ಹೇಳತೇನಕೇಳ

ಹೇಳತೇನ ಕೇಳ : ಈ ಕಥನ ಕವನ ಲಾವಣಿಯ ಮಟ್ಟಿನಲ್ಲಿ ಬರೆಯಲ್ಪಟ್ಟಿದೆ. ಆದರೆ ಕಥನದ ಸೌಲಭ್ಯಕ್ಕಾಗಿ ಕೆಲವು ಮಾರ್ಪಾಡುಗಳನ್ನು ಮಾಡಲಾಗಿದೆ. ಈ ಕವಿತೆಯಲ್ಲಿ ಏಳು ನುಡಿಗಳ ಒಂದೊಂದು ಭಾಗ (ಚೌಕು) ಗಳಿವೆ. ಇವುಗಳಲ್ಲಿ ಆರು ನುಡಿಗಳು ಏರಿನಲ್ಲಿದ್ದು ಒಂದು ಇಳುವಿನಲ್ಲಿರುತ್ತದೆ. ಒಂದೊಂದು ನುಡಿಯೂ ಇಲ್ಲಿ ಅಂಶಗಣಗಳಿಂದ ಕೂಡಿ ಕೊಂಡದ್ದು. ಏರಿನ ನುಡಿಗಳಲ್ಲಿ ಎರಡೆರಡು ಸಾಲುಗಳ ಛಂದೋಕ್ರಮ ಈ ಬಗೆಯದು: ಮೊದಲ ಸಾಲಿನಲ್ಲಿ ನಾಲ್ಕು ವಿಷ್ಣುಗಣಗಳಿದ್ದು ಎರಡನೆಯ ಸಾಲಿನಲ್ಲಿ ಎರಡು ವಿಷ್ಣುಗಣ ಒಂದು ರುದ್ರಗಣಗಳಿರುತ್ತವೆ. ಇಳುವಿನ ನುಡಿಯಲ್ಲಿ ನಾಲ್ಕೂ ಸಾಲುಗಳು ಒಂದೇ ಬಗೆಯವು. ಒಂದು ಹುಸಿಪೆಟ್ಟು (ಮೂರು ಲಘು ಮಾತ್ರೆಗಳು) ಮತ್ತು ಮೂರು ಬ್ರಹ್ಮಗಣಗಳು ಈ ಸಾಲಿನಲ್ಲಿರುತ್ತವೆ. ಆದರೆ ಈ ಛಂದೋಕ್ರಮ ಯಾಂತ್ರಿಕ ವಾಗಿರುತ್ತದೆಂದು ತಿಳಿಯಲಾಗದು. ಅಂಶವೃತ್ತಗಳೆಲ್ಲ ಗೇಯವಾಗಿದ್ದು ಹಾಡುವಾಗ ಭಾವನೆಗೆ ತಕ್ಕ ಲಯದ ಏರಿಳಿತದಲ್ಲಿ ವಿಷ್ಣುಗಣಗಳು ಬ್ರಹಗಣಗಳಾಗಿ ಅಥವಾ ತದ್ವಿಪರೀತವಾಗಿ ಮಾರ್ಪಡಬಹುದು. ಹಾಡುವಾಗ ಲಯ ಪ್ಲುತವನ್ನೂ ಅನುಕರಿಸಬಹುದು.

ಲಾವಣಿಯ ಕಾವ್ಯಸ್ವರೂಪದಲ್ಲಿ ಕೆಲವು ಜಾನಪದ ವೈಶಿಷ್ಟ್ಯಗಳಿವೆ. ದೇವತಾಸ್ತುತಿ, ಎಲ್ಲ ಭಾರತೀಯ ಕಾವ್ಯಗಳಲ್ಲಿಯಂತೆ ಲಾವಣಿಯಲ್ಲಿಯೂ ಕಾವ್ಯದ ಅವಿಭಾಜ್ಯವಾದ ಅಂಗವಾಗಿದೆ. ಒಂದು ವಿಶಿಷ್ಟ ಶ್ರೋತ್ರವರ್ಗದ ರಸಾಸ್ವಾದಕ್ಕಾಗಿ ರಚಿತವಾದ ಕವನ ಇದು. ಲಯದ ತೋರಿಕೆಯ ಏಕನಾದ ಆ ಶ್ರೋತೃವರ್ಗದ ಲಕ್ಷ್ಯವನ್ನು ಕೇಂದ್ರೀಕರಿಸುವುದಕ್ಕಾಗಿ; ಪುನರುಕ್ತಿಗಳು ಅವರು ಭಾವನೆಗಳನ್ನು ಮೆಲುಕು ಹಾಕಲು ಅನುವುಮಾಡಿಕೊಡಲಿಕ್ಕೆ. ಕತೆಯ ಬೆಳವಣಿಗೆ ಶಬ್ದಗಳ ಮೂಲಕವಾಗಿದ್ದರೂ ಭಾವನೆಗಳು ಮಾತ್ರ ಲಯದ ಕಾವಿಗೆ ಅರಳಿ ಮಾಗುತ್ತವೆ. ಇದರಿಂದ ಕತೆಯ. ಅಂತರಾರ್ಥ ಸೂಕ್ಷ್ಮಾತಿಸೂಕ್ಷ್ಮವಾಗಿ ಚಿತ್ರಿತವಾಗಲು ಅವಕಾಶ ದೊರೆಯುತ್ತದೆ.

ಈ ಲಾವಣಿಯಲ್ಲಿ ಉತ್ತರ ಕರ್ನಾಟಕದ ಹಳ್ಳಿಗರ ಶ್ರದ್ಧೆ, ನಂಬಿಕೆಗಳನ್ನು, ರೀತಿ-ನೀತಿಗಳನ್ನು ವಿಫುಲವಾಗಿ ಬಳಸಿಕೊಳ್ಳಲಾಗಿದೆ. ಭೂತಗಳಲ್ಲಿಯ ನಂಬಿಕೆ ಮನುಷ್ಯನ ಆಸ್ತಿಕತೆಯ ಇನ್ನೊಂದು ಮುಖವಾಗಿದ್ದು ಅದಕ್ಕೆ ಅನಾದಿಕಾಲದ ಆಶ್ವಾಸನವಿದೆ. ಈ ಕವನದಲ್ಲಿ ರಾಮಗೊಂಡನಿಗೆ ಕಾಣುವ ‘ಜಕ್ಕಜಲದೇವರು’ ಅಥವಾ ಜಕ್ಕಿಣಿಯರು ನೀರಿನ ಹೆಣ್ಣುದೇವ್ವಗಳು. ಕೆಟ್ಟದೇವರ ಆಣೆಗೆ ಮಾತ್ರ ಅಂಜುತ್ತವೆಂದು ಪ್ರತೀತಿ ಇದೆ. ಇಡೀ ಕವನದ ಮೂಲನಂಬಿಕೆ ಜನ್ಮಾಂತರ ಸಂಬಂಧವನ್ನು ಕುರಿತದ್ದಾಗಿದೆ. ಭೂತಗಳು, ಜಕ್ಕಿಣಿಯರು, ಹುಲಿ ಮೊದಲಾದವೂ ಕೂಡ ಇಲ್ಲಿಯ ಪ್ರಮುಖ ಪಾತ್ರಗಳಾಗುತ್ತವೆ. ದಂತಕತೆಗಳ, ಧರ್ಮಶ್ರದ್ಧೆಯ, ರಹಸ್ಯ ನಂಬಿಕೆಗಳ ವಿಸ್ಮಯವೇ ಈ ಲಾವಣಿಯ ಸ್ಥಾಯಿಯಾಗಿ ಉಳಿದ ಲೌಕಿಕ ಭಾವಭಾವನೆಗಳು ಸಂಚಾರಿಯಾಗಿವೆ.

ನಾಯಕ ಅಥವಾ ಡೊಳ್ಳಿನ ಹಾಡು : ನೆಹರೂ ಅವರ ನಾಯಕತ್ವವನ್ನು ಕುರಿತು ಬರೆದ ಹಾಡು.

 

ತಕರಾರಿನವರು

ರಾವ್ ಹೇಳಿದ್ದು : ಇನ್ನೊಬ್ಬರ ಬೂಟಿನಲ್ಲಿ ಕಾಲಿಟ್ಟು ಬದುಕಿದವರ ಆತ್ಮಚರಿತ್ರೆ ಈ ಪದ್ಯದ ವಸ್ತು.

 

ಸಾವಿರದನೆರಳು

ನೆರಳಿನ ಜೋಡಿ : ಎಳೆಯ ಬಾಲಕನೊಬ್ಬ ತನ್ನ ನೆರಳನ್ನೇ ಪ್ರೀತಿಸತೊಡಗುತ್ತಾನೆ. ಒಬ್ಬಂಟಿಗಯಾಗಿದ್ದಾಗ ನೆರಳಿನ ಜೋಡಿ ಪ್ರೇಮದ ಚೆಲ್ಲಾಟ ಆಡುತ್ತಾನೆ. ಒಂದು ದಿನ ತಂದಿಟ್ಟ ಕಂದೀಲಿಗೆ ಬಿದ್ದ ನೆರಳು, ಆಕಾಶದ ಇನ್ನೊಂದು ಪ್ರಕಾಶಕ್ಕೆ ಬಿದ್ದ ನೆರಳು ಎರಡೂ ಕ್ರಾಸಾಗಿ ಇಕ್ಕಳಾಗಿ ಕತ್ತು ಹಿಸುಕುತ್ತವೆ. ಹುಡುಗ ತಬ್ಬಿಬ್ಬಾಗಿ ರೂಮಿಗೆ ಬಂದಾಗ ತೂಗುದೀಪದಿಂದ ಬಿದ್ದ ಸುತ್ತಾಡುವ ನೆರಳು ನೇಣುಹಾಕಿ ಕೊಲ್ಲುತ್ತದೆ.

ಕಲೆಗಾರಣ್ಣನ ಲಾವಣಿ : ಒಬ್ಬ ಕಲೆಗಾರ ತನ್ನ ರೂಮಿನ ಗೋಡೆಯ ಮೇಲೆ ಮರವನ್ನು ಚಿತ್ರಿಸಲು ಶುರುಮಾಡುತ್ತಾನೆ. ಬೊಡ್ಡೆ, ಕಾಂಡ, ಟೊಂಗೆ ಬರೆದ. ಆದರೆ ಎಲೆ ಬರೆಯಲು ಬರಲೇ ಇಲ್ಲ. ಇನ್ನೊಂದು ಮರಕ್ಕಾದರೂ ಎಲೆ ಮೂಡಬಹುದೆಂದು ಇನ್ನೊಂದು ಮರ ಬರೆಯಲು ತೊಡಗುತ್ತಾನೆ. ಎಲೆ ಮಾತ್ರ ಯಾವ ಮರಕ್ಕೂ ಮೂಡಲಿಲ್ಲ. ಹೀಗೆ ರೂಮಿನ ನಾಲ್ಕು ಗೋಡೆಗಳ ಮೇಲೂ ಬರೀ ಮರಗಳ ಬೊಡ್ಡೆ, ಕಾಂಡ, ಟೊಂಗೆಗಳನ್ನೇ ಬರೆದು ಬೋಳು ಮರಗಳ ಒಂದು ಕಾಡೇ ನಿರ್ಮಾಣವಾಗುತ್ತದೆ. ಎಲೆಯನ್ನು ಮೂಡಿಸಲಾಗಲೇ ಇಲ್ಲ ಎಂಬ ಕೊರಗು ನೋವಾಗಿ ಆತನ ಗಂಟಲಲ್ಲಿ ಒಂದು ಹುಣ್ಣಾಗುತ್ತದೆ. ಹುಣ್ಣು ಕುರುವಾಗಿ, ಕುರುವು ದೊಡ್ಡವಾಗಿ ಒಡೆದಾಗ ಆದರಿಂದ ಒಂದು ಗುಬ್ಬಿ ಬಂದು ಹಾಡತೊಡಗುತ್ತದೆ. ಹಾಡುತ್ತ, ಹಾಡುತ್ತ ಅದು ಮರದ ಮೇಲೆ ಕೂತಲ್ಲೆಲ್ಲ ಹಸಿರೆಲೆ ಮೂಡುತ್ತವೆ. ಹಸಿರು ದಟ್ಟವಾಗಿ ಹಬ್ಬಿ, ಅದೇ ಬಲೆಯಾಗಿ ಹಕ್ಕಿ ಹೊರಕ್ಕೆ ಹೋಗಲು ಆಗದೆ ಅಲ್ಲಿಯೇ ಬಲಿಯಾಗುತ್ತದೆ.

ಗುಡುಗುಡು ಗುಮ್ಮ : ಪಶ್ಚಿಮ, ಅದರ ಸಹವಾಸದ ಫಲದ ವಾಣಿಜ್ಯ ಸಂಸ್ಕೃತಿ, ಅದಕ್ಕೆ ಮನೆ, ಮಠ ಕೆಡವಿ ಮಾಡಿದ ರಸ್ತೆ. ಅದರ ಪರಿಣಾಮ ರಾಜ್ಯ, ವೃತ್ತಿ, ಸಮಾಜ, ಸಂಸ್ಕೃತಿ, ಕುಟುಂಬ ಸಂಬಂಧಗಳ ಅಧಃಪತನ ಇದರ ವಸ್ತು.

ಮರತೇನಂದರ ಮರೆಯಲಿ ಹ್ಯಾಗ : ಕವಿಗಳಿಗೆ ಕನಸುಗಳು ಇರುತ್ತವೆ; ಆದರೆ ಅವುಗಳನ್ನು ಕಾರ್ಯರೂಪಕ್ಕೆ ತರಲು ಅಧಿಕಾರವಿರುವುದಿಲ್ಲ. ರಾಜಕಾರಣಿಗಳ ಕೈಯಲ್ಲಿ ಅಧಿಕಾರವಿರುತ್ತದೆ; ಕನಸುಗಳು ಇರುವುದಿಲ್ಲ. ಎರಡೂ ಇದ್ದ ಅಪರೂಪದ ವ್ಯಕ್ತಿ ಮಾವೋತ್ಸೆತುಂಗ. ನಗರೀಕರಣ, ಔದ್ಯಮೀಕರಣ, ಕೇಂದ್ರೀಕರಣ, ವಾಣಿಜ್ಯ ಸಂಸ್ಕೃತಿ ಮುಂತಾದ ಅನೇಕ ಜಾಡ್ಯಗಳಿಗಿಂತ ಭಿನ್ನವಾದ ಪರ್ಯಾಯ ಸಂಸ್ಕೃತಿಯೊಂದರ ನಿರ್ಮಾಣಕ್ಕಾಗಿ ಪ್ರಯತ್ನಿಸಿದವನು. ಗಾಂಧೀಜಿಯವರ ಜೊತೆಗಿದ್ದೂ, ನೆಹರು ಪಶ್ಚಿಮ ಸಂಸ್ಕೃತಿಯತ್ತ ವಾಲಿದರೆ ಮಾವೋತ್ಸೆತುಂಗ ದೂರದಲ್ಲಿದ್ದೂ ಗಾಂಧೀಜಿಯವರ ದರ್ಶನವನ್ನು ಸರಿಯಾಗಿ ಗ್ರಹಿಸಿ ಅದನ್ನು ತನ್ನ ಹಳ್ಳಿಯ ಜೀವನ ಸಾಮಗ್ರಿಯಲ್ಲಿ ಸಾಕ್ಷಾತ್ಕಾರ ಮಾಡಿಕೊಳ್ಳಲು ಪ್ರಯತ್ನಿಸಿದವನು. ಆತನ ಬಗ್ಗೆ ಮೆಚ್ಚುಗೆ, ಭಯ, ಕಾತರಗಳು ಇರುವುದಕ್ಕೆ ಇದೇ ಕಾರಣ. ಕವಿಗಳ ಪೈಕಿ ಒಬ್ಬನಾದ, ಅವನ ಸೋಲಿನಿಂದ ನೊಂದು, ಅವನು ಸತ್ತಾಗ ಬರೆದ ಪದ್ಯ ಇದು. ಈ ನೋವಿನಲ್ಲಿ ಗಾಂಧೀಜಿಯವರ ದರ್ಶನದ ಬಗ್ಗೆ ನಾವು ತಳೆದ ನಿರ್ಲಕ್ಷ್ಯವೂ ಸೇರಿದೆ. ಈ ಸಂಗ್ರಹದ ಹಳದಿ ಆಶೀರ್ವಾದ ಹಾಗೂ ಮಾವೋತ್ಸೆತುಂಗನಿಗೆ ಎಂಬ ಇನ್ನೆರಡು ಪದ್ಯಗಳನ್ನು ಈ ಕವನದ ಬೆಳಕಿನಲ್ಲೇ ಗಮನಿಸಬೇಕು.

ಸ್ವಂತ ಚಿತ್ರ : ತುರ್ತುಪರಿಸ್ಥಿತಿಯಲ್ಲಿ ಫ್ರೆಂಚ್‌ ಪದ್ಯವೊಂದರಿಂದ ಪ್ರೇರಣೆ ಪಡೆದಿದ್ದು ಈ ಪದ್ಯ. ಇದು ಈಗಲೂ ಪ್ರಸ್ತುತವೆಂಬುದು ನನ್ನ ಭಾವನೆ.

ಶಬ್ದದ ಲಜ್ಜೆಯ ನೋಡಾ : ಅಸಂಗತ ಕಥೆಯೊಂದರ ಮೂಲಕ ಅಸ್ತಿತ್ವದ ಅರ್ಥಶೋಧನೆ ಮಾಡುವುದು ಈ ಕವಿತೆಯ ವಸ್ತು.

೦೧. ಕಥಾನಾಯಕನ ಮನೆಯ ವರ್ಣನೆ.
೦೨. ಕಥಾನಾಯಕ ಬಂದಾಗ ದೊಡ್ಡ ಮೊಲೆ ಬಂದು ಬಾಗಿಲು ತೆರೆಯುತ್ತದೆ. ಮದುವೆಯಂಥ ಸಂಸ್ಥೆ ತಾನೇ ದೊಡ್ಡದಾಗಿ ಬೆಳೆದು ವ್ಯಕ್ತಿ-ವ್ತಕ್ತಿಗಳ, ಗಂಡು-ಹೆಣ್ಣಿನ ಸಂಬಂಧವನ್ನು ಗೌಣವಾಗಿಸುವ ಚಿತ್ರಣ. ಕಥಾನಾಯಕ ನಾಯಕಿಯನ್ನು ಮದುವೆಯಾದಾಗ ಕೂಡಿದ ಜನ ತಾಳಿಗೇ ಆಶೀರ್ವಾದ ಮಾಡುತ್ತಾರೆ.

೦೩. ತಾಳಿಯಿಂದಾಗಿ ಅವನೂ ಒಬ್ಬ ಮನುಷ್ಯನಾಗುತ್ತಾನೆ. ಜನ ನಂಬತೊಡಗಿದರು. ಪ್ರಸ್ತದ ದಿವಸ ಅವನಜ್ಜ ಸಾಯುವಾಗ ಕೊಟ್ಟಿದ್ದ ಕೋತಿ ಚರ್ಮದ ನೆನಪಾಗುತ್ತದೆ. ಅದನ್ನೇ ಈತ ಮೈವಾಡವೆನ್ನುತ್ತಾನೆ. ಅದನ್ನ ಧರಿಸಿಕೊಂಡು ಕಾಲೇಜನಲ್ಲಿದ್ದಾಗ ಹುಡುಗಿಯರ ಸೇರಿದ್ದ. ಈಗ ಹೆಂಡತಿಯನ್ನು ಹಾಸಿ ಕುಣಿದಾಡುತ್ತಾನೆ. ಕುಣಿಯುವುದು ಮುಗಿದಾಗ ತಂತಾನು ದೇಹ ಮತ್ತು ಮನಸ್ಸಾಗಿ, ಮೈವಾಡ ಮತ್ತು ಅಲೋಚನೆಯಾಗಿ ಸೀಳಿಕೊಂಡಿರುತ್ತಾನೆ. ಶುದ್ಧಾಂಗ ದೇಹವಾಗಿದ್ದಾಗ ಮೈವಾಡವಾಗಿರುತ್ತ ಕೋತಿಗೆ ಕುಮಾರನಾಗುತ್ತಾನೆ. ಪ್ರಸ್ತದ ದಿವಸ ಮೈವಾಡ ಹಾಕಿಕೊಂಡಾಗಲೇ ಎರಡು ತಲೆಯ ಮಣ್ಣಮುಕ್ಕ ಹಾವಿನ ನೆನಪಾಗುತ್ತದೆ.

೦೪. ತಾಳಿ ದೊಡ್ಡದಾಗಿ, ಗೋಡೆಯಾಗಿ ಬೆಳೆದು ಆಚೆಗೆ ಅವಳ ಮುಖ ಈಚೆಗೆ ಅವಳ ಮೊಲೆ – ಹೀಗೆ ಖರ್ಚಿಲ್ಲದೇ ಮನೆಯಲ್ಲಿ ಒಂದು ಕೋಣೆ ಹೆಚ್ಚಾಗುತ್ತದೆ. ಕೋಣೆಯ ಒಳಕ್ಕೆ ಇರುವ ಮುಖದ ವ್ಯವಹಾರ ತಿಳಿಯದು. ಮಿಕ್ಕ ಗೃಹಕೃತ್ಯಗಳನ್ನು ಈಗ ಮೊಲೆಯೇ ನೋಡಿಕೊಳ್ಳುತ್ತದೆ.

೦೫. ಮಣ್ಣುಮುಕ್ಕ ಹಾವಿನ ರೂಪಕ ಮುಂದುವರಿಯುತ್ತದೆ. ಒಂದು ತಲೆ ಮೈವಾಡ ಧರಿಸಿಕೊಂಡು ಮೊಲೆಯ ಮೇಲೆ ಹುಪ್ಪಾಹುಮ್ಮಾ ಮಾಡುತ್ತದೆ. ಇನ್ನೊಂದು ತಲೆ ಯೋಚನೆಗೆ ತೊಡಗುತ್ತದೆ. ಬದುಕಿನ ಅದೆ ಅದೆತನದ ಬಗ್ಗೆ ಬೋರಾಗಿ ಮೈವಾಡದ ಕಡೆ ನೋಡುತ್ತಾನೆ. ಹೆಣ್ಣಿನ ಮೇಲೆ ಕುಣಿಯುತ್ತಿದ್ದ ಅದನ್ನು ನಿಲ್ಲಿಸಿ ತಾನು, ಮೈವಾಡ, ಜಗತ್ತು, ಸಂಬಂಧಗಳು – ಇವೆಲ್ಲದರ ಅರ್ಥ ಕಂಡು ಹಿಡಿಯಲು ಹೊರಗೆ ಹೊರಡುತ್ತಾನೆ. ಹೊರಗೆ ಎತ್ತು ನಿಂತಿತ್ತು. ಬೆನ್ನುಹತ್ತಿದ. ಮೊಲೆಯಿಂದ ತಪ್ಪಿಸಿಕೊಳ್ಳಲು ಎತ್ತಿನ ಪಕ್ಕ ಅಡಗಿಕೊಳ್ಳುತ್ತಾನೆ. ಎತ್ತು ಓಡಿದರೆ ಇವನೂ ಓಡುತ್ತಾನೆ. ಇವನು ಓಡಿದಲ್ಲೆಲ್ಲಾ ಗೋಡೆ ಇದೆ. ಒಮ್ಮೆ ಗೋಡೆ ಒಡೆಯಲು ಯತ್ನಿಸಿ ವಿಫಲವಾಗುತ್ತಾನೆ. ಬೆಳತನಕ ಇವನು ಮತ್ತು ಎತ್ತು ಓಡಿದ ಮೇಲೆ ಬೆಳಿಗ್ಗೆ ನೋಡಿದಾಗ ತಾವಿಬ್ಬರೂ ಇದ್ದಲ್ಲೇ ಇದ್ದೇವೆ ಅಂತ ತಿಳಿಯುತ್ತದೆ.

೦೬. ಈಗ ಎತ್ತು ತಾವಿದ್ದಲ್ಲೇ ಇದ್ದುದರ ರಹಸ್ಯ ಹೇಳುತ್ತದೆ.

 

ಅಕ್ಕಕ್ಕುಹಾಡುಗಳೇ

ಅಕ್ಕಕ್ಕು ಹಾಡುಗಳೇಕಾಡುಕಾಡೆಂದರೆ :ಇವು ನನ್ನ ಅನೇಕ ನಾಟಕ ಪ್ರಯೋಗಗಳಿಗಾಗಿ ಬರೆದು ಹಾಡುಗಳು.

ಜಲರಾಯ : ತನ್ನ ಬಾಲವನ್ನು ಇನ್ನೊಬ್ಬರದೆಂದು ಭ್ರಮಿಸಿ ತನ್ನನ್ನೇ ನುಂಗುವ ಮತ್ಸ್ಯರಾಯನ ಕಥೆ.

ತುಕ್ರಬಕ್ರ : ತುಕ್ರ ತಾರೆಯರ ಮದನ ಸಲ್ಲಾಪ: ಇವೆಲ್ಲ ‘ತುಕ್ರನ ಕನಸು’ ನಾಟಕದ ಹಾಡುಗಳು.

ಅತಿಥಿ : ನನ್ನ ತಂದೆಯ ಕೊನೆಯ ದಿನದ ಅನುಭವ.

 

೧೯೯೪ರಿಂದಈಚಿನಕವಿತೆಗಳು

ಗಾಂಧೀಜಿ ಸ್ವರ್ಗದಿಂದ ಇಳಿದು ಬಂದಾಗ : ಒಂದು ನಾಟಕದ ಹಾಡು.