ವಾಹನಗಳ ತುಟಿ ತುಳುಕಿದೆ ನವಗೀತ
ತಂಬೆಲರಿನ ತುಂಬಾ ಇದೆ ಪೆಟ್ರೋಲಿನ ನಾತ.

ಮಿಲ್ಲಿನ ಹೊಗೆ ದಟ್ಟೈಸಿದೆ ಬಾನ್ನೀಲಿಯ ತುಂಬ
ಸೈರನ್ನಿನ ದನಿ ತುಂಬಿದೆ ಕಿವಿಕಿವಿಗಳ ತುಂಬ

ಲಾಲ್‌ಬಾಗಿನ ತರುಲತೆಗಳ ಮೈಮುಖಗಳ ನೋವು
ಕಪ್ಪಾಗಿವೆ ಕುಂಡದ ಗಿಡಬಳ್ಳಿಯ ಎಲೆ ಹೂವು

ಕೊಳೆಗೇರಿಯ ಕೊಚ್ಚೆಯಲ್ಲಿ ತೇಲಾಡಿವೆ ಮಕ್ಕಳು
ಆಲದೆಲೆಯ ಮೇಲಾಡುವ ಕ್ಯಾಲೆಂಡರ ಕೃಷ್ಣರು

ಯಾಕಾದರು ಹಾರುತ್ತಿದೆ ಮುಗಿಲಿನಲ್ಲಿ ಹದ್ದು
ಬದುಕಬೇಕೆ? ಮುಚ್ಚು ಕದ ಮಾಡಬೇಡ ಸದ್ದು.

(ಭೋಳೇಶಂಕರ)