ಎಚ್ಚೆತ್ತಾಗ ಎದುರಿಗೊಂದು ಕುದುರೆಯ ಕಂಡೆ.
ಬಣ್ಣ ಗೊತಿದ್ದದ್ದೆ. ಪರಿಚಿತ ಚಹರೆ.
ಹದಮೀರಿ,
ಮುದದ ಮದದಲ್ಲಿ ಮೈಮರೆತು
ಕೆನೆದು ಧೂಳೆಬ್ಬಿಸಿ
ಕೆಂಪಡರಿದ ಮುಗಿಲುಗಳಲ್ಲಿ
ಗಾಜು ಗಾಜಾದ ಕನಸುಗಳ ಕೆರಳಿಸಿದ ಕುದುರೆ.
ಹಿಂದೊಮ್ಮೆ ಸವಾರಿ ಮಾಡಿದ್ದೆ.
ಅದೊಮ್ಮೆಲೆ ಗಗನಕ್ಕೆ ನೆಗೆದು
ಮುರಿದ ಕ್ಷಿತಿಜಗಳ ಹಾರಿ
ಸೂತ್ರ ಹರಿದ ಗಾಳಿಪಟ, –
ಯಾವುದೋ ಸೀಮೆಯಲ್ಲಿ ಚೆಲ್ಲಿ,
ಪರಿಚಿತರಿಲ್ಲದೆ ಅಲ್ಲಿ
ಒದ್ದಾಡಿ ತೆವಳಿ ಊರು ಸೇರಿದ್ದೆ.
ಹೌದು ಅದೇ ಕುದುರೆ.

ಧೂಳಿನಿಂದಾಕಾಶ ಅಳೆಯಬಹುದೇ ಶಿವನೆ?
ಇದೇ ಬೇರೆ ಕುದುರೆ.

ಬೆನ್ನ ಹುರಿ ಬಿಗಿದು ಸವಾರನ ಆಜ್ಞೆಗೆ
ಕಾಯುವ ಕಾತರಲಿಲ್ಲ.
ಬಾಲಲ್ಲಿ ಚಂಚಲ ಧೂಮಕೇತುವಿಲ್ಲ.
ಕಣ್ಣುಗಳಲ್ಲಿ ಉರಿದುರಿದು ಇರಿವ ಸುರ್ಯರಿಲ್ಲ.

ಗೆದ್ದಲು ಹಾದಿಯಲ್ಲಿ ಕೇರಳದ ಸಂಗೀತಕ್ಕೆ
ಹೆಜ್ಜೆ ಹಾಕುತ್ತ
ಅಪರಿಚಿತ ಸೀಮೆಯ ಅವ್ಯಕ್ತಗಳ
ಕೆರೆಯುವ ಕುದುರೆ.

*  *  *

ಎದುರೆದುರೆ ಕೈಕಾಲು ಮುಖವಾಡ ಧರಿಸಿ ಎದ್ದುನಿಂತ
ಸೋಗಿನ ಶಿವನೆ,
ಈ ಸೋಗಲಾಡಿತನವ್ಯಾಕೆ?

೧೯೯೩