ಹೊಸ ಬಾಳಿಗೆ ಹೊರಟ ಮಗಳು
ಕಣ್ಣ ತುಂಬ ಕನಸು.
ಶುಭವಾಗಲಿ ಮಗಳೆ ನಿಮ್ಮ
ಕನಸಾಗಲಿ ನನಸು.

ನಿಮ್ಮ ಪ್ರೀತಿಯ ಮಹಾಪೂರದಲ್ಲಿ ತೇಲುತ್ತ
ಬಂದೆವಿಲ್ಲಿಯತನಕ, ಇನ್ನು ಮುಂದೆ ಸುರುವಾಗಬೇಕು
ನಿಮ್ಮ ಪ್ರಯಾಣ.

ನಾವು ಗಳಿಸಿದ್ದು ಅಲ್ಲಿಗಲ್ಲಿಗೆ
ಸಮ ಲೆಖ್ಖ –
ಅಷ್ಟೋ ಇಷ್ಟೋ ದಾರಿ ನಾವು ನಡೆದದ್ದಿದೆ
ದಾರಿ ಸಾಗದೆ ಬದಿಗೆ ಕುಂತದ್ದಿದೆ.
ಬಂಡೆಬೆಟ್ಟದ ಮ್ಯಾಲೆ ಹೆಪ್ಪುಗಟ್ಟಿದ ಮುಗಿಲು
ಸಿಡಿಲು ಹೊಂಚಿದ್ದೂ ಇದೆ ಆಚೆ ಬದಿಗೆ.

ಮಳೆಗಾಲದಲ್ಲಿ ಆಗೀಗ ಹ್ಯಾಗೋ ಆಗಿ
ಜಾರಿ ಬಿದ್ದದ್ದು ಇದೆ, ಮುಂದೆ ಹ್ಯಾಗೆಂದು.
ಮ್ಯಾಲೆ ಸುರಿಯೋ ಮುಗಿಲು, ಕೆಳಗೆ ಜಾರೋ ನೆಲ,
ದಾರಿ ಸಾಗಿಸೊ ಶಿವನೆ ಅಂದದ್ದಿದೆ.

ಆಗ ಅವತರಿಸಿದಿರಿ ನಮ್ಮ ತೋಟದಲೇನೆ
ಹಸಿರು ಹಾಡುಗಳಲ್ಲಿ ನಮ್ಮನದ್ದಿ.
ಸ್ವಚ್ಛ ಬೆಳ್ದಿಂಗಳನು ಸುತ್ತ ಸುರಿದಿರಿ ತಾಯಿ
ಹುಣ್ಣಿಮೆಯ ಕಡಲಾಗಿ ನಾವು ಉಕ್ಕಿ.

ನೋಡ ನೋಡುವ ಹಾಗೆ ಕಣ್ಣೆದುರಿನಲೆ ಬೆಳೆದು
ಚಿತ್ತದ ಚಮತ್ಕಾರವಾದೆ ಮಗಳೆ.
ಚಿಗುರು ಹೂವಾಗುವ ಪವಾಡ ಕಡಮೆಯದಲ್ಲ,
ಅದು ಕೂಡ ತಿಳಿದದ್ದು ನಿನ್ನಿಂದಲೆ.

ಗುರಿಯ ತುಲುಪಲು ಹೋಗಿ
ಇನ್ನಲ್ಲಿಗೋ ಮುಟ್ಟಿ
ಏನೇನೋ ಆದದ್ದು ಎಷ್ಟೋ ಇದೆ
ಸೋಲಿಂದ ಬಹಳಷ್ಟು ಕಲಿಯೋದಿದೆ.

ನಾವು ಬಿತ್ತಿದ್ದೆಷ್ಟೋ ಬೆಳೆಯಲಾಗಲೆ ಇಲ್ಲ
ನಿಮ್ಮಲ್ಲಿ ಅದು ಬೆಳೆದು ಫಲ ನೀಡಲಿ.

ನಾವು ಮಾಡಿದ ಬೆಳಕು ಸಾಲದೆ ಬಂದಲ್ಲಿ
ನೀವೂನು ಮಾಡ್ರಿ ತುಸು ಬೆಳಕು.
ಸುಡಬೇಕು ಪ್ರೀತಿಯಲಿ ಸುಟ್ಟು ಬೆಳಕಾಗುತ್ತ
‘ನೊಗವೆ ನಾರಾಯಣಾ’ ಅನ್ನಬೇಕು.

ಸೂರ್ಯ ತಿಳಿದಿರಬೇಕು ಬೆಳೆಗೊ ಕರ್ತವ್ಯವನು
ತಿಳಿಯದಿದ್ದರೆ ಅವನ ಗೊಡವೆ ಬೇಡ.
ಸೂರ್ಯ ಇರದಿದ್ದರೂ ಹಸಿರು ತಿಳಿದಿರಬೇಕು
ಬಿರಿದು ಹಣ್ಣಾಗುವ ಪವಾಡವನ್ನ.

ಕಾಲರಾಯನ ಗೇಹ ಈ ದೇಹ; ಕೊನೆಯಲ್ಲ –
ಲೋಕ ಎಷ್ಟೋ ಉಂಟು ಇದರ ಆಚೆ.
ಕನಸು ವಿರಮಿಸದಿರಲಿ ತುದಿಯ ತಲುಪುವ ತನಕ
ತುದಿಯೆಲ್ಲಿ, ಗೊತ್ತಲ್ಲ? ಕ್ಷಿತಿಜದಾಚೆ!

೧೯೮೭