ಕಾಂತನಿಲ್ಲದ ಮ್ಯಾಲೆ ಏಕಾಂತವ್ಯಾತಕೆ
ಗಂಧಲೇಪನವ್ಯಾತಕೆ | ಈ ದೇಹಕೆ ||

ಮಂದಮಾರುತ ಮೈಗೆ ಬಿಸಿಯಾದವೇ ತಾಯಿ
ಬೆಳುದಿಂಗಳೂ ಉರಿವ ಬಿಸಿಲಾಯಿತೇ | ನನಗೆ
ಹೂಜಾಜಿ ಸೂಜಿಯ ಹಾಗೆ | ಚುಚ್ಚುತಲಿವೆ ||

ಉರಿಗಳು ಮೂಡ್ಯಾವು ನಿಡುಸುಯ್ಲಿನೊಳಗೆ
ಉಸಿರಿನ ಬಿಸಿ ಅವಗೆ ತಾಗದೆ | ಹುಸಿಹೋಯ್ತೆ
ಚೆಲುವ ಬಾರದಿರೇನು ಫಲವೆ | ಈ ಚೆಲುವಿಗೆ ||

ಕಾಮನ ಬಾಣಾ ಹತ್ತ್ಯಾವ ಬೆನ್ನಾ
ಆತುರ ತೀವ್ರ ಕಾಮಾತುರ ತಾಳೆನಾ
ಆರ್ತಳಿಗೆ ಆಶ್ರಯವಿರದೆ | ಒದ್ದಾಡುವೆ ||

ಅನ್ಯಪುರುಷನು ಮಾರ ಅಂಗನೆಯನೆಳೆದಾರೆ
ಕೈಹಿಡಿದ ಸರಿಪುರುಷ ಸುಮ್ಮ | ನಿರತಾರೇನೆ
ಕರುಣೆಯ ತೋರುವರ್ಯಾರೇ | ಸಣ್ಣವಳಿಗೆ ||

(ನಾಟಕ)