ಏನs ಹೇಳಲೆವ್ವ ಭಾರತಿ
ಇಡೀ ಜಗದಾಗೆಲ್ಲ ಹಬ್ಬೇತವ್ವ ನಿನ್ನ ಕೀರುತಿ||

ಹತ್ತವತಾರಕೆ ಹೆತ್ತವಳಾದಿ
ಚಿಲ್ಲರೆ ದೇವರು ಛತ್ತೀಸಕೋಟಿ
ದೇವರಿಗೊಂದೊಂದ ಜಾತಿಯ ಕಟ್ಟಿ
ಒಬ್ಬರಿಗೊಬ್ಬರ ಎತ್ತೆತ್ತಿ ಕಟ್ಟಿ
ಜನಗಣವೆಲ್ಲಾ
ರಣರಂಗ ಮಾಡಿ |
ಧರ್ಮದ ಮಾರಿ
ದೇವರ ಕೊಂಡಿ ||

ಬಾಳುವ ದಾರಿ ತೋರೇನಂದಿ
ಸತ್ಯ ಸತ್ತರೂ ಸೈ ಸೈ ಅಂದಿ
ತಾಯಿಗಂಡರಿಗಿ ಮಕ್ಕಳು ಅಂದಿ
ಕಸದ ಕಾಯಕದಾಗ ಕೈಲಾಸ ಕಂಡಿ
ತುಮುಲದ ಅಮಲೇ
ನೆತ್ತಿಗೆ ಏರಿ |
ಆತ್ಮವ ಮಾರಿ
ಕೀರ್ತಿಯ ಕೊಂಡಿ ||

ಮತಿವಂತರ ಎದಿ ಮತಿಗಳ ಸುಲಿದಿ
ತಿಳಿದ ಮಂದಿಗಳ ಮಹಿಮೆಯ ಮುರಿದಿ
ಆದರು ಇತಿಹಾಸಕ ಒಳಗಂಜಿ
ಕಾಲಕೋಶದಾಗ ಅದ ಹುಗಿದಿಟ್ಟಿ
ಗಾಳಿಯ ನಿಲಿಸಿ
ಉಸಿರ ಬಿಗಿದಿಟ್ಟಿ |
ಹರಿಯುವ ನೀರಾ
ಕೆರೆಯ ಮಾಡಿಟ್ಟಿ ||

(ತುಕ್ರನ ಕನಸು)