ಯಾರೋ| ಯಾರೋ ಬಂದವರಾ
ಯಾರೋ ಬಂದಾರು ಗುರುತಿಲ್ಲದವರಾ ||ಪ||

ನಗಿಯೊಳಗ ತುಳುಕ್ಯಾರು ಬೆಳಕಿನ ದಿಗರಾ
ನಾನೀ ದೇವರನ್ನೆಲ್ಲಾ ಪಳಗಿಸಿದವರಾ |
ನೆಲದ ಬಿರುಕಿನ ನರಕ ಕಿತ್ತು ಎಸೆದವರಾ
ಹಸಿರು ಹೌಸಿಗಳನ್ನ ಹೊತ್ತು ತಂದವರಾ ||

ಹುಬ್ಬಿನಲಿ ಘನಮೌನ ಮಾತಾಡಿಸವರಾ
ಕಣ್ಣೀನ ಬೆಳಕಿನಲಿ ಕರಗ್ಯಾವ ನೆರಳಾ |
ಸುರರ ಜಾತಿಗೆ ಸ್ವಲ್ಪ ಕಮ್ಮಿ ಕುಲದವರಾ
ಹ್ಯಾಂಗ ಕೊಟ್ಟರ ಹಾಂಗ ಪಡೆದುಕೊಂಬವರಾ ||

ಕರಣದ ಒಳಗಡೆ ಕಳವಳ ಮೂಡಿ
ಬಿಗಿದಾವ ನರನಾಡಿ ಹರಣ ಹೌಹಾರಿ |
ಚೀರ್ಯಾವು ಬಾಯಿರದ ನೋವುಗಳು ನೂರಾ
ಕೆಣಕಿದರ ಸುಖ ಉದರಿ ಹುಣ್ಣ ಮಾಡವರಾ ||

ಕರಿಮೋಡದಾಗಿನ ಮಿಂಚಿನಂಥವರಾ
ಹೇಳಕಳಿಸಿದ ಹಾಂಗ ಇಳಿದು ಬಂದವರಾ |
ಒಡಲೊಳಗ ಒಡಮುರಿದು ಒಡನಾಡಿದವರಾ
ಗುಟ್ಟಿಗಿ ಗುರಿಹಿಡಿದು ಹೆಡೆಯೆತ್ತಿದವರಾ |
ಇರುಳ ಗವಿಯಲಿ ದೀಪದ ಕಂಬ ನೆಟ್ಟವರಾ ||

(ನಾಟಕ)