ಧಡ್ಡ ನನಮಗಾ ಯಂಕ್ಯಾ
ಕ್ಯಾಲೆಂಡರಿನ ಹೆಣ್ಣಿನರೆಬತ್ತಲೆಯ ಮೇಲೆ
ಶಾನುಭೋಗರ ರಮೆಯ ಮುಖ ಹೇರಿ,
ಬಾಯ್ಪಾಠ ಮಾಡಿದ್ದ,
ಕ್ರಮವಾಗಿ ಆಡಬೇಕಾಗಿದ್ದ ಮುದ್ದು
ಮಾತುಗಳ ಸುಡುಗಾಡಸಿದ್ಧ
ಒಂದೊಂದೇ ಪಲ್ಲಪಿಲ್ಲಾರೆಯಲ್ಲಿ ಚೀಲದಿಂದೆಳೆದು,
ಅಕ್ಷರಕ್ಕೊಂದು ಕಿಲೋ ತುಟ್ಟಿ ಸಕ್ಕರೆ ಬಳಿದು,
ಮಳೆಬಿಲ್ಲ ಮಾದರಿಯ ನುಣ್ಣಾನ ಬಣ್ಣಾ
ಹಚ್ಚಿ ಆ ಈ ಕಡೆಗೆ
ಆಡಿದ, –
ಗ್ಲೋಬು ಎದೆಗಳ ಮೇಲೆ,
ಹುಲಿ ಸಿಂಹ ಚಿರತೆ ಚಿತ್ರಗಳಿರುವ ಗವಿಯ ಮೇಲೆ,

ದನಿಯಾಗಿ ಹೊರಬಂದು! ಜೊಲ್ಲಾಗಿ ಸಿಡಿದಾಡಿ
ಉಗುಳಾಗಿ ತಳಬುಡ ಹರದಾಡಿದ
ಮಗಾ | ಹರದಾಡಿದ.

ಕಣ್ಣಾಗಿ ಹುಡಿಕ್ಯಾಡಿ | ಕೈಯಾಗಿ ಮುಟ್ಯಾಡಿ
ಪಾತಾಳ ಗರುಡಾಗಿ ತಡಕಾಡಿದ
ಮಗಾ | ತಡಕಾಡಿದ.

ಅಂಗಿ ಟರ್ರನೆ ಹರಿದು| ಎದೆಯ ಮೇಲ್ಗಡೆ ರಮಾ
ಯಂಕ್ಯಾ ಇದ್ದುದ ನೋಡಿ ಹಿಗ್ಗಾಡಿದ
ಮಗಾ | ಹಿಗ್ಗಾಡಿದ.

ಬರುವಷ್ಟು ಲಿಪಿಯಲ್ಲಿ ರಮಾ – ಯಂಕ್ಯಾ ಬರೆದ,
ಹರಿದ ಟರಪರ, ತುಂಡು ಹೆಸರ ಕೂಡಿಸಬರದೆ
ಕೆಂಪುಮಸಿಯಲ್ಲದ್ದಿ ಅರಲಿಟ್ಟ.

ಎದೆಯೊಡೆದು ಬಸಿದಂತೆ ಎದೆಎದೇ ಬಡಕೊಂಡು
ಸ್ವಂತ ಮೂಗನು ಹಿಡಿದು ಮುಳುಮುಳೂ ಅತ್ತ.
ಕೈಯ ಸಿಂಬಳ ನೋಡಿ ಕುಲುಕುಲೂ ನಕ್ಕ.

೧೯೬೫