ಗೆಳೆಯಾ,
ಬಲ್ಲೆಯಾ ನಾ ಹೇಳಬಾರದ, ನೀ ಕೇಳಬಾರದ,
ಹೇಳಿಕೇಳಿದರಿಬ್ಬರಿಗೂ ತಿಳಿಯಬಾರದ ಒಂದು ಸಂಗತಿಯ?
ಅದನ್ನೀಗ ಈ ಕ್ಷಣ ಬುದ್ಧಬೋಧಿಯ ಕೆಳಕುಳಿತು
ತಿಳಿದೆಯೆಂದಿಟ್ಟುಕೊ:
ಬಲ್ಲೆಯಾ, –
ಸದಾ ಅರಳಿರುವ ಮುಖಾರವಿಂದದ ನಿನ್ನ ನಗಿ ಮಾಸುವುದ?
ಲೋಕವನ್ನು, ನನ್ನನ್ನು ಕಾಕುಮಾಡಿ ವಕ್ರೀಭವಿಸುವ ನಿನ್ನ
ಚಷ್ಮಾಕಾಂತಿ ಕಳೆಗುಂದುವುದ?
ಅದು ಇರಲಿ, ಬಲ್ಲೆಯಾ
ಹಜಾಮನೆಂದು ಅಗಸನಿಗೆ ನೀ ರೇಗಿದ್ದಕ್ಕೆ,
ಹೆಜ್ಜೆಗೊಂದು ಫೋಜು ಕೊಟ್ಟು ಹಲ್ಲು ಕಿಸಿದದ್ದಕ್ಕೆ,
ಉಗುಳಿದ ಭಾಷಣಕ್ಕೆ, ಕಿರಿಚಿದ ಘೋಷಣೆಗೆ,
ಕಚ್ಚಿ ಕೆರೆದ, ಒತ್ತಿ ಮೆತ್ತಿದ ಮಾಂಸದ ನಂಟಿಗೆ
ಅಂಟಿದರ್ಥ ವ್ಯರ್ಥವಾಗುವುದ?

ಬಲ್ಲೆಯಾ, –
ಬುದ್ಧ ಎಲಿಯಟ್ ಸಾರ್ತ್ ಗಾಂಧಿಗೀಂದಿಗಳೆಲ್ಲ
ಮಾವೋ ಮಾವಾರೆಲ್ಲ
ಮ್ಯೂಸಿಯಮ್ಮಿನ ವಸ್ತು –
ಬೇಡ, ನೀತಿಯ ಬೀಳುನೆಲದ ಬೆದರು ಬೆಚ್ಚು
ಗಳಾಗಿ ಬಿಚ್ಚಿಕೊಳ್ಳುವುದ?

ಏನಲೇ ಬಲ್ಲೆಯಾ – ನೀ ಹೊರಗೆ
ಹರಿದು ರಸ್ತೆಗಳಲ್ಲಿ
ಬರೆದು ಆಫೀಸಿನಲ್ಲಿ
ನೋಡಿ ಥೇಟರಿನಲ್ಲಿ
ತಿಂದು ಹೋಟೆಲಿನಲ್ಲಿ
ದಿನಪತ್ರಿಕೆ ರೇಡಿಯೋಗುಂಟ ವಿಶ್ವದಲ್ಲಿ

ತುಂಬುವಾಗ ನಿನ್ನಾಕೆ
ಪರದ ಗಂಡನ ಕೂಡ ಹಗಲುಹಾದರ ಮಾಡಿ, – ನೀ ಬಂದಿ,
ಅವಾಗ, – ತಿಳಿಜೊಲ್ಲ ಚಿಮುಕಿಸಿ ನಕ್ಕುದ
ಏ ಬೋಳೀಮಗನೆ ಬಲ್ಲೆಯೇನೊ –
ಸೂಳೆಮನೆಯಲ್ಲ ಸರ್ಕಾರೀ ಆಸ್ಪತ್ರೆಯಲ್ಲಿ ನಾವಿದ್ದದ್ದು,
ಆದ್ದರಿಂದ ಕ್ಯಾನ್ಸರೇ ನಮಗಾದದ್ದೆಂದು ತೀರ್ಮಾನಿಸಲ್ಪಟ್ಟಿದ್ದು?

ಕೋಲೆಬಸವ ಕತ್ತನಾದರು ಹಾಕು,
ಹೌದಪ್ಪ ಹೌದೆಂದರೆ ಬಲಹೂ ಕೊಡು.
ಕಾ ನನ್ನ ನೋಡು:
ಇಟ್ಟವಗೆ ಶೆಗಣಿಯಾದೆ, ತಟ್ಟಿದವಗೆ ಕುರುಳಾದೆ
ನೀನಾರಿಗಾದೆಯೊ ಎಲೆ ಮಾನವಾ?
ತಂದೆಗೋ? ಊರ ಮಂದಿಗೊ?

ನನ್ನಲ್ಲೆಂಥ ಮತ್ಸರ ಹುಟ್ಟುವುದು ಬಲ್ಲೆಯಾ –
ನನ್ನ ನಂಬಿಸಿದ್ದಕ್ಕೆ, –
ನೀನಿಂಥ ಅತಿಶಯದ ಫೋಜು ಕೊಟ್ಟು ಸತ್ತದ್ದಕ್ಕೆ

೧೯೬೭