ನಮಿಸಿರಿ ಇಗೊ ಅಂಬೇಡಕರರಿವರು
ಶರಣು ಹೇಳಿರಯ್ಯ!
ಬೊಗಸೆತುಂಬ ಮೀಸಲದ ಭಕ್ತಿಯಲಿ
ಇವರ ನೆನೆಯಿರಯ್ಯ.

ಹುಲ್ಲಿನ ಗಾಯವ ಮಾಯಿಸಿ ನಿಲ್ಲುವ
ಪೊಗರನು ಕೊಟ್ಟವರು.
ಹೊಲಸು ಗಲೀಜಲಿ ಕಮಲ ಹುಟ್ಟುವ
ಪವಾಡ ತೋರಿದವರು.

ಮುಚ್ಚುಮರೆಗಳನು ಬಿಚ್ಚಿ ಚರಿತ್ರೆಯ
ಕುಹಕ ತೋರಿದವರು.
ಕತ್ತಲನ್ನ ಹುರಿಮಾಡಿ ಹಿಂಡಿ
ಬೆಳ್ದಿಂಗಳ ತೆಗೆದವರು.

ಹೂವಿನ ಹಾಗೆಯೆ ಬೇರಿಗು ಬೇರೆಯ
ನಿಜವಿದೆಯೆಂದವರು.
ರಸಸಿದ್ಧಿಯ ನಾಗಾರ್ಜುನ ಮರೆತಾ
ಬೇರನು ಕಂಡವರು.

ನರರು ಮಾನವರ ಮಧ್ಯೆ ಇದ್ದ
ಅಂತರಗಳ ಬೆಸೆದವರು.
ಕಸಿದ ಕನಸುಗಳ ತಿರುಗಿ ಕೊಟ್ಟು
ಇತಿಹಾಸ ಹಂಚಿದವರು.

೧೯೯೧