ಬಂಧುಬಳಗವ್ಯಾರ್ಯಾರಿಲ್ಲದ ಮುದುಕ
ಕೊನೆ ಅತಿಥಿಯ ದಾರಿ ಕಾಯುತ್ತ ಕೂತಿದ್ದಾಗ
ಗೆಜ್ಜೆ ಕಾಲಿನ ಕಂದನೊಬ್ಬ
ಓಡೋಡಿ ಬಂದ.

ಹೇಳದೇ ಕೇಳದೇ ಓಳನುಗ್ಗಿ
ಸಣ್ಣ ಬಾಗಿಲ ತುಂಬ ಇಂಬಾಗಿ ನಿಂತ.
ಫಳ್ಳನೆ ಬೆಳ್ದಿಂಗಳ ತುಳುಕಿ ನಕ್ಕ.
ಪುಟ್ಟ ಪುಟ್ಟ ಹೆಜ್ಜೆಯಿಟ್ಟು, ಗಿಲ್ ಗಿಲ್ ಗಿಲ್ ಗೆಜ್ಜೆ ನುಡಿಸಿ
ಥೈ ಥೈ ಥೈ ಕುಣಿದು
ಮನೆಯಗಲ ಮನದಗಲ ತುಂಬಿದ.

ಇವನು
ಯಾರೆಂದು ಗುರುತಿಸುವ ಮೊದಲೇ
ಕಣ್ಣಾಮುಚ್ಚೇ ಕಾಡಿಗೋಡೇ ಕವ್ವಾಲೇ ಎಂದು
ತುಟಿಮ್ಯಾಲೆ ಬೆರಳಿಟ್ಟು
ಆನಂದ ಸನ್ನೆಗಳ ಮಾಡುತ್ತ
ಆ ಮೂಲೆಯ ಕಪ್ಪು ದಿಗಲಿನಲ್ಲಿ ಮಾಯವಾದ;

ಮರೆವಿನ ಮರೆಯಿಂದ ಹೊರಬರದ ಮುದುಕ
ಹುಬ್ಬು ನಿಬ್ಬೆರಗಿನಲಿ
ತಬ್ಬಿಬ್ಬಾಗಿ ಕೂತ;
ಯಾರೀತ?

ಈ ರೂಪ ಅಪರೂಪ
ಈ ಜಗದ ಚಂದ ಒಂದಾಗಿ ಬಂಧಂಗಿದ್ದ.
ಎಳೆಯಕುಂತಳ ತಿದ್ದಿತೀಡಿತ್ತು.
ಕರಗಿಸಿದ ತುಂಟ ನಕ್ಷತ್ರ ಕುಡುತೆಗಂಗಳಲಿತ್ತು
ತನಿಬೆಳಗು ತನ್ನ ಆನಂದದಲಿ ತೇಲಾಡಿ

ಲೋಲಾಡಿದಂತಿತ್ತು ಅವನ ಶೈಲಿ.
ಯಾವ ತಾಯಿಗೆ ಮಾಯೆ ಮಾಡಿ ಬಂದವನೀತ?
ಯಾ ಯಶೋದೆಯ ತುಂಟ ಕಂದನೀತ?
ತನ್ನಂತರಂಗದ ವೃತ್ತಾಂತ ಹೇಳದೆ
ಮರೆಯಾದ ತ್ವರಿತ.
ಅವನ ಸರಸಕೆ ನಮಗೆ ಹರುಷವಾದವು ಯಾಕೆ?
ಯಾರು ಈತ?

ಹಳೆಯ ಡೈರಿಗಳನ್ನು ತಿರುವಿದರು ಮಗುಚಿದರು
ಯಾವ ಪುಟದಲು ಬೆಳಕು ಮೂಡಲಿಲ್ಲ;
ಮೂಡಿದರು ಈ ತುಂಟ ಕಾಣಲಿಲ್ಲ.
ತಡೆಯಲಾರದೆ ಮುದುಕ ತಲ್ಲಣಿಸಿದ.

ಮೀರಿ ಮರೆಯಾದವನ ಹುಡುಕಲೇಬೇಕೆಂದು
ಎಲ್ಲ ಕತ್ತಲೆಗಳನು ತಡಕಾಡಿದ.
ಕಣ್ಣ ಹಣತೀ ಮಾಡಿ ಒಡಲ ಬತ್ತೀ ಮಾಡಿ
ಹಗಲು ರಾತ್ರೀ ಮಾಡಿ ಹುಡುಕಾಡಿದ.

ಪೋರ, ಹೃದಯದ ಚೋರ, ಮನ ಮರುಳು ಮಾಡಿದ
ಮಾಯಾವಿ ಇರಬಹುದೆ ಅಂದ.
ನಾನು ಕಾಣದ ಆಚೆ ಸೀಮೆಯವನೇ ಎನಿಸಿ
ಪುಳಕ ಜಲದಲಿ ಇಡೀ ಮನೆಯ ತೊಳೆದ.

ಅಡಿಗಡಿಗೆ ದೃಢಭಕ್ತಿ ಅಡರಿದವು ಮುದುಕಂಗೆ
ಜಡದೇಹ ಹಿಡಿದವನ ಮರೆಯಬ್ಯಾಡೆಂದ.
ಒಡಲು ಗುಡಿಯಾದಂತೆ ಎನಿಸಿ ಗಡಬಡಿಸುತ್ತ
ಸ್ವಂತ ಕೈ ಮೈ ಮುಟ್ಟಿ ನೋಡಿಕೊಂಡು ಸ್ವಾಮೀ ಅಂದ.
ಒಡಲ ಸಾಕ್ಷಿಕ ಸ್ವಾಮಿ ಗರ್ಭಗುಡಿಯೊಳಗಿಂದ
ಒಡನುಡಿದು ಗುಡುಗಾಡಿದ:

ಕರೆಯುತಿರುವವರ್ಯಾರು? ನಾನೊ ಇಲ್ಲವೆ ನೀನೊ?
ಯಾರಿಗ್ಯಾರೋ ಅತಿಥಿ ಇಬ್ಬರೊಳಗೆ?
ನಿ ಕರೆದೆಯೆಂದೇ ನಾನು ಓಗೊಡುತಿರುವೆ
ನೀನು ಓಗೊಡುತಿರುವೆ ಇನ್ಯಾರಿಗೆ?

೧೯೯೨