ನೋಡು ಆ ಕೋಡಂಗಿ
ಧರಿಸಿದ ವೇಷಭೂಷಣ ಮರೆತ,
ಉರುಹೊಡೆದ ಕಪಿಚೇಷ್ಟೆಗಳ ಮರೆತ.
ಕೊನೆಗೆ ತಾನ್ಯಾರೆಂಬುದನ್ನೂ ಮರೆತು
ಯಾರೂ ಓದದ ಹಾಗೆ ಮುಖ ಗಂಟು ಹಾಕಿದ.
ಆಭಾಸಕ್ಕೆ ಅಳುಕದೆ ರಾಜನ ಹಾಗೆ
ಶ್ರೀಮದ್ ಗಾಂಭೀರ್ಯ ತಳೆದು,
ಹಿಂದೆ ಕೈಕಟ್ಟಿ ರಂಗದ ತುದಿಗೆ ಬಂದು
ಪ್ರೇಕ್ಷಕರನ್ನು ಸಿಂಹಾವಲೋಕಿಸಿದ.

ಕೋಡಂಗಿಯ ನುಡಿಗಳಿಗೇ ರಾಜನ ವೇಷ ತೊಡಿಸಿ
ಹೂಂಕಾರವನ್ನು ಅಹಂಕಾರವೆಂಬಂತೆ ಉಚ್ಚರಿಸಿದ.

ಅಕ್ಷರಕ್ಷರ ಕಚ್ಚಿ ಕಲ್ಲಿನ ಹರಳುಗಳಂತೆ
ಮುಕ್ಕಳಿಸಿ ಉಗಿದ.

ಪದಪದಕ್ಕೆ ಅಧಿಕಾರದ ಮದ ಬರಿಸಿ
ಬೇಸೂರಿನ ಬೇಸಿನಲ್ಲಿ ಮಾತಾಡಿದ.

ಪ್ರಭುಸಮ್ಮಿತಿಗೆ ಸಮ್ಮತಿಸಿದ ಮಂದಿ
ರಾಜನ ಕಂಡು ಸನ್ಮಾನಗೊಂಡರು.
ಮನಸಾರೆ ಮಣಿದು ಕುರ್ಣೀಸಾತ ಮಾಡಿದರು.

ವಿಂಗಿನಿಂದೀಗಷ್ಟೆ ತಲೆ ತೂರಿಸಿದ ರಾಜನ ತೋರಿ
“ಅಗೋ ಕೋಡಂಗಿಯ ನೋಡಿ ನಗರಿ” ಎಂದ.
ಹನ್ನೆರಡು ರಾಶಿಗಳ ಹುಂಬ ಮಂದಿ
ಹೋ ಎಂದು ನಕ್ಕರು.

“ನಿಮ್ಮ ಮಹಾರಾಜ ಹೊರಟಿದ್ದೇನೆ ಬೀಳ್ಕೋಡಿರಿ” ಎಂದ.
ಜನ ಗಂಬೀರವಾಗಿ ಎದ್ದು ನಿಂತರು.
ಮೌನದಿಂದ ವಿಂಗಿಗೆ ಸರಿದ.

ವಿಂಗಿನ ಬಳಿಯ ರಾಜ
ಶ್ರೀಮದ್ ಗಾಂಭೀರ್ಯದಿಂದ ಈಚೆ ಬಂದಾಗ
ಜನ ಬಿದ್ದು ಬಿದ್ದು ನಕ್ಕರು
ಚಪ್ಪಾಳೆ ತಟ್ಟಿ ಸಿಳ್ಳೆ ಹಾಕಿದರು.
ಇವನು ನಿಮ್ಮ ರಾಜನೆಂದು ನಾನೆಂದರೆ
ಎಡಬಿಡಂಗಿ ಎಂದರು.
ಇದಲ್ಲ ನಾಟಕವೆಂದರೆ
ಕೂರೋ ಕಮಂಗಿಯೆಂದು
ಹೋ ನಕ್ಕರು.

೧೯೯೩