ಕಾಳಿಂಗನಂಬೋದು ನಾಗರಹಾವು
ಏಳೇಳು ಹೆಡೆಯವನಿಗೆ
ಸೂರ್ಯನ ಮರಿಯಂಥ ಏಳೇಳು ಮಣಿಗಳು
ಏಳೇಳು ಹಡೆಯೊಳಗೆ

ಬಾಲವಾಡಿಸುತಾನೆ ಹೆಡೆಯ ತೂಗಾಡುತ್ತ
ಬಾಲೆಯರ ಕಂಡಾಗಳೆ
ಎಣ್ಣೆ ಹಚ್ಚಿದ ಸಣ್ಣ ಹೆಣ್ಣೀನ ಮುಡಿಯೆಂದ
ರಾನಂದ ಕಾಳಿಂಗಗೆ

ಹೆಣ್ಣೀನ ಜಡೆಯೊಳಗೆ ಮೈಯ ಹೆಣೆದಾಡುತ
ಜಡೆಯಾಗಿ ಜೋತಾಡುತ
ಮಲ್ಲಿಗೆ ಮುಡಿದರೆ ಮೈಮರೆವ ತೂಕಡಿಕೆ
ಸುಖನಿದ್ದೆ ನಮ ಹಾವಿಗೆ |
ಜೋ ಜೋ ನಾಗರರಾಯಗೆ ||


ನೆರಳ ಕಂಡರೆ ನಾಗ ಭಾರೀ ಭುಸುಗುಡುತಿದ್ದ
ಹೆಡೆಯಿಂದ ಹೊಡೆದಾಡುತ
ಸುತ್ತುಮಣಿಗಳ ಚೆಲ್ಲಿ ನೆರಳನೋಡಿಸುತಿದ್ದ
ಸೀಳು ನಾಲಿಗೆ ಚಾಚುತ

ಒಮ್ಮೆ ನಮ ಕಾಳಿಂಗ ಎಳೆಬಿಸಿಲು ಕಾಯಿಸುತ
ಮೈಚಾಚಿ ಮಲಗಿರಲು
ಗಿರಿಯಂಥ ಗರುಡನ ನೆರಳು ಹರಿದಾಡುತ್ತ
ನಾಗನ ಮೈ ತಾಗಲು

ಕೋಪದಲಿ ಕುದಿಯುತ್ತ ಕಣ್ಣಲ್ಲಿ ಕಿಡಿಕಾರಿ
ಹೆಡೆಗಳ ನಿಗುರಿಸಿದ
ನಿಗುರಿದ ಹೆಡೆಯಿಂದ ನೆರಳು ಬಿದ್ದಲ್ಲೆಲ್ಲ
ಸಿಡಿಲಾಗಿ ಅಪ್ಪಳಿಸಿದ

ಅಪ್ಪಳಿಸಿ ಹೆಡೆಯಿಂದ ಹಸಿಯ ನೆತ್ತರು ಚಿಮ್ಮಿ
ಹೆಡೆ ಸೊರಗಿ ಇಂಗಿದವೆ!
ಕಣ್ಣಿದ್ದಿಲಾದವು ಮೈಸಿಂಬೆಯಾದವು
ಜೋತು ಬಿದ್ದವು ನಾಲಗೆ |
ಜೋ ಜೋ ನಾಗರರಾಯಗೆ ||

ಹೂವಿಂದ ಮುಚ್ಚೀರೆ ಕನಸಿಂದ ಮುಚ್ಚೀರೆ
ಜೋ ಜೋ ನಾಗರರಾಯಗೆ
ಹವ್ವಲ್ಲೆ ಎಲೆ ಹದ್ದೆ ಹಾರಿ ಮುಂದಕೆ ಹೋಗು
ನನ ಕಂದ ಮಲಗಿರುವನೇ |
ಜೋ ಜೋ ನಾಗರರಾಯಗೆ ||

(ಸಿರಿಸಂಪಿಗೆ)