ಮುಂಗೋಳಿ ಕೂಗ್ಯಾವು ಮೂಡsಣ ಬೆಳಗಿ
ತಂಗಾಳಿ ಬೀಸ್ಯಾವು ತವರೀ ಹೂವರಳಿ
ಹೂ ಹೂವಿನೊಳಗೊಂದು ಕೈಲಾಸವರಳ್ಯಾವು
ಕೈಲಾಸ ಕೈಮುಗಿದು ಭೂಲೋಕಕಿಳಿದಾವು
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||

ಸೂಸುನಗೆಯಲಿ ಜಗದ ಲೇಸ ತುಳುಕಿಸುವವಳೆ
ಕಲ್ಲಿನ ಎದೆಯೊಳಗ ಹುಲ್ಲು ಚಿಗುರಿಸುವವಳೆ
ಹಕ್ಕಿ ಹಾರ್ಯಾಡ್ಯಾವು ಹಾಡೂತ, ಏನಂತ?
ಉಧೊ ನಿನ್ನ ಪಾದಕ್ಕೆ ಆದಿ ಮೂರುತಿಯೆ
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||

ಪಡುಗಡಲ ತೆರೆಗಳಲಿ ಪಾದ ತೊಳೆವವಳೆ
ಬೆಟ್ಟ ಬಯಲುಗಳನ್ನ ತೊಟ್ಟು ನಿಂತವಳೆ
ಮಲೆನಾಡ ಶಿಖರದಲಿ ಮಳೆಬಿಲ್ಲ ಮುಡಿದವಳೆ
ಅವ್ವಾ ಅಂದಾಗೊಮ್ಮೆ ಸಾಕಾರಗೊಂಬವಳೆ
ನಗೆಮೊಗದ ಜಗದಂಬೆ ಬೆಳಕಿನ ತಾಯೇ ||ತಾಯೇ||

ಕುರಿತು ಓದದ ಕಾವ್ಯ ಪರಿಣತರ ಮಾತೆ
ಸಂತsರ ಶರಣsರ ಮಂತ್ರsದ ಮಾತೆ
ಶಬ್ದಕ್ಕ ಬೆಳಕನ್ನ ಮುಡಿಸುವ ಕವಿಗsಣ
ದಿನಬೆಳಗು ಹೊಗಳುವರು ನಿನ್ನ ಕೀರ್ತಿಯನೆ
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||

ಜಾಣಜಾಣಿಯರೆದೆಗೆ ಕನಸು ಕೊಡುವವಳೆ
ಬಾಗಿದವರಿಗೆ ಭಾಗ ಹೃದಯ ಕೊಡುವವಳೆ
ನಿನ್ಹಾಂಗ ಧರ್ಮದಲಿ ಧಾರಾಳತನದಲ್ಲಿ
ಈ ಭೂಮಿಯಲಿ ಕಾಣೆ ಧರೆಗೆ ದೊಡ್ಡವಳೆ
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||

ಮ್ಯಾಲೇಳು ಲೋಕಕ್ಕ ಕೀಳೇಳು ಲೋಕಕ್ಕ
ಅಧಿಕವಾಗಲಿ ಹಬ್ಬಿ ನಿನ್ನ ಕಾರಣಿಕ
ಹಾಲೊಕ್ಕಲಾಗಲಿ ಹೊನ್ನೊಕ್ಕಲಾಗಲಿ
ತೂಗು ತೊಟ್ಟಿಲ ಬೆಳ್ಳಿಬಟ್ಟಲದ ತಾಯೇ
ಸಾವಿರದ ಶರಣವ್ವ ಕನ್ನಡದ ತಾಯೇ ||ತಾಯೇ||