ಭೆಟ್ಟಿಯಾದಗೊಮ್ಮೆ ಬರ್ಥ್‌‌ಸರ್ಟಿಫಿಕೇಟ್‌ ತೋರಿಸಿದರೇ
ಕಿಸವಾಯಿ ದಾಸಯ್ಯ ಕೈ ಮುಗಿದರೇ
ಸ್ವಾಮಿ, ಶರಣೆಂದರೇ ನಿಜವೆ ಸಾರ್?
ಚಪ್ಪಲಿ ಬಿಟ್ಟು ಬೂಟು ಮೆಟ್ಟಿದ್ದೇನೆ, ಅಷ್ಟೆ, ಅಷ್ಟಕ್ಕೇನೆ
ಹಳೆಸ್ನೇಹ ಮರೆಯೋದೆ? ಕಾ ನೋಡಿ ಹ್ಯಾಗಿವೆ ಬೂಟು?
ತುಟ್ಟೀ ಬಾಟಾ! ಈ ಕರಿಬೂಟಿನ ಮುಂದೆ ನಿಮ್ಮ ಜಪ್ಪಲಿ ಏನೇನಲ್ಲ
ಬಿಡಿ; ಚೆಲ್ಲಿದ ನಿವಾಳಿ. ಪಾಲಿಶ್‌ ಹಾಕಿ ಹೆಜ್ಜೆ
ಝಳಿಪಿಸಿದರಂತು ನನ್ನಂತರಂಗದಡವಿಯ ಟೆಕ್ನಿಕಲರೆಲ್ಲಾ
ಕರಿ ಬಿಳಿ ಎರಡರಲ್ಲೆ ಕರಗಿ ನೀರಾಗಿ ಬಿಂಬಿಸುತ್ತದೆ.
ನೀವಲ್ಲಿ ನಿಂತು ಕೈಕಾಲು ಕುಣಿಸಿ ಮಾತಾಡಿ
ಇಲ್ಲಿ ಈ ಬೂಟಿನೊಳ್‌ ನಿಮ್ಮ ಬೃಹದಾಕಾರ ತೃಣ
ವಾಗಿ ಹಾಗೆ ಹೀಗೊಮ್ಮೆ ಹೀಗೆ ಹಾಗೊಮ್ಮೆ ಚಲಿಸಿದಾರಾಯ್ತು;
ಖೇಲ್ ಖಲಾಸ್‌!

ಮೊದಲಿನ ಅನೇಕದ ಕಥೆಯನೇನು ಹೇಳಲಿ ಸಾರ್?
ಏಳೇಳು ಏಳರ ನೂರೆಂಟು ಬಣ್ಣ, ಒಂದೊಂದಕ್ಕೆ ಅದರದರ ನೆರಳು,
ಆ ನೆರಳಿಗೀ ಬಿಸಿಲು – ಸರಳ ನೆರಳಿಗೇ ೧೮ ಹಾದರ ನಮೂನೆ
ಯೆಂದರೆ ಹೇಗೆ ಹೇಳಿ? ಈಗ ಬೇಕಾದ ರಾಮನ್‌ ರೇ ಕೂಡಿ, –
ಎರಡಂಕಿಯಲ್ಲೆ ಚಕಪಕ ಬಿಡಿಸಿ ಬೆರಗಿನ ನೇರಕ್ಕೆ
ಎಳೆ ಬಿಡಿಸುತ್ತೇನೆ!


ನೋಡಿದ್ದಿರಲ್ಲ ಮೊದಲಿದ್ದ ಚಪ್ಪಲಿಜೋಡು
ಕಾಲೂರಿದಿರೋ, ಯಾತದ ಹೆಣ್ನಾಯಿ ಅಲ್ಲಿ ಕುಂಯೋ, ಇಲ್ಲಿ ಕುಂಯೋ!
ಅಡವಿಯ ಮುಳ್ಳು ಹಾದಿಗೆ, ಹಾದಿಯ ಮುಳ್ಳು ಕಾಲಿಗೆ ಮುರಿದು,
ಮುರಿದ ಮುಳ್ಳಿಗೊಂದೊಂದು ಅಣೆ ಬೆಳೆದು
ಎಡಗಾಲಿಗೇಳು ಬಲಗಾಲಿಗೆಂಟು.
ಕೊಯ್ದಿರೋ, ಅಣೆಗೊಂದೊಂದು ಗವಿ
ಗೊಬ್ಬೊಬ್ಬ ಗುಹೇಶ್ವರ.
ಗಾಳಿ ಬೀಸಿದರಂತು ಗವಿಯಾಳದೊಳಗೆ ಹಿಂಡು ಅಪಸ್ವರ
ಮಾರಾಯರೇ ಬೆಳತನಕ ನಿದ್ರೆಗೇಡು. ಇಷ್ಟಾದರೂ
ಬಂದುಹೋದದ್ದು ತಿಳಿಯದೆಂದು ಮನೆಯಲ್ಲಿ ಹೆಂಡತಿ, ಆಫೀಸಿನಲ್ಲಿ
ಸಿಪಾಯಿದಂಗೆ. ಕುಂಟುತ್ತಿದ್ದೆ ನಿಜ, ನಡೆದದ್ದು ಸುಳ್ಳೆ
ಈಗ ತಕ್ಕೊಳ್ಳಿಯಪ್ಪ, ಮನೆ ಆಫೀಸಿನಟ್ಟ ಏರುವಾಗೆಲ್ಲ ಡೊಗ್ಗು
ಸಲಾಮು ಚಪ್ಪಾಳೆ ಕೇಕೆ. ಅದಕ್ಕೇ ನಾ ಮಲಗಿದರು ಬೂಟು
ಕಳಚುವುದಿಲ್ಲವಲ್ಲ. ಮೊನ್ನೆ ಏನಾಯ್ತೂಂತ: ಕಾಮಸೂತ್ರದಾರನೇ ಆಸನ
ಹಾಕಿದರೆ ಹೆಂಡತಿಯ ತಾಳಿ ಬೂಟಿಗೆ, ಬೂಟಿನ ಲೇಸು ತಾಳಿಗೆ ಸಿಕ್ಕು
ಹರಿದು ಗೋಳೋಗೋಳು ಕೇಳಬೇಡಿ. ಹಾಗೆಂದು ನಿನ್ನೆ ಕಳಚಿಟ್ಟರೆ
ಬೂಟಿನ ಬದಲು ನನ್ನನ್ನೇ ಮೊಳೆಗೆ ತೂಗುಹಾಗಿ ಬಿಡಬೇಕೆ
ಅರ್ಧಾಂಗಿ?


ಹಾಕಿ ನಡೆದಾಡಿದರೆ ಏನುಸುಖ, ಏನುಸುಕ, ಏನುಸುಖ ಅಂತೀರಿ!
‘ಹಾಕಬೇಡೀ ಹಾಕಿದರೆ ಇದೇ ಜೋಡಿ,’
ಬಸಿರಿಯರ ದಿಂಬುಹೊಟ್ಟೆಯ ಮೇಲೆ ಇಂಬಾಗಿ ಕಾಲೂರಿ
ಹೊರವಂಟಂತೆ ಸಾರ್!
ಬಸ್ಸಿನ ಒಂದು ಸಿಸಿಪಸ್‌ವಾರಿಗೆ ಮೂರು ಸಲ ಮುಂಬೈ
ಹಾರಿ ಬರಬಹುದು
ದಂಗೆ ಧಾಂದಲೆ ಸಂಪು ಕುಸ್ತಿಪೇಚುಗಳಿಂದ ಜರ್ರನೇ
ಜಾರಬಹುದು. ಇನ್ನೇನು, ನಡೆವಾಗ ಕೂಸು ಒದ್ದಾಡಿ
ಬಿದ್ದು ಹೊರಳಾಡಿ ಚೀರಿದ್ದು ಕೇಳಿಸುತ್ತದೆ.
ಅದೇನು ಬಿಡಿ, ಕಿರುಚಿದ್ದನ್ನು ಸಂಗೀತವಾಗಿಸುವುದು ನಮ್ಮ
ಕಿವಿಯಲ್ಲಿದೆ.


ಎಲ್ಲಿ ಸಿಕ್ಕಿತಂತೀರಿ? ಸಿಕ್ಕಸಿಕ್ಕವರೆದುರು ಬಾಯಿಬಿಟ್ಟೀರಿ ಸಾರ್,
ಯಾವನೋ ಪಾಪಿ, ಟ್ರೇನಿನ ಕೆಳಗೆ ಸಿಕ್ಕು ಆತ್ಮಹತ್ಯೆ ಮಾಡಿಕೊಂಡದ್ದು
ಪ್ರಜಾವಾಣಿಯಲ್ಲಿತ್ತಲ್ಲಾ, – ಅವನದ್ದು. ಪೋಲಿಸರಿಗಿಂತ
ಮೊದಲೇ ಹೋದೆ. ಕತ್ತರಿಸಿದ ಕಾಲೂ ಹಳಿಯ ಹೊರಗಡೆಯಿದ್ದವು
ಕಳಚಿಕೊಂಡೋಡಿ ಬಂದೆ. ಹ್ಯಾಗಿವೆ ನೋಡಿ, – ಥಳಥಳಾ ಥಳಥಳಾ
ಹೊಳೆಯುತ್ತಿವೆ!

೧೯೬೮