೧
ಜಲರಾಯ ಎಂಬೋದು ಮತ್ಸ್ಯರಾಜನ ಹೆಸರು
ಜಲಧಿಮಂಡಲಕವನೆ ರಾಜ.
ಹುಟ್ಟಿದೊಡನೆಯೆ ಕಡಲ ಮೆಟ್ಟಿ ನೆಗೆದಾತನಿಗೆ
ಜಲಚರ ಹೆದರುವುದು ಸಹಜ.
ತೆರೆಗಳ ಉನ್ಮಾದ ತಿವಿತಿವಿದು ನಗುವಾತ
ಕ್ಷಣಕೊಂದು ಚಂದಾಗಿ ಬೆಳೆದ.
ಸಾಗರಕೆ ಸೀಳುಗಾಯವ ಮಾಡಿ ಈಜುತ್ತ
ದಿನಕೊಂದು ಚಂದಾಗಿ ಬೆಳೆದ.
ಗುಡ್ಡsವೆ ಹೊರಳಾಡಿ ಈಜುವ ಹಾಂಗಿತ್ತು
ಜಲರಾಯ ಈಜುತ್ತಿದ್ದಾಗ.
ಈ ದಂಡೆಯಿಂದ ಆ ದಂಡೆವರೆಗೂ ಬೆಳೆದ
ಸಾಗರಕೆ ದೊಡ್ಡವನಾದ.
ದೇವರ ಹಂಕಾರ ಕೊಂಕಿಸಿ ನಗುವಾತ
ಹತ್ತು ದಿಕ್ಕಿಗೆ ಆತ ಖ್ಯಾತ.
ಅವನಿಂದಲೇ ಗಾಳಿ ಅವನಿಂದಲೇ ನೀರು
ಹೆಚ್ಚಿಲ್ಲ ಯಾರ್ಯಾರು ಅವನಿಗಿಂತ.
೨
ಜಲರಾಯ ಒಂದು ದಿನ ತೇಲುಗಣ್ಣಿನಲಿದ್ದ
ಸುಖಮಯ ಲೋಲುಪ್ತಿಯಲ್ಲಿ.
ಹಕ್ಕೀಯ ರೆಕ್ಕೆಯ ಗಾಳಿ ಬೀಸ್ಯಾಡಿದರು
ಕೆಡತಾವು ರಾಜನ ನಿದ್ದಿ.
ಶಿವನ ಹಣೆಗಣ್ಣೊಳಗೆ ಶಿವನೆ ಸುಡುತಿರುವಂತೆ
ಕನಸಾಯ್ತು; ಫಕ್ಕನೆ ಎದ್ದ.
ಹೆಸರುಗೊಂಡ್ಯಾರೊ ಕರೆದಂತಾಯ್ತು; ಆಚೀಚೆ
ಗಡಬಡಿಸಿ ಹುಡುಕುತ್ತ ನಿಂತ.
ದೂರ ನೀಲಿಮದಲ್ಲಿ ಲೀಲೆಯಾಡುವನ್ಯಾರು
ನಾನು ಕಾಣದ ಯಾವ ಸೀಮೆಯಾತ?
ಈತನಕ ಮುಖ ಮರೆಸಿಕೊಂಡಾತ, ಯಾರೀತ?
ಸದ್ದು ಮಾಡದೆ ಒಳಗೆ ನುಗ್ಗಿದಾತ?
ಹೊಳೆವ ಆಯುಧದಂತೆ ಬಾಲ ಝಳಪಿಸುವಾತ
ನಮ್ಮ ಖ್ಯಾತಿಯ ಕೊಳವ ಕಲಕಿದಾತ.
ನೀರಿನಲಿ ಮುಖ ಹುಗಿದು ಎತ್ತರದ ಬಾನಿನಲಿ
ಚಿತ್ತಾರ ಧ್ವಜವೆತ್ತಿ ಆಡುವಾತ.
ನೋಡನೋಡುತ್ತ ನೋಡಿದ್ದೆ ತಾನಾದಂತೆ
ಹೊಳಹುದೋರದ ಬೆಳಕು ಬೀರುವಾತ.
ಎಷ್ಟು ತಿಳಿದರು ತಿಳಿಯಬೇಕಾದ್ದು ಉಳಿವಾತ
ಸಾಟಿಯಿಲ್ಲದ ಆಟ ಆಡುವಾತ.
ದುಷ್ಟರಿಗೆ ಶಿಷ್ಟರಿಗೆ ಒಟ್ಟೂ ಕನಿಷ್ಠರಿಗೆ
ಕಟ್ಟಳೆಯ ಮಾಡುsವ ನಮಗೆ.
ಸಿಟ್ಟು ಬಂದರೆ ಏಳು ಬೆಟ್ಟ ನುಂಗುವ ನಮಗೆ
ಈ ಕಾಕು ಪೋಕರಿಯು ಎದುರೆ?
ಸುಯ್ಯಂತ ಅಡರ್ಯಾವು ಸುಡುಸುಡುವ ಸೇಡುಗಳು
ಕಂದೇರಿದವು ಬೆಂದ ಹೃದಯ.
ಹೊಂಚಿ ಕಾದಿರುವಂಥ ವಂಚಕನ ಬಿಡೆನೆಂದು
ಜಲರಾಯ ಭೋ ಎಂದು ಹೊರಟ.
೩
ಭರ್ರಂತ ಹೊರಟರೆ ಸರ್ರಂತ ಸರಿಯಿತು
ವೈರಿಯ ಗರಿಗರಿ ಬಾಲ.
ಬಾಲ ಅಲುಗಿದರೇನೆ ಬಿರುಗಾಳಿ ಬೀಸಿದವು
ಜಲರಾಯ ಎದೆಗುಂದಲಿಲ್ಲ.
ಸಾವಿನ ಕುಳಿಯಂಥ ಬಾಯ್ದೆರೆದು ಎರಗಿದನು
ಕೊಸರಿ ಕುಣಿದಾಡಿತ್ತು ಬಾಲ.
ಕಚ್ಚಿ ಹಿಗ್ಗಾ ಮುಗ್ಗ ಎಳೆದೆಳೆದು ನುಂಗಿದನು,
ಉಕ್ಕಿದವು ಪಾತಾಳ ಮ್ಯಾಲ.
ಚಿಲ್ಲಂತ ಚಿಮ್ಮಿದವು ನೆತ್ತರಿನ ಕಾರಂಜಿ
ಕೆಂಪೇರಿದವು ಮ್ಯಾಲೆ ಮುಗಿಲು.
ನಾಲೆಗಳಾದವು ತೆರೆಗಳ ಸಾಲುಗಳು
ಬುಸುಗುಡುತಿದ್ದವು ಜೋರು.
ನುಂಗಿದನು ನುಂಗಿದನು ನುಂಗಿದಷ್ಟೂ ಉದ್ದ
ಬೆಳೆಯಿತು ಬೆಳೆಯಿತು ಮೀರಿ.
ಬಾಲವೆ ಹಿಂಗಿವನ ಮುಖ ಬೇರೆ ಹ್ಯಾಗಿದೆಯೊ!
ಭೇದಿಸಬಾರದ ವೈರಿ!
ನರನಾಡಿ ಜುಮು ಜುsಮು ಬೆನ್ನಹುರಿ ರುಮು ರುಮು
ಒಳಗೆ ಮಿಂಚಿನ ತಂತಿ ಹರಿದ ಹಾಗೆ,
ಘನ ಘನ ಗಂಭೀರ ಮೌನವೆ ಬಿರಿದಂತೆ,
ಬಿಗಿದ ಬೆಳಕಿನ ತೂಬು ಬಿಚ್ಚಿದಂತೆ.
ಏನೆಂದು ಎಂತೆಂದು ಹೇಳಿರಯ್ಯಾ ಎಂದು
ಜಲರಾಯ ಕೂಗುವ ಮೊದಲೆ,
ತನ್ನ ಬಾಲವ ತಾನೆ ನುಂಗುತಿರುವೆನು ಎಂದು
ನಿಜದ ಎಚ್ಚರ ಮೂಡಿತಲ್ಲೆ!
ಶಿವನ ಹಣೆಗಣ್ಣೊಳಗೆ ಸೂರ್ಯದೇವನು ಉರಿದು
ಸುಡುತಿದ್ದ ಬೆಳಗಿನಲಿ ಬಯಲ
ಬಯಲಿಗೆ ಬಯಲೋ ಶಿವಸುಖ ಮೊದಲೊ
ಶಿವಲಿಂಗನೊಬ್ಬನೆ ಬಲ್ಲ.
೧೯೯೨
Leave A Comment