ನಾ ಗರತಿ ಎದುರಾದಾಗ ನಿಮಗಾಯ್ತು ಕೊರತಿ
ತೆರಕೊಂಡು ನಿಂತೇನೋ ಮೀಸಲದ ಪಿರತಿ
ಬೆಂಕಿ ಹರಿದಾಡಿದರು ಬೆನ್ನ ಹುರಿಯೊಳಗ
ಬ್ಯಾರೇ ಸೀಮೆಯ ಬೆಳಕ ಹುಡುಕವರಿಲ್ಲ ||

ಒಂದೆಂಬೊದಿರುವಲ್ಲಿ ಎರಡ ಕಾಂಬುವಿರಿ
ಮೈಮನಸು ನಾನೀನು ಬ್ಯಾರೆ ಎಂಬುವರಿ
ನೆಲದ ಬಿರುಕಿನ ಒಳಗ ಬಿಸಿ ಬಿಸಿ ಉಸಿರಾ
ಹರಕ ನಾದದ ಹಾಡು ಹರಿದಾವೊ ನೂರಾ ||

ಭೂಮಿಯ ಮ್ಯಾಗಿನ ಕಾಮಿನಿಯ ಮರೆತು
ಮುಗಿಲಿನ ನೀಲಿ ನಿರಾಕಾರಕೊಲಿದು
ಹಾವಿನ ಮೈ ನಿಮಗ ಹದ್ದಿನ ತಲೆಯೊ |
ಕೆಳಗ ಮ್ಯಾಲೆಳೆದಾಡಿ ನುಗ್ಗಾದಿರಯ್ಯೊ ||

ಪಾತಾಳಗಂಗಿಯ ಬಿಟ್ಟಿರಿ ಕೆಳಗ
ನಕ್ಷತ್ರಗಂಗಿಯ ಹುಡುಕುವಿರಲ್ಲ
ಹೊನ್ನಿನ ಕೊಪ್ಪರಿಗೆ ಪಾತಾಳದಾಗಿರಲು
ಆಕಾಶದೊಳಗ್ಯಾವ ಭಾಗ್ಯ ಕಂಡೀರಿ ||