ಕೆದರಿದ ಕೂದಲು ಈಚಲು ಮರದವ್ವೆ
ಮುಖದಲ್ಲಿ ಹುರಿಮೀಸೆ ಗಡ್ಡದವಳೆ
ಕಣ್ಣಲಿಪ್ಪತ್ತೆಂಟು ನರಕಗಳ ಆಳುವಳೆ
ಉಧೊ ಉಧೋ ಹಡದವ್ವೆ ಅಡ್ಡಬಿದ್ದೆ!

ಕಂಡಿರಾ ಕೆಲಮಂದಿ ಮನಸಿನ ಗೆರೆ ಮೀರಿ
ದೇವರು ಇಲ್ಲವೆ ದೈತ್ಯರಾಗಿ,
ಇಲ್ಲ ಕೋತಿಗಳಾಗಿ, ನಾಯಿ ಕತ್ತೆಗಳಾಗಿ
ಕುಣಿಯುವರು ಈ ತಾಯ ಕರುಣೆ ತಾಗಿ.

ಎಲ್ಲಿಯೋ ಸಣ್ಣ ಕಿಡಿ ತಾಗಿ ಬೊಂಬಾಟಾಗಿ
ಬೆಂಕಿ ಭುಗಿಲೆದ್ದಿತೋ? ಹೌದು ಎನ್ನಿ.
ಕರುಳು ಕತ್ತರಿಸಿ ವಿಲವಿಲನೆ ಒದ್ದಾಡಿದರೆ
ಅವಳ ಹೆಸರಿಗೆ ಒಂದು ಹೂವೇರಿಸಿ.

ಕಾರ್ಯಕಾರಣವಿರದೆ ಏನಾದರಾಯಿತೇ?
ಅಥವಾ ಹಾಳಾಯಿತೇ? ಹೇಳಿರಯ್ಯಾ.
ಆಕಾಶ ಪಾತಾಳ ಚಕಮಕಿ ಸಿಡಿದರೆ
ಅವಳ ನೂರೊಂದು ಸಲ ನೆನೆಯಿರಯ್ಯ.

೧೯೯೧