ಗೊತ್ತೆ ನಿಮಗೆ ಕೊನೆ ಓಣಿಯ
ಕೊನೆಯ ಮನೆಯ ತುಕ್ರ?
ಊರ ಜನರು ಕರೆಯುತ್ತಿದ್ದ –
ರವನ ಬಾರೊ ಬಕ್ರ.

ಕುರಿ ಕಂಡರೆ ಕೋಪ ಅವಗೆ
ಸ್ವಯಂ ಅವನೆ ಕುರಿ.
ಹಿರಿಕಿರಿಯರ ಶಾಪಗಳಿಗೆ
ಅವನೊಬ್ಬನೆ ಗುರಿ.

ಮೌನವನ್ನೆ ಮಾತು ಮಾಡಿ
ಆಡುತಾನೆ ಬೆರಿಕಿ.
ಅವಮಾನದ ಹಲ್ಲು ಗಿಂಜಿ
ಮುಡಿಯುತಾನೆ ಕಟಕಿ.

ಈ ಧರಣಿಯ ತಪ್ಪುಗಳಿಗೆ
ಅವನೊಬ್ಬನ ಬದ್ಧ.
ಹೊಸವಿದ್ದರೆ ಹೇಳಿರೀಗ
ಅದಕು ಅವನು ಸಿದ್ಧ.

ಕನಸು ಬಿಸಿಲುಗುದುರೆಯೇರಿ
ರಾಜನಾಗುತಿದ್ದ.
ಎಚ್ಚರದಲಿ ಕೂಲಿ ಮಾಡಿ
ಆಳಾಗಿರುತಿದ್ದ.

ಎರಡು ಲೋಕಗಳನು ಹ್ಯಾಗೂ
ನಿಭಾಯಿಸಲು ಆಗದೆ
ಹೇಳುತಿದ್ದ: ದೇವರನ್ನ
ಎಂದೂ ಕ್ಷಮಿಸಲಾರೆ.

ಆದರೂನು ದವಡೆ ಅಗಿದು
ಅನ್ನುತಿದ್ದ ತುಕ್ರ:
ಈ ನಶ್ವರ ಬದುಕನೊಮ್ಮೆ
ಮನ್ನಿಸಯ್ಯಾ ಈಶ್ವರಾ.

೧೯೯೧