ಖಾನೇಸುಮಾರಿಯಲ್ಲಿ ಸ್ವಂತ ಹೆಸರುದಶಿಯಿರದ
ಪರದೇಶಿ ಮಗ, ಯಾರ ಶರ್ಟನೋ ತೊಟ್ಟು,
ಯಾರ ಮೆಟ್ಟನೋ ಮೆಟ್ಟಿ, ಯಾರ ರುಂಬಾಲಿಗೋ
ತಲೆ ಬಣ್ಣನಳವಡಿಸಿ, ಗೋಸುಂಬೆನಗೆ ನಕ್ಕು,

ನನ್ನ ಹೆಸರಲ್ಲೇನೆ ಚಾಬೀಡಿ ಅಂಗಡಿಗಳಲ್ಲಿ ಉದ್ರೀ
ಬರೆಸಿ, ಎಲಿ ತಿಂದು ರಂಗಾಗಿ ಕಂಡ ಹೆಂಡಿರ
ಕಿವಿಯ ಪೀಕದಾನಿಗಳಲ್ಲಿ ಪೋಲಿ ಮಾತನ್ನುಗುಳಿ
ಮೋಜು ಮಾಡುವ ಮಗನ ಬಡಿವಾರ

ಆs ಎಂದು ಕಟುವಾಯ ಜೊಲ್ಲ ತಟಕ್ಕೆಂದು ಸುರಿಸಿ
ಹೊಗಳುವಿಯಲ್ಲ; ಇದಕ್ಕೇನು ಹೇಳಲಿ? ಮೊನ್ನೆ
ಆದದ್ದಿಷ್ಟು : ಬಾಜಾರಿನಲ್ಲಿ ಸಂಜೆ, – ನಿನಗೆ ಗೊತ್ತಿದೆಯಲ್ಲ
ಕಳಕೊಂಡ ಮೂಕಜನ, ಹೇಗೆ ಕೈಕಾಲೂರಿ

ಇರುವೆಗಳ ಸಾಲಾಗಿ ಹೊತ್ತುಗೊತ್ತಿಲ್ಲದೇ ಹರಿವರೆಂದು?
ಸರಿ, ನಾನೂ ಕೂಡ ನಾಮರೂಪವ ಮರೆತು
ಕರಗಿ ಹೋದೆ. ಬೀದಿ ಕಂಭದ ನೆತ್ತಿ ಭಗ್ಗನೇ ಉರಿ
ಹೊತ್ತಿ ನೆರಳು ಬೀಳುವ ಹಾಗೆ ಬೆಳಕು ಬಿತ್ತು.

ಏಕೆ ಎಲ್ಲಿಗೆ ಹೊರಟೆನೆಂದು ಒಂದೇ ಕ್ಷಣ, ಹೀಗೆ
ಗಕ್ಕನೆ ನಿಂತು, ಹೀಗೆಯೇ ತಲೆ ಕೆರೆದು
ಹಾಗೊಮ್ಮೆ ಹೀಗೊಮ್ಮೆ ಆಜುಬಾಜೂ ನೋಡಿ ಹಲ್ಲ
ಕಿರಿದೇ ಕಿರಿದೇ, – ನಾ ಕಿರಿದರೀ ಇವನ ಗಂಟೇನು

ಹೋಯ್ತು? ಸರಸರಾ ಬಂದವನು ಎದುರುಬದುರಂಗಡಿಯ
ಕನ್ನಡಿಯ ಕೃಷ್ಣಬಾಯಲ್ಲಿ ನೋಡೊ, ಥೇಟು
ನನ್ನಂತೆ ಕೈ, ಥೇಟು ನನ್ನಂತೆ ಮುಖ ಹೋ ಎಂದರೋ
ಎಂದು ಕಿರುಚಿದನೆಲ! ಆ ಅವನನೊಂದು ಸಲ

ಹಿಡಿಯಲೆಂದೇ, ಹಿಡಿದು ಕಡಿಯಲೆಂದೇ, ಕಡಿದು ಕುಡಿ
ಯಲೆಂದೇ ಬೆಳ್ಳಿ ಹಿಡಿಯ ಕುಡುಗೋಲನ್ನು ಮೂರು
ದಿನ ಮಸೆದೆ. ಹಾದಿ ಹೋಗವರನ್ನು ಬೀದಿ ಬರುವವರನ್ನು
ನೀವು ಕಾಣಿರೆ? ಎಂದೆ. ಎಲ್ಲಾರೂ ಚಪ್ಪಾಳೆ ತಟ್ಟಿ

ನಕ್ಕುದ ಕೇಳಿ ಮನೆಗೆ ಬಂದೆ. ಬಾಗಿಲಿಕ್ಕಿತ್ತು. ಒಳಗೆ
ಗುಸುಗುಸು ಸದ್ದು ಕೈ ಬಳೆಗಳುಲುಹು. ಸೆರೆ
ಸಿಕ್ಕನೋ ಶತ್ರುವೆಂದು ಝಾಡಿಸಿ ಒದ್ದು ಭರ್ರನೇ ಬಿರುಗಾಳಿ
ಯೊಳಹೊಕ್ಕೆ. ಹೊಕ್ಕವನೆ ಮನೆಯ ತುದಿತುದಿಯ

ಗದಬಡಿಸಿ, ಗದಬಡಿಸಿದವನೆ ಹುಡುಕಾಡಿ, ಹುಡುಕಾಡಿದವನೆ
ಕೊನೆಗೆ ಹಾಸಿಗೆಗೆ ಬಂದು ನೋಡುತ್ತೇನೆ: ನನ್ನ
ಪಾಲಿನ ಹುಡುಗಿ ಇದಕೆ ಹಾಸುಗೆಯಾಗಿ, ಅರೆಗಣ್ಣ ತುದಿಯ
ಸೂರು ಜತಿಯಗುಂಟ ಸ್ವರ್ಗದುಯ್ಯಾಲೆ ಕಟ್ಟಿದಹಲ್ಯೆ

ಹಿಂದೆ ಹಿಂದಕ್ಕೊಮ್ಮೆ ಮುಂದೆ ಮುಂದಕ್ಕೊಮ್ಮೆ ತೂಗಿ
ದಾಗೊಮ್ಮೆ ಹಾ! ಜೀಕಿದಾಗೊಮ್ಮೆ ಹೋ! ಎಂದು
ಗಳರವಗೈಯ್ದರೇನಾಗಬೇಡ? ಕಣ್ಣಿನ ಕಮಂಡಲದ
ಕುದಿವ ನೆತ್ತರು ತುಳುಕಿ ಸೆಳೆದೆನಾತನ ಮೇಲು

ಹೊದಿಕೆಯನ್ನು, ಚಡ್ದಿ ಚರ್ಮ ಎಲುಕರುಳು ನರಗಳನ್ನು –
ಹರಿದೊಗೆದು ಹಿಡಿದೆನೆಂಬಾಗೆಲಲ, ಹಿಡಿದವನ
ಮೈತುಂಬ ಗುಲ್ಲುಕೊಟ್ಟು ಹಲ್ಲ ಕಿತ್ತು ಕಡಿವೆನೆಂಬಾ
ಗೆಲಲ, – ಸರ್ಪನಾಲಗೆಯಿಂದ ಅಸಿಧಾರೆ ನೆಕ್ಕುವಂದಗೇಡಿ

ಶುನಕನ ಕಂಡೆ! ಅಲ್ಲಿ ನೆಕ್ಕಿದರಿಲ್ಲಿ ನನ್ನ ನಾಲಗೆ ಸೀಳಿ
ಹಲವಾದುದ ಕಂಡೆ! ನನ್ನ ಹೆಸರಿಂದದನು ಕೂಗಿ ಕರೆದೆ.
ಮತ್ತೆ ಒದ್ದು ಕನ್ನಡಿಗಾಗಿ ತಡಕಾಡಿದೆ!

೧೯೬೫