ಎಷ್ಟೆಲ್ಲ ತಿಳಿದವರು ಇಷ್ಟು ಹೇಳಿರಿ ಸಾಕು
ಹೆಣ್ಣೆಂದರೇನು ಸ್ವಾಮಿ?
ಹೊಳೆದರೆ ಹೇಳಿರಿ, ಇಲ್ಲದಿದ್ದರೆ ಬೇಡ
ನಾನೆ ಹೇಳುವೆ ಕೇಳಿರಿ:

ಹೆಣ್ಣು ಅಂದರೆ ಶಿವನು ಗಂಡಸಿಗೆ ಮಾಡಿರುವ
ದಿನನಿತ್ಯ ನೋಯುವ ನೋವಲ್ಲವೆ?
ಹುಣ್ಣಿನ ನೋವನ್ನ ಅಮಲಾಗಿ ಕಲ್ಪಿಸುವ
ಗಂಡಸಿನ ತಲೆ ಅದಕು ಹಿರಿದಲ್ಲವೆ?

ಸೇಂದಿಗು ಹೆಂಗಸಿಗು ಫರಕೊಂದು ಉಳಿದೈತಿ
ಸೇಂದಿಗೆ ಬಾಯಿಲ್ಲ; ಹೌದಲ್ಲವೆ?
ಹೆಣ್ಣು ಬಲೆ ವಾಚಾಳಿ, ಗೋಳು ಬೀಸುವ ಗಿರಣಿ
ನಮ್ಮ ಧರಣಿಯ ಹಾಗೆ ಅವಳಲ್ಲವೆ?

ಹೆಣ್ಣಿನ ಕಿರಿಕಿರಿ, ಗದ್ದಲದ ದಿನಚರಿ
ಸಂಸಾರವೆಂದರೆ ಇದೆ ಅಲ್ಲವೆ?
ಸಂಸಾರವಿಲ್ಲದೆ ಮಾನವನ ಜನ್ಮಕ್ಕೆ
ಕೊಂಚವಾದರೂ ಅರ್ಥ ಇದೆಯೆ? ಹೇಳಿ.

೧೯೯೧