ಎಲ್ಲಾ ಇದ್ದರು ಇನ್ನೊಂದ್ ಬೇಕು
ಅದಕಂತಾರೆ ಅದೃಷ್ಟ.
ಅದೇ ಇಲ್ಲದೆ ಎಲ್ಲಾ ಇದ್ದರು
ತಪ್ಪೋದಿಲ್ಲ ಕಷ್ಟ.

ಅದು ಇದ್ದಲ್ಲಿಗೆ ಓಡಿ ಬರುತ್ತವೆ
ಹೆಣ್ಣೂ ಮತ್ತೂ ಹೊನ್ನೂ.
ಅದರಾಸರೆಯೇ ತಪ್ಪಿದರಾಯಿತು
ಅನ್ನವಾಗೋದು ಮಣ್ಣು.

ಹೆಣ್ಣೂ ಗಂಡೂ ಕೂಡೋದಕ್ಕೆ
ಕೂಡಿ ಬರಬೇಕು ಕಾಲ.
ಹೆಣ್ಣೂ ಕಾಲ ಎರಡೂ ಇದ್ದರು
ತುಕ್ರನಿಗೋ ದುಷ್ಕಾಲ!

ಗ್ರಹಗಳ ಗತಿಯೇ ತಪ್ಪಿದೆಯಾದರೆ
ಅದೃಷ್ಟ ಮಾಡೀತೇನು?
ಅದೃಷ್ಟವಿಲ್ಲದೆ ಗ್ರಹಗಳ ಗತಿ ಗಿತಿ
ಮಾಡೀತಾದರು ಏನು?

ಅದೃಷ್ಟ ಗ್ರಹಗತಿ ಎಲ್ಲಾ ಸುಳ್ಳು
ಕನ್ಯೆ ನಿನ್ನನ್ನ ಕಂಡು,
ಕಿಸಪಿಸಕ್ಕಂತ ನಕ್ಕರೆ ಆಕೆಯ
ಆಸೆ ಬಿಡುವುದೇ ಮೇಲು.

೧೯೯೧