ಗಿಣಿರಾಮ ಹೇಳಿದ ರೇಪಿನ ಕತೆಯೊಂದ
ರಾಮಾ ಹರಿ ರಾಮಾ||
ಮಾನಭಂಗಿತಳಾಗಿ ಕನಸೊಂದು ಬಿದ್ದಿದೆ
ರಾಮಾ ಹರಿ ರಾಮಾ||

ಬರಸಿಡಿಲೆರಗಿದೆ ಹೊಂಚಿ
ಹೋಗಿದೆ ಕಾಲವು ಮಿಂಚಿ
ಮುಖ ಎಂಜಲಾಗಿದೆ
ಮೈ ಮೀಸಲಳಿದಿದೆ
ಸೊನ್ನೆಯಲಿ ಕಣ್ಣಾಲಿ ಕೀಲಿಸಿದೆ||

ಹಾಳು ಬೆಟ್ಟದ ಮ್ಯಾಲೆ
ಹೆಪ್ಪುಗಟ್ಟಿದ ಮುಗಿಲೆ
ಮುಚ್ಚುಮರೆಯೊಳಗಡೆ
ಬಾಯಿ ಚಪ್ಪರಿಸಿದೆ
ಸುಖವುಂಡ ನೆನಪಿಗೆ ಸಿಡಿಲು ನಗತಾವಣ್ಣ||

ಉಕ್ಕುವ ದುಃಖದಲಿ
ಮೂಕವಾಗಿದೆ ಮುಗಿಲು
ಸುಮ್ಮನಿದ್ದರೆ ಹಕ್ಕಿ
ಸೊಕ್ಕಿಗಂತ ತಿಳೀಬ್ಯಾಡ್ರಿ
ದಿಕ್ಕುತಪ್ಪಿ ಕೂತಾವಣ್ಣ ಬಡಪಕ್ಷಿ||
ಇದಕೆ ನಾ ಸಾಕ್ಷಿ||

೧೯೯೧