ನಮ್ಮ ಕನಸಿನಲಿ ಅರಳಿದ ಹೂವ
ಯಾರೊ ಹರಿದರಲ್ಲ
ಹಸಿರುಗುಂಗಿನಲಿ ನಮ್ಮ ಮುಳುಗಿಸಿದ
ಹಾಡು ಎಲ್ಲಿ ಈಗ?

ನಮ್ಮ ಆಸೆ ಈಸಿದ್ದ ಸರೋವರ
ಒಣಗಿ ಹೋಯಿತಲ್ಲ
ಅಧೋಲೋಕದಲಿ ಹುದುಗಿ ಹೋದವೋ
ನಮ್ಮ ಹಾಡು ಎಲ್ಲ.

ನಮ್ಮ ಯೌವನವ ಹಿಗ್ಗಿಸಿದಂಥಾ
ಹಾಡು ಎಲ್ಲಿ ಈಗ?
ಗೆದ್ದಲು ಹತ್ತಿ ಹುಳಾ ಬಿದ್ದಿದಾವ
ಗೋರಿಯ ಒಳ ಹೋರಗ.

ತಾರೆಗಳುದುರಿ ಉಲ್ಕೆ ಇದ್ದಿಲು
ಬೀಳತಾವ ಮ್ಯಾಲ.
ಬೆಳುದಿಂಗಳಿನ ಬೂದಿ ಸುರಿಯುತಾವ
ನಮ್ಮ ನೆತ್ತಿ ಮ್ಯಾಲ.

ಮೊಲೆಗೆ ಅಂಟಿದ ಕೂಸು ಯಾಕೆ
ಅಲುಗಾಡುತಿಲ್ಲವಲ್ಲ.
ಹೀರಿತೇನು ಪೂತನಿಯ ಮೊಲೆಗಳನು?
ಶಿವಾ ಒಬ್ಬ ಬಲ್ಲ ||ಶಿವಶಿವ||

೧೯೯೧