ಮುಗಿಲ ನೀಲಿಮದಿಂದ ತಾರೆ ಉರುಳಿದ ಹಾಗೆ
ಒಬ್ಬ ಮುದುಕ
ದಾರಿ ಎದುರಿನ ಕ್ಷಿತಿಜದಿಂದ ನೇರ ಕೇಳಗೇ ಇಳಿದ.
ನೆರಳಿಗಿಂತಾ ಹಗುರ ಹೆಜ್ಜೆಗಳನಿಕ್ಕುತ್ತ
ಹುಚ್ಚಿಗಿಂತಾ ವೇಗವಾಗಿ ಹತ್ತಿ ಬಂದು
“ಗುರುತು ಸಿಕ್ಕಿತೆ?” ಅಂದ.

ಅವನ ತುಟಿಯೊಳಗಿತ್ತು ಸಂಜೆ ಮುಗಿಲಿನ ಕೆಂಪು
ಹೆತ್ತ ಕರುಳಿನ ಹಾಗೆ ನಡೆವ ಶೈಲಿ.
ಎಷ್ಟೆಷ್ಟು ಭೇದಿಸಿದರಷ್ಟೂ ಅಭೇದ್ಯನಿವ
ಬೆಳಕಿನಿಂಗಿತವಿತ್ತು ಕಣ್ಣಿನಲ್ಲಿ.

ನಾನೋ ಎಡಬಿಡಂಗಿ, ಗುರುತು ಸಿಕ್ಕದೆ ತಡವರಿಸಿದರೆ,
“ಅಹಾಹಾ ಬಲ್ಲೆ ನೀ ಹೆಣೆವ ಸುಳ್ಳಿನ ಬಲೆ”
ಎಂದಾಡಿ ಎಲೆ ಅಡಿಕೆ ಜೊಲ್ಲಿನ ಮಳೆ ಸುರಿಸಿ
ಪಕ ಪಕ ನಕ್ಕ.
ತುಕ್ಕು ಹತ್ತಿದ ನನ್ನ ನೆನಪನ್ನ ಕೆರಳಿಸುವ
ಕಿಡಿ ಸಿಡಿಸಿ ಕುಪ್ಪಳಿಸಿ ಕುಣಿದಾಡಿ ನಕ್ಕ.
“ಗೊತ್ತೇನಣ್ಣ,
ಆಚೆ ಸೀಮೆಯ ಬೆಳಕ ಈಚೆ ವ್ಯವಹಾರಕ್ಕೆ
ಬಡ್ಡಿ ಹೆಚ್ಚಿಲ್ಲದೇ ಬಳಸುವ ಲೆಖ್ಖ?”
ಎಂದು ಕಳಗುಳಿಯಿಟ್ಟು ಚುಡಾಯಿಸಿ ನಕ್ಕ.

ತಬ್ಬಿಬ್ಬಾಗಿ ನಿಂತ ನನ್ನನ್ನ
ಕೊನೆಗೂ ದಯಮಾಡಿ ಕರೆದು
“ದಾರಿಗಿರಲಿ ಹೊತ್ತಿರು” ಎಂದು
ಭಾರದ ಚಂದ್ರಮಂಡಳವನ್ನ ಕತ್ತಿನ ಮ್ಯಾಲೆ ಹೇರಿ
ಮರೆಯಾದ.
ಹೊತ್ತ ಮಂಡಲ ಕ್ಷಣಕ್ಷಣಕೆ ಭಾರ
ನಿಮಿಷ ನಿಮಿಷಕೆ ಭಾರ,
ಹೊತ್ತಿರಲಾರೆ ಕೆಳಗೆ ಇಳಿಸಲಾರೆ.
ಹೆಗಲ ಬದಲಿಸಲೆಂದು ಅಲುಗಿದರೆ
ಕೈ ಜಾರಿ ನೀರಿಗೆ ಬಿತ್ತು.

ನೀರಿನ ತಳದಲ್ಲಿ ಬಿಳಿಯ ಕಲ್ಲಿನ ಹಾಗೆ ಬಿದ್ದಿದ್ದಾನೆ ಚಂದ್ರ!
ಮರೆಯಲಾರೆ ಅವನ ಅಗಲಲಾರೆ.
ನೆಲಕಚ್ಚಿ ಗಟ್ಟಿಯಾಗಿ ತಳ ಊರಿದ್ದಾನೆ
ಅವನು ಈಜಲಾರ ನಾನು ಎತ್ತಲಾರೆ.

ಬಿದ್ದ ಚಂದ್ರನಿಗೊಂದು ಆಕಾಶ ಬೇಡವೆ?
ಚಿಕ್ಕೆ ತಾರೆಯರ ಪರಿವಾರ ಬೇಡವೆ?
ನನ್ನ ಕತ್ತಲದಾರಿಗಾದರು ಬೆಳಕು ಬೇಡವೆ?
ಎಲ್ಲಿ ಹೋದನು ಮುದುಕ?

೧೯೯೩