ಇರುವೆಗುದ್ದಿನ ಸುತ್ತ ಕರಿಕೀಯ ಕುಡಿ ಮ್ಯಾಲೆ
ಬೂಟುಗಾಲೂರಿ ನಿಂತೇನ | ಪುರಮಾಸೆ
ನಾಗರದ ಪಿರತಿ ಮಾಡೋಣ.

ನನ್ನ ಮನದಾಗರೆ ಇದು ಏನ ಬೆಳೆದೈತಿ?
ತುಂಬ ಮಲ್ಲೀಗಿ ಹೂಬಳ್ಳಿ | ಉದುರೀಸಿ
ನಿನ್ನ ಪಾತಾಳ ತುಳುಕsಲಿ.

ಮ್ಯಾಗೇರಿ ಬಂದೇನ ಮುಗಲಾಗಿ ನಿಂತೇನ
ಹೂವಲ್ಲ ಕಂಡಾವ ತತ್ತಿ | ನಿಂತಾವ
ಕರಕೀಯ ಕುಡಿಯೆಲ್ಲ ನಿಮಿರಿ.

ತತ್ತೀಯ ಸುತ್ತಾ ಕಟ್ಟೊಂದ ನಗರಾ
ಹಾದಾಡಿ ಹೋಗಾಕ ಟ್ರೇನಾ | ಮಕ್ಕಳಿಗಿ
ಆಡಾಕ ಇರಲೊಂದ ಬಯಲಾ.

ಏ ಹುಚ್ಚಮುಂಡೀ ಇದ ಏನ ಮಾದಿಟ್ಟಿ
ಟ್ರೇನಿನ ಗಾಲ್ಯಾಗ ತತ್ತಿ | ಪುಡಿಪುಡಿ
ತುಳಿಕ್ಯಾವ ನಾಗರ ಚರಂಡಿ.

ಮಳೆಯಾಗಿ ನಾ ಇನ್ನ ಹೆಂಗಾರೆ ಕೆಳಬರಲಿ
ನೀ ರಂಡಿ ಬೀಳನೆಲ ಮಣ್ಣಾ | ಅರಗೊಡ್ಡಿ
ನಾ ಇಲ್ಲಿ ಬರಿಮುಗಿಲ ಕಣ್ಣಾ.

೧೯೬೮