ಗೊತ್ತಾಯಿತೇ ವಿಷಯ? ಪಟ್ಟಣಕೆ ಹೋಗಿದ್ದ
ತುಕ್ರ ಬಂದೇ ಬಿಟ್ಟ ತಿರುಗಿ.
ಫಳ ಫಳನೆ ಹೊಳಿತಾವೆ ಪ್ಯಾಂಟು ಶರ್ಟೂ ಹ್ಯಾಟು
ಅವನ ಮುಖ ಬಿಂಬಿಸಿದೆ ಬೂಟಿನಲ್ಲಿ.

ಯಾರ್ಯಾರ್ದೊ ಕೈ ಕುಲುಕಿ ಸ್ನೇಹ ಪಡೆದಿದ್ದಾನೆ
ಲೋಕ ಕಂಡಿದ್ದಾನೆ ತುಂಬ ತುಂಬಾ.
ಗಲ್ಲಿಗೇರಿಸುವುದನು ಕಣ್ಣಾರೆ ಕಂಡು ಕೈ –
ಯಾರೆ ಮುಟ್ಟಿದ್ದಾನೆ ಗಲ್ಲುಗಂಬ.

ಶಿವನ ಕಣ್ಣಿಗು ಕಾಣದಂತೆ ಕದ್ದಿದ್ದಾನೆ
ಇಂಗ್ರೇಜಿ ಪೇದೆಗೂ ಹುಚ್ಚು ಹಿಡಿಸಿ,
ನರಿಯಾದ ಇವನಿಗೂ ಸಿಂಹಪಾಲಿತ್ತಂತೆ
ಮೊನ್ನೆ ಟ್ರೇನಿನ ಲೂಟಿ ಸೂರೆಯಲ್ಲಿ.

ಗಾಂಧಿಗೂ ಗೊತ್ತಿರದ ಚಳುವಳಿಯ ಟ್ರಿಕ್ಕುಗಳ
ಆಹಾ ಬಣ್ಣಿಸುತಾನೆ ಬಣ್ಣ ಹಚ್ಚಿ.
ಕ್ರಾಂತಿ ಚಳುವಳಿ ಅಂತ ಏನೇನೊ ಅಂತಾನೆ
ಇದ್ದರೂ ಇರಬಹುದು ಮಹಾಬೆರಿಕಿ.

೧೯೯೧