ಬಿಸಿಲಗುದುರೆಯನೇರಿ ಹೋದಾ
ಕೈಮೀರಿದ ಚಂದಿರನ ಬೇಟೆಗೆ ಹೋದಾ ||ಪ||

ಬೆಳ್ಳಿಯ ಮೀನಾಗಿ
ಬೆಳುದಿಂಗಳಲೀಜುವ
ಚಂದ್ರನ ಹಿಡಿಯುವೆನೆಂದಾ ||ಅಪ||

ಹಾರುವ ಧ್ವಜದಂಥ ಪೊಗರಿನ ಬಾಲಕ
ಮುಗಿಲಿಗೆ ಎಗುರುವೆನೆಂದಾ |
ಆಕಾಶದಂಗಳಕೆ ನುಗ್ಗಿ ಲಗ್ಗೆಯ ಹಾಕಿ
ಸೂರೆ ಮಾಡುವೆ ಸಿರಿಯನೆಂದಾ |
ಕಣ್ಣಿಗೆ ಬಣ್ಣಗಳ ಮೆತ್ತುವ ಕನಸಿನಲಿ
ನಿಮ್ಮ ಮುಳುಗಿಸುತೇನೆ ಅಂದಾ ||ಹೋದಾ||

ಅಂಬಾರದಾಚೆಯ ರಂಭೇರ ನಾಡಿಂದ
ಬಾಡದ ನಗೆ ತರುವೆನೆಂದ |
ಚಕ್ಕಂದವಾಡುವ ಚಿಕ್ಕೆ ತಾರೆಗಳನ್ನ
ಉಡಿತುಂಬ ತರುತೇನೆ ಅಂದ |
ಸೊಕ್ಕಿದ ಚಂದ್ರನ ಸಭ್ಯನ ಮಾಡುವೆ
ಪಳಗಿಸುವೆ ದೇವರನೆಂದಾ ||ಹೋದಾ||

ಹೋದವ ಬಾರದೆ ಕಾತರ ತಾಳದೆ
ಕಣ್ಣ ಹಡದಿಯ ಹಾಸಿ ಕಾದೆ |
ಬಂದೇ ಬರುತಾನಂತ ಆಕಾಶದಂಗಳದ
ಒಂದಾರೆ ಹೂ ತರುತಾನಂತ | ಭ್ರಾಂತ
ಯಾವೇರುಪೇರಿನಲಿ ದಾರಿ ತಪ್ಪಿದನೇನೊ
ಕಂಡರೆ ಕಳಿಸಿರೆ ತಿರುಗಿ || ಆ ಬಾಲನ