ಸಂಗೀತದ ಭಾರೀ ಖಯಾಲಿ
ಈ ಮರಕ್ಕೆ.
ಸದಾಕಾಲ ಏನಾದರೊಂದು ಗುನುಗುನು ರಾಗ
ಋತುಮಾನದ ಹದಗಳಿಗೆ
ಹಲವರ್ಣದ ರಂಗೋಲಿಯ ರಾಗ.

ಅನಾದಿ ಭಾಸ್ಕರ ಆಗಸದಲ್ಲಿದ್ದರೆ
ಫಳ ಫಳ ಫಳ ಎಳೆಬಿಸಿಲ ಕೋಲಾಟದಲ್ಲಿ
ಚಿಗುರೆಲೆ ಹೇಳುವ ಚಿನ್ನದ ರಾಗ.
ಮೊರತುಂಬ ಹೂ ಮುತ್ತು ಕೇರಿ
ಮರದ ತುಂಬ ತೂರಾಡುವ ಸರಿಗಮದ ರಾಗ.

ಮಾಯದ ಗಾಳಿ ಜೋರಾಗಿ ಬೀಸಿದರೆ
ರೆಂಬೆ ಕೊಂಬೆ ಕಿರುಗುಡುವ ರಾಗ.
ಜಡಿಮಳೆ ಜಡಿದಾಗ ಇಡಿಮೈ ಜಡವಾಗಿ
ಮೈ ಮುರಿದು ಲಟಲಟಾ
ಮಳೆಯ ಹನಿ ತಟತಟಾ
ಸೋರುವ ಸುಖಭರಿತ ರಾಗ.
ಮಳೆ ನಿಂತಾಗ ಎಲೆ ಎಲೆ ಚೆಲ್ಲುವ
ಸವಿನೆನಪಿನ ಹನಿ ಹನಿ ರಾಗ.

ಕೊಡಲಿಯ ನೆರಳು ನಡುಗುವೆಲೆಗಳ
ಮ್ಯಾಲೆ ಸುಳಿವಾಗ ಹೇಳುವ ಶಾಂತರಸದ ರಾಗ.

ಕಗ್ಗತ್ತಲಲ್ಲಿ ಆರಿದ ಸೊಡರಾಗುವ ಈ ಮರ;
ಸದ್ದಿರದ ಶಬ್ದಗಳಲ್ಲಿ ಹೇಳುವ
ನಿಶ್ಯಬ್ದ ರಾಗ.

೧೯೯೪