ಒಂದು

ನಾ ಕುಣೀಬೇಕ ಮೈಮಣೀಬೇಕ ಕಾಲ್ದಣೀಬೇಕ ತಾಯಿ!
ನವಿಲಿನ್ಹಾಂಗ, ಎಳಿ ಮಣಿಕಿನ್ಹಾಂಗ, ತಿರತಿರಗಿಧಾಂಗ ಬಗರಿ!
ತೊಡೀ ತೆರೆದು ತಲಿ ಬಿಚ್ಚಿ ಕೈಯ ಎದಿ ಮಿದುವಿನಾಗ ಹುಗದು,
ಬಗಲ ಬೆವತು ಅಹ ನಾರಬೇಕ ಗಿಜಗಳಿಕಿ ಸಿಂದಿಹಣ್ಣು.

ಕಾದ ತಗಡ ಈ ತೊಗಲಿನಾಗ ಹೊತ್ತೇತಿ ಕಾಡಬೆಂಕಿ
ಸಂದಿಗೊಂದಿ ಬುಗುಬುಗು ಅಂದು ತಲಿಗೂದಲುರಿಯ ಜ್ವಾಲಿ
ಸುಡಸುಡs ಇಂಥ ಈ ಸಪ್ಪ ಬಾಳೆ ನಿಂತೇನ ದೀಪಕಂಬ!
ಬಣ್ಣಬಣ್ಣದ ನೆರಳ ತಿರಗತಾವ ಊರ ಕೇರಿ ತುಂಬ.

ಕಣ್ಣ ಕಾಡಿಗೀ ಕೆನ್ನಿಗಿಳಿಧಾಂಗ ಮೂಡತಾವ ನೆನಪ.
ಕೌದಿಯೊಳಗ ಹುಡಿಕ್ಯಾಡತೇನ ಹೊಳ್ಯಾಡತೇನ ಮತ್ತ
ಜೋಡನಾಗರಾ ತಿಡೀ ಬೀಳತಾವ ಕನಸಿನಾಗ ಬಂದಾ;
ಏನಾಡತಾವ ತಳಕ್ಯಾಡತಾವ ರೆಂಟೀಯ ಸಾಲ ಹಿಡದಾ.

ಬೆವರ ಆಗಿ ಹರಿದಾಡತೇನು ಇಡಿ ಹೊಲಾ ತುಂಬಿಕೊಂಡಾ
ಹಸಿಗೆ ಹಸೀ ಬೆರೆತಾಗ ಅಯ್‌ ಶಿವನ ಏಳತಾವ ನವಿರಾ!
ಬೆಳಿ ಏಳತೈತಿ ತೆನಿಗೊಂದ ಹಕ್ಕಿ ನಗತಾವ ಒಂದಸವನಾ
ಕಣ್ಣ ತೆರೆದರೇನೈತಿ ಹಾಳು ಮುದಿರಾತ್ರಿ ಮಗ್ಗುಲಾಗ!

ಕಡೀಬೇಕ ಅಹ ಕಚ್ಚಬೇಕ ಹಿಂಗಪ್ಪಬೇಕೊ ನಾನಾ
ಗಿಣಿ ಹಣ್ಣಿಗೀ ಜೋತು ಬಿದ್ಧಾಂಗ ಎಳೀಬೇಕೊ ನಿನ್ನಾ
ತೆಕ್ಕಿಮುಕ್ಯಾಗ ನೆಗ್ಗಬೇಕೊ ಮೀಸಲದ ಮಿಂಡ ಬಾರೊ
ಮಿಂಡಿ ಬಿದಿರ ನಿಂತೇನೊ ತೆರದು ಬಿರುಗಾಳಿಯಾಗಿ ಸೇರೋ

ನಿನ್ನ ಬಸವಿ ಬಸವಳಿಯತೇನೊ ಬಾ ಮೀಸೆ ಹೊತ್ತ ಧೊರಿಯೆ
ಎಲ್ಲೆಲ್ಲಿ ಹಿಡದರಲ್ಲಲ್ಲಿ ಬೆಣ್ಣೆ ಕರಗುವೆನೊ ತೋಳಿನೊಳಗೆ
ಕೋಳಿ ಒಣಗೀಯ ಹೋಳಿನಂಥ ತುಟಿಗಲ್ಲ ಕಡಿಯೊ ಗೆಣಿಯಾ
ಘಾಸಿಯಾಗಿ ಕನಸಿನಲಿ ‘ಮಾವಾ’ ಅನ್ನುವೆನೋ ಮೀಸಲೊಡೆಯ!

ಹಾಳಬಾಂವ್ಯಾಗ ನೀರ ಸೆಲೆ ಝಮ್ಮಂತ ಒಡೆದು ಬರಲಿ
ಕೆಳಗ ಹಾಕಿ ನೀ ಕುಟ್ಟೊ ನನ್ನ!
ಏ ನಾದೊ ನನ್ನ
ಲೇ ಮಾಡೊ ಜಿಬ್ಬಿಜಿಬ್ಬಿ!
ಅಲ್ಲಿತನಕ, ತೊಡಿ ಬೆವರುತನಕ ನವಿರೇಳುತನಕ, ತೆನಿ ಮೂಡುತನಕ
ನಾ ಕುಣೀಬೇಕ ಮೈ ಮಣೀಬೇಕ ಕಾಲ್‌ ದಣೀಬೇಕ ತಾಯಿ
ಹುಚ್ಚಿಯ್ಹಾಂಗ, ಮೈ ತುಂಬಿಧಾಂಗ ಬೆದಿಮಣಿಕಿನ್ಹಾಂಗ ಆಗಿ!

 

ಎರಡು

ಅಪ್ಪಾ ಸೂತ್ರಧಾರ ಕೇಳೊ ಕನಸ ಕಂಡಿನೆ
ಸುಖದ ನೋವ ಸದ್ದಮಾಡಿ ಹೆಂಗ ಹೇಳಲೆ ||ಪ||

ಬೆಳ್ಳಿ ತೊಡಿಯ ಬಿಳಿಯ ಕುದುರಿ ಬೆರಗ ಕಂಡಿನೆ
ಬೆನ್ನನೇರಿ ಚಿನ್ನದುರಿಯ ಕಾಡ ಕಂಡಿನೆ ||

ಅಯ್‌ ನನ ಶಿವನ ಆರ್ಯಾಣದಾಗ ಅರಳಿ ಶಿರಸಲ
ಎಲ್ಲಿ ಕೈಯ ಹಾಕಲಲ್ಲಿ ಗೊಂಚಲ ಗೊಂಚಲ ||

ಹಿಂದ ಮುಂದ ತಂಪಗಾಳಿ ತೀಡಿ ಸಳಸಳ
ಚಿನ್ನ ತೊಡಿಯನೂರಿ ಸುರಿಸೇನ ಹೂವ ಬಳಬಳ ||

ಹೂವ ಕರಗಿ ಕೆಂಪ ನೀರ ಕೆರಿಯ ಕಂಡಿನೆ
ಯೋಳ ಹೆಡಿಯ ಕಾಳ ನಾಗ ದೊರೆಯ ಕಂಡಿನೆ ||

ಸಂದಿಗೊಂದಿ ಬೆಂಕಿ ಹಚ್ಚಿ ಹೆಡಿಯ ಚುಚ್ಚಿದಾ
ಮೈಯನೊಟ್ಟಿ ಮೆಟ್ಟಿ ತುಳಿದು ಮುದ್ದಿ ಮಾಡಿದಾ ||

ಬಳಸಿ ಆಗುಮಾಡಿ ಸಾಗಿ ಸಂದು ಹೋದನೋ
ಸುಖದ ನೋವ ಎದಿಗಿ ನಟ್ಟು ದಾಟಿ ಹೋದನೋ ||

 

ಮೂರು

ಬಿಟ್ಟಂಥ ಬೇರ ಹರಿದಾವ | ಕೂಸ ಚೀರ್ಯಾವ
ಮುಗಲ ನೋಡ್ಯಾವ | ಮಣ್ಣ ಬಗದಾವ |
ಖೂನ ಗುರುತ | ಎಲ್ಲಾಪಾಕ ಮರತ ತಿರಗ್ಯಾವ ಸುತ್ತಮುತ್ತಾ ||

ಮೈಮ್ಯಾಗ ಬರಿಯಲೇನ ಗೆರಿ | ಯೋಳಪಟ್ಟಿ ಕರಿ
ಗೆರಿಗೊಂದ ಗಂಟ | ಗಂಟಿಗೊಂದ ತೂತ |
ತೂತಿಗೊಂದ | ಕಣ್ಣಮಾಡಿ ನೋಡಲೇನ ಬಿಳಿ ಮೋಡಾ ||

ದೂರ ದೂರ ಹಸರ ಹಾರೇತಿ | ಹಸಿ ಸರದೈತಿ
ಬಾವಲಿ ಜೋತಾವ | ಹದ್ದ ಹಾರ್ಯಾವ
ಕಣ್ಣ ಮುಚ್ಚಿ | ದಾನೊ ಒಳಗ ದೊರಿ ಜರಾ ಕಣ್ಣ ತೆರಿ ||

 

ನಾಲ್ಕು

ಏ ಕುರುಬರಣ್ಣಾ | ಸತ್ಯುಳ್ಳ ಶರಣಾ
ಕಾಪಾಡೊ ಕುರಿಗಳನಾ |
ಮಾಡುವೆ ನಮನಾ ||ಪ||

ಅರಿಯಬಾರದ ಅರಸ ಒಳಗೆ ಬಾರದೆ ಕುಳಿತ
ಒಳಹೊರಗ ಆದಾವೊ ಹೊರತ
ಹೊಳಿದ ಹೊಲಿಗಿಯ ಭೇದ ಗೊತ್ತಿಲ್ಲದಾದೆವೊ
ಮರತೇವು ದೊಡ್ಡಿಯ ಗುರುತ
ಕಳಕೊಂಡು ಹಳಹಳಿಸಿ ತಿಳಿಯದೆ ತಿರಿಗೇವ
ಮತಿಗೆಟ್ಟು ಮರುಳಾದೆವಣ್ಣಾ ||

ಒಳಗ ಗದ್ದಿಗಿ ಮ್ಯಾಲ ಹುಲಿ ಬಂದ ಕುಂತಾವ
ತಳಕಿತ್ತು ಓಡದಿರೊ ಧೀರಾ
ಪ್ರಳಯಕ್ಕೆ ಹೊರತಾಗಿ ಹೊರಗ ಹೆಂಗರೆ ಉಳಿವಿ
ಕಾರ್ಯಾಕಾರಣಕಾದ ವೀರಾ
ನಮ್ಮೊಳಗ ನೀನಡಕ ನಿನ್ನೊಳಗ ನಾವಡಕ
ಬಿಟ್ಟರೇನಿದೆ ಬರಿಯ ಬಣ್ಣ ||

ಕಂಡ ಕಂಡವರೀಗಿ ಕೈಮುಗದ ಕೇಳೇವ
ಕಂಡೀರೇನರಿ ನಮ್ಮ ದೊರಿಯ?
ಬಿಳಿಯ ಹೊಳಪಿನ ಯಕ್ಷಿ ಕ್ಷಿತಿಜದಂಚಿನ ಬೆಳಕ
ಕಣ್ಣೊಳಗ ಕುಕ್ಕಿದಳಯ್ಯ
ಅಕ್ಷಿಯೊಳಗಡಗಿರುವ ನಿಕ್ಷೇಪವೇ ಬಾರ
ಅಳಿಸೊ ಉಳಿಸುವ ಹಕ್ಕಿನಣ್ಣ ||

 

ಐದು

ಹೊಯ್ಯೊ ಹೊಯ್ಯೊ ಮಳಿರಾಯ
ಹೊಯ್ಯೊ ಹೊಯ್ಯೊ ರೇ ||ಪ||

ಈಗ ಬರತೇನಂತ ಹೇಳಿ ಹೋದವನೆಲ್ಲಿ
ನೀ ಎಲ್ಲಿ ನಿನ್ನ ಹಾದೆಲ್ಲಿ |
ನೆಲ ಬಿರಿತು ಪಾತಾಳ ಬಿಸಿಯುಸಿರ ಹಾಕೀತು
ಹಸಿರೆಂಬೊ ಶಬುದ ಮರೆಯಾಗಿ |
ಮರುಗುವ ಮಣ್ಣಿನ ಮೈಯಾನ ಹಸಿ ಆರಿ
ತೊಡಿಯ ಬೆಂಕಿಯ ಮರೆತಿ ಮಳೆರಾಯಾ
ಸುರಿಯೊ | ಪಾತಾಳ ತುಳುಕಲಿ ಮಳೆರಾಯಾ ||

ಕೆರಿ ಬಾವಿ ತಳ ಒಣಗಿ ಬರಿ ಮೂರ ಹನಿ ನೀರ
ಒಂಟಿ ತಾರಿಯ ನೆರಳ ಮೂಡ್ಯಾವ |
ಹೆಚ್ಚೀನ ಹೊಳಿಗsಳು ಬರಿ ಬಚ್ಚಲಾದಾವ
ಮರಿಮೀನ ಹೊಟ್ಟೀಯ ಹೊಸದಾವ |
ಮೈ ತೊಗಲ ಕಪ್ಪಾನ ಕಂಬಳಿ ಮಾಡೇವ
ಗುರಚೀಯ ತಿರಿಗೇವ ಮಳಿರಾಯ
ಸುರಿಯೊ | ಪಾತಾಳ ತುಳುಕಲಿ ಮಳೆರಾಯಾ

 

ಆರು

ಹಾರಿ ಹಾರೈಸುವೆ
ಹಲವ ಹಂಬಲಿಸುವೆ
ತೋರೆಲೊ ಕರುಣಾ | ಬಾರೊ ಮೋಹನಾ ||ಪ||

ಹೊಕ್ಕು ಹೊರಬಂದಂಥಾ ಅರಳು ಮಲ್ಲಿಗಿ ಹೂವ
ಮದಾ ಮೂಸಿ ಕೈ ತುರಿಸಿ ಉರುಪ ಹೆಚ್ಚಿಸದಾವ
ನನ್ನ | ನುಡುವ ತೊಡುವಂಥ ಶ್ರೀಮಂತ |
ಏ ಧೀಮಂತಾ | ಹಾ ದೊರೆಯೆ

ಲಜ್ಜಿ ನಾಚಿಕಿ ಮಾನಾ ಕಳಚಿ ಬರಿಮೈಯಾದೆ
ನೆನಪಾಗಿ ಸರ್ವಾಂಗ ಗುಡಿಗಟ್ಟಿ ನಿಲ್ಲುವೆ
ಹೊಟ್ಟಿ | ಬಗಿದು ಒಳಗಿಟ್ಟುಕೊಳ್ಳುವೆನೊ
ನವಿರೇಳುವೆನೊ | ಹಾ ದೊರೆಯೆ

ಎಸಗುವ ಎಸಕದ ಹೆಸರ ಗೊತ್ತಿರದಾವ
ಉಲಿದುಲಿದು ನಿಂತಲ್ಲಿ ಸಂತೀಯ ಮಾಡಾವ
ಇಂಥಾ | ಮಾತಿನ ಪಾತಕವ್ಯಾಕೊ |
ಎಂಜಲ ಬದುಕೊ | ಹಾ ದೊರೆಯೆ

ಎಡವೀದಂಥಾ ಗೊತ್ತ ಮರೆತು ಅರಸುವಿಯತ್ತ
ವಾಕಿನಿಂದಲೆ ವಸ್ತು ಹಿಡಿವೆನೆಂಬುವುದೆತ್ತ
ನಿನ್ನ | ಸಂದೇಹದೊಳು ದೇಹಾ ಮರತಿ |
ದೇಹಾ ಮರತಿ | ಹಾ ದೊರೆಯೆ

ಚರ್ಮ ಸ್ಪರ್ಶಕೆ ಒಳಗೊ ಸ್ಪರ್ಶ ಜರ್ಮಕೆ ಒಳಗೊ
ಚಕಮಕಿ ಕಿಡಿಯೊಳಗ ನನ್ನ ನಿನ್ನಯ ಅರಿವೊ
ಹುಟ್ಟಿ | ಹೊಂದಿ ಬಂದೇವೊ ಈ ಶಾಪ |
ಬಿಡದ ಶಾಪ | ಹಾ ದೊರೆಯೆ