ಹಂಪಿಯ ಈ ಬಂಡೆಗಳು
ದುಂಡಗೂ ಅಲ್ಲದ, ಅಂಡಾಕಾರವೂ ಅಲ್ಲದ,
ಹ್ಯಾಗಂದರೆ ಹಾಗೆ ಕೂತು
ಹಾಗೂ ಒಂದಾಕಾರಗೊಳ್ಳದ ನಿರಾಕಾರಗಳು.
ಕಣ್ಣು ತೆರೆದರೆ ರೆಪ್ಪೆಗೆ
ಮುಚ್ಚಿದರೆ ಮನಸ್ಸಿಗೆ ಭಾರವಾಗುವ, –
ಮಲಗಿದರೆ ಕನಸುಗಳಲ್ಲಿ
ಹಿಂಡು ಕರಡಿಯ ಹಾಗೆ ಕುಣಿದು;
ಕಿರುಚಿದರೆ
ನಮ್ಮ ನುಡಿಗಳ ನಮಗೇ ಮರುನುಡಿಗೊಡುವ
ಚರಿತ್ರೆಯ ದುರಾಸೆಗಳು
ಈ ಬಂಡೆಗಳು.

ಉರಿಬಿಸಿಲ ಧಗೆಯಲ್ಲಿ ಧಗೆ ಧಗೆ ಎಂದು
ಹಾರಾಡುವ ಬಾಯಾರಿಕೆಗಳು.
ರಾತ್ರಿ ಬೆಳ್ದಿಂಗಳ ಸುರಾಪಾನದಲ್ಲಿ
ಮತ್ತೇರಿ ಮಾತಿಲ್ಲದೆ ಬೀಳುವ ಮೌನಂಗಳು.
ನದಿಯ ನೀರಲ್ಲಿ ಮುರಿದ ಚಂದಿರನ
ಒಂದುಗೂಡಿಸುವ ಕನಸುಗಳು.
ಕಗ್ಗತ್ತಲೆಯ ಕರಿಘನಲಿಂಗಕ್ಕೆ ಹೆದರಿ
ಮುಗ್ಧವಾದ ಶಬ್ದಗಳು.
ಮುರಿದ ರೆಕ್ಕೆಯ ಮರಿ ಹಕ್ಕಿಯ ದನಿಯಲ್ಲಿ
ಕನವರಿಸುವ ಸಂಜೆ ಮುಂಜಾನೆಗಳು.
ಹರಿಯದ ನೀರ ನಿರಾಳದಲ್ಲಿ ಈಜಲಾರದೆ ಬಿದ್ದ
ಎಮ್ಮೆಗಳ ಹಿಂಡುಗಳು
ಈ ಬಂಡೆಗಳು.

ಶಿವನ ದಯೆಗೆ ದೂರವಾಗಿ
ವಿರೂಪಾಕ್ಷಿಯಲ್ಲುರಿದ ದಳ್ಳುರಿಗಳು.
ಗುರಿಯಾಗಿ ಶಾಪಕ್ಕೆ
ಹಾರೈಸಿ ಪದಘಾತಕ್ಕೆ
ಅರಳಲು ಕಾತರಿಸಿರುವ ಕಥೆಗಳು.

ಸವೆದು ಸವೆದು ಲಿಂಗವೂ ಆಗದ
ಲಿಂಗಕ್ಕೆ ಅಂಗವೂ ಆಗದ ನಿಸ್ಸಂಗಿಗಳು
ಈ ಬಂಡೆಗಳು.
ಟೂರಿಸ್ಟರ ಕಂಡರೆ
ಕಲ್ಲರಳಿ ಹೂವಾಗುತ್ತಾವೆ.

ತಾಯ ಮುಗುಳುನಗು
ಕಂಕುಳದ ಎಳೆಮಗು-
ವಿನೊಂದಿಗೆ ಒಗೆತನ ಬೆಳೆಸೋದಕ್ಕೆ ಹಾರೈಸಿ
ಹರಡುತ್ತಾವೆ ನೆರಳ ಚಾಚಿ
ಬರಸೆಳೆದು ಬಾಚಿಕೊಳ್ಳುತ್ತಾವೆ, ಇಲ್ಲವೆ
ನೆನಪು ಕೆರಳಿಸಿ
ಛಳಿಗೆ ಛಳಿ, ಉರಿಗೆ ಉರಿ ಕಾರಿ
ಸೇಡು ತೀರಿಸಿಕೊಳ್ಳುತ್ತಾವೆ
ಹಂಪಿಯ ಈ ಬಂಡೆಗಳು.

ಈ ಬಂಡೆಗಳ ಮಧ್ಯೆ ಬಯಲನುಂಬ ಹಂಬಲದ
ಬಿಸಿಲುಗುದುರೆಗಳು
ಸದ್ದಾದರೆ ಅರೆ ಅರೇ,
ಹೊಲಬುದಪ್ಪಿ ಕ್ಷಿತಿಜದ ಕಡೆಗೆ ಓಡುತ್ತಾವೆ,
ಲಂಗುಲಗಾಮಿಲ್ಲದ, ಹತ್ತುವ ಧೀರರಿಲ್ಲದ
ಬರಿಮೈ ಕುದುರೆಗಳು.
ಈ ಬಂಡೆಗಳು.

೧೯೯೩