ಕಾಡು ಕಾಡೆಂದರೆ
ಕಾಡೇನ ಬಣ್ಣಿಸಲೆ
ಕಾಡಿನ ಒಳಗೆರೆ ತಿಳಿಯಾದೊ| ಶಿವನೆ
ಹೊರಗಿನ ಪರಿ ನಂಬಲಾರೆ | ಶಿವನೆ ||ಪ||

ನೋಡೋ ಕಂಗಳ ಸೀಳಿ
ಏಳು ಬಣ್ಣಗಳುಂಟು
ಹರಿಯುವ ಹಾವನ್ನ
ಕೊರೆಯುವ ಹಸಿರುಂಟು
ಹೂವುಂಟು ಮುಳ್ಳಿನ ಮ್ಯಾಲೆ | ಶಿವನೆ |
ಓಡುವ ಮರಕಂಟಿ
ಹಾಡುವ ನೋವುಂಟು
ಮಾತಾಡೊ ಗವಿಗಳು ಹಲವಾರೊ | ಶಿವನೆ |
ನಡೆಯುವ ಬೆಟ್ಟಗಳು ನೂರಾರಯ್ಯಾ ||

ಗುಟ್ಟು ಹೇಳೇನಂತ
ಗುಟ್ಟಾಗಿ ಕರೆಯುವುದು
ತೋರುವ ದಾರಿಯ
ಕಣ್ಣೆದುರೆ ಮುಚ್ಚುವುದು
ಏನಂತ ಹೇಳಲಯ್ಯಾ | ಕಾಡಿನ ಪರಿಯ ||
ಬಲ್ಲಬಲ್ಲವರನ್ನ
ಹುಲ್ಲಿಗೆ ಸಮಮಾಡಿ
ಕಲ್ಲಿಗೂ ಕಡೆಮಾಡಿ ನಗತಾದಯ್ಯಾ|
ಕಾಡೇನ ಬಣ್ಣಿಸಲಯ್ಯಾ ||

(ಕಾಡುಕುದುರೆ)
೧೯೯೦