ಇಲ್ಲೆ ಮರದಡಿ ಮಲಗಿರುತ್ತಿದ್ದ
ಜನಪದ ಕಥೆಗಳ ರಾಕ್ಷಸ, ಹೆಸರು ಅಟ್ಟಹಾಸ|
ಆದರೂ ಒರಟಾಗಿ ಕೆಟ್ಟ ನಗೆ ನಗುತ್ತಿರಲಿಲ್ಲ.
ಇಷ್ಟಾನಿಷ್ಟ ನಷ್ಟವಾದವನ ಕಥೆಗೀಗ ಹಿಂದು ಮುಂದಿಲ್ಲ.
ಏಳುಸಾಗರ ಏಳೇಳು ಬೆಟ್ಟಗಳ ಕಾಡು ಕಡಿದಿದೆಯಾಗಿ
ಗುಟ್ಟಿನರಮನೆಯಿಲ್ಲ. ಒಳಗೆ ಪಂಜರದಲ್ಲಿ ಗಿಳಿಯೂ ಇಲ್ಲ.
ಜನ ದನ ಇರಲಿ, ಗಪ ಗಪ ತಿನ್ನುವುದಕ್ಕೆ
ಕೈತುಂಬ ಚಳ್ಳೆಹಣ್ಣೂ ಇಲ್ಲ.
ಐಲಿಕಡೆ ಜನಪದ ಕಥೆ ಯಾರೂ ಹೇಳುವುದಿಲ್ಲವಾಗಿ
ಭಾರೀ ಮೇಕಪ್ಪಿನ ಭರ್ಜರಿ ಬಣ್ಣದ ವೇಷ ತೊಡಬೇಕಿಲ್ಲ.
ರಾಜಕುಮಾರಿಯ ಹೊತ್ತು ತರಬೇಕಿಲ್ಲ.
ಕಥಾ ನಾಯಕನ ಕಿರಿಕಿರಿಯಿಲ್ಲ.

ಮುಂಜಾನೆಯೆದ್ದು ಕೋರೆ ಹಲ್ಲುಜ್ಜಿ
ಕೆರೆಯಲ್ಲಿ ಮಿಂದು
ಕೊಂಬಿಗೆರಡು ಮಲ್ಲಿಗೆ ಮುಡಿದುಕೊಂಡರಾಯ್ತು
ಮತ್ತೆ ಮುಂಜಾನೆಯ ತನಕ ಕೈ ಖಾಲಿ.

ಸವೆದ ಕಥೆ ಇವನ ವ್ಯಥೆ.
ಈಗಿವನ ವಲಯವೆ ಬೇರೆ; ನಮ್ಮದೂ ಬೇರೆ.
ಈ ಮಧ್ಯೆ ನದಿಯಲ್ಲಿ ನೀರೆಷ್ಟೋ ಹರಿದಿದೆ.
ಅವನ ಹುಬ್ಬಿನ ಗಂಟು ಸಡಿಲಿಸುವುದು
ಆಗದು ಬಿಡಿ ನಮ್ಮಿಂದ.

ಪಕ್ಕದಲ್ಲೇ ಹಬ್ಬಿದೆ ನಾಗರಿಕತೆಯ ನಾಗಲೋಕ.
ತರಹೇವಾರಿ ಆತ್ಮಗಳ ವಿಲೇವಾರಿ
ಮಾರುಕಟ್ಟೆಯ ತೇಜಿಮಂದಿ ಮಂದ ಮಂದಿಯ ಮೇಲೆ
ಮಾಡುವ ಸವಾರಿ,
ಅವರ ಜೀವನ ಪರಿ.
ಸದರಿ ಮೆರವಣಿಗೆಯ ಮುಂದೆ ಅಟ್ಟಹಾಸ
ಬಿಡಿ ಬಿಡಿ, ಎದಕ್ಕೂ ಬಾರದ ಎಡಬಿಡಂಗಿ.

ಇವನಿಗಿನ್ನ ರೋಬಟ್ಟೇ ಚೆನ್ನ.
ರೋಬಟ್ಟಿನಂತಿವನು ಆಕಾಶಕ್ಕೆ ನೆಗೆಯಲಾರ, ತಾರಾ ಸಮರ
ಮಾಡಲಾರ ಆತ್ಮದ ಮ್ಯಾಲೆ ಅತ್ಯಾಚಾರ.
ಕೆರಳಿಸಲಾರ ವಿಕಾರ.

ಎಷ್ಟೆಂದರೂ ಅಟ್ಟಹಾಸ ನಮ್ಮ ನಿಮ್ಮಂಥ, ಜೀವಂತ.
ಕಥೆಗಾರ ಹೇಳುವಂಥ ರಾಜಕುಮಾರಿಯ ಕೆಣಕಿ
ಕಥಾನಾಯಕನ ಮುಂದೆ ಕುಪ್ಪಳಿಸಿ ಸೋಲುವುದು,
ಶಿಷ್ಟರಕ್ಷಣೆ ದುಷ್ಟರಿಗೆ ಶಿಕ್ಷೆಯ ನೀತಿಗೆ ಸೈಯೆನಿಸಿ
ಇನ್ನೊಮ್ಮೆ ಕಥೆ ಹೇಳುವತನಕ ಬಿದ್ದುಕೊಂಡಿರುವುದು
ಅವನ ಜೀವನ ರೀತಿ.

ಮೊನ್ನೆ ಅಮೆರಿಕನರ ಕಥೆಯಲ್ಲಿ ಇವನಿಗೂ ರೋಬಟ್ಟಿಗೂ
ಮಾರಾಮಾರಿ ನಡೆದು, ರೋಬಟ್ಟಿನೇಟಿಗೆ
ಸೊಂಟ ಮುರಿದು ಸೋಲೊಪ್ಪಿ ಓಡಿಹೋಗಿ ಕಥೆಯಲ್ಲಿ ಅವಿತಿದ್ದನಂತೆ.
ಜನ ಬಿಡಲಿಲ್ಲ. ಕಥೆಯಿಂದೆತ್ತಿ ಹಿಡಿದು ಎಳೆತಂದು
ಗೋಡೆಗೆ ಮೊಳೆಹೊಡೆದು ನೇತುಹಾಕಿದ್ದಾರೆ,
ವಸ್ತು ಸಂಗ್ರಹಾಲಯದಲ್ಲಿ.

ಈಗ ರೋಬಟ್ಟು ಬಿಡಿ, ಮಕ್ಕಳ ಕಡೆಗೂ ನೋಡುವುದಿಲ್ಲ ಅಟ್ಟಹಾಸ!
ಯಾಕೆಂದರೆ ಹೇಳುತ್ತಾನೆ; ಇವರೆಲ್ಲ
ರೋಬಟ್ಟಿನ ಸಂತಾನ; ಅಲ್ಲವೆ?

೧೯೯೪