು ತಮಗೆ ತಾವೇ ಮಾತನಾಡಿಕೊಂಡಾಗ, ಹಾಡಿಕೊಂಡಾಗ ಕನ್ನಡ ಸಾಹಿತ್ಯಕ್ಕೆ ಲಭಿಸಿತು ಈ ಪರಿಯ ಸೊಬಗು.

ದಾಸರನ್ನು ಸಾಹಿತಿಗಳೆಂದು ಕರೆಯಬಹುದು ಈ ಅರ್ಥದಲ್ಲಿ: ಅವರು ಉಳಿದ ಸಾಹಿತಿಗಳ ಹಾಗೆ ಸಾಹಿತ್ಯ ನಿರ್ಮಿತಿಯನ್ನು ವೃತ್ತಿಯನ್ನಾಗಿಯೋ, ಗುರಿಯನ್ನಾಗಿಯೋ ಇರಿಸಿಕೊಂಡವರಲ್ಲ. ಅವರು ಹಾಗೆ ಸಾಹಿತ್ಯ ನಿರ್ಮಿತಿಯನ್ನು ಕೈಗೊಳ್ಳಲು ವೈಯಕ್ತಿಕ ಆಸಕ್ತಿಯಾಗಲಿ, ರಾಜಾಶ್ರಯಾದಿ ಅನ್ಯ ಒತ್ತಡಗಳಾಗಲಿ ಇರಲಿಲ್ಲ. ಅದು ಅವರಿಗೆ ಬೇಕಾಗಿಯೂ ಇರಲಿಲ್ಲ. ಕವಿತೆಯಿಂದ ಬರುವ ಕೀರ್ತಿ, ಗೌರವ, ಸಂಪತ್ತುಗಳ ಹಂಗಿನ ಗೆರೆಯಿಂದಾಚೆಗೇ ಅವರ ಸಂಚಾರ. ಏಕೆಂದರೆ ಅವರು ಕಂಡದ್ದು ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ -ಎನ್ನುವ ವ್ಯವಹಾರವನ್ನು. ಆದ್ದರಿಂದ ಇದರಿಂದ ಬಿಡಿಸಿಕೊಂಡ ಮೇಲೆ ಮತ್ತೆ ಅದರೊಳಕ್ಕೆ ಏಕೆ ಕಾಲಿಕ್ಕಬೇಕು? ಅವರು ಕಂಡುಕೊಂಡದ್ದು ಈ ಎಲ್ಲದರಾಚೆಯ ಆಧ್ಯಾತ್ಮಿಕ ಪ್ರಯೋಜನವನ್ನು. ನಾವು ಯಾವುದನ್ನು ಸಾಹಿತ್ಯ ಎಂದು ಕರೆಯುತ್ತೇವೋ, ಅದು, ಅವರ ಪಾಲಿಗೆ ಆ ಪರಮ ಪ್ರಯೋಜನಕ್ಕೆ ಅವರು ಕಂಡುಕೊಂಡ ಒಂದು ಮೆಟ್ಟಲು ಮಾತ್ರ.

ಹೀಗಾಗಿ ಇವರ ಹಾಡುಗಳ ವಸ್ತು ಕಥೆಯಲ್ಲ, ಕಾವ್ಯವಲ್ಲ; ಅವುಗಳಲ್ಲಿ ಅಷ್ಟಾದಶ ವರ್ಣನೆಗಳಿಲ್ಲ, ಮನೋರಂಜನೆಯಿಲ್ಲ; ಆದರೂ ಅವರ ಹಾಡುಗಳನ್ನು ‘ದಾಸ ಸಾಹಿತ್ಯ’ ಎನ್ನುತ್ತೇವೆ. ಯಾಕೆ?

ಕಾರಣ ಇಷ್ಟೆ: ದಾಸರಲ್ಲಿ ಸಾಹಿತಿಯ ಮನೋಧರ್ಮವಿದೆ; ಹೀಗಾಗಿ ಅವರು ಬರೆದದ್ದು ಸಾಹಿತ್ಯವೂ ಆಗಿದೆ.

ಸಾಹಿತಿಯ ಮನೋಧರ್ಮ ಎಂದರೆ ಕಾಣತಕ್ಕದ್ದು, ಕಾಣಿಸತಕ್ಕದ್ದು. ಕಾಣತಕ್ಕದ್ದು ಲೋಕವನ್ನು, ತನ್ನನ್ನು, ಅದರ ಸತ್ವವನ್ನು, ಸತ್ಯವನ್ನು, ಸೌಂದರ್ಯವನ್ನು, ಇನ್ನೇನೇನು ಸಾಧ್ಯವೋ ಆ ಎಲ್ಲವನ್ನೂ. ಕಂಡದ್ದನ್ನು ಕಾಣಿಸತಕ್ಕದ್ದು ಮುಂದಿನ ಕೆಲಸ. ಹಾಗೆ ಕಂಡದ್ದನ್ನು ಕಾಣಿಸಬೇಕಾದರೆ ಕಂಡದ್ದನ್ನು ಕಂಡರಿಸುವ ಕಲೆಗಾರಿಕೆ ಬೇಕು, ಅದಕ್ಕೆ ತಕ್ಕ ಮಾತು ಬೇಕು, ರೀತಿ ಬೇಕು, ಮನಸ್ಸನ್ನು ಮುಟ್ಟುವಂಥ ತಟ್ಟುವಂಥ ಭಾಷೆಯಲ್ಲಿ ಸಚಿತ್ರವಾಗಿ, ಸಜೀವವಾಗಿ ಅನುಭವದ ಬಹುಮುಖಗಳನ್ನು ಪ್ರಕಟಿಸುವ ರಸವಂತಿಕೆ ಬೇಕು. ದಾಸರು ಎರಡನ್ನೂ ಬಲ್ಲವರು. ಆದ್ದರಿಂದಲೇ ಅವರ ಅನುಭವದಲ್ಲಿ, ಅಭಿವ್ಯಕ್ತಿಯಲ್ಲಿ ಸಾಹಿತಿಯ ಮನೋಧರ್ಮವಿದೆ.

ಅವರ ವ್ಯಕ್ತಿತ್ವಕ್ಕೆ ಎರಡು ರೇಖೆ: ಒಂದು ತಮಗೂ ತಮ್ಮ ಭಗವಂತನಿಗೂ ಇರುವ ಸಂಬಂಧ. ಇನ್ನೊಂದು ತಮಗೂ ತಮ್ಮ ಸುತ್ತಣ ಲೋಕಕ್ಕೂ ಇರುವ ಸಂಬಂಧ. ಈ ಎರಡು ಸಂಬಂಧಗಳೂ ಹೊರಡುವ ಒಂದು ಬಿಂದುವಿನಲ್ಲಿದೆ ಇವರ ವ್ಯಕ್ತಿತ್ವ. ತಮಗೂ ತಮ್ಮ ಭಗವಂತನಿಗೂ ಇರುವ ಅನುಭಾವಿಕ ಸಂಬಂಧದಲ್ಲಿ ತಮ್ಮ ಒಳಗನ್ನು ತಾವೇ ತೋಡಿಕೊಂಡರು, ತೀಡಿಕೊಂಡರು. ತಮ್ಮೊಳಗಿನ ಅರೆಕೊರೆಗಳನ್ನೆಲ್ಲಾ ಸ್ವವಿಮರ್ಶೆಯ ಗಾಳಿಯಲ್ಲಿ ತೂರಿಕೊಂಡರು. ತಮ್ಮೊಳಗಿನ ರಿಪೇರಿಯಾಗದ ಸಂಗತಿಗಳನ್ನೆಲ್ಲಾ ಬಿಚ್ಚುಮನಸ್ಸಿನಿಂದ ಭಗವಂತನೆದುರು ನಿವೇದಿಸಿಕೊಂಡರು. ಹಾಗೆ ನಿವೇದಿಸಿಕೊಂಡದ್ದು ದೇವರಿಗೆ ಕಂಡಿರಬೇಕು. ಲೋಕಕ್ಕಂತೂ ಕಾಣುವ ಹಾಗೆ ಬಿಚ್ಚಿಹಾಸಿದರು ತಮ್ಮ ಬದುಕಿನ ಪದರ ಪದರಗಳನ್ನೂ. ಮತ್ತೊಂದು ದಿಕ್ಕಿನಲ್ಲಿ ವಸ್ತುನಿಷ್ಠವಾಗಿ ತಮ್ಮಿಂದಾಚೆಯ ತಮ್ಮ ಸುತ್ತಣ ಬದುಕನ್ನು ನೋಡಿದರು. ಲೋಕ ಜೀವನದ ನೂರು ಮುಖಗಳನ್ನು ಅನುಕಂಪೆಯಿಂದ ಪರಿಶೀಲಿಸಿದರು, ವಿಶ್ಲೇಷಿಸಿದರು, ಟೀಕಿಸಿದರು, ಮರುಗಿದರು, ದಾರಿ ಯಾವುದು ಗುರಿ ಯಾವುದು ಎಂಬ ಬಗ್ಗೆ ತಿಳಿವಳಿಕೆ ನೀಡಿದರು. ಇದು ದಾಸರ ಪದಗಳ ಅಂತರಂಗ ಬಹಿರಂಗ ಶೈಲಿ.

ದಾಸ ಸಾಹಿತ್ಯ ಯಾವುದೋ ವಿಷಯವೊಂದನ್ನಾರಿಸಿ, ಅದನ್ನು ಏಕಾಂತದಲ್ಲಿ ಪರಿಭಾವಿಸಿ ಸೌಂದರ್ಯ ನಿರ್ಮಾಣ ಮಾಡುವ ಪ್ರಯತ್ನದಿಂದ ಮೂಡಿದ್ದಲ್ಲ. ಅದೊಂದು ರೀತಿಯಲ್ಲಿ ಅಂದಂದಿನ ಅನುಭವಕ್ಕೆ ಅನಾಯಾಸವಾಗಿ ಪಡಿಮಿಡಿದ ಪ್ರತಿಕ್ರಿಯಾರೂಪದ ಸಾಹಿತ್ಯ. ಅಂದಂದಿನ ಅನುಭವಗಳಿಗೆ ಆಗಾಗ ಅಲ್ಲಲ್ಲಿಯೆ ರೂಪುಕೊಟ್ಟ ಸದ್ಯೋಜಾತ ಪ್ರತಿಭೆಯ ಅಭಿವ್ಯಕ್ತಿಗಳು. ಹೀಗಾಗಿ ಇದು ಜೀವನ ಸಾಹಿತ್ಯ, ದೈನಂದಿನ ಸಾಹಿತ್ಯ. ಈ ಹಾಡಿನ ಜಾಡೇ ಹೀಗೆ: ಈ ತಂಬೂರೀ ಪ್ರತಿಭೆ ತನ್ನ ಹಾದಿಯಲ್ಲಿ ಕಂಡದ್ದನ್ನು ಕಂಡ ಹಾಗೆ ಸಲೀಸಾಗಿ ಹಾಡನ್ನಾಗಿ ಮಾಡುತ್ತದೆ. ದಾಸರು ಬೆಳಿಗ್ಗೆ ಹೊಳೆಯ ಬದಿಯಲ್ಲಿ ಬರುತ್ತಿದ್ದಾರೆ. ಅಲ್ಲಿ ಅನೇಕ ಜನ ಸ್ನಾನ ಮಾಡುತ್ತಿದ್ದಾರೆ. ‘ಉದಯ ಕಾಲದೊಳೆದ್ದು, ಗಡ ಗಡ ನಡುಗುತ ನದಿಯಲಿ ಮಿಂದೆವೆಂದು ಹಿಗ್ಗು’ವ ಜನರನ್ನು ಕಾಣುತ್ತಾರೆ. ಆಗ ಅಲ್ಲಿ ಅವರ ಚರ್ಯೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಅದು, ಈ ಸ್ನಾನ ಜಪ ತಪವೆಲ್ಲ ಬರಿಯ ಉದರ ವೈರಾಗ್ಯ, ಬರೀ ತೋರಿಕೆ ಅನ್ನಿಸಿತು. ಸರಿ, ಮೂಡಿತು ಒಂದು ಹಾಡು- ‘ಉದರ ವೈರಾಗ್ಯವಿದು ನಮ್ಮ ಪದುಮನಾಭನಲಿ ಲೇಶ ಭಕುತಿಯಿಲ್ಲ’ ಎಂದು. ಇನ್ನೊಂದೆಡೆ ನೋಡಿದರು, ಇದೇ ಉದರ ವೈರಾಗ್ಯದ ಜನ, ದೇವರ ಪೂಜೆಯ ನೆಪದಲ್ಲಿ ದೇವರ ಕೋಣೆಯನ್ನು ಕಂಚುಗಾರರ ಬೀಡಾರವನ್ನಾಗಿ ಮಾಡಿದ್ದಾರೆ! ಅಷ್ಟೊಂದು ಪೂಜಾ ಪರಿಕರಗಳ ಥಾಳಥಳ್ಯ. ಇನ್ನೊಂದು ಕಡೆ ದಾಸರು ಭಿಕ್ಷೆಗೆ ಹೋಗಿದ್ದಾರೆ. ಯಾರೋ ಒಬ್ಬಳು ಇವರನ್ನು ಕಂಡು ಬಾಗಿಲನ್ನು ದಢಾರನೆ ಮುಚ್ಚಿಬಿಟ್ಟಳು. ದಾಸರು ಅದನ್ನೇ ಹಾಡಿಕೊಂಡರು: ‘ಕದವ ಮುಚ್ಚಿದಳಿದೆಕೋ, ಒಳಗಿನ ಪಾಪವು ಹೊರಗೆ ಹೋದೀತೆಂದು ಕದವ ಮುಚ್ಚಿದಳಿದೆಕೋ…’ ಎಂದು. ಇನ್ನೊಂದು ಮನೆಯ ಬಾಗಿಲಲ್ಲಿ ನಿಂತರು. ಯಾರೋ ಒಬ್ಬಳು ದಾಸರಿಗೆ ಭಿಕ್ಷೆ ಹಾಕಲಾರದೆ ‘ಕೈ ಎಂಜಲಾಗಿದೆ ಮುಂದೆ ಹೋಗಿ’ ಎಂದಿರಬೇಕು. ಆಗ ‘ಇಕ್ಕಲಾರದ ಕೈ ಎಂಜಲು’ ಚಿಕ್ಕಮಕ್ಕಳು ಅಳುತಾವೆ ಹೋಗೋ ದಾಸಯ್ಯ’ ಎಂದು ತಂಬೂರಿ ಮಿಡಿಯಿತು. ಇನ್ಯಾರೋ ಮುಸುರೆ ತೊಳೆಯುತ್ತಾ ಇದ್ದರು. ದಾಸರು ಹೇಳಿದರು: ‘ಮುಸುರೆ ತೊಳೆಯಬೇಕು- ಮನಸಿನ ಮುಸುರೆ ತೊಳೆಯಬೇಕು’ ಎಂದು. ಇನ್ನೊಂದೆಡೆ ಯಾರೊ ಒಬ್ಬಳು ಗಂಡನೊಡನೆ ಜಗಳಮಾಡಿ ಕಟ್ಟಿದ ತಾಳಿಯನ್ನು ಹರಿದು ಬಿಸಾಡಿರಬೇಕು. ದಾಸರೂ ಹಾಡಿದರು ‘ತಾಳಿಯ ಹರಿದು ಬಿಸಾಟೆ’ ಎಂದು. ಇದೇನಿದು? ದಾಸರು ತಾಳಿ ಹರಿದು ಬಿಸಾಡುವುದೆಂದರೆ ಏನು ಎಂದು ವಿಸ್ಮಯ ಗೊಂಡವರಿಗೆ ಅದೇ ಪಲ್ಲವಿಯ ಮುಂದಿನ ಚರಣದಲ್ಲಿ ಉತ್ತರ ಸಿಕ್ಕಿತು- ‘ಇಂಥ ಕೀಳು ದೇವತೆಗಳ ಹೆಸರಲ್ಲಿ ಕಟ್ಟಿದ ತಾಳಿಯ ಹರಿದು ಬಿಸಾಟೆ.’ ಕೆಲವು ದುರ್ಜನರ ನಡವಳಿಕೆಯನ್ನು ಕಂಡು ‘ಜಾಲಿಯ ಮರದಂತೆ ದುರ್ಜನರು’ ಎಂದು ವರ್ಣಿಸಿದರು. ಸುತ್ತ ನಿಂದಕರಿದ್ದಾರೆ. ಏನು ಮಾಡುವುದು? ಅವರೂ ಬೇಕು. ‘ನಿಂದಕರಿರ ಬೇಕು, ಹಂದಿಯಿದ್ದರೆ ಕೇರಿ ಹ್ಯಾಂಗೆ ಶುದ್ಧವೊ ಹಾಂಗೆ ನಿಂದಕರಿರಬೇಕು’ ಎಂದು ಸಮಾಧಾನ ಮಾಡಿಕೊಂಡರು. ದಾಸರ ಹಾಡು ಮೂಡಿದ ಜಾಡು ಇದು. ಅವರ ಮಾತಿನಲ್ಲಿ ಲೋಕವನ್ನು ಕುರಿತ ತಿರಸ್ಕಾರವಿಲ್ಲ, ಅನುಕಂಪೆಯಿದೆ. ಸುತ್ತಣ ಬದುಕು ಹಸನಾಗಬೇಕೆಂಬ ತುಡಿತವಿದೆ. ಸಾಮಾನ್ಯವಾದ ಸಂಗತಿಗೆ ಅಸಾಮಾನ್ಯವಾದ ತಿರುವನ್ನು ಕೊಟ್ಟು ದೃಷ್ಟಿ ಪಥವನ್ನೇ ಬದಲಾಯಿಸುವ ಮೋಡಿಯಿದೆ. ಅಂದಂದಿನ ಅನುಭವಕ್ಕೆ ಮಾತು ಸಲೀಸಾಗಿ ಒದಗಿ ಬಂದಿದೆ. ಸುತ್ತಣ ಜನದ ಆಡುಮಾತನ್ನು ಎತ್ತಿ ತಮ್ಮ ಹಾಡಿಗೆ ಜೋಡಿಸಿದರು. ಶಿವಶರಣರಾದ ವಚನಕಾರರು ಮಾಡಿದ್ದೂ ಹೀಗೆಯೆ, ದಾಸರು ಮಾಡಿದ್ದೂ ಹಾಗೆಯೇ. ಶರಣರ ವಚನಗಳು ಮಾತನ್ನು ಆಡಿದ ಹಾಗಿದ್ದರೆ, ದಾಸರ ಪದಗಳು ಮಾತನ್ನು ಹಾಡಿದ ಹಾಗಿವೆ. ಈ ಮಾತುಗಳಲ್ಲಿ ಚಿತ್ರಕ ಶಕ್ತಿಯಿದೆ; ಜೀವಂತವಾದ, ಪ್ರಾಮಾಣಿಕವಾದ ಅನುಭವವಿದೆ.

ಈ ಸಾಹಿತ್ಯದ ಇನ್ನೊಂದು ಮುಖ ವ್ಯಕ್ತಿನಿಷ್ಠಾನುಭವಗಳ ಅನುಭಾವ ದರ್ಶನಗಳ ಆತ್ಮಕಥನವನ್ನು ಕುರಿತದ್ದು. ಅದರಲ್ಲಿ ತಾವು, ತಮ್ಮತನಗಳ ವಿಶ್ಲೇಷಣೆ, ತಾನು ಯಾವುದಕ್ಕೆ ಹಾರೈಸುತ್ತಿರುವೆನೋ ಅದರ ಕಲ್ಪನೆ, ಭಾವನೆಗಳ ನಿರೂಪಣೆ ಪ್ರಧಾನವಾಗಿದೆ. ದೇವರನ್ನು ಕುರಿತ ಭಾವನೆಯಲ್ಲಿ ಅವರ ಮನಸ್ಸು ಒಪ್ಪಿಕೊಂಡ ಪುರಾಣ ಕಲ್ಪನೆಯನ್ನು ಕಾಣಬಹುದು. ಭಗವಂತನ ಅವತಾರಗಳ, ಅವನ ಕಾರುಣ್ಯ ಲೀಲೆಗಳ ಹೆಬ್ಬೊತ್ತಿಗೆಯಾದ ಪುರಾಣದ ಪುಟಪುಟಗಳನ್ನು ತಿರುವಿ ದೇವರ ಮುಂದೆ ಇರಿಸಿ ತಮ್ಮ ಉದ್ಧಾರದ ಶ್ರದ್ಧೆಯ ತರ್ಕವನ್ನು ದೇವರಿಗೆ ತಮ್ಮ ಹಾಡುಗಳ ಮೂಲಕ ನಿವೇದಿಸುತ್ತಾರೆ. ಹೀಗಾಗಿ ದಾಸರ ಪದಗಳ ತುಂಬ ಗೋಪೀಜನಪ್ರಿಯನಾದ ಗೋಪಾಲನ ಅನೇಕ ರೀತಿಯ ಲೀಲೆಗಳ ಪ್ರಾತಃಸ್ಮರಣೆಯೊಂದೇ ಪಲ್ಲವಿಯಾಗಿ ಮೊಳಗುತ್ತದೆ.

ಈ ಹಾಡುಗಳ ಪ್ರೇರಣೆ ಉದ್ಧಾರದ ಹಂಬಲದಲ್ಲಿದೆ. ಅವರ ಈ ಹಂಬಲದ ಹಾಡುಗಳಲ್ಲಿ ಮಾರ್ಗದರ್ಶನವಿದೆ; ಮಾರ್ಗ ನಿರ್ಮಾಣವಿದೆ. ಅವರ ಕಣ್ಣಿನ ಮುಂದೆ ಇದ್ದದ್ದು ಒಂದೇ; ಗೋಪೀಜನಪ್ರಿಯನಾದ ಗೋಪಾಲನ ಈ ಪರಿಯ ಸೊಬಗು. ಅವರು ಹಿಡಿದದ್ದು ವೈಕುಂಠಕ್ಕೆ ದಾರಿ, ಮಿಡಿದದ್ದು ತಂಬೂರಿ.

ಪರಿಶೀಲನ (೧೯೬೭)

* * *