ಹಡೆಯಬೇಕಿದ್ದವಳು ಹಲಿವುಳ್ದ ಸುದ್ದಿ
ಕಾರುಕಾರಿಗೆ ಢಿಕ್ಕಿ ಮಣ್ಣಲಾಡುವ ಸಣ್ಣ ಕಂದನ ಸಾವು
ಜಾಗತೀಕರಣ ಕೇಸರೀಕರಣ.
ಕಲ್ಯಾಣದ ಬೆಳಕೆಲ್ಲಿ ಹೋಯಿತು ಶಿವನೆ?
ಶಸ್ತ್ರಾಸ್ತ್ರ ಪೈಪೋಟಿ ದೀಪಾವಳಿ ಪಟಾಕಿ
ಅಣುಬಾಂಬು ಬೋಫೋರ್ಸು ತೆಹಲ್ಕಾ ಶಿಫಾರ್ಸು
ಮುಳುಗಲಿರುವ ತಲೆಗಳೇ ಏರಲಿರುವ ಬೆಲೆಗಳೇ
ಗೋಡೆಯಿಲ್ಲದೆ ತೆರೆದ ಬಾಗಿಲುಗಳಿಂದಲೇ
ಕಟ್ಟಿದ ಸ್ವದೇಶಿ ಮಾದರಿಯ ಭಾಜಪದ ಮನೆ ಭೋಗ್ಯಕ್ಕಿದೆ,
ಡಾಲರ್ ಕಾಲನಿಯಲ್ಲಿ!
ಕ್ಲಿಂಟನ್ ಕ್ಲಿಂಟನ್ ಮೆಗಾಸ್ಟಾರ್
ಹೌ ಐ ವಂಡರ್ ವಾಟ್ ಯೂ ಆರ್!
ಗೋಕಾಂವಿ ಸಿದನಿಂಗನ ಮಠದಲ್ಲಿ ದೇವರ ಕಳವು
ವಜ್ರದ ಮೂರ್ತಿ ನಾಪತ್ತೆ ಪೂಜಾರಿಯ ಪರಾರಿ
ನಿಮಗೊಪ್ಪುವ ಹೊಸ ಗಡಿಯಾರ ಬೇಕೆ?

ಕಂಬಕ್ಕೆ ಕಟ್ಟಿ ಹದಿನೆಂಟು ಹರಿಜನರ ಕೊಲೆ
ಏಸುವಿನ ಹೊಸಬರವು ಬೈಬಲಿನ ಹೊಸ ಸಹಸ್ರಮಾನದ
ಹೊಸ ಮುದ್ರಣ
ಮನೆಗೆ ಬೆಂಕಿ ಆರ್ವರ ಸಾವು ಹೆಣ ಗುರುತಿಲ್ಲ
ಹೋರಿ ಕಳೆದಿದೆ ಬಕ್ಕತಲೆ ಹಂಡ ಹಣಚಿಕ್ಕು
ತಂದವರಿಗೆ ಬಹುಮಾನ ಸಮೇತ ಗಾಡೀಖರ್ಚು
ಕೊನೆಯಚ್ಚು:
ಆಗಸ್ಟ್ ೧೫ರಿಂದ ಎಲ್ಲರೂ ಗಹಗಹಿಸಿ
ನಗಬೇಕೆಂದು ರಾಷ್ಟ್ರಪತಿಗಳ ಸುಗ್ರೀವಾಜ್ಙೆ
ಸಂಪಾದಕಸ್ವಾಮೀ ನಮ್ಮೂರಲ್ಲಿ ಹುಚ್ಚುನಾಯಿ ಹೆಚ್ಚಾಗಿವೆ
ಯೋಗ್ಯಕ್ರಮ ಕೈಕೊಳ್ಳುವಿರಾ
ಸೂಚನೆ: ಸಂಪಾದಕರು ವೈಕುಂಠವಾಸಿಗಳಾದ್ದರಿಂದ
ಪತ್ರಿಕೆಗೆ ನಾಳೆ ಬಿಡುವು.

೧೯೬೫