ಯಾಕೆ ಸುಮ್ಮನೆ ಕುಂತಿ? ಮಾತನಾಡೆ. ಅಥವಾ,
ನಾ ಒಂದು ಹೇಳುವೆನು, ನೀ ಒಂದು ಕತೆ ಹೇಳು,
ನಾನೆ ಆರಂಭಿಸಲೆ? ಕೇಳು ಮತ್ತೆ:
ಹೀಗೆ ಉದ್ದೋಉದ್ದ ರಸ್ತೆ ಹೋಗಿದೆ ನೋಡು
ಅಲ್ಲಿ ಗುಹ್ಯಾತ್ ಗುಹ್ಯತರವಾದ ಗಹನಗವಿ!
ಶಿಶಿರದಲ್ಲಿ ಮಂಡೆ ಭೋಳಿಸಿದೊಂದು ಎಳೆಯಮರ.
ಮೂರು ಎಂದರೆ ಮೂರೆ ಟೊಂಗೆಗಳು, ಆರೆ ಎಲೆ.
ಮೂರರಲ್ಲೊಂದಕ್ಕೆ ಭಿಡೆಗೆ ಬಸುರಾದ ಕುಡಿ; ಮಿಡಿಯೆನ್ನಲೂಬಹುದು
ಕಾಯಿಯೆಂದೂ ಕೆಲರ ತರ್ಕವಿದೆ, ಅದು ಬೇರೆ.
ತುಸುಹೆಚ್ಚು ತುಸುಕಮ್ಮಿ ಟೈಮು ಇಷ್ಟೇ ಅನ್ನು
ಇಲ್ಲಿಯೇ ನೋಡು ಆ ಕಥೆಯು ನಡೆದದ್ದೂನು.
ಅವನು ಕಾಲೇಜಿನಲ್ಲಿ ಮೇಷ್ಟ್ರು; ಅವಳೋ ಅವನ ವಿದ್ಯಾರ್ಥಿನಿ.
ಬಹಳೇ ಸರಳ ಪ್ರಶ್ನೆಯಂತೆ ಇದ್ದಳು ಆಕೆ,
ತುದಿ ಹಲ್ಲು ಸುತ್ತಲೂ ಉರಿಯುವ ತುಟಿ.
“ಹೇಳಿ ಸಾರ್, ಅಮೃತಮತಿಗೇನಾಯ್ತು ಆಮೇಲೆ?”
ಉಚ್ಚಾರವೆಲ್ಲ ಬೆದೆ ಒದ್ದೆ
ಘಮಘಮಾ ನಾರಿದಳು ಮೂಗತುಂಬ
“ಆ ಭವಾವಳಿ ಒಟ್ಟಿಗೇಳು – ಒಂದೇ ಎರಡೆ?
ಬೆಳೆದಂತೆ ಭವ ಭವಾ! ಹೊಸ ಹೊಸಾ ಅನುಭವ!
ಹೇಳಿ ಸಾರ್ ಅದ ಹೇಳಿ”
ಗವಿಯ ಒಳಗಡೆಯಿಂದ ಸೀಳುನಾಲಗೆ ಚಾಚಿ
ಬಂತು ಕತ್ತಲೆ! ಉಧೋ
ಬಯಲು ಬಯಲನು ತುಂಬಿ, ಟೊಂಗೆಗಳ ತುದಿ ತಬ್ಬಿ
ಅದನಳಿಸಿ ಇದ ನುಂಗಿ, ತಿರುಗಿ ತಿರುಗಣಿಯಾಗಿ
ಬರಿ ಎರಡನುಳಿಸಿತ್ತು: ಗಂಡು ಹೆಣ್ಣು!
“ಇಲ್ಲೆಲ್ಲು ಲೈಟಿಲ್ಲ”
“ಹೌದು ಪರವಾಯಿಲ್ಲ”
“ಬಲೆ ಕಠಿಣ ಕವಿ ಜನ್ನ! ಆ ಯಶೋಧರ ಚರಿತೆ? –
ನಾರಿಕೇಳದ ಪಾಕ, ಬೆಳ್ಳಗೇಂತಿಟ್ಟುಕೊ, ಕಷ್ಟವೆ, ಏನಂತಿ?
ಒಟ್ಟು ಕಥೆ ನಡೆದದ್ದು ಹೀಗೆ….”
ಕತ್ತಲೆಯ ಕಪ್ಪುತೆರೆ ಗುಹೆಯ ಗುಹ್ಯವ ತೀಡಿ ಹರಿದಾಡಿದಂತೆ!
ಒಳಕ್ಕೊಮ್ಮೆಲೆ ತೂರಿ, ಎದೆಯ ತುದಿಗಳ ತುಂಬಿ
ಕಣ್ಣರೆಪ್ಪೆಯಗುಂಟ ಶೂನ್ಯವಾದಂತೆ, – “ಆಹ!”
(ನಾನು ಬಂಗಾರದ ಕುದುರೆ ನೀ ಬೆಳ್ಳಿದೇವರೊ
ನಿನ್ನನೇರಿಸಿಕೊಂಡು ಓಡಬೇಕು.
ಒಂದು ಎರಡೇಳು ಭವ, ಮುಂದೆ ಹಾಗೇ ಮುಂದೆ
ಈಗ ನಾನಿದ್ದದ್ದು ಎಷ್ಟನೆ ಭವ?)
“ಬೆಳೆದಂತೆ ಭವಭವಾ ಹೊಸಹೊಸ ಅನುಭವಾ!
ಮುಕ್ತಿಗೆನ್ನೆಷ್ಟು ಭವ? ಹೇಳಿ ಸಾರ್, ಅದ ಹೇಳಿ
ಪಾಠ ಪೂರ್ತಿಮಾಡಿ, ಎಷ್ಟನೆ ಭವ?”
“ಬೆಂಕಿಪೊಟ್ಟಣವೆಲ್ಲಿ?”
“ಎಲ್ಲಿ ಮೇಸ್ಟ್ರೇ ಎಲ್ಲಿ, ಎಲ್ಲಿ ಅವಿತಿದ್ದೀರಿ?”
ಸಂದಿಗೊಂದಿಯ ತುಂಬ ಕೈತುಡುಕಿ ಹುಡುಕಿದಳು,
‘ದೇಹದಲ್ಲೆ?’
ಬರಹ ಭಾಷಣ ಪಾಠ ನೋಟ್ಸಿನಲಿ ಹುಡುಕಿದಳು –
‘ಮಾತಿನಲ್ಲೆ?’
ಹಲ್ಲ ಚಕಮಕಿ ಕಡೆದು ಕಣ್ಣ ಹೊತ್ತಿಸಿ ಮೇಲು ಮೇಲಕ್ಕೆ ನೋಡಿದಳು:
ಮರವೇರಿ ಮಿಡಿಯಾಗಿ ಮಣ್ಣಕಡೆ ಕಣ್ಣಾಡಿ
ಇರುವ ಆರೂ ಎಲೆಯನಲುಗಾಡಿದ – ……

ಕಾ, ಇಕಾ ಮೈ ನವಿರು! ನಿನಗು ಏಳುವುದಲಾ
ಬೇರನಾರೋ ಅಲುಗಿದಂತೆ ಅನಿಸುವುದಲಾ?
ಅವರಲ್ಲಿ – ನಾವಿಲ್ಲಿ! ಇರಲಿ
ನೀ ಕತೆ ಹೇಳೀಗ
ನಿನ್ನ ಸರದಿ.

೧೯೬೩