ಯಾರೋ ಬೇನಾಮಿ ಮುದುಕ
ತೀರಾ ಪರಿಚಿತನಂತೆ ಒಳಗೆ ಬಂದ.
ತನಗೆ ಬೇಕಾದ ಒಬ್ಬರನ್ನ
ಹುಡುಕುವಂತೆ ನಮ್ಮನ್ನೆಲ್ಲ ಸೋಸಿ ನೋಡಿದ.

ನಾವು ಕೇಳರಿಯದ ಹೆಸರುಗಳಿಂದ
ಅಲ್ಲಿದ್ದವರನ್ನೆಲ್ಲ ಕರೆದ.
ತಮ್ಮಿಬ್ಬರಿಗೆ ಮಾತ್ರ ಗೊತ್ತಿದ್ದ
ಕೋಡು ನುಡಿಗಳ ನುಡಿದ.

ನುಡಿಗಳೋ ಇವು ಕಿಡಿಗಳೋ? –

ಅಂತ ಚೇಷ್ಟೆಯಾಡಿದರೆ ನಾವು
ಹೊರಟವನು ಗಕ್ಕನೆ ತಿರುಗಿ,
ಕತ್ತಲೆಗೆ ಬೆಳಕಿಟ್ಟಂತೆ ಹಲ್ಲು ಕಿರಿದು
ಉರಿಕಾರುವ ಹರಿತ ನೋಟಗಳಿಂದ
ಇರಿದು ಮರೆಯಾದ.

ಆಗಲೇ ನಮಗೆ ಗೊತ್ತಾದದ್ದು
ಅವನ ಕಣ್ಣಲ್ಲಿ ಬೇರೆ ಸೀಮೆಯ
ಬೆಳಕು ಹೊಳೆದಾಡಿತೆಂದು!

೧೯೯೩