ಕನ್ನಡಿಯ ಕನ್ನಡಿಯೇ ಕಣ್ಣಿವೆಯೆ ನಿನಗು?
ಇಲ್ಲವೆ | ಕನ್ನಡಿಯಾಗಿವೆಯೆ ನನ್ನ ಕಣ್ಣು?

ನೀ ನೋಡುತಿರುವೆಯಾ ನನ್ನ?
ಇಲ್ಲವೆ | ನಾ ನೋಡುತಿರುವೆನೆ ನಿನ್ನ?

ನಾ ನಿನ್ನ ಬಿಂಬವೋ? ನೆರಳೋ?
ಇಲ್ಲವೆ | ನೀ ನನ್ನ ಬಿಂಬವೋ? ನೆರಳೊ?

ನಾನಿರದೆ ನೀನಿಲ್ಲ ಹೌದೆ?
ಇಲ್ಲವೆ | ನೀನಿರದೆ ನಾನಿಲ್ಲ ಹೌದೆ?

ಇರಬಹುದು ಇಬ್ಬರು ಬೇರೆ
ಆದರು | ಒಳಗಿರದೆ ಮರದ ಬೇರೊಂದೆ.

ಇಬ್ಬರ ನಡುವಿದೆ ಗಾಜು
ಒಡೆದರೆ | ನಾವಿಬ್ಬರೊಂದೆ ಎರಡಳಿದು.

ಎರಡಳಿದರೊಂದಾಗಬಹುದೆ?
ಇಲ್ಲವೆ | ಒಂಟಿಯಾಗುವೆವಂತೆ ಹೌದೆ?

ಕರಗಿದರೆ ಒಬ್ಬರೊಬ್ಬರಲಿ
ಉಳಿವೆವೆ | ಗಾಜು ಇಲ್ಲವೆ ನೆನಪಿನಲ್ಲಿ?

ಕೇಳಿರುವ ಮಾತು ಈತನಕ
ನೀ ಹೇಳು | ಸಂವಾದವೋ ಅಥವಾ ಸ್ವಗತ?

(ಸಿರಿಸಂಪಿಗೆ)