ತಾಯಿ ಭಾರತಮಾತೆ ಜಯಜಯಾ ಎಂದು
ಕೂಗಿದೆವು ಗಾಂಧಿಗೂ ಜಯವಾಗಲೆಂದು

ಆತ್ಮವಿಲ್ಲದ ಸಿಟಿಯ ಮಧ್ಯದಲ್ಲಿ ಬಂದು
ಕೊಳೆ ಚರಂಡಿಯ ಕೊಚ್ಚೆ ನೀರಿನಲ್ಲಿಳಿದು
ತಡವರಿಸಿ ದೌಡಾಯಿಸುತ್ತ ಆ ದಂಡೆ
ಸಾಧ್ಯವಾದರೆ ಬೇಗ ಸೇರಬೇಕೆಂದೆ,
ಬಿಸಿಲು ಬೆಳಗುವ ಸೀಮೆ ಹಸಿರ ಸಿರಿನಾಡು
ಸಿಗಲೆಂದು ಹಾರೈಸಿ ಕನಸುಗಳ ನಾಡು
ಕೂಗಿದೆವು ಗಾಂಧಿಗೂ ಜಯವಾಗಲೆಂದು,
ತಾಯಿ ಭಾರತಮಾತೆ ಜಯಜಯಾ ಎಂದು.

ನಕ್ಷತ್ರ ಇರಲಿಲ್ಲ ಆಕಾಶದಲ್ಲಿ
ಬೆಳಕು ಇದ್ದಿರಲಿಲ್ಲ ನಮ್ಮ ಕಣ್ಣಲ್ಲಿ
ಕತ್ತು ಸಹ ಮುಳುಗಿತ್ತು ಕರಿ ನೀರಿನಲ್ಲಿ
ಗಟ್ಟಿನೆಲ ಕುಸಿದು ಕಾಲಿನ ನೆಲೆಯ ತಪ್ಪಿ
ಈಜಿದೆವು ಬೆಳಕಿರುವ ಸೀಮೆ ಸಿಗಲೆಂದು
ಆ ತನಕ ಮೈಯಲ್ಲಿ ಬಲವು ಬರಲೆಂದು
ಕೂಗಿದೆವು ಗಾಂಧಿಗೂ ಜಯವಾಗಲೆಂದು
ತಾಯಿ ಭಾರತಮಾತೆ ಜಯಜಯಾ ಎಂದು.

ಯಾರಿಗಾದರು ನಮ್ಮ ದನಿ ಕೇಳಲೆಂದು
ಹುಲ್ಲುಕಡ್ಡಿಯನೊಂದ ಎಸೆಯಬಹುದೆಂದು
ಕಣ್ಣೀರು ನೀರುಗಳ ಬೆರಸಿ ಹಾಡಿದೆವು
ತಾಯಿ ಭಾರತಮಾತೆ ಜಯಜಯಾ ಎಂದು.

ಮ್ಯಾಲೆ ಹೊಂಚಿದ ಮೋಡ ಇದೆ ಸಮಯವೆಂದು
ಕರಿನೀರ ಆಳಗಲ ಹೆಚ್ಚಿಸಿತು ಸುರಿದು
ಆಳಕ್ಕೆ ಬೀಳಲಿದೆ ನೀರು ಸನಿಹದಲೆ
ಅಲ್ಲಿ ಮುಗಿವುದು ನಮ್ಮ ಈಜು ಇಷ್ಟರಲೆ
ಹಾಡಲಿರುವುದು ಭಂಡ ಗಾಳಿ ಹಾಡನ್ನು
ನಿಮ್ಮ ಪಾಲಿಗೆ ಬೆಳಕು ಇನ್ನಿಲ್ಲವೆಂದು.
ಆಯ್ತು ಬೆಳಗಿನ ನಿಮ್ಮ ರೇಡಿಯೋದೊಳಗೆ
ಕೇಳಿ ನಲಿಯಿರಿ ನಾವು ಮುಳುಗಿರುವ ಗೀತೆ.

(ಭೋಳೇಶಂಕರ)