ಕೀರ್ತಿನಾಥರು ಇವರು ಕಾಣೆಯಿಲ್ಲದ ಹಾಗೆ
ತಕ್ಕಡಿಯ ತೂಗಿದವರು.
ಆಕಾಶ ಭೇದಿಸುವ ಕಣ್ಣಿನವರಾದರೂ
ತರಕಾರಿ ದರಗಳನು ಮರೆಯದವರು.

ಸೋಲಜೊತೆ ಸಾಮೀಲರಾದ ಸಿನಿಕರ ಸಿಡುಕ
ದಯಮಾಡಿ ಕ್ಷಮಿಸಿದವರು.
ತಾಂಬೂಲದೆಂಜಲಲಿ ಮುಖಬೆಳಗಿ ನಗುವವರು
ಹಾಗೆಯೇ ಧಾರಾಳ ಉಗಿಯುವವರು.

ಜಂಗಮರು: ಹಿಂದು ಮುಂದುಗಳಲ್ಲಿ ಸಂಚರಿಸಿ
ಸತ್ತುದರ ನೆತ್ತಿಗಂಗಾಲನಿಟ್ಟವರು.
ಹಾಗೆಯೇ ಚಿಗುರಿಗೂ ಹಸಿರ ದೀಕ್ಷೆಯ ಕೊಟ್ಟು
ಹಣ್ಣು ಆಗುವ ಗುಟ್ಟ ಹೇಳಿಕೊಟ್ಟವರು.

ಹುಟ್ಟಾ ಅದ್ವೈತಿಗಳು: ಸದ್ದಿಲ್ಲ ಶಬ್ದಕ್ಕೆ;
ಎರಡರಲ್ಲ ಶಬ್ದಾರ್ಥ ಒಂದೆಂದಿರಿ.
ಡೀಕೋಡಿಸಿದಿರಯ್ಯ ಶಿವಪಾರ್ವತಿಯ ನಂಟು
ಭಾಗ್ಯವಂತರ ಭಾಷೆ ಕನ್ನಡದಲಿ.

ಬೇರೆ ಕಲರುಗಳನ್ನ ಬೆರಕೆ ಮಾಡದೆ ಶುದ್ಧ
ಹಸಿರಲದ್ದಿದ ಹೊಸಾ ಕನಸುಗಳನು
ಕಣ್ಣುತುಂಬಾ ಕೊಟ್ಟು ನಮ್ಮ ಕಳಿಸಿದಿರಯ್ಯ
ತೋರಿ ದೂರದ ಹೊಳೆವ ಕ್ಷಿತಿಜವನ್ನು.

ನಿಮ್ಮ ಭಾಗದ ಗಾಳಿ ನಮ್ಮ ಕಡೆ ಬೀಸಿದರೆ
ನಿಮ್ಮದೇ ನೆನಪು ನಮಗೆ.
ಅಷ್ಟೋ ಇಷ್ಟೋ ದಾರಿ ನಡೆದೆವಯ್ಯಾ ನಿಮ್ಮ
ಕಣ್ಣುಗಳ ಬೆಳಕಿನೊಳಗೆ.

ನಮ್ಮ ಚಿತ್ತದಲೊಂದು ಬಿಳಿಯ ಕಂಬಳಿ ಹಾಸಿ
ಮ್ಯಾಲೆ ಕುಂತಿರಿ ಇಂಬು ಉಳಿಯದಂತೆ.
ಜರದಾ ಜಗಿಯೋದನ್ನ ಬಿಟ್ಟು ನೋಡಿರಿ ಸೊಲ್ಪ
ಗೌಡರೇ, ನಮ್ಮ ಭಕ್ತಿ ಅರಿವಾಯಿತೆ?

೧೯೮೯