ತಕರಾರಿನವರು ಸ್ವಾಮೀ
ನಾವು ತಕರಾರಿನವರು

ಇಬ್ಬರ ತಕರಾರಿಗೆ ಹುಟ್ಟಿ
ಹಲವರ ತಕಾರಾರಿನಲ್ಲಿ
ಬೆಳೆದವರು.

ನಾವು ನಿಮ್ಮಂತೆ, ಹೋಗಲಿ
ಯಾರಂತಾದರೂ ಯಾಕಿಲ್ಲವೆಂದು
ಹಡೆದವರನಂದವರು.

ತಕರಾರನುಟ್ಟು ತಕರಾರ ತೊಟ್ಟು
ಮಸಡಿಗೆ ತೆರೆಗಣ್ನು, ಕಿಸಬಾಯಿ
ಜೋಡಿಸಿ ನಕ್ಕು,
ಪುರಾಣದ ಹರಾಮತನದ
ಮನುವಿನ ಕಟ್ಟಡದ ಮೈಸಿರಿಗೆ
ಬೆದರಾಗಿ ನಿಂತು
ನಿಮ್ಮ ದೃಷ್ಟಿಗೂ
ತಕರಾರು ತೆಗೆದವರು
ಸ್ವಾಮೀ,
ನಾವು ತಕರಾರಿನವರು.

೧೯೬೮