ಹಾರಿ ಬಂದನೇ ಎವ್ವಾ ಏರಿ ಬಂದನೇ
ಹಾರಿ ಬಂದನೇ ಮೈಮ್ಯಾಲೇರಿ ಬಂದನೇ ||ಪ||

ಯಾರ್ಯಾರಿಲ್ಲದ ಸಮಯ ಸಾಧಿಸಿ ಬಂದಿದ್ದಾ
ಸದ್ದು ಮಾಡದೆ ಕದ್ದು ಒಳಗs ನುಗ್ಗಿದ್ದಾ
ಹುತ್ತದೊಳಗಿನ ಸತ್ಯ ಹೊತ್ತಿಗಿ ಹೊರಗ ಬಂಧಾಂಗ ||

ಚಿಗುರು ಹುಲ್ಲಿನ ಪುಳಕ ಮೈಗಿ ಧರಿಸಿದ್ದಾ
ನಕ್ಕ ನಗಿಯಾಗ ಮಲ್ಲಿಗಿ ಹೂವ ತುಳುಕಿದ್ದಾ
ಸೂರ್ಯಾಚಂದ್ರಾಮರನ್ನ ಕಣ್ಣಿನಾಗಿಟಕೊಂಡಿದ್ದಾ ||

ಹರುಷವಾಗುವ ಹಾಂಗ ಸರಸವಾಡಿದ್ದಾ
ಮಾತು ಮಾತಿಗೆ ನಗಿಸಿ ಮೆಚ್ಚ ಮಾಡಿದ್ದಾ
ತಿಳಿದು ತಿಳಯೋದರೊಳಗ ಹೃದಯದ ಬೀಗ ತೆಗೆದಿದ್ದಾ ||

ಭಾಗ್ಯ ಸಿಕ್ಕವರ್ಹಾಂಗ ಹಿಗ್ಗಿ ನಲಿದಿದ್ದಾ
ಕರಣದ ಕೊಬ್ಬಿನಾಗ ಉಬ್ಬಿ ಹೋಗಿದ್ದಾ
ಹುದುಗಿದ್ದ ಸುಖಗಳ ಕೆಣಕಿ ಹುಚ್ಚು ಹತ್ತಿಸಿ ಕುಣಿದಿದ್ದಾ ||

ಲೂಟಿ ಮಾಡಾಕ ಬಂದ ಮಾಟಗಾರೇನ
ಸುಖದ ಶಿಖರದ ಮ್ಯಾಲ ಹತ್ತಿನಿಂತಾನ
ಇಕ್ಕಟ್ಟೀನ ಬಿಕ್ಕಟ್ಟೆಲ್ಲಾ ಒಟ್ಟಿಗಿ ದೂರ ಮಾಡಿದ್ದಾ ||

(ನಾಟಕ)